ಮೋದಿ ಬಗ್ಗೆ ಟ್ರಂಪ್ ವ್ಯಂಗ್ಯ

7
ಅಫ್ಗನ್‌ನಲ್ಲಿ ಗ್ರಂಥಾಲಯ ನಿರ್ಮಾಣಕ್ಕೆ ಭಾರತದ ಅನುದಾನ

ಮೋದಿ ಬಗ್ಗೆ ಟ್ರಂಪ್ ವ್ಯಂಗ್ಯ

Published:
Updated:

ವಾಷಿಂಗ್ಟನ್‌: ಅಫ್ಗಾನಿಸ್ತಾನದಲ್ಲಿ ಗ್ರಂಥಾಲಯ ನಿರ್ಮಾಣಕ್ಕೆ ಹಣಕಾಸು ನೆರವು ನೀಡಿದ ಪ್ರಧಾನಿ ನರೇಂದ್ರ ಮೋದಿ ಅವರ ಬಗ್ಗೆ ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ವ್ಯಂಗ್ಯವಾಡಿದ್ದು, ‘ಸಂಘರ್ಷಪೀಡಿತ ದೇಶಕ್ಕೆ ಅದರಿಂದ ಏನೂ ಉಪಯೋಗವಿಲ್ಲ’ ಎಂದು ಹೇಳಿದ್ದಾರೆ.

ಭಾರತ ಮತ್ತು ಇತರ ನೆರೆ ರಾಷ್ಟ್ರಗಳು ಅಫ್ಗನ್‌ ಭದ್ರತೆಗಾಗಿ ಅಗತ್ಯ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಟ್ರಂಪ್ ಹೊಸವರ್ಷದ ಮೊದಲ ಸಂಪುಟ ಸಭೆಯಲ್ಲಿ ಟೀಕಿಸಿದ್ದಾರೆ. ಆದರೆ ಅದು ಯಾವ ಗ್ರಂಥಾಲಯ ಯೋಜನೆಯನ್ನು ಉದ್ದೇಶಿಸಿದ ಟೀಕೆ ಎಂದು ತಿಳಿದುಬಂದಿಲ್ಲ.

ಭಾರತ, ರಷ್ಯಾ, ಪಾಕಿಸ್ತಾನ ಮತ್ತು ಇತರ ನೆರೆರಾಷ್ಟ್ರಗಳು ಅಫ್ಗಾನಿಸ್ತಾನದ ಭದ್ರತೆಯ ಜವಾಬ್ದಾರಿ ತೆಗೆದುಕೊಳ್ಳಬೇಕು ಎಂದ ಅವರು, ಸಾಗರೋತ್ತರ ವೆಚ್ಚ ಕಡಿಮೆ ಮಾಡುವ ತಮ್ಮ ನಿರ್ಧಾರ ಸಮರ್ಥಿಸಿಕೊಂಡರು.

ಭಾರತದ ಪ್ರಧಾನಿ ಜೊತೆಗಿನ ಸ್ನೇಹಭಾವವನ್ನು ಟ್ರಂಪ್‌ ನೆನಪಿಸಿಕೊಂಡರಾದರೂ, ಅಮೆರಿಕ ವೆಚ್ಚ ಮಾಡುತ್ತಿರುವ ಶತಕೋಟಿಗಟ್ಟಲೆ ಡಾಲರ್‌ನ ಹತ್ತಿರಕ್ಕೂ ಬಾರದ ನೆರವಿನ ಬಗ್ಗೆ ವಿಶ್ವದ ನಾಯಕರು ಹೇಗೆ ಹೇಳಿಕೊಳ್ಳುತ್ತಾರೆ ಎಂಬುದನ್ನು ವಿವರಿಸುವುದಕ್ಕೆ ಮೋದಿ ಅವರನ್ನು ಉದಾಹರಿಸಿದರು.

‘ನನ್ನೊಂದಿಗೆ ಮಾತನಾಡುವಾಗ ಮೋದಿ ಅಫ್ಗಾನಿಸ್ತಾನದಲ್ಲಿನ ಗ್ರಂಥಾಲಯ ನಿರ್ಮಾಣದ ಬಗ್ಗೆ ಪದೇ ಪದೇ ಹೇಳುತ್ತಿದ್ದರು. ಅವರು ಬಹಳ ಚಾಲಾಕಿ. ಕೊನೆಗೂ, ಗ್ರಂಥಾಲಯ ನಿರ್ಮಾಣಕ್ಕೆ ಧನ್ಯವಾದ ಎಂದು ನಾವು ಹೇಳಬೇಕಾಯಿತು. ಆದರೆ, ಆ ಗ್ರಂಥಾಲಯವನ್ನು ಅಲ್ಲಿ ಯಾರು ಬಳಸುತ್ತಿದ್ದಾರೋ ನನಗಂತೂ ತಿಳಿಯದು’ ಎಂದರು. ‘ಅಫ್ಗಾನಿಸ್ತಾನದಲ್ಲಿನ ತಾಲಿಬಾನ್ ವಿರುದ್ಧದ ಹೋರಾಟದಲ್ಲಿ ನೆರೆಯ ರಾಷ್ಟ್ರಗಳಾದ ರಷ್ಯಾ, ಭಾರತ, ಪಾಕಿಸ್ತಾನದ ಸೇನೆ ಏಕಿಲ್ಲ? ಅಮೆರಿಕ 6,000 ಮೈಲಿ ದೂರದಲ್ಲಿ ಇದ್ದರೂ ನಮ್ಮ ಸೇನೆ ಅಲ್ಲಿದೆ. ಆದರೂ ಪರವಾಗಿಲ್ಲ. ನಮ್ಮ ಜನರಿಗೆ ಮಾತ್ರವಲ್ಲದೆ ಇತರ ದೇಶಗಳಿಗೂ ಸಹಾಯ ಮಾಡಲು ಬಯಸುತ್ತೇವೆ’ ಎಂದು ಸಭೆ ಬಳಿಕ ಪ್ರತಿಕ್ರಿಯಿಸಿದರು.

’ಬೃಹತ್‌ ಯೋಜನೆಗಳೂ ಇವೆ‘

ನವದೆಹಲಿ: ಡೊನಾಲ್ಡ್‌ ಟ್ರಂಪ್ ಅವರ ಆರೋಪಗಳನ್ನು ಭಾರತ ತಳ್ಳಿಹಾಕಿದೆ. ಅಫ್ಗಾನಿಸ್ತಾನದಲ್ಲಿ ಭಾರತ ಗ್ರಂಥಾಲಯವನ್ನಷ್ಟೇ ನಿರ್ಮಾಣ ಮಾಡಿಲ್ಲ, ಬೃಹತ್ ಮೂಲ ಸೌಕರ್ಯ ಯೋಜನೆಗಳನ್ನೂ ಅನುಷ್ಠಾನಗೊಳಿಸಿದೆ ಎಂದು ಹೇಳಿದೆ.

ಜನರ ಅಗತ್ಯಕ್ಕೆ ಅನುಗುಣವಾಗಿ ಮೂಲಸೌಕರ್ಯ ಮತ್ತು ಸಮುದಾಯ ಅಭಿವೃದ್ಧಿ ಕಾರ್ಯಕ್ರಮಗಳನ್ನು ಅಲ್ಲಿ ಭಾರತ ರೂಪಿಸಿದೆ. ಅದರ ಭಾಗವಾಗಿ ಸಣ್ಣ ಸಣ್ಣ ಗ್ರಂಥಾಲಯಗಳನ್ನು ನಿರ್ಮಿಸಲಾಗಿದೆಯಷ್ಟೆ. ಆದರೆ, ಇದಲ್ಲದೆ 218 ಕಿ.ಮೀ ರಸ್ತೆ, ಸಲ್ಮಾ ಅಣೆಕಟ್ಟೆ ಮತ್ತು ಅಫ್ಗನ್ ಸಂಸತ್ ಭವನ ನಿರ್ಮಾಣದಂತಹ ಬೃಹತ್‌ ಯೋಜನೆಗಳನ್ನೂ ಭಾರತ ಅನುಷ್ಠಾನಗೊಳಿಸುತ್ತಿದೆ.

ಅಫ್ಗಾನಿಸ್ತಾನಕ್ಕೆ ಸೇನಾ ಸಲಕರಣೆಗಳನ್ನು ಒದಗಿಸುತ್ತಿರುವುದರ ಜೊತೆಗೆ, ಅಲ್ಲಿನ ಭದ್ರತಾ ಪಡೆ ಸಿಬ್ಬಂದಿಗೆ ಭಾರತದಲ್ಲಿ ತರಬೇತಿ ಸಹ ನೀಡಲಾಗುತ್ತಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

***

ಭಾರತ ನೀಡುತ್ತಿರುವ ಕೊಡುಗೆಗಾಗಿ ಅಫ್ಗಾನಿಸ್ತಾನದ ಜನ ಧನ್ಯವಾದ ಸಲ್ಲಿಸುತ್ತಿದ್ದಾರೆ. ಬೇರೆಯವರು ಏನು ಮಾಡಿದ್ದಾರೆ, ಮಾಡಿಲ್ಲ ಎಂಬುದು ನಮಗೆ ಬೇಡ.

–ರಾಮ್ ಮಾಧವ್, ಬಿಜೆಪಿ ಪ್ರಧಾನ ಕಾರ್ಯದರ್ಶಿ

ಬರಹ ಇಷ್ಟವಾಯಿತೆ?

 • 2

  Happy
 • 1

  Amused
 • 0

  Sad
 • 1

  Frustrated
 • 4

  Angry

Comments:

0 comments

Write the first review for this !