ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟ್ರಂಪ್ ವ್ಯಂಗ್ಯ: ಪ್ರಧಾನಿ ಮೋದಿ ಬೆಂಬಲಕ್ಕೆ ನಿಂತ ಕಾಂಗ್ರೆಸ್

ಅಮೆರಿಕದ ಅಧ್ಯಕ್ಷರಿಗೆ ತೀಕ್ಷ್ಣ ಪ್ರತಿಕ್ರಿಯೆ
Last Updated 4 ಜನವರಿ 2019, 7:28 IST
ಅಕ್ಷರ ಗಾತ್ರ

ನವದೆಹಲಿ:ಅಫ್ಗಾನಿಸ್ತಾನದಲ್ಲಿ ಗ್ರಂಥಾಲಯ ನಿರ್ಮಾಣಕ್ಕೆ ಹಣಕಾಸು ನೆರವು ನೀಡಿದ ವಿಷಯದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಕುರಿತು ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ವ್ಯಂಗ್ಯವಾಡಿದ್ದಕ್ಕೆ ಕಾಂಗ್ರೆಸ್‌ ತೀಕ್ಷ್ಣ ಪ್ರತಿಕ್ರಿಯೆ ನೀಡಿದೆ.

‘ಭಾರತದ ಪ್ರಧಾನಿಯವರ ಬಗ್ಗೆ ಅಮೆರಿಕದ ಅಧ್ಯಕರು ನೀಡಿದ ಹೇಳಿಕೆಯು ಉತ್ತಮ ಅಭಿರುಚಿಯಿಂದ ಕೂಡಿಲ್ಲ ಮತ್ತು ಸ್ವೀಕಾರಾರ್ಹವಲ್ಲ’ ಎಂದು ಕಾಂಗ್ರೆಸ್‌ನ ಹಿರಿಯ ನಾಯಕ ಅಹ್ಮದ್ ಪಟೇಲ್ ಹೇಳಿದ್ದಾರೆ.

‘ಟ್ರಂಪ್ ಹೇಳಿಕೆಗೆ ನಮ್ಮ ಸರ್ಕಾರ ಸೂಕ್ತ ಪ್ರತಿಕ್ರಿಯೆ ನೀಡಲಿದೆ ಎಂಬ ವಿಶ್ವಾಸವಿದೆ. 2004ರ ನಂತರ ಭಾರತವು ಅಫ್ಗಾನಿಸ್ತಾನದಲ್ಲಿ ಉತ್ತಮ ರಸ್ತೆ, ಅಣೆಕಟ್ಟೆಗಳನ್ನು ನಿರ್ಮಿಸಿದೆ. 3 ಶತಕೋಟಿ ಡಾಲರ್ ನೆರವು ನೀಡಿದೆ ಎಂಬುದನ್ನು ಅಮೆರಿಕಕ್ಕೆ ನೆನಪಿಸಬಯಸುತ್ತೇವೆ’ ಎಂದು ಅವರು ಹೇಳಿದ್ದಾರೆ.

‘ಪ್ರಿಯ ಟ್ರಂಪ್ ಅವರೇ, ಭಾರತದ ಪ್ರಧಾನಿಯವರನ್ನು ಅಣಕಿಸುವುದನ್ನು ನಿಲ್ಲಿಸಿ. ಅಫ್ಗಾನಿಸ್ತಾನ ವಿಷಯದಲ್ಲಿಭಾರತಕ್ಕೆ ಅಮೆರಿಕದಿಂದ ಉಪದೇಶ ಬೇಕಾಗಿಲ್ಲ’ ಎಂದು ಕಾಂಗ್ರೆಸ್ ವಕ್ತಾರ ರಣದೀಪ್ ಸರ್ಜೆವಾಲ ಖಾರವಾಗಿ ಟ್ವೀಟ್ ಮಾಡಿದ್ದಾರೆ.

ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅವಧಿಯಲ್ಲಿ ಅಫ್ಗಾನಿಸ್ತಾನದ ಸಂಸತ್ತಿನ ಕಟ್ಟಡ ನಿರ್ಮಾಣಕ್ಕೆ ಭಾರತ ನೆರವಾಗಿದ್ದನ್ನೂ ಅವರು ಸ್ಮರಿಸಿಕೊಂಡಿದ್ದಾರೆ.

‘ಮಾನವ ಕಲ್ಯಾಣಕ್ಕೆ ವ್ಯೂಹಾತ್ಮಕ ಆರ್ಥಿಕ ಸಹಭಾಗಿತ್ವವೂ ಅಗತ್ಯ. ಅಫ್ಗಾನಿಸ್ತಾನದ ಸಹೋದರ, ಸಹೋದರಿಯರ ಜತೆ ನಾವಿದ್ದೇವೆ’ ಎಂದುಸರ್ಜೆವಾಲ ಹೇಳಿದ್ದಾರೆ.

ಅಫ್ಗಾನಿಸ್ತಾನದಲ್ಲಿ ಗ್ರಂಥಾಲಯ ನಿರ್ಮಾಣಕ್ಕೆ ಹಣಕಾಸು ನೆರವು ನೀಡಿದ ವಿಷಯದಲ್ಲಿ ಮೋದಿ ಬಗ್ಗೆ ವ್ಯಂಗ್ಯವಾಡಿದ್ದ ಟ್ರಂಪ್,‘ನನ್ನೊಂದಿಗೆ ಮಾತನಾಡುವಾಗ ಮೋದಿ ಅಫ್ಗಾನಿಸ್ತಾನದಲ್ಲಿನ ಗ್ರಂಥಾಲಯ ನಿರ್ಮಾಣದ ಬಗ್ಗೆ ಪದೇ ಪದೇ ಹೇಳುತ್ತಿದ್ದರು. ಅವರು ಬಹಳ ಚಾಲಾಕಿ. ಕೊನೆಗೂ, ಗ್ರಂಥಾಲಯ ನಿರ್ಮಾಣಕ್ಕೆ ಧನ್ಯವಾದ ಎಂದು ನಾವು ಹೇಳಬೇಕಾಯಿತು. ಆದರೆ, ಆ ಗ್ರಂಥಾಲಯವನ್ನು ಅಲ್ಲಿ ಯಾರು ಬಳಸುತ್ತಿದ್ದಾರೋ ನನಗಂತೂ ತಿಳಿಯದು’ ಎಂದು ಹೇಳಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT