ಮಂಗಳವಾರ, ಮೇ 18, 2021
28 °C
ಬಿಜೆಪಿಯೇತರ ಪಕ್ಷಗಳ ಜತೆ ಮೈತ್ರಿ ಸಾಧ್ಯತೆ ಇನ್ನೂ ಜೀವಂತ: ಕಾಂಗ್ರೆಸ್

ಮಧ್ಯಪ್ರದೇಶ ಚುನಾವಣೆಯಲ್ಲಿ ಕಾಂಗ್ರೆಸ್‌ನದ್ದೇ ಚಾಲಕನ ಸೀಟು: ಜ್ಯೋತಿರಾಧಿತ್ಯ

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ‘ಮಧ್ಯಪ್ರದೇಶ ಚುನಾವಣೆಯಲ್ಲಿ ಕಾಂಗ್ರೆಸ್‌ ಈಗಲೂ ಚಾಲಕನ ಸೀಟಿನಲ್ಲೇ ಇದೆ. ಚುನಾವಣೆಯನ್ನು ಎದುರಿಸಲು ಬಿಜೆಪಿಯೇತರ ಪಕ್ಷಗಳ ಜತೆಗೆ ಮೈತ್ರಿ ಮಾಡಿಕೊಳ್ಳುವ ಸಾಧ್ಯತೆ ಇನ್ನೂ ಜೀವಂತವಾಗಿದೆ. ಆ ಪಕ್ಷಗಳ ಜತೆಗೆ ಕಾಂಗ್ರೆಸ್ ಸಂಪರ್ಕದಲ್ಲಿದೆ’ ಎಂದು ಪಕ್ಷದ ನಾಯಕ ಜ್ಯೋತಿರಾಧಿತ್ಯ ಸಿಂಧಿಯಾ ಹೇಳಿದ್ದಾರೆ.

ಮಧ್ಯಪ್ರದೇಶ ಚುನಾವಣೆಗೆ ಕಾಂಗ್ರೆಸ್‌ನ ಸಿದ್ಧತೆ ಬಗ್ಗೆ ಅವರು ಪತ್ರಕರ್ತರೊಂದಿಗೆ ಮಾಹಿತಿ ಹಂಚಿಕೊಂಡಿದ್ದಾರೆ.

‘ಹಿಂದಿನ ಚುನಾವಣೆಯಲ್ಲಿ ಬಿಎಸ್‌ಪಿ ಪಡೆದುಕೊಂಡಿರುವ ಮತಗಳಿಗೂ, ಅದು ಕೇಳುತ್ತಿರುವ ಕ್ಷೇತ್ರಗಳಿಗೂ ತಾಳೆಯಾಗುತ್ತಿಲ್ಲ. ಆ ಮೈತ್ರಿಯಿಂದ ಎರಡು ಪಕ್ಷಗಳಿಗೂ ಅನುಕೂಲವಾಗುವುದಿಲ್ಲ. ಬದಲಿಗೆ ಬಿಜೆಪಿಗೆ ಲಾಭವಾಗುತ್ತದೆ. ಇದು ಚುನಾವಣಾ ತಂತ್ರದ ವಿಚಾರ. ಯಶಸ್ವಿಯಾಗುವಂತಹ ತಂತ್ರವನ್ನಷ್ಟೇ ಹೂಡಬೇಕಾಗುತ್ತದೆ’ ಎಂದು ಅವರು ಹೇಳಿದ್ದಾರೆ.

‘ರಾಜ್ಯ ವಿಧಾನಸಭೆ ಚುನಾವಣೆಗೂ 2019ರ ಲೋಕಸಭಾ ಚುನಾವಣೆಗೂ ಸಂಬಂಧವಿಲ್ಲ. ವಿಧಾನಸಭೆ ಚುನಾವಣೆಯಲ್ಲಿ ಮೈತ್ರಿ ಕೆಲಸ ಮಾಡದಿದ್ದರೂ, ಲೋಕಸಭೆ ಚುನಾವಣೆಯಲ್ಲಿ ಅದು ಕೆಲಸ ಮಾಡುತ್ತದೆ’ ಎಂದು ಅವರು ವಿವರಿಸಿದ್ದಾರೆ.

‘ಈ ಚುನಾವಣೆಯಲ್ಲಿ ಬಿಜೆಪಿಯೂ ಮುಖ್ಯವಲ್ಲ, ನರೇಂದ್ರ ಮೋದಿಯೂ ಮುಖ್ಯವಲ್ಲ. ಮಧ್ಯಪ್ರದೇಶದ ಜನರ ಬವಣೆಯೇ ಈ ಚುನಾವಣೆಯ ವಿಷಯ. ಬಿಜೆಪಿಯ 14 ವರ್ಷಗಳ ದುರಾಡಳಿತದ ಫಲವಾದ ವ್ಯಾಪಂ ಹಗರಣ, ಭ್ರಷ್ಟಾಚಾರ, ಮರಳು ದಂಧೆ, ನಿರುದ್ಯೋಗದ ಸಮಸ್ಯೆ ಮತ್ತು ಮಹಿಳೆಯರ ವಿರುದ್ಧದ ಅಪರಾಧಗಳ ಹೆಚ್ಚಳದಿಂದ ಜನ ರೋಸಿ ಹೋಗಿದ್ದಾರೆ. ಇವೆಲ್ಲವನ್ನು ಬದಲಿಸುವ ಸಮಯ ಈಗ ಬಂದಿದೆ ಎಂದ ಧ್ಯೇಯದೊಂದಿಗೆ ಚುನಾವಣೆ ಎದುರಿಸುತ್ತೇವೆ’ ಎಂದು ಸಿಂಧಿಯಾ ಹೇಳಿದ್ದಾರೆ.

**

ಬಿಜೆಪಿ ಎದುರಿಸಲು ತಳಮಟ್ಟದಿಂದ ಕೆಲಸ ಮಾಡಬೇಕಾಗುತ್ತದೆ. ಚುನಾವಣಾ ತಂತ್ರ ರೂಪಿಸುವಲ್ಲಿ ಮತಗಟ್ಟೆ ಮಟ್ಟದ ಕಾರ್ಯಕರ್ತರನ್ನೂ ವಿಶ್ವಾಸಕ್ಕೆ ತೆಗೆದುಕೊಂಡಿದ್ದೇವೆ.

–ಜ್ಯೋತಿರಾದಿತ್ಯ ಸಿಂಧಿಯಾ, ಕಾಂಗ್ರೆಸ್ ನಾಯಕ

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು