ಗುರುವಾರ , ಸೆಪ್ಟೆಂಬರ್ 24, 2020
27 °C
ಡೈರಿ ಮುಂದಿಟ್ಟು ತನಿಖೆ ಮುಂದುವರಿಸಲು ಸಿಬಿಐ ನಿರ್ಧಾರ

ಅಗಸ್ಟಾ ವೆಸ್ಟ್‌ಲ್ಯಾಂಡ್‌: ನಂಟಿನ ಗುಟ್ಟು ಬಿಡಲು ಒಲ್ಲದ ಮಿಷೆಲ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Deccan Herald

ನವದೆಹಲಿ: ಅಗಸ್ಟಾ ವೆಸ್ಟ್‌ಲ್ಯಾಂಡ್‌ ಹಗರಣಕ್ಕೆ ಸಂಬಂಧಿಸಿದ ಹಣ ಪಾವತಿ ಬಗ್ಗೆ ಶಂಕಿತ ಮಧ್ಯವರ್ತಿ ಕ್ರಿಶ್ಚಿಯನ್‌ ಮಿಷೆಲ್‌ ಪ್ರಶ್ನೆಗಳಿಗೆ ಉತ್ತರಿಸುತ್ತಿಲ್ಲ. ಹಾಗಾಗಿ, ಸ್ವಿಟ್ಜರ್‌ಲೆಂಡ್‌ನಲ್ಲಿ ನಡೆದ ಶೋಧದ ವೇಳೆ ಸಿಕ್ಕ ದಾಖಲೆಗಳನ್ನು ಅವರ ಮುಂದಿಟ್ಟು ವಿಚಾರಣೆ ನಡೆಸಲು ಸಿಬಿಐ ನಿರ್ಧರಿಸಿದೆ. ಭಾರತದ ರಾಜಕಾರಣಿಗಳು ಮತ್ತು ಅಧಿಕಾರಿಗಳಿಗೆ ಹಣ ನೀಡಿದ ಬಗ್ಗೆ ಸುಳಿವುಗಳಿರುವ ಡೈರಿಯೊಂದು ಸ್ವಿಟ್ಜರ್‌ಲೆಂಡ್‌ನಲ್ಲಿ ನಡೆದ ಶೋಧದಲ್ಲಿ ಪತ್ತೆಯಾಗಿತ್ತು ಎನ್ನಲಾಗಿದೆ. 

ಅಗಸ್ಟಾ ವೆಸ್ಟ್‌ಲ್ಯಾಂಡ್‌ ಹಗರಣದ ಕೆಲವು ಆರೋಪಿಗಳು ಆಗಾಗ ದುಬೈಗೆ ಹೋಗಿದ್ದು ಯಾಕೆ ಎಂಬ ಬಗ್ಗೆಯೂ ಮಿಷೆಲ್‌ ಅವರನ್ನು ಪ್ರಶ್ನಿಸುವ ಸಾಧ್ಯತೆ ಇದೆ.  ಮಿಷೆಲ್‌ ಅವರನ್ನು ದುಬೈಯಿಂದ ಮಂಗಳವಾರ ರಾತ್ರಿ ಭಾರತಕ್ಕೆ ಗಡಿಪಾರು ಮಾಡಲಾಗಿದೆ. 

ಇನ್ನೊಬ್ಬ ಮಧ್ಯವರ್ತಿ ರಾಲ್ಫ್‌ ಗೈಡೊ ಹಷ್ಕೆ ಅವರಿಂದ ಸ್ವಿಟ್ಜರ್‌ಲೆಂಡ್‌ ಅಧಿಕಾರಿಗಳು ಡೈರಿಯನ್ನು ವಶಪಡಿಸಿಕೊಂಡಿದ್ದರು. ಇದನ್ನು ಇಟಲಿಯ ನ್ಯಾಯಾಲಯಕ್ಕೆ ಸಲ್ಲಿಸಲಾಗಿದೆ. ಇದು ಪ್ರಕರಣದ ಪ್ರಮುಖ ಸಾಕ್ಷ್ಯಗಳಲ್ಲಿ ಒಂದಾಗಿದೆ ಎಂದು ಹೇಳಲಾಗುತ್ತಿದೆ. 

ಡೈರಿಯಲ್ಲಿರುವ ‘ಎಫ್‌ಎಎಂ’ (ಫ್ಯಾಮ್‌), ‘ಎಪಿ’ ಎಂಬ ಇಂಗ್ಲಿಷ್‌ ಅಕ್ಷರಗಳು ಭಾರತದಲ್ಲಿ ರಾಜಕೀಯ ಸಂಚಲನ ಸೃಷ್ಟಿಸಿದೆ. ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಹಿಂದೆ ಅವರ ರಾಜಕೀಯ ಕಾರ್ಯದರ್ಶಿಯಾಗಿದ್ದ ಅಹ್ಮದ್‌ ಪಟೇಲ್‌ ಅವರಿಗೆ ಲಂಚ ನೀಡಲಾಗಿದೆ ಎಂದು ಬಿಜೆಪಿ ಆರೋಪಿಸುತ್ತಿದೆ. 

ಡೈರಿ ಬರೆದಿರುವುದು ಹಷ್ಕೆ. ಹಾಗಾಗಿ ತಮಗೆ ಡೈರಿಯ ಬಗ್ಗೆ ಏನೂ ಗೊತ್ತಿಲ್ಲ ಎಂದು ಮಿಷೆಲ್‌ ಖಂಡತುಂಡವಾಗಿ ಹೇಳಿದ್ದಾರೆ. ಭಾರತದ ರಾಜಕೀಯ ನಾಯಕರ ಜತೆಗೆ ತಮಗೆ ಯಾವುದೇ ನಂಟು ಇಲ್ಲ ಎಂದು ಅವರು ವಾದಿಸಿದ್ದಾರೆ ಎನ್ನಲಾಗಿದೆ. 

ಅಗಸ್ಟಾ ಒಪ್ಪಂದದಲ್ಲಿ ತಮ್ಮ ಕಮಿಷನ್‌ ಮೊತ್ತವನ್ನು ಮಿಷೆಲ್‌ ಅವರು ಸುಮಾರು ₹340 ಕೋಟಿಯಿಂದ ₹242 ಕೋಟಿಗೆ ಇಳಿಸಿದ್ದರು ಎಂಬುದಕ್ಕೆ ತಮ್ಮಲ್ಲಿ ದಾಖಲೆಗಳಿವೆ ಎಂದು ತನಿಖಾಧಿಕಾರಿಗಳು ಹೇಳುತ್ತಿದ್ದಾರೆ. ಡೈರಿಯಲ್ಲಿ ಉಲ್ಲೇಖಿಸಿರುವ ‘ಫ್ಯಾಮ್‌’ಗೆ ಹಣ ನೀಡುವುದಕ್ಕಾಗಿಯೇ ಕಮಿಷನ್‌ ಮೊತ್ತವನ್ನು ಇಳಿಕೆ ಮಾಡಲಾಗಿದೆ. ಅಗಸ್ಟಾ ವೆಸ್ಟ್‌ಲ್ಯಾಂಡ್‌ನಿಂದ ಎರಡು ಖಾತೆಗಳ ಮೂಲಕ ಹಣ ಪಡೆಯಲಾಗಿದೆ. ಅಕ್ರಮ ಮಾರ್ಗದ ಮೂಲಕ ಈ ಹಣವನ್ನು ಭಾರತದ ಫಲಾನುಭವಿಗಳಿಗೆ ತಲುಪಿಸಲಾಗಿದೆ ಎಂದು ಅವರು ವಾದಿಸುತ್ತಿದ್ದಾರೆ.  ಅಗಸ್ಟಾ ವೆಸ್ಟ್‌ಲ್ಯಾಂಡ್‌ ಒಪ್ಪಂದದ ಮಾತುಕತೆ ನಡೆಯುತ್ತಿದ್ದಾಗ ವಕೀಲ ಗೌತಮ್‌ ಖೇತಾನ್‌ ಅವರು ಸುಮಾರು 50 ಬಾರಿ ದುಬೈಗೆ ಭೇಟಿ ಕೊಟ್ಟಿದ್ದಾರೆ. ಅವರು ಯಾಕೆ ಭೇಟಿ ಕೊಟ್ಟಿದ್ದರು ಎಂಬುದನ್ನು ಕಂಡುಕೊಳ್ಳಲು ತನಿಖಾಧಿಕಾರಿಗಳು ಪ್ರಯತ್ನಿಸುತ್ತಿದ್ದಾರೆ. ಆರೋಪಿಗಳ ಪಟ್ಟಿಯಲ್ಲಿ ಖೇತಾನ್‌ ಅವರ ಹೆಸರೂ ಇದೆ.  

ಬಿಜೆಪಿ–ಕಾಂಗ್ರೆಸ್‌ ಹಗ್ಗಜಗ್ಗಾಟ

ಅಗಸ್ಟಾ ವೆಸ್ಟ್‌ಲ್ಯಾಂಡ್‌ ಹೆಲಿಕಾಪ್ಟರ್‌ ಖರೀದಿ ಪ್ರಕರಣದ ಶಂಕಿತ ಮಧ್ಯವರ್ತಿ ಕ್ರಿಶ್ಚಿಯನ್‌ ಮಿಷೆಲ್‌ ಅವರ ಗಡಿಪಾರು ಆಡಳಿತಾರೂಢ ಬಿಜೆಪಿ ಮತ್ತು ವಿರೋಧ ಪಕ್ಷ ಕಾಂಗ್ರೆಸ್‌ ನಡುವೆ ಹಗ್ಗಜಗ್ಗಾಟಕ್ಕೆ ಕಾರಣವಾಗಿದೆ. 

ಮಿಷೆಲ್‌ ಬಂಧನವನ್ನು ಮುಂದಿರಿಸಿಕೊಂಡು ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಕುಟುಂಬದ ವಿರುದ್ಧ ಬಿಜೆಪಿ ಆರೋಪ ಹೊರಿಸಿದೆ. ಅಗಸ್ಟಾ ವೆಸ್ಟ್‌ಲ್ಯಾಂಡ್‌ ಹಗರಣದಲ್ಲಿ ‘ಕುಟುಂಬ’ವನ್ನು ರಕ್ಷಿಸಲು ಯುವ ಕಾಂಗ್ರೆಸ್‌ ಮುಖಂಡ ಸೇರಿ ಕಾಂಗ್ರೆಸ್‌ನ ಮೂವರು ವಕೀಲರು ಪ್ರಯತ್ನಿಸುತ್ತಿದ್ದಾರೆ ಎಂದು ಬಿಜೆಪಿ ವಕ್ತಾರ ಸಂಬಿತ್‌ ಪಾತ್ರ ಆರೋಪಿಸಿದ್ದಾರೆ. ಮಿಷೆಲ್‌ ಪರವಾಗಿ ನ್ಯಾಯಾಲಯಕ್ಕೆ ಹಾಜರಾಗಿದ್ದ ವಕೀಲ ಅಲ್ಜೊ ಕೆ. ಜೋಸೆಫ್‌ ಅವರು ಯುವ ಕಾಂಗ್ರೆಸ್‌ನ ಪದಾಧಿಕಾರಿ. ಆದರೆ, ಅವರನ್ನು ಕಾಂಗ್ರೆಸ್‌ ಪಕ್ಷ ಅಮಾನತು ಮಾಡಿದೆ. 

‘ಇದು ಕಾಕತಾಳೀಯವೇ? ಮಿಷಲ್‌ ಭಾರತಕ್ಕೆ ತಲುಪುತ್ತಿದ್ದಂತೆಯೇ ಕಾಂಗ್ರೆಸ್‌ನ ಹಿರಿಯ ಮುಖಂಡರು ಮತ್ತು ಅವರ ವಕೀಲರು ಮಿಷೆಲ್‌ ರಕ್ಷಣೆಗೆ ನಿಂತಿದ್ದಾರೆ’ ಎಂದು ಪಾತ್ರ ಹೇಳಿದ್ದಾರೆ. ಜೋಸೆಫ್‌ ಅವರನ್ನು ಪಕ್ಷದಿಂದ ಅಮಾನತು ಮಾಡಿರುವುದು ಬರೇ ನಾಟಕ ಎಂದೂ ಅವರು ಅಭಿಪ್ರಾಯಪಟ್ಟಿದ್ದಾರೆ. 

ಯುವ ಕಾಂಗ್ರೆಸ್‌ ಅಧ್ಯಕ್ಷ ಕೇಶವ್ ಚಂದ್‌ ಯಾದವ್‌ ಮತ್ತು ಕಾಂಗ್ರೆಸ್‌ ವಕ್ತಾರ ಜೈವೀರ್‌ ಶೇರ್‌ಗಿಲ್‌ ಅವರು ಬಿಜೆಪಿಗೆ ತಿರುಗೇಟು ನೀಡಿದ್ದಾರೆ. ಮಿಷೆಲ್‌ ಪರವಾಗಿ ಹಾಜರಾದ ವಕೀಲರು ಯುವ ಕಾಂಗ್ರೆಸ್‌ನಲ್ಲಿದ್ದರು ಎಂಬ ಕಾರಣಕ್ಕೆ ಮಿಷೆಲ್‌ ಮತ್ತು ಕಾಂಗ್ರೆಸ್‌ಗೆ ನಂಟು ಕಲ್ಪಿಸಿರುವುದಕ್ಕೆ ಹರಿಹಾಯ್ದಿದ್ದಾರೆ. ಪಂಜಾಬ್‌ ನ್ಯಾಷನಲ್ ಬ್ಯಾಂಕ್‌ ಹಗರಣದ ಆರೋಪಿ ನೀರವ್‌ ಮೋದಿಯಿಂದ ಕೇಂದ್ರ ಸಚಿವ ಅರುಣ್‌ ಜೇಟ್ಲಿ ಮಗಳು ಶುಲ್ಕ ಪಡೆದಿರುವುದರ ಬಗ್ಗೆ ಬಿಜೆಪಿ ವಿವರಣೆ ಕೊಡಬೇಕು ಎಂದು ಅವರು ಆಗ್ರಹಿಸಿದ್ದಾರೆ. 

ಸುಬ್ರತೊ ರಾಯ್‌ ಪರವಾಗಿ ರವಿಶಂಕರ್‌ ಪ್ರಸಾದ್‌ ವಕೀಲಿಕೆ ಮಾಡಿದ್ದು ಮತ್ತು ಲಂಡನ್‌ನಲ್ಲಿರುವ ಲಲಿತ್‌ ಮೋದಿಗೆ ರಾಜಸ್ಥಾನ ಮುಖ್ಯಮಂತ್ರಿ ವಸುಂಧರಾ ರಾಜೇ ಪ್ರಮಾಣಪತ್ರ ನೀಡಿದ್ದರ ಬಗ್ಗೆ ಬಿಜೆಪಿ ಏನೆನ್ನುತ್ತದೆ ಎಂದು ಅವರು ಪ್ರಶ್ನಿಸಿದ್ದಾರೆ. 

* ಮಿಷೆಲ್‌ ಅವರಿಗೆ ಬ್ರಿಟನ್‌ನ ಕಾನ್ಸಲ್‌ ಸಂಪರ್ಕ ಒದಗಿಸಬೇಕು ಎಂದು ಬ್ರಿಟಿಷ್‌ ಹೈಕಮಿಷನ್‌ ಕೋರಿದೆ. ಈ ಮನವಿಯನ್ನು ಪರಿಶೀಲಿಸಲಾಗುವುದು

ರವೀಶ್‌ ಕುಮಾರ್‌, ವಿದೇಶಾಂಗ ಸಚಿವಾಲಯದ ವಕ್ತಾರ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು