ಶನಿವಾರ, ಡಿಸೆಂಬರ್ 14, 2019
21 °C
ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಆರೋಪ

ಕರ್ನಾಟಕದಲ್ಲಿ ಬಿಜೆಪಿಯಿಂದ ಶಾಸಕರ ಖರೀದಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋಲ್ಕತ್ತ: ‘ಬಿಜೆಪಿಯು ಬೇರೆ ಪಕ್ಷಗಳ ಶಾಸಕರನ್ನು ಖರೀದಿಸುವ ಮೂಲಕ ಕರ್ನಾಟಕ ಮತ್ತು ಮಧ್ಯಪ್ರದೇಶದಲ್ಲಿ ಸರ್ಕಾರವನ್ನು ಉರುಳಿಸಲು ಪ್ರಯತ್ನಿಸುತ್ತಿದೆ’ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಆರೋಪಿಸಿದ್ದಾರೆ.

ಕೇಂದ್ರ ಕೋಲ್ಕತ್ತದಲ್ಲಿ ತೃಣಮೂಲ ಕಾಂಗ್ರೆಸ್‌ (ಟಿಎಂಸಿ) ಭಾನುವಾರ ಆಯೋಜಿಸಿದ್ದ ಹುತಾತ್ಮರ ದಿನದ ರ‍್ಯಾಲಿಯಲ್ಲಿ ಮಮತಾ ಈ ಆರೋಪ ಮಾಡಿದ್ದಾರೆ. 1993ರಲ್ಲಿ ಪೊಲೀಸ್ ಗೋಲಿಬಾರ್‌ನಲ್ಲಿ ಮೃತಪಟ್ಟಿದ್ದ ಯುವಕಾಂಗ್ರೆಸ್‌ನ 13 ಕಾರ್ಯಕರ್ತರ ಸ್ಮರಣಾರ್ಥ ಪ್ರತಿ ವರ್ಷ ಜುಲೈ 21ರಂದು ಹುತಾತ್ಮರ ದಿನವನ್ನು ಆಚರಿಸಲಾಗುತ್ತದೆ. ಭಾನುವಾರ ನಡೆದ ರ‍್ಯಾಲಿಯಲ್ಲಿ ಸಾವಿರಾರು ಸಂಖ್ಯೆಯಲ್ಲಿ ಟಿಎಂಸಿ ಕಾರ್ಯಕರ್ತರು ಮತ್ತು ಸಾರ್ವಜನಿಕರು ಪಾಲ್ಗೊಂಡಿದ್ದರು.

‘ಶಾಸಕರನ್ನು ಖರೀದಿಸುವ ಮೂಲಕ ಸರ್ಕಾರಗಳನ್ನು ಕೆಡವಲು ಅವರು (ಬಿಜೆಪಿ) ಸಂಚು ರೂಪಿಸುತ್ತಿದ್ದಾರೆ. ಆದರೆ ಅವರೇ ಹಳ್ಳಕ್ಕೆ ಬೀಳುತ್ತಾರೆ ಎಂಬುದು ಅವರ ಗಮನದಲ್ಲಿರಬೇಕು’ ಎಂದು ಮಮತಾ ಎಚ್ಚರಿಕೆ ನೀಡಿದ್ದಾರೆ.

‘ಪಶ್ಚಿಮ ಬಂಗಾಳದಲ್ಲೂ ಟಿಎಂಸಿ ಶಾಸಕರನ್ನು ಖರೀದಿಸಲು ಬಿಜೆಪಿ ಪ್ರಯತ್ನಿಸುತ್ತಿದೆ. ಬಿಜೆಪಿಯು ನಮ್ಮ ಶಾಸಕರಿಗೆ ₹ 2 ಕೋಟಿ ನಗದು ಮತ್ತು ಒಂದೊಂದು ಪೆಟ್ರೋಲ್‌ ಬಂಕ್‌ಗಳನ್ನು ನೀಡುವ ಆಮಿಷ ಒಡ್ಡುತ್ತಿದೆ. ಗ್ರಾಮ ಪಂಚಾಯಿತಿ ಸದಸ್ಯರಿಗೆ ₹ 20 ಲಕ್ಷದ ಆಮಿಷ ಒಡ್ಡುತ್ತಿದೆ’ ಎಂದು ಅವರು ಆರೋಪಿಸಿದ್ದಾರೆ.

‘ಕೇಂದ್ರ ಸರ್ಕಾರದ ತನಿಖಾ ಸಂಸ್ಥೆಗಳಾದ ಸಿಬಿಐ ಮತ್ತು ಜಾರಿ ನಿರ್ದೇಶನಾಲಯಗಳು ಟಿಎಂಸಿ ನಾಯಕರಿಗೆ ಬೆದರಿಕೆ ಒಡ್ಡುತ್ತಿವೆ. ಬಿಜೆಪಿ ಸೇರದಿದ್ದರೆ ವಿವಿಧ ಪ್ರಕರಣಗಳಲ್ಲಿ ಸಿಲುಕಿಸುವ ಬೆದರಿಕೆ ಹಾಕುತ್ತಿವೆ’ ಎಂದು ಅವರು ಆರೋಪಿಸಿದ್ದಾರೆ.

‘ಬಂಗಾಳದ 42 ಸ್ಥಾನಗಳಲ್ಲಿ ಕೇವಲ 18 ಸ್ಥಾನಗಳನ್ನು ಗೆದ್ದಿರುವ ಬಿಜೆಪಿ, ಇಡೀ ಬಂಗಾಳವನ್ನೇ ಗೆದ್ದವರ ರೀತಿ ಬೀಗುತ್ತಿದೆ. ಮತಯಂತ್ರಗಳನ್ನು ತಿರುಚುವ ಮೂಲಕ ಬಿಜೆಪಿ ಈ ಗೆಲುವು ಸಾಧಿಸಿದೆ. ಹೀಗಾಗಿ ಮುಂಬರುವ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಮತಪತ್ರಗಳನ್ನು ಬಳಸುವಂತೆ ಟಿಎಂಸಿ ಒತ್ತಾಯಿಸಲಿದೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯ ಗೆಲುವು ಇತಿಹಾಸವಲ್ಲ, ಅದರ ಗೆಲುವು ನಿಗೂಢ’ ಎಂದು ಅವರು ಟೀಕಿಸಿದ್ದಾರೆ.

* ತನಿಖಾ ಸಂಸ್ಥೆಗಳಾದ ಸಿಬಿಐ ಮತ್ತು ಜಾರಿ ನಿರ್ದೇಶನಾಲಯಗಳು ಟಿಎಂಸಿ ನಾಯಕರಿಗೆ ಬೆದರಿಕೆ ಒಡ್ಡುತ್ತಿವೆ. ಪ್ರಕರಣಗಳಲ್ಲಿ ಸಿಲುಕಿಸುವ ಬೆದರಿಕೆ ಹಾಕುತ್ತಿವೆ 

- ಮಮತಾ ಬ್ಯಾನರ್ಜಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ

* ಟಿಎಂಸಿಯ ಶಾಸಕರಿಗೆ ಬೆದರಿಕೆ ಹಾಕಿರುವ ಸಿಬಿಐ ಅಧಿಕಾರಿಗಳ ಹೆಸರನ್ನು ಮಮತಾ ಬ್ಯಾನರ್ಜಿ ಬಹಿರಂಗಪಡಿಸಲಿ. ಇಲ್ಲದಿದ್ದಲ್ಲಿ ಇಂತಹ ಸುಳ್ಳು ಆರೋಪ ನಿಲ್ಲಿಸಲಿ 

- ದಿಲೀಪ್ ಘೋಷ್  ಪಶ್ಚಿಮ ಬಂಗಾಳ ಬಿಜೆಪಿ ಘಟಕದ ಅಧ್ಯಕ್ಷ

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು