ಶನಿವಾರ, ಮೇ 30, 2020
27 °C

ಮಹಾರಾಷ್ಟ್ರದಲ್ಲಿ 41 ಸಾವಿರ ದಾಟಿದ ಕೊರೊನಾ ಸೋಂಕಿತರು: ಭಾರತದಲ್ಲೇ ಹೆಚ್ಚು

ಏಜೆನ್ಸೀಸ್ Updated:

ಅಕ್ಷರ ಗಾತ್ರ : | |

prajavani

ನವದೆಹಲಿ: ಭಾರತದಾದ್ಯಂತ ಕೋವಿಡ್-19 ಪ್ರಕರಣಗಳು ತೀವ್ರಗತಿಯಲ್ಲಿ ಹೆಚ್ಚಾಗುತ್ತಿದೆ. ಒಟ್ಟು ಸೋಂಕಿತರ ಸಂಖ್ಯೆ 1.12 ಲಕ್ಷ ದಾಟಿದೆ. ದೇಶದ ಒಟ್ಟಾರೆ ಸೋಂಕಿತರ ಸಂಖ್ಯೆಯಲ್ಲಿ ಮಹಾರಾಷ್ಟ್ರ ಒಂದರಿಂದಲೇ ಶೇ 35ರಷ್ಟು ಪ್ರಕರಣಗಳು ವರದಿಯಾಗಿವೆ. ಸೋಂಕಿನಿಂದ ಮೃತಪಟ್ಟವರ ಪೈಕಿ ಮಹಾರಾಷ್ಟ್ರದ ಪಾಲು ಶೇ 41ಕ್ಕೂ ಹೆಚ್ಚು.

ಕೇಂದ್ರ ಆರೋಗ್ಯ ಸಚಿವಾಲಯವು ಬಿಡುಗಡೆ ಮಾಡಿರುವ ಮಾಹಿತಿ ಪ್ರಕಾರ, ದೇಶದಲ್ಲಿ 1,12,359 ಕೊರೊನಾ ವೈರಸ್ ಸೋಂಕು ಪ್ರಕರಣಗಳು ವರದಿಯಾಗಿದ್ದು, ಈವರೆಗೆ 3,435 ಜನರು ಸಾವಿಗೀಡಾಗಿದ್ದಾರೆ ಮತ್ತು 45,300 ಜನರು ಸೋಂಕಿನಿಂದ ಚೇತರಿಸಿಕೊಂಡಿದ್ದಾರೆ.

ವಾಣಿಜ್ಯ ನಗರಿ ಮುಂಬೈವೊಂದರಲ್ಲೇ 25 ಸಾವಿರಕ್ಕೂ ಅಧಿಕ ಪ್ರಕರಣಗಳು ದಾಖಲಾಗಿವೆ ಮತ್ತು ಸುಮಾರು 900 ಮಂದಿ ಸಾವಿಗೀಡಾಗಿದ್ದಾರೆ.

ಆದಾಗ್ಯೂ, ಭಾರತದಲ್ಲಿ ಕೋವಿಡ್-19 ತನ್ನ ನಿಯಂತ್ರಣದಲ್ಲಿದೆ ಎಂದು ಕೇಂದ್ರ ಸರ್ಕಾರವು ಹೇಳಿಕೊಂಡಿದ್ದು, ವೈರಸ್‌ನಿಂದಾಗಿ ದೇಶದಲ್ಲಿ ಸಾವಿನ ಪ್ರಮಾಣವು ವಿಶ್ವದ ಪ್ರಮಾಣದಲ್ಲಿ ಅರ್ಧದಷ್ಟಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ. ಅಲ್ಲದೆ, ಪರೀಕ್ಷೆ ಜೊತೆಗೆ ಆರೋಗ್ಯ ಸೌಲಭ್ಯಗಳನ್ನು ಗಮನಾರ್ಹವಾಗಿ ಹೆಚ್ಚಿಸಲಾಗಿದೆ ಎಂದು ಐಸಿಎಂಆರ್ ಹೇಳಿಕೊಂಡಿದೆ.

ಮಹಾರಾಷ್ಟ್ರ ಸರ್ಕಾರವು ಗುರುವಾರ ಬಿಡುಗಡೆ ಮಾಡಿದ ಮಾಹಿತಿ ಪ್ರಕಾರ, 41,642 ಕೊರೊನಾ ವೈರಸ್ ಸೋಂಕು ಪ್ರಕರಣಗಳು ವರದಿಯಾಗಿದ್ದು, ಮೃತರ ಸಂಖ್ಯೆಯು 1,454ಕ್ಕೆ ಏರಿಕೆಯಾಗಿದೆ. ಸೋಂಕು ಮತ್ತು ಸಾವಿನ ವಿಚಾರದಲ್ಲಿ ಮಹಾರಾಷ್ಟ್ರದ ನಂತರದ ಸ್ಥಾನದಲ್ಲಿರುವ ಗುಜರಾತ್‌ನಲ್ಲಿ ಮೃತರ ಸಂಖ್ಯೆಯು 773ಕ್ಕೆ ಏರಿಕೆಯಾಗಿದೆ. ಮಧ್ಯಪ್ರದೇಶದಲ್ಲಿ 270, ಪಶ್ಚಿಮ ಬಂಗಾಳದಲ್ಲಿ 181, ದೆಹಲಿಯಲ್ಲಿ 194, ರಾಜಸ್ತಾನದಲ್ಲಿ 150, ಉತ್ತರ ಪ್ರದೇಶದಲ್ಲಿ 127, ತಮಿಳುನಾಡಿನಲ್ಲಿ 94 ಮತ್ತು ಆಂಧ್ರ ಪ್ರದೇಶದಲ್ಲಿ 54 ಮಂದಿ ಮೃತಪಟ್ಟಿದ್ದಾರೆ.

ಕರ್ನಾಟಕದಲ್ಲಿ 41, ತೆಲಂಗಾಣದಲ್ಲಿ 40, ಪಂಜಾಬ್‌ನಲ್ಲಿ 38 ಜನರು, ಜಮ್ಮು ಮತ್ತು ಕಾಶ್ಮೀರದಲ್ಲಿ 20, ಹರ್ಯಾಣದಲ್ಲಿ 15, ಬಿಹಾರದಲ್ಲಿ 10, ಒಡಿಶಾದಲ್ಲಿ 7 ಜನರು, ಅಸ್ಸಾಂ ಮತ್ತು ಹಿಮಾಚಲ ಪ್ರದೇಶದಲ್ಲಿ ತಲಾ ನಾಲ್ವರು, ಜಾರ್ಖಂಡ್, ಚಂಡೀಗಢ ಮತ್ತು ಕೇರಳದಲ್ಲಿ ತಲಾ ಮೂವರು ಮೃತಪಟ್ಟಿದ್ದಾರೆ. ಮೇಘಾಲಯ ಮತ್ತು ಉತ್ತರಾಖಂಡ್‌ನಲ್ಲಿ ತಲಾ ಒಬ್ಬರು ಇದುವರೆಗೂ ಕೋವಿಡ್-19ನಿಂದ ಮೃತಪಟ್ಟಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು