ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎನ್‌ಆರ್‌ಸಿ: ಜನಮತದ ಮಸೂದೆ ಎಂದ ಶಾ

ಪೌರತ್ವ (ತಿದ್ದುಪಡಿ) ಮಸೂದೆ ಲೋಕಸಭೆಯಲ್ಲಿ ಮಂಡನೆ
Last Updated 9 ಡಿಸೆಂಬರ್ 2019, 20:15 IST
ಅಕ್ಷರ ಗಾತ್ರ

ನವದೆಹಲಿ: ರಾಜಕೀಯ ವಲಯದಲ್ಲಿ ಭಾರಿ ವಿರೋಧಕ್ಕೆ ಕಾರಣವಾಗಿರುವ ಪೌರತ್ವ (ತಿದ್ದುಪಡಿ) ಮಸೂದೆಯು ಲೋಕಸಭೆಯಲ್ಲಿ ಮಂಡನೆಯಾಗಿದೆ.

2014 ಮತ್ತು 2019ರ ಲೋಕಸಭೆ ಚುನಾವಣೆಗೆ ಬಿಜೆಪಿ ಸಿದ್ಧಪಡಿಸಿದ್ದ ಪ್ರಣಾಳಿಕೆಯಲ್ಲಿ ಈ ಮಸೂದೆಯ ವಿಚಾರ ಇತ್ತು. ಹಾಗಾಗಿ, 130 ಕೋಟಿ ಭಾರತೀಯರ ಅನುಮೋದನೆ ಈ ಮಸೂದೆಗೆ ಇದೆ ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಹೇಳಿದ್ದಾರೆ. ಮಸೂದೆಯು ಮುಸ್ಲಿಂ ವಿರೋಧಿ ಎಂಬ ಆರೋಪವನ್ನು ಅವರು ತಳ್ಳಿ ಹಾಕಿದ್ದಾರೆ.

ಈಶಾನ್ಯ ರಾಜ್ಯಗಳಲ್ಲಿ ಈ ಮಸೂದೆಗೆ ಹೆಚ್ಚಿನ ವಿರೋಧ ವ್ಯಕ್ತವಾಗಿದೆ. ಹಾಗಾಗಿ, ಈ ಭಾಗದ ಜನರ ಆತಂಕಗಳನ್ನು ದೂರ ಮಾಡಲು ಶಾ ಯತ್ನಿಸಿದ್ದಾರೆ. ಈ‍ಪ್ರದೇಶದ ಜನರ ಸಂಸ್ಕೃತಿ ಮತ್ತು ಪದ್ಧತಿಗಳನ್ನು ರಕ್ಷಿಸಲು ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಬದ್ಧವಾಗಿದೆ ಎಂಬ ಭರವಸೆಯನ್ನು ಅವರು ಕೊಟ್ಟಿದ್ದಾರೆ.

ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಅಫ್ಗಾನಿಸ್ತಾನದಲ್ಲಿ ಕಿರುಕುಳಕ್ಕೆ ಒಳಗಾಗಿ ಭಾರತಕ್ಕೆ ಬಂದ ನಿರಾಶ್ರಿತರಲ್ಲಿ ಯಾವುದೇ ದಾಖಲೆಗಳು ಇಲ್ಲದಿದ್ದರೂ ಪೌರತ್ವ ನೀಡಲಾಗುವುದು. ಹಿಂದೆಯೂ ಇಂತಹ ಅವಕಾಶಗಳನ್ನು ವಲಸಿಗರಿಗೆ ನೀಡಲಾಗಿದೆ. ಇಂತಹ ಅವಕಾಶದಿಂದಾಗಿಯೇ ಮನಮೋಹನ್‌ ಸಿಂಗ್‌ ಅವರು ದೇಶದ ಪ್ರಧಾನಿಯಾಗುವುದು ಮತ್ತು ಎಲ್‌.ಕೆ.ಅಡ್ವಾಣಿ ಅವರು ಉಪ ಪ್ರಧಾನಿ ಆಗುವುದು ಸಾಧ್ಯವಾಗಿದೆ. ಇವರಿಬ್ಬರೂ ಪಾಕಿಸ್ತಾನ ಮೂಲದವರು.

ಮಸೂದೆಯ ಉದ್ದೇಶ

ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಅಫ್ಗಾನಿಸ್ತಾನದಲ್ಲಿ ಧರ್ಮದ ಹೆಸರಿನಲ್ಲಿ ಕಿರುಕುಳ ಎದುರಿಸಿ ಭಾರತಕ್ಕೆ ವಲಸೆ ಬಂದ ಹಿಂದೂ, ಸಿಖ್‌, ಬೌದ್ಧ, ಜೌನ, ಪಾರ್ಸಿ ಮತ್ತು ಕ್ರೈಸ್ತ ಧರ್ಮೀಯರಿಗೆ ಪೌರತ್ವ ನೀಡುವುದು ಮಸೂದೆಯ ಉದ್ದೇಶ.

ವಿದ್ವಾಂಸರ ಕಳವಳ

ಪ್ರಸ್ತಾವಿತ ಕಾಯ್ದೆಯ ವ್ಯಾ‍ಪ್ತಿಯಿಂದ ಮುಸ್ಲಿಮರನ್ನು ಹೊರಗೆ ಇರಿಸಿರುವುದು ಕಳವಳಕಾರಿ. ಪೌರತ್ವ ನಿರ್ಧರಿಸಲು ಧರ್ಮವನ್ನು ಮಾನದಂಡವಾಗಿ ಮಾಡಿಕೊಂಡಿರುವುದು ಆತಂಕಕಾರಿ ಎಂದು ಭಾರತದ ಸುಮಾರು 900 ವಿದ್ವಾಂಸರ ಮತ್ತು ವಿಜ್ಞಾನಿಗಳು ಹೇಳಿದ್ದಾರೆ.ವಿದ್ವಾಂಸರಾದ ಜೋಯಾ ಹಸನ್‌ ಮತ್ತು ಹರ್ಬನ್ಸ್‌ ಮುಖಿಯಾ ಅವರು ಸೇರಿದಂತೆ 918 ಮಂದಿ ಜಂಟಿ ಹೇಳಿಕೆಯನ್ನು ಬಿಡುಗಡೆ ಮಾಡಿದ್ದಾರೆ.

ಕಾಂಗ್ರೆಸ್‌, ತೃಣಮೂಲ ಕಾಂಗ್ರೆಸ್‌ ಮತ್ತು ಇತರ ವಿರೋಧ ಪಕ್ಷಗಳು ಮಸೂದೆ ಮಂಡನೆಗೇ ವಿರೋಧ ವ್ಯಕ್ತಪಡಿಸಿದವು. ಹಾಗಾಗಿ, ಮತ ವಿಭಜನೆಯ ಬಳಿಕ ಮಸೂದೆ ಮಂಡಿಸಲಾಯಿತು. ಮಸೂದೆ ಪರವಾಗಿ 293 ಮತ್ತು ವಿರುದ್ಧ 82 ಮತಗಳು ಬಂದವು.

ಆಕ್ರೋಶ

-ಪೌರತ್ವ (ತಿದ್ದುಪಡಿ) ಮಸೂದೆಯ ವಿರುದ್ಧ ಸಂಸತ್‌ ಆವರಣ ಮತ್ತು ದೆಹಲಿಯ ಇತರೆಡೆಗಳಲ್ಲಿ ಪ್ರತಿಭಟನೆ ನಡೆದಿದೆ

-ಸಂಸತ್‌ ಭವನದ ಆವರಣದಲ್ಲಿರುವ ಮಹಾತ್ಮ ಗಾಂಧಿ ಪ್ರತಿಮೆ ಮುಂದೆ ಮುಸ್ಲಿಂ ಲೀಗ್‌ ಸಂಸದರಿಂದ ಪ್ರತಿಭಟನೆ

-ಮಸೂದೆ ಅಂಗೀಕಾರವಾದರೆ ಅದನ್ನು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಲು ಮುಸ್ಲಿಂ ಲೀಗ್‌ ನಿರ್ಧಾರ

***

ನುಸುಳುಕೋರರು ಮತ್ತು ನಿರಾಶ್ರಿತರ ನಡುವಣ ವ್ಯತ್ಯಾಸ ಗುರುತಿಸಬೇಕು. ಈ ಮಸೂದೆಯು ಯಾರಿಗೂ ತಾರತಮ್ಯ ಮಾಡುವುದಿಲ್ಲ, ಯಾರ ಹಕ್ಕನ್ನೂ ಕಸಿದುಕೊಳ್ಳುವುದಿಲ್ಲ

-ಅಮಿತ್‌ ಶಾ, ಕೇಂದ್ರ ಗೃಹ ಸಚಿವ

***

ಎನ್‌ಆರ್‌ಸಿ, ಸಿಎಬಿ ಬಗ್ಗೆ ಚಿಂತೆ ಬೇಡ. ಪಶ್ಚಿಮ ಬಂಗಾಳದಲ್ಲಿ ಇವುಗಳಿಗೆ ಅವಕಾಶವಿಲ್ಲ. ಯಾರನ್ನೂ ದೇಶದಿಂದ ಹೊರಕ್ಕೆ ಹಾಕುವಂತಿಲ್ಲ ಮತ್ತು ನಿರಾಶ್ರಿತ ಎನ್ನುವಂತಿಲ್ಲ

-ಮಮತಾ ಬ್ಯಾನರ್ಜಿ, ಪಶ್ಚಿಮ ಬಂಗಾಳ ಮುಖ್ಯಮಂತ್ರಿ

***

ಹಿಂದೂಗಳನ್ನು ಆಯ್ದು ಪೌರತ್ವ ನೀಡುವುದು ಧಾರ್ಮಿಕ ಯುದ್ಧಕ್ಕೆ ಕಾರಣ ಆಗಬಹುದು. ಸರ್ಕಾರವು ಹಿಂದೂ–ಮುಸ್ಲಿಮರನ್ನು ಅಗೋಚರವಾಗಿ ವಿಭಜಿಸಲು ಮುಂದಾಗಿದೆ

-ಸಾಮ್ನಾ ಸಂಪಾದಕೀಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT