ಬುಧವಾರ, ಜನವರಿ 29, 2020
30 °C

ಪೌರತ್ವ ಮಸೂದೆ ಮಂಡನೆ ಇಂದು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮುಸ್ಲಿಮೇತರ ಅಕ್ರಮ ವಲಸಿಗರಿಗೆ ಧರ್ಮದ ಆಧಾರದಲ್ಲಿ ಭಾರತದ ಪೌರತ್ವ ನೀಡುವ ‘ಪೌರತ್ವ ತಿದ್ದುಪಡಿ ಮಸೂದೆ– 2019’ನ್ನು ಕೇಂದ್ರ ಸರ್ಕಾರವು ಸೋಮವಾರ ಲೋಕಸಭೆಯಲ್ಲಿ ಮಂಡಿಸಲಿದೆ. ಧರ್ಮದ ಆಧಾರದಲ್ಲಿ ಪೌರತ್ವ ನೀಡುವುದು ಸಂವಿಧಾನದ ಉಲ್ಲಂಘನೆಯಾಗುತ್ತದೆ ಎಂದು ವಿರೋಧ ಪಕ್ಷಗಳು ಆಕ್ಷೇಪ ವ್ಯಕ್ತಪಡಿಸಿವೆ.

ಮುಸ್ಲಿಮೇತರರಿಗೆ ಪೌರತ್ವ

* ಬಾಂಗ್ಲಾದೇಶ, ಅಫ್ಗಾನಿಸ್ತಾನ ಮತ್ತು ಪಾಕಿಸ್ತಾನದಿಂದ ಭಾರತಕ್ಕೆ ವಲಸೆ ಬಂದಿರುವ ಹಿಂದೂ, ಸಿಖ್‌, ಬೌದ್ಧ, ಜೈನ, ಪಾರ್ಸಿ ಮತ್ತು ಕ್ರೈಸ್ತ ಧರ್ಮೀಯರಿಗೆ ಭಾರತದ ಪೌರತ್ವ ನೀಡಲಾಗುತ್ತದೆ

* ಈ ಮೂರು ದೇಶಗಳಲ್ಲಿ ಧಾರ್ಮಿಕ ಕಿರುಕುಳಕ್ಕೆ ಒಳಗಾಗಿ, ಭಾರತಕ್ಕೆ ಬಂದ ಧಾರ್ಮಿಕ ಅಲ್ಪಸಂಖ್ಯಾತ ನಿರಾಶ್ರಿತರು ಎಂದು ಇವರನ್ನು ಪರಿಗಣಿಸಲಾಗುತ್ತದೆ

* 2014ರ ಡಿಸೆಂಬರ್ 31ಕ್ಕೂ ಮುನ್ನ ಭಾರತಕ್ಕೆ ವಲಸೆ ಬಂದಿರುವ ಮುಸ್ಲಿಮೇತರರಿಗೆ ಇದು ಅನ್ವಯವಾಗಲಿದೆ (ಈ ಮೊದಲು 1971ಕ್ಕೂ ಮುನ್ನ ವಲಸೆ ಬಂದವರಿಗೆ ಮಾತ್ರ ಅನ್ವಯವಾಗುತ್ತಿತ್ತು)

* ಮುಸ್ಲಿಮೇತರ ವಲಸಿಗರು ಭಾರತದಲ್ಲಿ ಐದು ವರ್ಷ ನೆಲೆಸಿದ್ದರೆ ಅವರಿಗೆ ಪೌರತ್ವ ದೊರೆಯಲಿದೆ (ಈ ಮೊದಲು 12 ವರ್ಷ ನೆಲೆಸಿದ್ದವರಿಗೆ ಪೌರತ್ವ ದೊರೆಯುತ್ತಿತ್ತು)

* ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಅಫ್ಗಾನಿಸ್ತಾನದಿಂದ ಬಂದ ಅಕ್ರಮ ವಲಸಿಗರಿಗೆ ಮಾತ್ರ ಇದು ಅನ್ವಯವಾಗಲಿದೆ (ಭಾರತದ ಎಲ್ಲಾ ನೆರೆಯ ರಾಷ್ಟ್ರಗಳ ನಿರಾಶ್ರಿತರಿಗೂ ಪೌರತ್ವ ನೀಡಲು ಈಗ ಚಾಲ್ತಿಯಲ್ಲಿರುವ ಕಾಯ್ದೆಯಲ್ಲಿ ಅವಕಾಶವಿತ್ತು)

ಪಾಕಿಸ್ತಾನದ ಹಿಂದೂ ಅವತರಣಿಕೆ: ತರೂರ್

ಧರ್ಮದ ಹೆಸರಿನಲ್ಲಿ ಅಕ್ರಮ ವಲಸಿಗರಿಗೆ ಭಾರತದ ಪೌರತ್ವ ನೀಡುವುದರಿಂದ, ಭಾರತವು ‘ಪಾಕಿಸ್ತಾನದ ಹಿಂದೂ ಅವತರಣಿಕೆ’ಯಾಗುತ್ತದೆ ಎಂದು ಕಾಂಗ್ರೆಸ್ ಸಂಸದ ಶಶಿ ತರೂರ್ ಕಳವಳ ವ್ಯಕ್ತಪಡಿಸಿದ್ದಾರೆ. ‘ಧರ್ಮಕ್ಕೂ, ರಾಷ್ಟ್ರೀಯತೆಗೂ ಸಂಬಂಧವಿಲ್ಲ ಎಂದು ಮಹಾತ್ಮ ಗಾಂಧಿ ನಂಬಿದ್ದರು. ಧರ್ಮದ ಆಧಾರದಲ್ಲಿ ದೇಶ ರಚಿಸಬೇಕು ಎಂಬುದು ಮೊಹಮ್ಮದ್ ಅಲಿ ಜಿನ್ನಾ ಅವರ ಪ್ರತಿಪಾದನೆ ಆಗಿತ್ತು. ಈಗ ಅಕ್ರಮ ವಲಸಿಗರಿಗೆ ಧರ್ಮದ ಆಧಾರದಲ್ಲಿ ಪೌರತ್ವ ನೀಡಿದರೆ, ಗಾಂಧಿ ಪ್ರತಿಪಾದನೆಯ ಎದುರು ಜಿನ್ನಾ ಪ್ರತಿಪಾದನೆಯು ಗೆಲುವು ಸಾಧಿಸಿದಂತಾಗುತ್ತದೆ’ ಎಂದು ಅವರು ಕಳವಳ ವ್ಯಕ್ತಪಡಿಸಿದ್ದಾರೆ.

ದುರುಪಯೋಗದ ಕಳವಳ

‘ಯಾವುದೇ ದಾಖಲೆ ಇಲ್ಲದಿದ್ದರೂ ಅಕ್ರಮ ವಲಸಿಗರಿಗೆ ಭಾರತದ ಪೌರತ್ವ ನೀಡುವುದನ್ನು,  ಶತ್ರು ದೇಶಗಳು ದುರುಪಯೋಗ ಮಾಡಿಕೊಳ್ಳಬಹುದು. ಶತ್ರುದೇಶಗಳು ತಮ್ಮ ಜನರನ್ನು ನಮ್ಮ ದೇಶಕ್ಕೆ ನುಸುಳಿಸಬಹುದು’ ಎಂದು ಗುಪ್ತಚರ ಸಂಸ್ಥೆ ‘ರಾ’ (ರಿಸರ್ಚ್ ಅಂಡ್ ಅನಾಲಿಸಿಸ್ ವಿಂಗ್) ಕಳವಳ ವ್ಯಕ್ತಪಡಿಸಿದೆ. 2016ರಲ್ಲಿ ಈ ಮಸೂದೆಯನ್ನು ಮಂಡಿಸಿದ ನಂತರ, ಅದನ್ನು ಪರಿಶೀಲಿಸಿದ್ದ ಸಂಸದೀಯ ಸಮಿತಿಗೆ ನೀಡಿದ್ದ ವರದಿಯಲ್ಲಿ ‘ರಾ’ ಹೀಗೆ ಹೇಳಿತ್ತು.

ಭಾರತದ ಬದ್ಧತೆ: ಬಿಜೆಪಿ ಸಮರ್ಥನೆ

ನೆರೆಯ ರಾಷ್ಟ್ರಗಳಲ್ಲಿ ಧರ್ಮದ ಕಾರಣಕ್ಕೆ ಕಿರುಕುಳ ಅನುಭವಿಸಿದ ಧಾರ್ಮಿಕ ಅಲ್ಪಸಂಖ್ಯಾತರಿಗೆ, ಧರ್ಮದ ಹೆಸರಿನಲ್ಲಿ ದೇಶವಿಭಜನೆಯಿಂದ ಸಂತ್ರಸ್ತರಾದವರಿಗೆ ಇದರ ಪ್ರಯೋಜನ ದೊರೆಯಲಿದೆ. ಇವರಿಗೆ ಪೌರತ್ವ ನೀಡುವ ಕರ್ತವ್ಯಕ್ಕೆ ಭಾರತವು ಬದ್ಧವಾಗಿರಲಿದೆ. 1950ರಲ್ಲಿ ಜವಾಹರ ಲಾಲ್ ನೆಹರೂ ಅವರ ಸರ್ಕಾರವೂ ಇಂಥದ್ದೇ ಕ್ರಮ ತೆಗೆದುಕೊಂಡಿತ್ತು

–ರಾಮ್‌ ಮಾಧವ್‌, ಬಿಜೆಪಿ ಪ್ರಧಾನ ಕಾರ್ಯದರ್ಶಿ

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು