ಭಾನುವಾರ, ಏಪ್ರಿಲ್ 5, 2020
19 °C

ಪಾಕ್ ಮುಖವಾಡ ಧರಿಸಿರುವ ಬ್ರಿಟಿಷ್ ಸಂಸದೆಯ ವೀಸಾ ರದ್ದು ಸರಿ: ಕಾಂಗ್ರೆಸ್ ಮುಖಂಡ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ಕೇಂದ್ರ ಸರ್ಕಾರವು ಬ್ರಿಟನ್ ಸಂಸದೆ ಡೆಬ್ಬಿ ಅಬ್ರಹಾಮ್ಸ್‌ ಅವರಿಗೆ ವೀಸಾ ನಿರಾಕರಿಸಿರುವುದನ್ನು ಕಾಂಗ್ರೆಸ್‌ ಹಿರಿಯ ನಾಯಕ ಅಭಿಷೇಕ್‌ ಸಿಂಘ್ವಿ ಬೆಂಬಲಿಸಿದ್ದಾರೆ. ಮಾತ್ರವಲ್ಲದೆ, ಡೆಬ್ಬಿ ಪಾಕಿಸ್ತಾನದ ಮುಖವಾಡ ಧರಿಸಿದ್ದಾರೆ ಎಂದು ಹೇಳಿದ್ದಾರೆ.

‘ಡೆಬ್ಬಿ ಅಬ್ರಹಾಮ್ಸ್‌ ಅವರಿಗೆ ಭಾರತ ಪ್ರವೇಶ ನಿರಾಕರಿಸಿರುವುದು ಅವಶ್ಯವಾಗಿತ್ತು. ಅವರು ಕೇವಲ ಸಂಸದೆಯಾಗಿಲ್ಲ. ಪಾಕ್‌ ಮುಖವಾಡ ಧರಿಸಿರುವ ಅವರು ಪಾಕಿಸ್ತಾನದ ಇ–ಆಡಳಿತ ಮತ್ತು ಐಎಸ್‌ಐನೊಂದಿಗೆ ಉತ್ತಮ ನಂಟು ಹೊಂದಿದ್ದಾರೆ. ಭಾರತದ ಸಾರ್ವಭೌಮತ್ವದ ಮೇಲೆ ದಾಳಿ ನಡೆಸುವ ಪ್ರತಿಯೊಂದು ಪ್ರಯತ್ನಕ್ಕೂ ತಡೆಯೊಡ್ಡಬೇಕು’ ಎಂದು ಟ್ವಿಟರ್‌ನಲ್ಲಿ ಬರೆದುಕೊಂಡಿದ್ದಾರೆ.

ಅಬ್ರಹಾಮ್ಸ್‌, ಜಮ್ಮು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸಿದ್ದ ಸಂದರ್ಭ ಪ್ರಧಾನಿ ನರೇಂದ್ರ ಮೋದಿ ಅವರನ್ನು ಟೀಕಿಸಿದ್ದರು.

ಭಾನುವಾರ ದುಬೈನಿಂದ ಭಾರತಕ್ಕೆ ಬಂದಿದ್ದ ಅಬ್ರಹಾಮ್ಸ್‌ ಅವರನ್ನು ವಾಪಸ್‌ ಕಳುಹಿಸಲಾಗಿತ್ತು. ಮಾನ್ಯತೆ ಪಡೆದ ವೀಸಾ ಹೊಂದಿರದ ಕಾರಣ ಭಾರತ ಪ್ರವೇಶ ನಿರಾಕರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಲೇಬರ್‌ ಪಕ್ಷದ ಸಂಸದೆಯಾಗಿರುವ ಅಬ್ರಹಾಮ್ಸ್‌, ಕಾಶ್ಮೀರಕ್ಕೆ ತೆರಳುವ ಸಂಸತ್‌ ಸದಸ್ಯರ ತಂಡದ ಅಧ್ಯಕ್ಷರೂ ಆಗಿದ್ದಾರೆ. ದುಬೈನಿಂದ ಇಲ್ಲಿನ ಇಂದಿರಾ ಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬೆಳಿಗ್ಗೆ 9ಕ್ಕೆ, ಭಾರತದ ಹರ್‌ಪ್ರೀತ್‌ ಉಪಲ್‌ ಜೊತೆಗೆ ಅವರು ಬಂದಿಳಿದರು.

ಇದನ್ನೂ ಓದಿ: ಬ್ರಿಟನ್‌ ಸಂಸದೆಗೆ ಭಾರತ ಪ್ರವೇಶ ಇಲ್ಲ

ಭಾರತಕ್ಕೆ ಬರುವ ಮೊದಲೇ ಅವರ ಇ–ವೀಸಾ ರದ್ದುಪಡಿಸಲಾಗಿದೆ ಎಂದು ಮಾಹಿತಿ ನೀಡಲಾಗಿತ್ತು. ಆದರೂ, ಅವರು ಭಾರತಕ್ಕೆ ಬಂದಿದ್ದಾರೆ ಎಂದು ಗೃಹ ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ. ಇ–ವೀಸಾ ರದ್ದತಿಗೆ ಯಾವುದೇ ಕಾರಣವನ್ನು ತಿಳಿಸಿಲ್ಲ.

ಅಬ್ರಹಾಮ್ಸ್‌ ಅವರಿಗೆ ಕಳೆದ ಅಕ್ಟೋಬರ್‌ನಲ್ಲಿ ಇ–ವೀಸಾ ನೀಡಲಾಗಿತ್ತು. ಇದರ ಅವಧಿ 2020ರ ಅಕ್ಟೋಬರ್‌ವರೆಗೆ ಇತ್ತು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು