ಗುರುವಾರ , ಜುಲೈ 29, 2021
21 °C

ಕೋವಿಡ್‌–19: ಜೀವ ಉಳಿಸಬಲ್ಲದು ಡೆಕ್ಸಾಮೆಥಸೊನ್‌ ಔಷಧಿ

ಎಪಿ Updated:

ಅಕ್ಷರ ಗಾತ್ರ : | |

Prajavani

ಆಕ್ಸ್‌ಫರ್ಡ್‌: ಸಾಕಷ್ಟು ಪ್ರಮಾಣದಲ್ಲಿ ಲಭ್ಯವಿರುವ ಮತ್ತು ಅಗ್ಗದ ಡೆಕ್ಸಾಮೆಥಸೊನ್‌ ಎಂಬ ಔಷಧಿಯು, ಕೋವಿಡ್‌–19 ರೋಗಿಗಳು ಬದುಕುಳಿಯುವ ಸಾಧ್ಯತೆಯನ್ನು ಹೆಚ್ಚಿಸುತ್ತದೆ ಎಂದು ಇಂಗ್ಲೆಂಡ್‌ನ ಸಂಶೋಧಕರು ತಿಳಿಸಿದ್ದಾರೆ. 

‘ಪ್ರಾಯೋಗಿಕ ಪರೀಕ್ಷೆಯ ಫಲಿತಾಂಶವು ಇದಕ್ಕೆ ಸಾಕ್ಷಿಯನ್ನು ನೀಡಿವೆ. ಆಸ್ಪತ್ರೆಯಲ್ಲಿ ಸೋಂಕಿನ ಕಾರಣದಿಂದಾಗಿ ತೀವ್ರ ಅನಾರೋಗ್ಯಕ್ಕೆ ಒಳಗಾಗಿರುವ ರೋಗಿಗಳ ಸಾವಿನ ಪ್ರಮಾಣವನ್ನು ಈ ಔಷಧಿಯ ಬಳಕೆಯಿಂದ ಮೂರನೇ ಒಂದರಷ್ಟು ತಗ್ಗಿಸಬಹುದು’ ಎಂದು ರಿಕವರಿ (ರ್‍ಯಾಂಡಮೈಸ್‌ಡ್‌ ಇವ್ಯಾಲ್ಯುಯೇಷನ್‌ ಆಫ್‌ ಕೋವಿಡ್‌–19 ಥೆರಪಿ) ತಂಡದ ಸಂಶೋಧಕರು ತಿಳಿಸಿದ್ದಾರೆ.

ಮಂಗಳವಾರ ಈ ಕುರಿತು ಮಾಹಿತಿ ನೀಡಿರುವ ಸಂಶೋಧಕರು ಶೀಘ್ರದಲ್ಲೇ ವರದಿಯನ್ನು ಪ್ರಕಟಿಸುವುದಾಗಿ ಘೋಷಿಸಿದ್ದಾರೆ. ಸಂಶೋಧಕರು ಪ್ರಾಯೋಗಿಕ ಪರೀಕ್ಷೆ ಸಂದರ್ಭದಲ್ಲಿ 2,104 ರೋಗಿಗಳಿಗೆ ಪ್ರತಿನಿತ್ಯ 6 ಮಿಲಿಗ್ರಾಂ ಡೆಕ್ಸಾಮೆಥಸೊನ್ ಔಷಧಿಯನ್ನು ಮಾತ್ರೆ ರೂಪದಲ್ಲಿ ಅಥವಾ ಐವಿ(ನೇರವಾಗಿ ರಕ್ತನಾಳಕ್ಕೆ) ರೂಪದಲ್ಲಿ 10 ದಿನಗಳ ಕಾಲ ನೀಡಿದ್ದರು. ಕೋವಿಡ್‌ಗೆ ಸಾಮಾನ್ಯ ಚಿಕಿತ್ಸೆ ಪಡೆಯುತ್ತಿದ್ದ 4,321 ರೋಗಿಗಳ ಆರೋಗ್ಯ ಸ್ಥಿತಿಯನ್ನು ಹಾಗೂ ಡೆಕ್ಸಾಮೆಥಸೊನ್‌ ಮಾತ್ರೆ ಸೇವಿಸಿದ ರೋಗಿಗಳ ಆರೋಗ್ಯ ಸ್ಥಿತಿಯನ್ನು ಹೋಲಿಸಿ ಈ ಅಧ್ಯಯನ ನಡೆಸಲಾಗಿದೆ.

ಮರಣ ಪ್ರಮಾಣ ಶೇ 35 ಇಳಿಕೆ

ಡೆಕ್ಸಾಮೆಥಸೊನ್ ಬಳಕೆಯಿಂದ ವೆಂಟಿಲೇಟರ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ರೋಗಿಗಳ ಮರಣ ಪ್ರಮಾಣ ಶೇ 35 ಇಳಕೆಯಾಗಿದೆ. ಕೇವಲ ಆಮ್ಲಜನಕದ ಅಗತ್ಯವಿದ್ದ ರೋಗಿಗಳ ಪೈಕಿ ಸಾವಿನ ಪ್ರಮಾಣ ಶೇ 25ರಷ್ಟು ಇಳಿಕೆಯಾಗಿದೆ. ಸೋಂಕಿನ ಆರಂಭಿಕ ಲಕ್ಷಣಗಳಿದ್ದ ರೋಗಿಗಳ ಮೇಲೆ ಇದು ಪರಿಣಾಮ ಬೀರಿಲ್ಲ ಎಂದು ಸಂಶೋಧಕರು ತಿಳಿಸಿದ್ದಾರೆ.

ವೆಂಟಿಲೇಟರ್‌ನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಎಂಟು ರೋಗಿಗಳಲ್ಲಿ ಒಬ್ಬ ರೋಗಿಯ ಜೀವವನ್ನು ಈ ಔಷಧಿ ಉಳಿಸಬಲ್ಲದು ಎಂದು ಸಂಶೋಧಕರು ತಿಳಿಸಿದ್ದಾರೆ. 

‘ಇದು ಸ್ವಾಗತಾರ್ಹ ಫಲಿತಾಂಶ. ಕೋವಿಡ್‌–19 ಚಿಕಿತ್ಸೆಯಲ್ಲಿ ಡೆಕ್ಸಾಮೆಥಸೊನ್‌ ಬಳಕೆ ಭಾಗವಾಗಬೇಕು. ಇದು ಅಗ್ಗವಾಗಿದ್ದು, ಸಾಕಷ್ಟು ಪ್ರಮಾಣದಲ್ಲಿ ಲಭ್ಯವಿದೆ. ಲಕ್ಷಾಂತರ ಜೀವವನ್ನು ಉಳಿಸಲು ಈ ಔಷಧಿ ಬಳಸಬಹುದು’ ಎಂದು ಅಧ್ಯಯನದ ಭಾಗವಾಗಿರುವ  ಆಕ್ಸ್‌ಫರ್ಡ್‌ ವಿಶ್ವವಿದ್ಯಾಲಯದ ಪೀಟರ್‌ ಹಾರ್ಬಿ ತಿಳಿಸಿದರು. 

ಮಲೇರಿಯಾಗೆ ನೀಡುವ ಹೈಡ್ರಾಕ್ಸಿಕ್ಲೊರೊಕ್ವಿನ್‌ ಔಷಧಿಯು ಕೊರೊನಾ ವೈರಸ್‌ ವಿರುದ್ಧದ‌ ಚಿಕಿತ್ಸೆಗೆ ಸಹಕಾರಿಯಾಗುವುದಿಲ್ಲ ಎಂದು ಇದೇ ಅಧ್ಯಯನ ತಂಡವು ಇತ್ತೀಚೆಗಷ್ಟೇ ತಿಳಿಸಿತ್ತು.   

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು