ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊರೊನಾ: ಅಪರೂಪಕ್ಕೆ ಮನೆಗೆ ಹೋದ ವೈದ್ಯರು ಚಹಾ ಸೇವಿಸಿದ್ದೂ ಬಾಗಿಲ ಹೊರಗೇ!

ವೈದ್ಯ ಯೋಧರ ಕಥೆ...
Last Updated 4 ಏಪ್ರಿಲ್ 2020, 10:49 IST
ಅಕ್ಷರ ಗಾತ್ರ

ಚಂಡೀಗಢ: ಕೊರೊನಾ ರೋಗಿಗಳ ಚಿಕಿತ್ಸೆಯಲ್ಲಿ ವ್ಯಸ್ತರಾಗಿರುವ ಅವರಿಗೀಗ ಆಸ್ಪತ್ರೆಯೇ ಮನೆ. ಸ್ವಂತ ನಿವಾಸಕ್ಕೆ ತೆರಳುವುದೇ ಅಪರೂಪ. ಹೇಗೋ ಪುರುಸೊತ್ತು ಮಾಡಿಕೊಂಡು ಕೆಲ ನಿಮಿಷದ ಮಟ್ಟಿಗೆ ಮನೆಗೆ ತೆರಳಿದ ಅವರು ಒಂದು ಕಪ್ ಚಹಾ ಸೇವಿಸಿದರು. ಎಲ್ಲಿ ಗೊತ್ತೇ? ಮುಂಬಾಗಿಲ ಹೊಸಿಲಿನ ಹೊರಗೆ!

ಇದು ಪಂಜಾಬ್‌ನ ನವಾನ್‌ಶಹರ್ ಸರ್ಕಾರಿ ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ವೈದ್ಯ ಡಾ. ಗುರುಪಾಲ್ ಕಟಾರಿಯಾ ಅವರ ಸ್ಥಿತಿ. ಈ ಆಸ್ಪತ್ರೆಯೀಗ ಕೊರೊನಾ ವೈರಸ್ ಹಾಟ್‌ಸ್ಪಾಟ್. ಕಟಾರಿಯಾ ನೇತೃತ್ವದ ವೈದ್ಯರ ತಂಡ ಕೊರೊನಾ ಸೋಂಕಿತ 18 ರೋಗಿಗಳಿಗೆ ಚಿಕಿತ್ಸೆ, ಆರೈಕೆ ಮಾಡುತ್ತಿದೆ.

ಈ ವೈದ್ಯರಿಗೆ ಆಸ್ಪತ್ರೆಯಿಂದ 60 ಕಿ.ಮೀ ದೂರದಲ್ಲಿರುವ ಮನೆಗೆ ತೆರಳಲು ಇತ್ತೀಚೆಗೆ ಅವಕಾಶ ಸಿಕ್ಕಿತ್ತು. ಅದೂ ಕೇವಲ ಕೆಲವೇ ಕ್ಷಣಗಳ ಮಟ್ಟಿಗೆ. ಹೀಗೆ ತೆರಳಿದ ಅವರು ಮನೆಯೊಳಕ್ಕೆ ಪ್ರವೇಶಿಸಲಿಲ್ಲ. ಹೊರಗೆಯೇ ಚಹಾ ಸೇವಿಸಿ ಕರ್ತವ್ಯಕ್ಕೆ ವಾ‍ಪಸಾದರು.

ಮನೆಗೆ ಭೇಟಿ ನೀಡಿದ ಬಗ್ಗೆ ಅವರು ಹೇಳಿದ್ದು ಹೀಗೆ, ‘ಮುಂಜಾಗರೂಕತಾ ಕ್ರಮವಾಗಿ ನಾನು ಮನೆಯೊಳಕ್ಕೆ ಹೋಗಲಿಲ್ಲ. ಅವರನ್ನು ದೂರದಿಂದಲೇ ನೋಡಿ ಮಾತನಾಡಿಸಿ ಕರ್ತವ್ಯಕ್ಕೆ ಮರಳಿದೆ’.

ಕಟಾರಿಯಾ ಅವರ ಪತ್ನಿ ಹೋಶಿಯಾರ್‌ಪುರ ಆಸ್ಪತ್ರೆಯಲ್ಲಿ ದಂತವೈದ್ಯೆ.

‘ಮಗಳು ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆದಿದ್ದಾಳೆ. ಜಾಗರೂಕತೆ ವಹಿಸುವಂತೆ ಸದಾ ಹೇಳುತ್ತಿರುತ್ತಾಳೆ. ತಂದೆ–ತಾಯಿ ಜನರ ಸೇವೆ ಮಾಡುವ ಬಗ್ಗೆ ಆಕೆಗೂ ಹೆಮ್ಮೆಯಿದೆ’ ಎನ್ನುತ್ತಾರೆ ಕಟಾರಿಯಾ.

ನವಾನ್‌ಶಹರ್‌ನಲ್ಲಿ ಈವರೆಗೆ 19 ಕೊರೊನಾ ಪ್ರಕರಣಗಳು ದೃಢಪಟ್ಟಿವೆ. ಇದರಲ್ಲಿ ಒಬ್ಬರು 70 ವರ್ಷ ವಯಸ್ಸಿನ ರೋಗಿ ಮೃತಪಟ್ಟಿದ್ದಾರೆ. ಪಂಜಾಬ್‌ನಲ್ಲಿ ಒಟ್ಟು 53 ಮಂದಿಗೆ ಸೋಂಕು ತಗುಲಿದ್ದು, ಈ ಪೈಕಿ ನವಾನ್‌ಶಹರ್‌ನಲ್ಲೇ ಅತಿ ಹೆಚ್ಚು ಪ್ರಕರಣ ದಾಖಲಾಗಿವೆ.

ಸೋಂಕಿತರ ಮನೋಸ್ಥೈರ್ಯ ಹೆಚ್ಚಿಸುವುದೇ ನಮ್ಮ ಮುಖ್ಯ ಕಳಕಳಿಯಾಗಿದೆ. ಕೊರೊನಾ ಕುರಿತ ಅಂಕಿಸಂಖ್ಯೆಗಳನ್ನು ಅವರು ನಮ್ಮ ಬಳಿ ವಿಚಾರಿಸುತ್ತಾರೆ. ಪ್ರತಿದಿನ ಸತ್ತವರ ಸುದ್ದಿ ಕೇಳಿ ಬೇಸರಪಟ್ಟುಕೊಳ್ಳುತ್ತಾರೆ ಎಂದು ಕಟಾರಿಯಾ ಹೇಳಿದ್ದಾರೆ.

‘ನಮಗೆ ಇದು ಆರಾಧನಾ ಸ್ಥಳ. ರೋಗಿಗಳ ಮುಖದಲ್ಲಿ ಸಂತಸ ಕಂಡಾಗ ನಮಗೆ ತೃಪ್ತಿಯಾಗುತ್ತದೆ’ ಎನ್ನುತ್ತಾರೆ ಕಟಾರಿಯಾ. ಅಂದಹಾಗೆ, ಇವರಿಗೆ ಈಗ 54 ವರ್ಷ ವಯಸ್ಸು.

‘ನಾವು ಸೋಂಕಿತರನ್ನು ಆಗಾಗ್ಗೆ ಮಾತನಾಡಿಸುತ್ತಿರುತ್ತೇವೆ. ಭಯಪಡುವ ಅಗತ್ಯವಿಲ್ಲ ಎಂದು ಧೈರ್ಯದ ಮಾತುಗಳನ್ನಾಡುತ್ತೇವೆ. ಆದಷ್ಟು ಅವರು ಸಕಾರಾತ್ಮಕವಾಗಿ ಯೋಚಿಸುವಂತೆ ಮಾಡಿ ಅವರ ಮನೋಸ್ಥೈರ್ಯ ವೃದ್ಧಿಸಲು ಪ್ರಯತ್ನಿಸುತ್ತೇವೆ. ಆಸ್ಪತ್ರೆಯಲ್ಲಿ ಸಿಲುಕಿಕೊಂಡಿದ್ದೇವೆ ಎಂಬ ಭಾವನೆ ಅವರಲ್ಲಿ ಬಾರದಂತೆ ನೋಡಿಕೊಳ್ಳುತ್ತೇವೆ’ ಎಂದಿದ್ದಾರೆ ಕಟಾರಿಯಾ.

‘ಅವರಿಲ್ಲಿಂದ (ಸೋಂಕಿತರು) ಗುಣಮುಖರಾಗಿ ಹೋದ ಬಳಿಕ ಖಂಡಿತವಾಗಿಯೂ ನಮ್ಮನ್ನು ನೆನಪಿಸಿಕೊಳ್ಳುತ್ತಾರೆ’ ಎಂಬುದು ಅವರ ದೃಢ ನಂಬಿಕೆ

ಕೊರೊನಾ ವೈರಸ್ ಸೋಂಕು ಎದುರಿಸಲು ಬೇಕಾದ ಎಲ್ಲ ವ್ಯವಸ್ಥೆ ಸರ್ಕಾರಿ ಆಸ್ಪತ್ರೆಯಲ್ಲಿ ಇದೆ. ಒಂದು ವೇಳೆ ಸೋಂಕಿತರ ಸಂಖ್ಯೆ ಹೆಚ್ಚಾದರೆ ಅದಕ್ಕೆ ಬೇಕಾಗಿರುವಷ್ಟು ವೈದ್ಯಕೀಯ ಸಲಕರಣೆಗಳು ಸನ್ನದ್ಧ ಸ್ಥಿತಿಯಲ್ಲಿವೆ ಎಂದು ಅವರು ಹೇಳಿದ್ದಾರೆ.

ಮೈಕ್ರೊಬಯಾಲಜಿಸ್ಟ್, ಗ್ರಾಮೀಣ ವೈದ್ಯಾಧಿಕಾರಿ, ಫಾರ್ಮಸಿಸ್ಟ್ ಮತ್ತು ಲ್ಯಾಬ್ ಟೆಕ್ನಿಷಿಯನ್ ಒಳಗೊಂಡ ಕಟಾರಿಯಾ ಅವರ ತಂಡ ಸದ್ಯ ಆಸ್ಪತ್ರೆ ಆವರಣದಲ್ಲಿರುವ ಮನೆಯಲ್ಲೇ ವಾಸಿಸುತ್ತಿದೆ.

‘ದಿನದ 24 ಗಂಟೆಯೂ ನಾನು ಮತ್ತು ತಂಡ ಸೇವೆಗೆ ಸಿದ್ಧ’ ಎಂದು ಪಿಟಿಐ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ ಕಟಾರಿಯಾ.

ಕಟಾರಿಯಾ ಅವರು ಅಮೃತಸರ ಸರ್ಕಾರಿ ವೈದ್ಯಕೀಯ ಕಾಲೇಜಿನಲ್ಲಿ ಎಂಡಿ ಪೂರೈಸಿದವರು. 2009ರಲ್ಲಿ ಹಂದಿ ಜ್ವರ ತಾರಕಕ್ಕೇರಿದ್ದ ವೇಳೆ ಸೋಂಕಿತರಿಗೆ ಚಿಕಿತ್ಸೆ ನೀಡಿದ ಅನುಭವ ಕಟಾರಿಯಾ ಅವರಿಗಿದೆ. ಆ ಅನುಭವವೇ ಈಗ ನೆರವಿಗೆ ಬರುತ್ತಿದೆ ಎನ್ನುತಾರವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT