ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೌರತ್ವ: ಹಿಂಸೆಗೆ ನಲುಗಿದ ದೇಶ

ಉತ್ತರ ಪ್ರದೇಶದ ಹಲವೆಡೆ ಹಿಂಸಾಚಾರ: ದೆಹಲಿ, ಹಲವು ರಾಜ್ಯಗಳಲ್ಲಿ ಭಾರಿ ಪ್ರತಿಭಟನೆ, ರಸ್ತೆ ತಡೆ
Last Updated 20 ಡಿಸೆಂಬರ್ 2019, 19:45 IST
ಅಕ್ಷರ ಗಾತ್ರ

ನವದೆಹಲಿ: ಪೌರತ್ವ (ತಿದ್ದುಪಡಿ) ಕಾಯ್ದೆಯ ವಿರುದ್ಧದ ಆಕ್ರೋಶ ದಿನಕಳೆದಂತೆ ಏರುತ್ತಲೇ ಇದೆ. ರಾಷ್ಟ್ರ ರಾಜಧಾನಿ ದೆಹಲಿ ಮತ್ತು ಉತ್ತರ ಪ್ರದೇಶದಲ್ಲಿ ಶುಕ್ರವಾರ ನಡೆದ ಪ್ರತಿಭಟನೆಯೂ ಹಿಂಸೆಗೆ ತಿರುಗಿದೆ.

ದೆಹಲಿಯ ದರಿಯಾಗಂಜ್‌ ಪ್ರದೇಶದಲ್ಲಿ ಕಾರೊಂದಕ್ಕೆ ಬೆಂಕಿ ಹಚ್ಚಲಾಗಿದೆ. ದೆಹಲಿ ಗೇಟ್‌ ಬಳಿಯಲ್ಲಿ ಪ್ರತಿಭಟನಕಾರರು ಪೊಲೀಸರತ್ತ ಕಲ್ಲು ತೂರಾಟ ನಡೆಸಿದ್ದಾರೆ. ಪ್ರತಿಭಟನಕಾರರನ್ನು ಚದುರಿಸಲು ಪೊಲೀಸರು ಜಲಫಿರಂಗಿ ಬಳಸಿದ್ದಾರೆ ಮತ್ತು ಲಾಠಿ ಪ್ರಹಾರ ನಡೆಸಿದ್ದಾರೆ.

ದೆಹಲಿ, ಮಹಾರಾಷ್ಟ್ರ, ಕರ್ನಾಟಕ–ಕೇರಳ ಗಡಿ ಭಾಗದ ಕೆಲವೆಡೆಗಳಲ್ಲಿಯೂ ಹಿಂಸಾಚಾರ ವರದಿಯಾಗಿದೆ.

ಉತ್ತರ ಪ್ರದೇಶದ ಗೋರಖಪುರ, ಸಂಭಲ್‌, ಭದೋಹಿ, ಬಹರೈಚ್‌, ಫರೂಕಾಬಾದ್‌, ಬುಲಂದ್‌ಶಹರ್‌ ಮತ್ತು ಫಿರೋಜಾಬಾದ್‌ನಲ್ಲಿ ಶುಕ್ರವಾರದ ನಮಾಜ್‌ ಬಳಿಕ ಪ್ರತಿಭಟನೆ ನಡೆದಿದೆ. ಕೆಲವೆಡೆ ಕಲ್ಲು ತೂರಾಟ ನಡೆದರೆ ಕೆಲವೆಡೆ ವಾಹನಗಳಿಗೆ ಬೆಂಕಿ ಹಚ್ಚಲಾಗಿದೆ. ಲಾಠಿ ಪ್ರಹಾರದ ಮೂಲಕ ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದಿದ್ದಾರೆ.

ಪ್ರತಿಭಟನೆ ನಿಯಂತ್ರಣಕ್ಕೆ ಇಂಟರ್‌ನೆಟ್‌ ಸೇವೆ ಸ್ಥಗಿತದ ಕಾರ್ಯತಂತ್ರಗಳನ್ನು ಸರ್ಕಾರಗಳು ಅನುಸರಿಸುತ್ತಿವೆ. ಉತ್ತರ ಪ್ರದೇಶದ ಹತ್ತಕ್ಕೂ ಹೆಚ್ಚು ನಗರಗಳು, ದೆಹಲಿಯ ಹಲವು ಭಾಗಗಳಲ್ಲಿ ಅಂತರ್ಜಾಲ ಸೇವೆಯನ್ನು ಸ್ಥಗಿತ ಮಾಡಲಾಗಿದೆ.

ಇಲ್ಲೆಲ್ಲ ಪ್ರತಿಭಟನೆ

*ಚೆನ್ನೈ: ಪೌರತ್ವ (ತಿದ್ದುಪಡಿ) ಕಾಯ್ದೆ ವಿರುದ್ಧ ಚೆನ್ನೈನಲ್ಲಿ ಗುರುವಾರ ಶಾಂತಿಯುತ ಪ್ರತಿಭಟನೆ ನಡೆಸಿದ್ದವರಲ್ಲಿ 601 ಜನರ ವಿರುದ್ಧ ಚೆನ್ನೈ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಕರ್ನಾಟಕ ಶಾಸ್ತ್ರೀಯ ಸಂಗೀತ ಗಾಯಕ ಟಿ.ಎಂ.ಕೃಷ್ಣಾ ಮತ್ತು ನಟ ಸಿದ್ಧಾರ್ಥ್ ವಿರುದ್ಧವೂ ಪ್ರಕರಣ ದಾಖಲಾಗಿದೆ

* ಪೌರತ್ವ (ತಿದ್ದುಪಡಿ) ಕಾಯ್ದೆಯನ್ನು ವಿರೋಧಿಸಿ ಚೆನ್ನೈನ ಹಲವೆಡೆ ಶುಕ್ರವಾರವೂ ಪ್ರತಿಭಟನೆಗಳು ನಡೆದಿವೆ. ತಮಿಳುನಾಡಿನ ಎಲ್ಲಾ ವಿಶ್ವವಿದ್ಯಾಲಯಗಳು ಮತ್ತು ಕಾಲೇಜುಗಳಿಗೆ ರಾಜ್ಯ ಸರ್ಕಾರವು ಜನವರಿ 1ರವರೆಗೆ ರಜೆ ಘೋಷಿಸಿದೆ

* ಪುಣೆ: ಈ ಕಾಯ್ದೆಯನ್ನು ವಿರೋಧಿಸಿ ಮಹಾರಾಷ್ಟ್ರದ ಪುಣೆಯಲ್ಲಿ ಶುಕ್ರವಾರ 10,000ಕ್ಕೂ ಹೆಚ್ಚು ಜನ ಪ್ರತಿಭಟನಾ ಮೆರವಣಿಗೆ ನಡೆಸಿದ್ದಾರೆ. ಮುಂಬೈನಲ್ಲೂ ಭಾರಿ ಸಂಖ್ಯೆಯಲ್ಲಿ ಸೇರಿದ್ದ ಜನರು ಪ್ರತಿಭಟನಾ ಮೆರವಣಿಗೆ ನಡೆಸಿದ್ದಾರೆ

* ತಿರುವನಂತಪುರ: ಪೌರತ್ವ (ತಿದ್ದುಪಡಿ) ಕಾಯ್ದೆ ವಿರೋಧಿಸಿ ಮಂಗಳೂರಿನಲ್ಲಿ ಪ್ರತಿಭಟನೆ ನಡೆಸುತ್ತಿದ್ದವರಲ್ಲಿ ಇಬ್ಬರು ಯುವಕರು ಪೊಲೀಸರ ಗುಂಡಿಗೆ ಬಲಿಯಾದದ್ದನ್ನು ಖಂಡಿಸಿ ಕೇರಳ ವಿದ್ಯಾರ್ಥಿ ಸಂಘಟನೆಯು ಗುರುವಾರ ತಡರಾತ್ರಿ ಭಾರಿ ಪ್ರತಿಭಟನೆ ನಡೆಸಿದೆ. ಹಲವು ರೈಲು ಮತ್ತು ಅಂತರರಾಜ್ಯ ಬಸ್‌ಗಳನ್ನು ಪ್ರತಿಭಟನಾ ನಿರತ ವಿದ್ಯಾರ್ಥಿಗಳು ತಡೆದಿದ್ದಾರೆ

* ಭೋಪಾಲ್: ಮಧ್ಯಪ್ರದೇಶದ ಭೋಪಾಲ್ ಮತ್ತು ಜಬಲ್‌ಪುರದಲ್ಲಿ ಶುಕ್ರವಾರ ಭಾರಿ ಪ್ರತಿಭಟನೆ ನಡೆದಿದೆ. ಭೋಪಾಲ್‌ನಲ್ಲಿ 6 ಗಂಟೆ ಇಂಟರ್‌ನೆಟ್ ಸ್ಥಗಿತ ಮಾಡಲಾಗಿತ್ತು. ಜಬಲ್‌ಪುರದಲ್ಲಿ ಕರ್ಫ್ಯೂ ಜಾರಿ ಮಾಡಲಾಗಿದೆ

* ಗುಜರಾತ್‌: ಗುಜರಾತ್‌ನ ವಡೋದರ ನಗರದ ಹಾಥಿಖಾನ ಪ್ರದೇಶವು ಕೋಮು ಸೂಕ್ಷ್ಮ ಪ್ರದೇಶ. ಇಲ್ಲಿನ ಮಸೀದಿಯ ಹೊರಭಾಗದಲ್ಲಿ ಪ್ರತಿಭಟನಕಾರರ ಗುಂಪು ಪೊಲೀಸರ ಜತೆ ಸಂಘರ್ಷ ನಡೆಸಿದೆ. ಪೊಲೀಸರು ಶುಕ್ರವಾರದ ನಮಾಜ್‌ನ ವಿಡಿಯೊ ಚಿತ್ರೀಕರಣ ನಡೆಸಿದ್ದಕ್ಕೆ ನಮಾಜ್‌ ಮಾಡುತ್ತಿದ್ದವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಆದರೆ, ಸಿಎಎ ವಿರುದ್ಧದ ಪ್ರತಿಭಟನೆ ತೀವ್ರಗೊಳ್ಳುತ್ತಿರುವುದರಿಂದ ಮುನ್ನೆಚ್ಚರಿಕೆ ಕ್ರಮವಾಗಿ ವಿಡಿಯೊ ಚಿತ್ರೀಕರಣ ಮಾಡಲಾಗುತ್ತಿದೆ ಎಂದು ಪೊಲೀಸರು ಸಮರ್ಥಿಸಿಕೊಂಡಿದ್ದಾರೆ. ಸಂಘರ್ಷದಲ್ಲಿ ಪೊಲೀಸ್‌ ಅಧಿಕಾರಿಯೊಬ್ಬರು ಗಾಯಗೊಂಡಿದ್ದಾರೆ. ಮೂವರನ್ನು ಬಂಧಿಸಲಾಗಿದೆ.

‘ಮೋದಿಜೀ, ನೀವು ನನ್ನ ಬಟ್ಟೆಯಿಂದ ನನ್ನನ್ನು ಗುರುತು ಹಿಡಿಯಬಲ್ಲಿರಾ’ ಎಂಬ ಫಲಕ ಹಿಡಿದು ಚೆನ್ನೈಯಲ್ಲಿ ಯುವತಿಯೊಬ್ಬರು ಪ್ರತಿಭಟಿಸಿದರು.ಪ್ರತಿಭಟನಕಾರರ ಬಟ್ಟೆಯಿಂದಲೇ ಅವರು ಯಾರು ಎಂಬುದನ್ನು ಪತ್ತೆ ಮಾಡಬಹುದು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದರು
‘ಮೋದಿಜೀ, ನೀವು ನನ್ನ ಬಟ್ಟೆಯಿಂದ ನನ್ನನ್ನು ಗುರುತು ಹಿಡಿಯಬಲ್ಲಿರಾ’ ಎಂಬ ಫಲಕ ಹಿಡಿದು ಚೆನ್ನೈಯಲ್ಲಿ ಯುವತಿಯೊಬ್ಬರು ಪ್ರತಿಭಟಿಸಿದರು.
ಪ್ರತಿಭಟನಕಾರರ ಬಟ್ಟೆಯಿಂದಲೇ ಅವರು ಯಾರು ಎಂಬುದನ್ನು ಪತ್ತೆ ಮಾಡಬಹುದು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದರು

ಮಮತಾ ಕ್ಷಮೆಯಾಚಿಸಲಿ

ಪೌರತ್ವ (ತಿದ್ದುಪಡಿ) ಕಾಯ್ದೆಯನ್ನು ಭಾರತೀಯರು ಒಪ್ಪುತ್ತಾರೆಯೇ ಎಂಬುದನ್ನು ತಿಳಿದು ಕೊಳ್ಳಲು ವಿಶ್ವಸಂಸ್ಥೆಯ ಮೇಲ್ವಿಚಾರಣೆಯಲ್ಲಿ ಜನಮತಗಣನೆ ನಡೆಸಿ ಎಂದು ಹೇಳಿದ್ದ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ದೇಶದ ಕ್ಷಮೆಯಾಚಿಸಬೇಕು ಎಂದು ಬಿಜೆಪಿ ಆಗ್ರಹಿಸಿದೆ.

'ಸಂಸತ್ತಿನಲ್ಲಿ ಅಂಗೀಕಾರವಾದ ಮಸೂದೆಯನ್ನು ಜನಮತಗಣನೆಗೆ ಹಾಕಿ ಎನ್ನುವ ಮೂಲಕ ಮಮತಾ ಅವರು ಸಂಸತ್ತಿಗೆ ಅವಮಾನ ಮಾಡಿದ್ದಾರೆ' ಎಂದು ಕೇಂದ್ರ ಸಚಿವೆ ಸ್ಮೃತಿ ಇರಾನಿ ಟೀಕಿಸಿದ್ದಾರೆ.

'ಭಾರತದ ಜನಮತಗಣನೆ ನಡೆಸಲು ವಿಶ್ವ ಸಂಸ್ಥೆ ಯಾರು?'ಎಂದು ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

‘ನಾನು ಜನಾಭಿಪ್ರಾಯ ಸಂಗ್ರಹಣೆ ನಡೆಯಲಿ ಎಂದಷ್ಟೇ ಹೇಳಿದ್ದೆ’ ಎಂದು ಮಮತಾ ಬ್ಯಾನರ್ಜಿ ಸ್ಪಷ್ಟನೆ ನೀಡಿದ್ದಾರೆ.

ಪೌರತ್ವ ಗೊಂದಲ ಪರಿಹಾರ ಯತ್ನ

ನವದೆಹಲಿ: ಭಾರತದಲ್ಲಿ 1987ರ ಜುಲೈ 1ಕ್ಕೂ ಮುನ್ನ ಜನಿಸಿದವರು ಮತ್ತು ಅವರ ಮಕ್ಕಳಿಗೆ ಸಹಜವಾಗಿ ಭಾರತದ ಪೌರತ್ವ ಲಭ್ಯವಾಗಿರುತ್ತದೆ ಎಂದು ಕೇಂದ್ರ ಸರ್ಕಾರದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

‘1950ರ ಜನವರಿ 26 ಮತ್ತು 1987ರ ಜುಲೈ 1ರ ನಡುವೆ ಭಾರತದಲ್ಲಿ ಜನಿಸಿದ ಎಲ್ಲರಿಗೂ ಭಾರತದ ಸಹಜ ಪೌರತ್ವ ದೊರೆಯಲಿದೆ.

‘2004ರ ಡಿಸೆಂಬರ್ 3ರ ನಂತರ ಭಾರತೀಯ ದಂಪತಿಗೆ, ಭಾರತದಲ್ಲಿ ಜನಿಸಿದ ಮಕ್ಕಳಿಗೆ ಸಹಜ ಪೌರತ್ವ ದೊರೆಯಲಿದೆ. 2004ರ ಡಿಸೆಂಬರ್ 3ರ ನಂತರ ಭಾರತೀಯ ದಂಪತಿಗೆ, ಭಾರತದಲ್ಲಿ ಜನಿಸಿದ ಮಕ್ಕಳಿಗೆ ಸಹಜ ಪೌರತ್ವ. ಮಗುವಿನ ತಂದೆ–ತಾಯಿಯಲ್ಲಿ ಒಬ್ಬರು ಪೌರತ್ವ ಹೊಂದಿದ್ದರೂ ಪೌರತ್ವ ದೊರೆಯಲಿದೆ. ಆದರೆ, ತಂದೆ–ತಾಯಿಯಲ್ಲಿ ಭಾರತದ ಪೌರತ್ವ ಇಲ್ಲದವರು ಅಕ್ರಮ ವಲಸಿಗರು ಆಗಿರಬಾರದು’ ಎಂದು ಅವರು ಹೇಳಿದ್ದಾರೆ.

ಟ್ವೀಟ್ ಅಳಿಸಿದ ಬಿಜೆಪಿ

ಪೌರತ್ವ (ತಿದ್ದುಪಡಿ) ಕಾಯ್ದೆ ಮತ್ತು ರಾಷ್ಟ್ರೀಯ ಪೌರತ್ವ ನೋಂದಣಿ
ಯನ್ನು (ಎನ್‌ಆರ್‌ಸಿ) ಜಾರಿಗೆ ತಂದೇ ತರುತ್ತೇವೆ ಎಂದು 2019ರಲ್ಲಿ ಬಿಜೆಪಿ ಟ್ವೀಟ್ ಮಾಡಿತ್ತು. ಶುಕ್ರವಾರ ಆ ಟ್ವೀಟ್ ಅನ್ನು ಬಿಜೆಪಿ ಅಳಿಸಿದೆ.

ಮಸೀದಿಯಲ್ಲಿ ಆಜಾದ್‌ ಪ್ರತ್ಯಕ್ಷ

ನವದೆಹಲಿ: ಭೀಮ್‌ ಆರ್ಮಿಯ ಮುಖ್ಯಸ್ಥ ಚಂದ್ರಶೇಖರ ಆಜಾದ್‌ ಸೇರಿ ಸಾವಿರಕ್ಕೂ ಹೆಚ್ಚು ಮಂದಿ ಹಳೆ ದೆಹಲಿಯ ಜಾಮಾ ಮಸೀದಿ ಹೊರಭಾಗದಲ್ಲಿ ಶುಕ್ರವಾರದ ನಮಾಜ್‌ನ ಬಳಿಕ ಪ್ರತಿಭಟನೆ ನಡೆಸಿದ್ದಾರೆ. ವಿವಾದಾತ್ಮಕ ಪೌರತ್ವ (ತಿದ್ದುಪಡಿ) ಮಸೂದೆಯ ವಿರುದ್ಧ ಘೋಷಣೆಗಳನ್ನು ಕೂಗಿದ್ದಾರೆ.

ಜಾಮಾ ಮಸೀದಿಯಿಂದ ಜಂತರ್‌ ಮಂತರ್‌ವರೆಗೆ ಜಾಥಾ ನಡೆಸುವುದಾಗಿ ಆಜಾದ್‌ ಅವರು ಪ್ರಕಟಿಸಿದ್ದರು. ಆದರೆ, ಇದಕ್ಕೆ ಪೊಲೀಸರು ಅನುಮತಿ ನಿರಾಕರಿಸಿದ್ದರು. ಅವರನ್ನು ಪೊಲೀಸರು ವಶಕ್ಕೂ ಪಡೆದಿದ್ದರು. ಆದರೆ, ಪೊಲೀಸರ ಕೈಯಿಂದ ಆಜಾದ್‌ ತಪ್ಪಿಸಿಕೊಂಡರು. ಮತ್ತೆ ಅವರನ್ನು ವಶಕ್ಕೆ ಪಡೆಯಲು ಪ್ರತಿಭಟನಕಾರರು ಅವಕಾಶ ಕೊಡಲಿಲ್ಲ. ಜಾಮಾ ಮಸೀದಿ ಪ್ರದೇಶದಿಂದ ದರಿಯಾಗಂಜ್‌ಗೆ ಹೋಗುವುದಕ್ಕಾಗಿ ಅವರು ಮನೆಗಳ ಒಳಗಿನಿಂದ ಸಾಗಿದರು, ಕೆಲವೆಡೆ ಅವರು ತಾರಸಿಯಿಂದ ತಾರಸಿಗೆ ಹಾರಿ ಸ್ಥಳಕ್ಕೆ ತಲುಪಿದರು ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ. ದರಿಯಾಗಂಜ್‌ನಲ್ಲಿ ನಡೆದ ಪ್ರತಿಭಟನೆಯ ನೇತೃತ್ವವನ್ನು ಅವರು ವಹಿಸಿದರು. ಅಲ್ಲಿ ಅವರನ್ನು ಪೊಲೀಸರು ವಶಕ್ಕೆ ಪಡೆದರು.

ಕಾನೂನು ಮತ್ತು ಸುವ್ಯವಸ್ಥೆ ಪಾಲನೆ ಹಾಗೂ ಸಾರ್ವಜನಿಕರಿಗೆ ಅನನುಕೂಲ ಆಗುವುದನ್ನು ತಪ್ಪಿಸುಬೇಕು. ಹಾಗಾಗಿ, ನಿಗದಿತ ಸ್ಥಳಗಳಲ್ಲಿ ಮಾತ್ರ ಪ್ರತಿಭಟನೆ ನಡೆಸಲು ಅವಕಾಶವಿದೆ ಎಂದು ಪೊಲೀಸರು ಹೇಳಿದ್ದರು. ಪ್ರತಿಭಟನಾಕರರು ಬರುವುದನ್ನು ತಡೆಯಲು ಜಾಮಾ ಮಸೀದಿಯ ಸುತ್ತಲಿನ ನಾಲ್ಕು ಮೆಟ್ರೊ ನಿಲ್ದಾಣಗಳನ್ನು ಮುಚ್ಚಲಾಗಿತ್ತು.

ಶುಕ್ರವಾರದ ನಮಾಜ್‌ ಮುಗಿದ ಕೂಡಲೇ ಜನರು ಜಾಮಾ ಮಸೀದಿಯ ಹೊರಗಿನ ಮೆಟ್ಟಿಲುಗಳಲ್ಲಿ ಸೇರಿದರು. ಆಜಾದ್‌ ಮತ್ತು ಅವರ ಬೆಂಬಲಿಗರು ಕೂಡ ಈ ಗುಂಪನ್ನು ಸೇರಿಕೊಂಡರು. ನಮಾಜ್‌ ಮಾಡಲು ಬರುವವರಿಗೆ ಮಾತ್ರ ಜಾಮಾ ಮಸೀದಿ ಪ್ರವೇಶಕ್ಕೆ ಪೊಲೀಸರು ಅವಕಾಶ ಕೊಟ್ಟಿದ್ದರು. ಆದರೆ, ಆಜಾದ್‌ ಅವರು ಪೊಲೀಸರ ಕಣ್ಣು ತಪ್ಪಿಸಿ ಮಸೀದಿಯೊಳಗೆ ಸೇರಿಕೊಂಡಿದ್ದರು.

ಅಂಬೇಡ್ಕರ್‌ ಅವರ ಚಿತ್ರ ಮತ್ತು ಸಂವಿಧಾನದ ಪ್ರತಿಯನ್ನು ಕೈಯಲ್ಲಿ ಹಿಡಿದುಕೊಂಡಿದ್ದ ಆಜಾಧ್‌, ಘೋಷಣೆಗಳನ್ನು ಕೂಗಿದರು. ಪ್ರತಿಭಟನಕಾರರಲ್ಲಿ ಹಲವರು ತ್ರಿವರ್ಣ ಧ್ವಜಗಳನ್ನು ಹಿಡಿದಿದ್ದರು. ‘ಎನ್‌ಆರ್‌ಸಿ, ಸಿಎಎ (ಪೌರತ್ವ ತಿದ್ದುಪಡಿ ಕಾಯ್ದೆ) ತಿರಸ್ಕರಿಸಿ’ ಎಂದು ಬರೆದಿದ್ದ ಬ್ಯಾನರ್‌ಗಳು ಪ್ರತಿಭಟನೆಯಲ್ಲಿ ಕಾಣಿಸಿಕೊಂಡವು. ಆಜಾದ್‌ ಅವರು ಸಂವಿಧಾನದ ಪ್ರಸ್ತಾವನೆಯನ್ನು ಓದಿದರು. ಇತರರು ಅದನ್ನು ಪುನರುಚ್ಚರಿಸಿದರು.

ಜಾಮಾ ಮಸೀದಿ ಸುತ್ತ ಭಾರಿ ಸಂಖ್ಯೆಯಲ್ಲಿ ಜನರು ಇದ್ದರು. ಅದೇ ಹೊತ್ತಿಗೆ ಇನ್ನೊಂದು ಗುಂಪು ಜಾಥಾವೊಂದನ್ನು ಆರಂಭಿಸಿತು. ಆದರೆ, ದೆಹಲಿ ಗೇಟ್‌ ಬಳಿ ಈ ಜಾಥಾವನ್ನು ಪೊಲೀಸರು ತಡೆದರು.

ಕ್ಷಿಪ್ರ ಕ್ರಿಯಾ ಪಡೆ (ಆರ್‌ಎಫ್‌) ಸಿಬ್ಬಂದಿ ಸೇರಿ ದೊಡ್ಡ ಸಂಖ್ಯೆಯಲ್ಲಿ ಪೊಲೀಸರನ್ನು ಜಾಮಾ ಮಸೀದಿ ಸುತ್ತ ನಿಯೋಜಿಸಲಾಗಿತ್ತು. ಹಿರಿಯ ಪೊಲೀಸ್‌ ಅಧಿಕಾರಿಗಳಿಗೆ ಪೊಲೀಸರು ಗುಲಾಬಿ ಹೂ ನೀಡಿದರು.

ಮಂಗಳವಾರ ಹಿಂಸಾಚಾರ ನಡೆದಿದ್ದ ಸೀಲಂಪುರ ಪ್ರದೇಶದಲ್ಲಿ ಅರೆ ಸೇನಾ ಪಡೆಯ ಸಾವಿರ ಸಿಬ್ಬಂದಿ ಮತ್ತು ಇತರ ಭದ್ರತಾ ಪಡೆಗಳ 1,500 ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಜಫರಾಬಾದ್‌ ಮತ್ತು ಇತರ ಕೆಲವು ಮೆಟ್ರೊ ನಿಲ್ದಾಣಗಳಲ್ಲಿ ಕ್ಷಿಪ್ರ ಕ್ರಿಯಾ ಪಡೆಯನ್ನೂ ನಿಯೋಜಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT