ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊರೊನಾ ವೈರಸ್ ಸೋಂಕು: ಚೀನಿಯರ ವೀಸಾ ಅಸಿಂಧು

Last Updated 4 ಫೆಬ್ರುವರಿ 2020, 18:30 IST
ಅಕ್ಷರ ಗಾತ್ರ

ನವದೆಹಲಿ/ಬೀಜಿಂಗ್: ಎರಡು ವಾರಗಳಲ್ಲಿ ಚೀನಾಗೆ ಭೇಟಿ ನೀಡಿದ ವಿದೇಶಿಗರು ಹಾಗೂ ಚೀನಾ ಪ್ರಜೆಗಳ ವೀಸಾಗಳನ್ನು ಭಾರತ ಅಸಿಂಧುಗೊಳಿಸಿದೆ.

ಚೀನಾದಲ್ಲಿ ಕೊರೊನಾ ವೈರಸ್ ಸೋಂಕಿನಿಂದ ಮೃತಪಟ್ಟವರ ಸಂಖ್ಯೆ ಹೆಚ್ಚುತ್ತಿರುವ ನಡುವೆಯೇ ಈ
ಕ್ರಮ ಕೈಗೊಳ್ಳಲಾಗಿದೆ. ಚೀನಾ ಪ್ರವಾಸಿಗರಿಗೆ ಹಾಗೂ ಚೀನಾದಲ್ಲಿ ವಾಸವಿರುವ ವಿದೇಶಿಗರಿಗೆ ನೀಡಲಾಗುತ್ತಿದ್ದ ಇ–ವೀಸಾ ಸೌಲಭ್ಯವನ್ನು ಫೆ.2ರಿಂದ ತಾತ್ಕಾಲಿಕವಾಗಿ ಅಮಾನತುಗೊಳಿಸಿದೆ.

‘ಈಗಾಗಲೇ ಭಾರತದಲ್ಲಿರುವವರು (ಸಾಮಾನ್ಯ ಅಥವಾ ಇ–ವೀಸಾ) ಹಾಗೂ ಚೀನಾದಿಂದ ಜ.15ರ ಬಳಿಕ ಪ್ರಯಾಣಿಸಿದವರು ಭಾರತ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವನ್ನು (ದೂರವಾಣಿ: +91–11–23978046 ಹಾಗೂ ಇಮೇಲ್: ncov2019@gmail.com) ಸಂಪರ್ಕಿಸಬೇಕು’ ಎಂದು ಇಲ್ಲಿನ ರಾಯಭಾರ ಕಚೇರಿ ಘೋಷಿಸಿದೆ.

‘ಪ್ರಸ್ತುತ ಇರುವ ವೀಸಾಗಳಿಗೆ ಮಾನ್ಯತೆ ಇಲ್ಲ ಎಂದು ಸ್ಪಷ್ಟನೆ ನೀಡಲಾಗಿದೆ. ಭಾರತಕ್ಕೆ ಭೇಟಿ ನೀಡಲು ಬಯಸುವವರು ಬೀಜಿಂಗ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಯನ್ನು ಸಂಪರ್ಕಿಸಿ ಹೊಸದಾಗಿ ವೀಸಾಗೆ ಅರ್ಜಿ ಸಲ್ಲಿಸಬೇಕು. ಬೀಜಿಂಗ್, ಶಾಂಘೈ ಹಾಗೂ ಗುವಾಂಗ್ಜೊ ನಗರಗಳಲ್ಲಿನ ಭಾರತೀಯ ವೀಸಾ ಅರ್ಜಿ ಕೇಂದ್ರಗಳನ್ನು (www.blsindia-china.com) ಸಹ ಸಂಪರ್ಕಿಸಬಹುದು’ ಎಂದು ಇಲ್ಲಿನ ಭಾರತೀಯ ರಾಯಭಾರ ಕಚೇರಿ ತಿಳಿಸಿದೆ.

ನಿಗಾ ಘಟಕದಲ್ಲಿರಲು ನಕಾರ: ಬಂಧನಕ್ಕೆ ಆದೇಶ

ಚಂಡೀಗಡ: ಕೊರೊನಾ ವೈರಸ್‌ ಸೋಂಕಿನ ಲಕ್ಷಣಗಳಿದ್ದ 38 ವರ್ಷದ ವ್ಯಕ್ತಿಯೊಬ್ಬ ಪ್ರತ್ಯೇಕ ನಿಗಾ ಘಟಕದಲ್ಲಿ ಇರಲು ನಿರಾಕರಿಸಿದ ಕಾರಣ ಆತನನ್ನು ಬಂಧಿಸಲು ಪಂಜಾಬ್‌ನ ಫರೀದ್‌ಕೋಟ್‌ನ ಜಿಲ್ಲಾ ಮ್ಯಾಜಿಸ್ಟ್ರೇಟ್‌ ಆದೇಶಿಸಿದ್ದಾರೆ.

ಸೋಂಕು ಶಂಕಿತರಿಗಾಗಿ ಸಿದ್ಧಪಡಿಸಿರುವ ಪ್ರತ್ಯೇಕ ವಾರ್ಡ್‌ಗೆ ದಾಖಲಾಗಲು ವಿರೋಧಿಸಿದರೆ ಆತನನ್ನು ಬಂಧಿಸಿ ಎಂದು ಅವರು ಪೊಲೀಸರಿಗೆ ತಿಳಿಸಿದ್ದಾರೆ.ಈತ ವಾರದ ಹಿಂದೆ ಕೆನಡಾದಿಂದ ಪಂಜಾಬ್‌ಗೆ ಬಂದಿದ್ದ. ಹಿಂತಿರುಗುವ ವೇಳೆ ಶಾಂಘೈನಲ್ಲಿ 9 ಗಂಟೆ ಕಳೆದಿದ್ದ. ಸೋಂಕಿನ ಗುಣಲಕ್ಷಣಗಳು ಕಂಡು ಬಂದ ಕಾರಣ ಕೋಟಕ್‌ಪುರ ಆಸ್ಪತ್ರೆಗೆ ಆರೋಗ್ಯ ತಪಾಸಣೆಗಾಗಿ ತೆರಳಿದ್ದ. ಆತನ ರಕ್ತದ ಮಾದರಿಯನ್ನು ಪಡೆದ ಆಸ್ಪತ್ರೆಯ ಸಿಬ್ಬಂದಿ, ಪ್ರತ್ಯೇಕ ನಿಗಾ ವಾರ್ಡ್‌ನಲ್ಲಿ ದಾಖಲಾಗುವಂತೆ ಸೂಚಿಸಿದ್ದರು. ಇದನ್ನು ಆತ ವಿರೋಧಿಸಿದ್ದ.

‘ಕೇರಳ ಪ್ರವಾಸೋದ್ಯಮದಮೇಲೆ ಪ್ರತಿಕೂಲ ಪರಿಣಾಮ’

ತಿರುವನಂತಪುರ: ಕೊರೊನಾ ವೈರಸ್‌ ಸೋಂಕಿನಿಂದಾಗಿ ರಾಜ್ಯದ ಪ್ರವಾಸೋದ್ಯಮ ವಲಯದ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗುತ್ತಿದೆ ಎಂದು ಕೇರಳದ ಪ್ರವಾಸೋದ್ಯಮ ಸಚಿವ ಕಡಂಪಲ್ಲಿ ಸುರೇಂದ್ರನ್ ಮಂಗಳವಾರ ಹೇಳಿದ್ದಾರೆ.

ಕೊರೊನಾವನ್ನು ‘ರಾಜ್ಯ ವಿಪತ್ತು’ ಎಂದು ಕೇರಳ ಸರ್ಕಾರ ಘೋಷಿಸಿದ ಮಾರನೇ ದಿನವೇ ಈ ಮಾಹಿತಿ ಹೊರಬಂದಿದೆ.

‘ನಿಫಾ ಸೋಂಕು ಹಾಗೂ ಭೀಕರ ಪ್ರವಾಹದ ಬಳಿಕ ಇದೀಗ ಕೊರೊನಾ ಸಹ ರಾಜ್ಯದ ರಜಾ ಅವಧಿಯ ಪ್ರವಾಸೋದ್ಯಮದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. ನಿಫಾ ಸೋಂಕು ಹರಡಿದ ವೇಳೆಯಲ್ಲಿಯೂ ಪ್ರವಾಸೋದ್ಯಮಕ್ಕೆ ಸಾಕಷ್ಟು ನಷ್ಟವಾಗಿತ್ತು. ಈ ಬಾರಿ ಪರಿಣಾಮ ಇನ್ನೂ ತೀವ್ರವಾಗಿದೆ. ಫೆಬ್ರುವರಿ ಹಾಗೂ ಮಾರ್ಚ್‌ ಅವಧಿಗೆ ಹೋಟೆಲ್‌ಗಳಲ್ಲಿ ಕಾಯ್ದಿರಿಸಿದ್ದ ಕೊಠಡಿಗಳನ್ನು ಪ್ರವಾಸಿಗರು ರದ್ದುಪಡಿಸುತ್ತಿದ್ದಾರೆ’ ಎಂದು ವಿಧಾನಸಭೆ ಕಲಾಪದ ಪ್ರಶ್ನೋತ್ತರ ಅವಧಿಯಲ್ಲಿ ಸಚಿವರು ತಿಳಿಸಿದ್ದಾರೆ.

ಗಾಲಿಕುರ್ಚಿಯಲ್ಲೇ ಮೃತಪಟ್ಟ ಬಾಲಕ

ಬೀಜಿಂಗ್: ಕೊರೊನಾ ವೈರಸ್ ಸೋಂಕಿನಿಂದಾಗಿ ಪ್ರತ್ಯೇಕ ನಿಗಾದಲ್ಲಿ ಇರಿಸಲಾಗಿದ್ದ ವ್ಯಕ್ತಿಯ ಅಂಗವಿಕಲ ಮಗ, ತನ್ನ ದಿನಚರಿಗೆ ನೆರವಾಗುವವರು ಇಲ್ಲದೆ ಗಾಲಿಕುರ್ಚಿಯಲ್ಲಿಯೇ ಮೃತಪಟ್ಟಿರುವ ಮನಕಲಕುವ ಘಟನೆ ವರದಿಯಾಗಿದೆ.

ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ, ಸಂತಾಪ ವ್ಯಕ್ತವಾಗಿದೆ. ತಂದೆಗೆ ಸೋಂಕು ತಗುಲಿದ ಮಾಹಿತಿಯನ್ನು ಬಹಿರಂಗಪಡಿಸದೆ ಇದ್ದುದಕ್ಕಾಗಿ ಅಧಿಕಾರಿಗಳ ವಿರುದ್ಧ ಟೀಕೆಗಳು ವ್ಯಕ್ತವಾಗಿವೆ. ಸೆರಬ್ರಲ್ ಪಾಲ್ಸಿಗೆ ಗುರಿಯಾಗಿರುವ 17 ವರ್ಷದ ಬಾಲಕ ಯಾನ್‌ ಚೆಂಗ್‌ನ ತಂದೆ ಯಾನ್ ಕ್ಷಾವೆನ್ ಅವರನ್ನು,ಜ್ವರದಿಂದ ಬಳಲುತ್ತಿದ್ದ ಕಾರಣ ಜ.22ರಂದು ಪ್ರತ್ಯೇಕವಾಗಿ ಇರಿಸಲಾಗಿತ್ತು.

ಗಾಲಿಕುರ್ಚಿಯಲ್ಲಿರುವ ಚೆಂಗ್‌ಗೆ ಮಾತನಾಡಲು, ಓಡಾಡಲು, ಸ್ವತಃ ಆಹಾರ ಸೇವಿಸಲು ಸಹ ಸಾಧ್ಯವಿಲ್ಲ. ‘ತನ್ನ ಮಗನನ್ನು ನೋಡಿಕೊಳ್ಳಬೇಕು ಎಂದು ತಂದೆ ಸಾಮಾಜಿಕ ಜಾಲತಾಣದಲ್ಲಿ ಮನವಿ ಮಾಡಿದ್ದರು. ಬಾಲಕನ ಸಾವಿನ ಸಂಬಂಧ ಮೇಯರ್‌ ಅವರನ್ನು ವಜಾಗೊಳಿಸಲಾಗಿದೆ.

ಸಿಂದ್‌ ಪ್ರಾಂತದಲ್ಲಿ ಕೊರೊನಾ ಶಂಕೆ

ಕರಾಚಿ: ಪಾಕಿಸ್ತಾನದ ಸಿಂದ್‌ ಪ್ರಾಂತದ ಎಂಜಿನಿಯರಿಂಗ್‌ ವಿದ್ಯಾರ್ಥಿಯೊಬ್ಬ ಕೊರೊನಾ ವೈರಸ್‌ ಸೋಂಕಿನಿಂದ ಬಳಲುತ್ತಿರುವ ಶಂಕೆ ಹಿನ್ನೆಲೆಯಲ್ಲಿ ಆತನ ಆರೋಗ್ಯದ ಮೇಲೆ ಅಧಿಕಾರಿಗಳು ನಿಗಾ ಇರಿಸಿದ್ದಾರೆ.

ಚೀನಾದಿಂದ ಹಿಂದಿರುಗಿರುವ ವಿದ್ಯಾರ್ಥಿ ಶಹಜಾಯಿಬ್‌ ಅಲಿ ರಹುಜನನ್ನುಇತರರು ಸಂಪರ್ಕಿಸದಂತೆ ತಡೆಯಲಾಗಿದೆ. ಈತ ವುಹಾನ್‌ನಿಂದ 1 ಸಾವಿರ ಕಿ.ಮೀ ದೂರದಲ್ಲಿರುವ ಚೀನಾ ವಿಶ್ವವಿದ್ಯಾಲಯದಲ್ಲಿ ಪೆಟ್ರೋಲಿಯಂ ಎಂಜಿನಿಯರಿಂಗ್‌ ವ್ಯಾಸಾಂಗ ಮಾಡುತ್ತಿದ್ದ.

‘ಚೀನಾದಿಂದ ಶನಿವಾರವಷ್ಟೇ ಶಹಜಾಯಿಬ್‌ ಬಂದಿದ್ದ. ಚೀನಾ ಹಾಗೂ ಕರಾಚಿ ವಿಮಾನ ನಿಲ್ದಾಣದಲ್ಲಿ ಆತನ ಆರೋಗ್ಯ ತಪಾಸಣೆ ಮಾಡಲಾಗಿತ್ತು. ಆ ಸಂದರ್ಭದಲ್ಲಿ ಯಾವುದೇ ತೊಂದರೆ ಇರಲಿಲ್ಲ. ಮನೆಗೆ ಬಂದ ನಂತರ ಜ್ವರ, ಕೆಮ್ಮು ಹೆಚ್ಚಾಯಿತು. ಮೂಗಿನಲ್ಲಿ ರಕ್ತ ಬರುತ್ತಿದ್ದ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಿಸಿದ್ದೇವೆ’ ಎಂದು ಆತನ ಸಹೋದರ ಇರ್ಷಾದ್‌ ಅಲಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT