ಸಿಖ್‌ -ಗೋಧ್ರೋತ್ತರ ಗಲಭೆ: ಮತ್ತೆ ರಾಜಕೀಯ ವಾಗ್ವಾದ

7
ಬಿಜೆಪಿ–ಕಾಂಗ್ರೆಸ್‌ ಮುಖಂಡರಿಂದ ಟೀಕೆ

ಸಿಖ್‌ -ಗೋಧ್ರೋತ್ತರ ಗಲಭೆ: ಮತ್ತೆ ರಾಜಕೀಯ ವಾಗ್ವಾದ

Published:
Updated:

ನವದೆಹಲಿ: 1984ರ ಸಿಖ್‌ ವಿರೋಧಿ ಗಲಭೆಯು ದಶಕಗಳ ಬಳಿಕ ಮತ್ತೆ ರಾಜಕೀಯ ವಾಗ್ವಾದದ ಕೇಂದ್ರಕ್ಕೆ ಬಂದು ನಿಂತಿದೆ.

ಕಾಂಗ್ರೆಸ್‌ ಮುಖಂಡ ಸಜ್ಜನ್‌ ಕುಮಾರ್‌ ಅವರಿಗೆ ದೆಹಲಿ ಹೈಕೋರ್ಟ್‌ ಜೀವಾವಧಿ ಶಿಕ್ಷೆ ವಿಧಿಸಿರುವುದನ್ನು ಕೇಂದ್ರ ಸಚಿವ ಅರುಣ್‌ ಜೇಟ್ಲಿ ಸ್ವಾಗತಿಸಿದ್ದಾರೆ. ಜತೆಗೆ, ಮಧ್ಯ ಪ್ರದೇಶ ಮುಖ್ಯಮಂತ್ರಿಯಾಗಿ ಸೋಮವಾರ ಪ್ರಮಾಣ ಸ್ವೀಕರಿಸಿದ ಕಮಲನಾಥ್‌ ಅವರನ್ನೂ ಸಿಖ್‌ ವಿರೋಧಿ ಗಲಭೆಯ ವಾಗ್ವಾದಕ್ಕೆ ಎಳೆದು ತಂದಿದ್ದಾರೆ. ಸಿಖ್‌ ಗಲಭೆಗೆ ಸಂಬಂಧಿಸಿ ಬಿಜೆಪಿ ಮತ್ತು ಕಾಂಗ್ರೆಸ್‌ ನಡುವೆ ಭಾರಿ ವಾಗ್ಯುದ್ಧ ನಡೆದಿದೆ.

ತಮ್ಮ ಸಮುದಾಯದ ಮೇಲೆ ನಡೆದ ದೌರ್ಜನ್ಯದಲ್ಲಿ ಕಮಲನಾಥ್‌ ಅವರು ‘ಶಿಕ್ಷಾರ್ಹರು’ ಎಂದು ಸಿಖ್‌ ಸಮುದಾಯ ಭಾವಿಸುತ್ತಿದೆ. ಅಂಥವರನ್ನು ಮುಖ್ಯಮಂತ್ರಿ ಮಾಡಿರುವುದು ಸರಿಯಲ್ಲ ಎಂದು ಜೇಟ್ಲಿ ಹೇಳಿದ್ದಾರೆ. ಇದಕ್ಕೆ ಕಮಲನಾಥ್‌ ಪ್ರತಿಕ್ರಿಯೆ ನೀಡಿದ್ದಾರೆ. ‘ಇದಕ್ಕಿಂತ ಹಿಂದೆ ನಾನು ಪ್ರಮಾಣ ಸ್ವೀಕರಿಸಿದ್ದಾಗ ಯಾರೂ ಏನನ್ನೂ ಹೇಳಿರಲಿಲ್ಲ. ನನ್ನ ವಿರುದ್ಧ ಪ್ರಕರಣ ದಾಖಲಾಗಿಲ್ಲ, ಎಫ್‌ಐಆರ್‌ ಇಲ್ಲ ಮತ್ತು ಆರೋಪ ಪಟ್ಟಿಯೂ ದಾಖಲಾಗಿಲ್ಲ. ಹಾಗಿದ್ದರೂ ಆರೋಪ ಹೊರಿಸಲಾಗುತ್ತಿದೆ. ಇದು ರಾಜಕೀಯವಲ್ಲದೆ ಬೇರೇನೂ ಅಲ್ಲ’ ಎಂದು ಹೇಳಿದ್ದಾರೆ. 

ಜೀವಾವಧಿ ಶಿಕ್ಷೆ ವಿಧಿಸಲಾಗಿರುವ ಸಜ್ಜನ್‌ ಕುಮಾರ್‌ ಅವರು ಸಿಖ್‌ ವಿರೋಧಿ ಗಲಭೆಯ ಸಂಕೇತ ಇದ್ದಂತೆ. 1984ರಂತಹ ಮತ್ತೊಂದು ಮಾರಣಹೋಮ ಈ ದೇಶದಲ್ಲಿ ನಡೆದೇ ಇಲ್ಲ ಎಂದು ಜೇಟ್ಲಿ ಅಭಿಪ್ರಾಯಪಟ್ಟಿದ್ದಾರೆ. ಕಾಂಗ್ರೆಸ್‌ ಮತ್ತು ನೆಹರೂ–ಗಾಂಧಿ ಕುಟುಂಬವು ಸಿಖ್‌ ವಿರೋಧಿ ಗಲಭೆಯ ಪ್ರಕರಣಗಳನ್ನು ಮುಚ್ಚಿಹಾಕಲು ಯತ್ನಿಸಿದೆ ಎಂದೂ ಅವರು ಆರೋಪಿಸಿದ್ದಾರೆ. 

ಕಾನೂನು ಪ್ರಕ್ರಿಯೆ ನಡೆಯಲಿ ಎಂದು ಹೇಳಿರುವ ಕಾಂಗ್ರೆಸ್‌, ಈ ವಿಚಾರವನ್ನು ರಾಜಕೀಯಗೊಳಿಸಬಾರದು ಎಂದಿದೆ. 

2002ರಲ್ಲಿ ಗೋಧ್ರೋತ್ತರ ಗಲಭೆಗಳಲ್ಲಿ ಬಿಜೆಪಿಯ ಹಲವು ಮುಖಂಡರು ಭಾಗಿಯಾಗಿದ್ದರು ಎಂದು ಕಾಂಗ್ರೆಸ್‌ ಮುಖಂಡ ಕಪಿಲ್‌ ಸಿಬಲ್‌ ಆರೋಪಿಸಿದ್ದಾರೆ.

‘ಮಾಯಾ ಕೊಡ್ನಾನಿ (ಗುಜರಾತ್‌ ಗಲಭೆ ಪ್ರಕರಣದಲ್ಲಿ ಶಿಕ್ಷೆಗೆ ಒಳಗಾದವರು) ಅವರನ್ನು ಬೆಂಬಲಿಸಿದವರಿಗೆ ಕಠಿಣ ಶಿಕ್ಷೆ ಆಗಬೇಕು. ಬೆಂಬಲ ನೀಡಿದವರು ಆಗ ಮುಖ್ಯಮಂತ್ರಿಯಾಗಿದ್ದರು, ಈಗ ಪ್ರಧಾನಿಯಾಗಿದ್ದಾರೆ’ ಎಂದು ಸಿಬಲ್‌ ಹೇಳಿದ್ದಾರೆ. 

ಆದರೆ, ಪಂಜಾಬ್‌ನ ಕಾಂಗ್ರೆಸ್‌ ಸರ್ಕಾರದ ಮುಖ್ಯಮಂತ್ರಿ ಅಮರಿಂದರ್‌ ಸಿಂಗ್‌ ಅವರು ಸಜ್ಜನ್‌ ಅವರಿಗೆ ಶಿಕ್ಷೆಯಾಗಿರುವುದನ್ನು ಸ್ವಾಗತಿಸಿದ್ದಾರೆ.

‘ಕೊನೆಗೂ ನ್ಯಾಯ ಸಿಕ್ಕಿದೆ. ಸಜ್ಜನ್‌ ಅವರ ವಿರುದ್ಧ ಸಾಕ್ಷ್ಯ ಹೇಳಿದ ಸಂತ್ರಸ್ತೆಯನ್ನು ನಿರಾಶ್ರಿತ ಕೇಂದ್ರದಲ್ಲಿ ನಾನು ಭೇಟಿಯಾಗಿದ್ದೆ. ಸಜ್ಜನ್‌ಗೆ ಶಿಕ್ಷೆಯಾಗಬೇಕು ಎಂದು ನಾನು ಹಿಂದಿನಿಂದಲೂ ಹೇಳಿಕೊಂಡು ಬಂದಿದ್ದೇನೆ’ ಎಂದು ಅಮರಿಂದರ್‌ ಹೇಳಿದ್ದಾರೆ. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !