ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌–19 ತಡೆಯಲು ಯಾವ ಮಾಸ್ಕ್‌ ಸೂಕ್ತ?

Last Updated 9 ಮಾರ್ಚ್ 2020, 7:28 IST
ಅಕ್ಷರ ಗಾತ್ರ

ಕೋವಿಡ್‌–19 ಸೋಂಕು ಜಗತ್ತಿನ ನಾನಾ ಕಡೆಗಳಲ್ಲಿ ರುದ್ರ ನರ್ತನ ಮಾಡುತ್ತಿರುವ ನಡುವೆಯೇ ಅದನ್ನು ತಡೆಯಲು ಸರ್ಕಾರಗಳು ಹಲವು ಕ್ರಮಗಳನ್ನೂ ಕೈಗೊಳ್ಳುತ್ತಿವೆ. ಜನರೂ ಮಾಸ್ಕ್‌, ಸ್ಯಾನಿಟೈಸರ್‌ಗಳ ಮೊರೆ ಹೋಗಿದ್ದಾರೆ.

ಮಾಸ್ಕ್‌ ಧರಿಸುವವರ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇದೆ. ಹಾಗೆಯೇ ಅದರ ಬೆಲೆ ಕೂಡ.

ಎಲ್ಲ ಬಗೆಯ ಮಾಸ್ಕ್‌ಗಳೂ ಕೋವಿಡ್‌ ಅನ್ನು ತಡೆಯಬಲ್ಲವೇ? ಅದನ್ನು ಬಳಸುವ ಬಗೆ ಹೇಗೆ? ಅದರ ವಿಲೇವಾರಿ ಹೇಗೆ ಎಂಬುದರ ಕುರಿತು ಇಲ್ಲಿ ವಿವರಿಸಲಾಗಿದೆ.

ಯಾವ ಮಾಸ್ಕ್‌ ಸೂಕ್ತ?

ಮಾರುಕಟ್ಟೆಯಲ್ಲಿ ಹಲವು ಬಗೆಯ ಮಾಸ್ಕ್‌ಗಳು ಲಭ್ಯ. ಆದರೆ, ಎಲ್ಲ ಮಾಸ್ಕ್‌ಗಳೂ ಕೋವಿಡ್‌ 19ನಿಂದಪಾರು ಮಾಡಲಾರವು.
ಎನ್‌95 ಮಾದರಿಯ ಮಾಸ್ಕ್‌ಗಳು ಮಾತ್ರವೇ ಕೋವಿಡ್‌ ಸೋಂಕು ತಗುಲುವುದನ್ನು ತಡೆಯಬಲ್ಲವು ಎಂದು ಕೇಂದ್ರ ರೋಗ ನಿಯಂತ್ರಣ (ಸಿಡಿಸಿ) ಸಂಸ್ಥೆ ಹೇಳಿದೆ.

ಗಾಳಿಯಲ್ಲಿರುವ ವೈರಾಣುಗಳನ್ನು, 0.3 ಮೈಕ್ರಾನ್‌ ನಷ್ಟು ಸೂಕ್ಷ್ಮವಾದ ಶೇ. 95 ರಷ್ಟು ಜೀವಿಗಳನ್ನು, ಕಣಗಳನ್ನು ಈ ಎನ್‌95 ಮಾಸ್ಕ್‌ಗಳು ಮಾತ್ರವೇ ತಡೆಯಬಲ್ಲವು. ಉಳಿದ ಸಾಮಾನ್ಯ ಮಾಸ್ಕ್‌ಗಳಿಂದ ಇದು ಸಾಧ್ಯವಿಲ್ಲ. ಅಲ್ಲದೇ ಎನ್‌95 ಮಾಸ್ಕ್‌ ಮಾತ್ರವೇ ಬ್ಯಾಕ್ಟೀರಿಯಾ ಮತ್ತು ವೈರಸ್‌ಗಳನ್ನು ತಡೆಯಲು ಸಾಧ್ಯ ಎಂದು ಸಿಡಿಸಿ ಹೇಳಿದೆ.

ಯಾವಾಗ ಧರಿಸಬೇಕು?

ಕೋವಿಡ್‌ 19ಸೋಂಕಿತ ವ್ಯಕ್ತಿಯನ್ನು ಆರೈಕೆ ಮಾಡುತ್ತಿದ್ದರೆ ಅಥವಾ ಕೆಮ್ಮು, ನೆಗಡಿ, ಸೀನುಗಳು ಕಾಣಿಸಿಕೊಂಡಾಗ ಈ ಮಾಸ್ಕ್‌ಗಳನ್ನು ಧರಿಸಬಹುದು. ಇತರೆ ಸಂದರ್ಭಗಳಲ್ಲಿ ಮಾಸ್ಕ್‌ಗಳನ್ನು ಬಳಸುವ ಅಗತ್ಯವೇನೂ ಇಲ್ಲ.
ಬಳಸುವ, ವಿಲೇವಾರಿ ಮಾಡುವ ಬಗ್ಗೆ ಅರಿವಿರಲಿ

ಒಂದು ವೇಳೆ ಮಾಸ್ಕ್‌ಗಳನ್ನು ಬಳಸುವ ಅಗತ್ಯವಿದ್ದರೆ, ಅದನ್ನು ಧರಿಸುವ ಮತ್ತು ಅದನ್ನು ವಿಲೇವಾರಿ ಮಾಡುವ ಕುರಿತೂ ಎಲ್ಲರೂ ತಿಳಿದುಕೊಳ್ಳಬೇಕು. ಮಾಸ್ಕ್‌ಗಳ ಬೇಕಾಬಿಟ್ಟಿ ವಿಲೇವಾರಿ ತಪ್ಪು.

ಮಾಸ್ಕ್‌ಗಳನ್ನು ಧರಿಸುವುದಕ್ಕೂ ಮೊದಲು ಸ್ಯಾನಿಟೈಸರ್‌ಗಳಿಂದ ಕೈಗಳನ್ನು ಶುಭ್ರ ಮಾಡಿಕೊಳ್ಳಬೇಕು. ಮೂಗು ಮತ್ತು ಬಾಯಿ ಮುಚ್ಚುವಂತೆ ಮಾಸ್ಕ್‌ ಧರಿಸಬೇಕು. ಅಂಚುಗಳಲ್ಲಿ ಗಾಳಿ ನುಸುಳದಂತೆ ಎಚ್ಚರ ವಹಿಸಬೇಕು. ಬಿಚ್ಚುವಾಗ ಹಿಂದಿನಿಂದಲೇ ಬಿಚ್ಚಬೇಕು. ಮಾಸ್ಕ್‌ ಅನ್ನು ಮುಟ್ಟಬಾರದು. ಕೂಡಲೇ ಅದನ್ನು ಪೇಪರ್‌ನಿಂದ ಸುತ್ತಿ ಕಸದಬುಟ್ಟಿಗೆ ಹಾಕಬೇಕು. ಗಾಳಿಗೆ ತೆರದುಕೊಂಡ ಪ್ರದೇಶದಲ್ಲಿ ಎಸೆಯಬಾರದು.

ಬೆಲೆ ಎಷ್ಟು?

ಎನ್‌95 ಮಾಸ್ಕ್‌ಗಳ ಬೆಲೆ ಬೆಲೆ ₹246. ಆದರೆ, ಮಾಸ್ಕ್‌ಗಳಿಗೆ ಬೇಡಿಕೆ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಸದ್ಯ ಮಾರುಕಟ್ಟೆಯಲ್ಲಿ ₹500 ರಿಂದ ₹1000ಗಳ ವರೆಗೆ ಈ ಮಾಸ್ಕ್‌ಗಳು ಮಾರಾಟವಾಗುತ್ತಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT