ಸೋಮವಾರ, ಜೂಲೈ 13, 2020
23 °C

ಮೇ 17ರ ವರೆಗೆ ಲಾಕ್‍ಡೌನ್ ಅವಧಿ ವಿಸ್ತರಿಸಿದ ಕೇಂದ್ರ ಸರ್ಕಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ಲಾಕ್‌ಡೌನ್ ಅವಧಿಯನ್ನು ಮೇ.17ರವರೆಗೆ ವಿಸ್ತರಣೆ ಮಾಡಿರುವುದಾಗಿ ಕೇಂದ್ರ ಸರ್ಕಾರ ಹೇಳಿದೆ. ದೇಶವ್ಯಾಪಿ ಲಾಕ್‌ಡೌನ್ ಮೇ.3ಕ್ಕೆ ಮುಗಿಯಬೇಕಿತ್ತು. ಆದರೆ ಕೊರೊನಾ ಪ್ರಕರಣಗಳ ಸಂಖ್ಯೆ ಏರಿಕೆಯಾಗುತ್ತಿರುವುದರಿಂದ ಲಾಕ್‌ಡೌನ್ ಅವಧಿ ವಿಸ್ತರಿಸಲಾಗಿದೆ. 

ಮೇ.3ರ ನಂತರ ಎರಡು ವಾರ ಲಾಕ್‍ಡೌನ್ ವಿಸ್ತರಿಸಿರುವುದಾಗಿ ಪ್ರಕಟಣೆ ಹೊರಡಿಸಿರುವ ಕೇಂದ್ರ ಗೃಹ ಸಚಿವಾಲಯವು ಈ ಅವಧಿಯಲ್ಲಿ ಕೆಲವು ಕಾರ್ಯಗಳಿಗೆ ನಿಯಂತ್ರಣ ಹೇರುವ ಬಗ್ಗೆ ಹೊಸ ಮಾರ್ಗಸೂಚಿ ಹೊರಡಿಸಿದೆ. ಕೆಂಪು, ಕಿತ್ತಳೆ ಮತ್ತು ಹಸಿರು ವಲಯಗಳಾಗಿ ವಿಂಗಡಿಸಿದ ಪ್ರದೇಶಗಳಲ್ಲಿ ಈ ರೀತಿ ನಿರ್ಬಂಧಗಳಿರಲಿವೆ.

 

ಹೊಸ ಮಾರ್ಗ ಸೂಚಿಯ ಪ್ರಕಾರ ಹಸಿರು ಮತ್ತು ಕಿತ್ತಳೆ ವಲಯ ಎಂದು ಗುರುತಿಸಿರುವ ಜಿಲ್ಲೆಗಳಲ್ಲಿ ಕೆಲವೊಂದು ಸಡಿಲಿಕೆಗೆ ಅನುಮತಿ ಇದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. 
ಇದರ ಪ್ರಕಾರ ಕೆಲವೊಂದು ಚಟುವಟಿಕೆಗಳಿಗೆ ಮಾತ್ರ ಲಾಕ್‌ಡೌನ್ ಸಡಿಲಿಕೆ ನೀಡಲಾಗುವುದು. ಆದರೆ ವಿಮಾನಯಾನ, ರೈಲು, ಮೆಟ್ರೊ, ಅಂತರ ರಾಜ್ಯ ರಸ್ತೆ ಸಾರಿಗೆ, ಶಾಲೆ, ಕಾಲೇಜು ಮತ್ತು ಇತರ ಶೈಕ್ಷಣಿಕ ಸಂಸ್ಥೆಗಳು,  ಹೋಟೆಲ್ ಮತ್ತು ರೆಸ್ಟೊರೆಂಟ್ ಸೇರಿದಂತೆ ಆತಿಥ್ಯ ಸೇವೆ, ಸಿನಿಮಾ, ಮಾಲ್, ಜಿಮ್, ಕ್ರೀಡಾಕೂಟ, ಸಾಮಾಜಿಕ, ರಾಜಕೀಯ, ಸಾಂಸ್ಕೃತಿಕ ಚಟುವಟಿಕೆ, ಧಾರ್ಮಿಕ ಚಟುವಟಿಕೆ ಮತ್ತು ಆರಾಧನಾಲಯಗಳಿಗೆ ಲಾಕ್‌ಡೌನ್ ಸಡಿಲಿಕೆ ನೀಡುವುದಿಲ್ಲ.

ಇದನ್ನೂ ಓದಿ: ಕೋವಿಡ್-19| ಕೆಂಪು,ಕಿತ್ತಳೆ ಮತ್ತು ಹಸಿರು ವಲಯದಲ್ಲಿರುವ ರಾಜ್ಯದ ಜಿಲ್ಲೆಗಳ ಪಟ್ಟಿ

ಅದೇ ವೇಳೆ ವಿಮಾನಯಾನ, ರೈಲು ಮತ್ತು ರಸ್ತೆ ಸಂಚಾರ ಮಾಡುವುದಾದರೆ ತಕ್ಕ ಕಾರಣವಿರಬೇಕು. ಆ ಕಾರಣಕ್ಕೆ ಗೃಹ ಸಚಿವಾಲಯದ ಅನುಮತಿ ನೀಡಿದರೆ ಮಾತ್ರ ಸಂಚಾರ ಸಾಧ್ಯವಾಗುವುದು. ಅತ್ಯಗತ್ಯವಿಲ್ಲದ ವಸ್ತುಗಳಿಗಾಗಿ ಓಡಾಟ ರಾತ್ರಿ ಸಂಜೆ 7ರಿಂದ ಬೆಳಗ್ಗೆ  7ಗಂಟೆವರೆಗೆ ನಿಷೇಧಿಸಲಾಗಿದೆ.

ಕಿತ್ತಳೆ ವಲಯದಲ್ಲಿ ಕೆಲವೊಂದು ಸಡಿಲಿಕೆ ಇದ್ದು, ಟ್ಯಾಕ್ಸಿ ಮತ್ತು ಕ್ಯಾಬ್  ಸಂಚಾರವಿರಲಿದೆ. ಕ್ಯಾಬ್‌‌ನಲ್ಲಿ ಒಬ್ಬ ಚಾಲಕ ಮತ್ತು ಒಬ್ಬ ಪ್ರಯಾಣಿಕನಿಗೆ ಮಾತ್ರ ಅವಕಾಶ ಇದೆ. ಅನುಮತಿ ಪಡೆದು ಅಂತರ್ ಜಿಲ್ಲಾ ಸಂಚಾರ ನಡೆಸಬಹುದು, ನಾಲ್ಕು ಚಕ್ರದ ವಾಹನಗಳಲ್ಲಿ ಇಬ್ಬರಿಗೆ ಮಾತ್ರ ಸಂಚರಿಸಲು ಅವಕಾಶವಿದೆ, ದ್ವಿಚಕ್ರ ವಾಹನದಲ್ಲಿ  ಹಿಂಬದಿ ಪ್ರಯಾಣಿಕರೂ ಹೋಗಬಹುದು.

 ಹಸಿರು ವಲಯದಲ್ಲಿ ಹೆಚ್ಚಿನ ನಿರ್ಬಂಧಗಳೇನೂ ಇರುವುದಿಲ್ಲ.ಶೇ. 50 ಜನರನ್ನು ಮಾತ್ರ ಬಸ್‌ಗಳು ಕರೆದೊಯ್ಯಬಹುದು ಮತ್ತು ಬಸ್ ಡಿಪೊಗಳಲ್ಲಿ ಶೇ.50 ಮಂದಿ ನೌಕರರು ಕೆಲಸ ಮಾಡಬಹುದು.
 

 

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು