ಒಂದೇ ಚುನಾವಣೆ ಸಭೆಗೆ ಬಹುತೇಕ ವಿಪಕ್ಷಗಳ ಗೈರು: ಪ್ರಸ್ತಾವಕ್ಕೆ ಬಿಜೆಡಿ ಸಮ್ಮತಿ

ಬುಧವಾರ, ಜೂಲೈ 17, 2019
29 °C

ಒಂದೇ ಚುನಾವಣೆ ಸಭೆಗೆ ಬಹುತೇಕ ವಿಪಕ್ಷಗಳ ಗೈರು: ಪ್ರಸ್ತಾವಕ್ಕೆ ಬಿಜೆಡಿ ಸಮ್ಮತಿ

Published:
Updated:

ನವದೆಹಲಿ: ಲೋಕಸಭೆ ಮತ್ತು ವಿಧಾನಸಭೆಗಳಿಗೆ ಏಕಕಾಲದಲ್ಲಿ ಚುನಾವಣೆ ಮತ್ತು ದೇಶದ 117ಜಿಲ್ಲೆಗಳಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ವೇಗ ನೀಡುವ ಕುರಿತು ಚರ್ಚಿಸಲು ಕರೆಯಲಾಗಿದ್ದ ಸಭೆಗೆ ಕಾಂಗ್ರೆಸ್‌, ಟಿಎಂಸಿ ಸೇರಿದಂತೆ ಬಹುತೇಕ ಪ್ರಮುಖ ವಿರೋಧ ಪಕ್ಷಗಳು ಗೈರಾದವು. 

ಜೆಡಿಯು ಮುಖ್ಯಸ್ಥ ನಿತೀಶ್‌ ಕುಮಾರ್‌, ನ್ಯಾಷನಲ್‌ ಕಾನ್ಫರೆನ್ಸ್‌ನ ಫಾರೂಕ್‌ ಅಬ್ದುಲ್ಲಾ, ಎನ್‌ಸಿಪಿಯ ಶರದ್‌ ಪವಾರ್‌, ಶಿರೋಮಣಿ ಅಕಾಲಿ ದಳದ ಸುಖ್‌ಭೀರ್‌ ಸಿಂಗ್‌ ಬಾದಲ್‌, ಬಿಜೆಡಿಯ ಮುಖ್ಯಸ್ಥ ನವೀನ್‌ ಪಾಟ್ನಾಯಕ್‌, ವೈಎಸ್‌ಆರ್‌ ಪಕ್ಷದ ಮುಖ್ಯಸ್ಥ ಜಗನ್‌ ಮೋಹನ್‌ ರೆಡ್ಡಿ ಮತ್ತು ಜಮ್ಮು ಕಾಶ್ಮೀರದ ಮೆಹಬೂಬಾ ಮುಫ್ತಿ ಸಭೆಯಲ್ಲಿ ಭಾಗವಹಿಸಿದ್ದ ಪ್ರಮುಖ ನಾಯಕರು. 

ಈ ನಿರ್ಧಾರವನ್ನು ಕಾಂಗ್ರೆಸ್‌ ನಾಯಕರು ವಿರೋಧಿಸಿದ್ದು ಇಂದಿನ ಸಭೆಗೆ ಗೈರಾಗಿದ್ದರು. ತೃಣಮೂಲ ಕಾಂಗ್ರೆಸ್‌ ನಾಯಕಿ ಮಮತಾ ಬ್ಯಾನರ್ಜಿ ಅವರು ತಾವು ಗೈರಾಗುತ್ತಿರುವುದಾಗಿ ಮಂಗಳವಾರವೇ ಪತ್ರ ಬರೆದಿದ್ದರು. ಬಿಎಸ್‌ಪಿ, ಎಸ್‌ಪಿ, ಡಿಎಂಕೆ ಪಕ್ಷಗಳು ಗೈರಾಗುತ್ತಿರುವುದಾಗಿ ತಿಳಿಸಿದವು. 

ಇನ್ನು ತೆಲಂಗಾಣ ಮುಖ್ಯಮಂತ್ರಿ ಕೆಸಿಆರ್‌, ಟಿಡಿಪಿ ಮುಖ್ಯಸ್ಥ ಚಂದ್ರಬಾಬು ನಾಯ್ಡು, ಆಮ್‌ ಆದ್ಮಿ ಪಕ್ಷದ ಕೇಜ್ರಿವಾಲ್‌ ಅವರು ತಮ್ಮ ಪ್ರತಿನಿಧಿಗಳನ್ನು ಸಭೆಗೆ ಕಳುಹಿಸಿದ್ದರು. 

ಸಭೆಗೆ ಆಗಮಿಸಿದ್ದ ಸಿಪಿಎಂನ ನಾಯಕ ಸೀತಾರಾಮ್‌ ಯಚೂರಿ ಅವರು, ಸರ್ಕಾರದ ಪ್ರಸ್ತಾವವನ್ನು ವಿರೋಧಿಸಿದರು. 

ಸಭೆಯಿಂದ ಹೊರ ಬಂದು ಮಾತನಾಡಿದ ಒಡಿಶಾದ ಮುಖ್ಯಮಂತ್ರಿ ನವೀನ್‌ ಪಾಟ್ನಾಯಕ್‌,  ಒಂದು ದೇಶ ಒಂದು ಚುನಾವಣೆ ಪ್ರಸ್ತಾವಕ್ಕೆ ಬಿಜೆಡಿ ಬೆಂಬಲಿಸಲಿದೆ ಎಂದು ಹೇಳಿದರು.

ಒಂದು ದೇಶ ಒಂದು ಚುನಾವಣೆ ಪ್ರಸ್ತಾವವನ್ನು ಕಳೆದ ಲೋಕಸಭೆ ಚುನಾವಣೆ ವೇಳೆ ಕೇಂದ್ರದ ಮೋದಿ ಸರ್ಕಾರ ಮುನ್ನೆಲೆಗೆ ತಂದಿತ್ತು. ಆದರೆ, ವಿರೋಧ ಪಕ್ಷಗಳ ಸಮ್ಮತಿ ದೊರೆಯದೇ ಪ್ರಸ್ತಾವ ಮೂಲೆ ಸೇರಿತ್ತು. ಒಂದು ದೇಶ ಒಂದು ಚುನಾವಣೆಯು ದೇಶದಲ್ಲಿ ಪ್ರಮುಖ ಚುನಾವಣಾ ಸುಧಾರಣೆ ಎಂದು ಎನ್‌ಡಿಎ ಪ್ರತಿಪಾದಿಸುತ್ತಿದೆ. 

 

ಬರಹ ಇಷ್ಟವಾಯಿತೆ?

 • 7

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !