ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೂರನೇ ಹಂತದ ಲಾಕ್‌ಡೌನ್‌ l ಸಹಜ ಸ್ಥಿತಿಯತ್ತ ಭಾರತ

ಆರ್ಥಿಕ ಚಟುವಟಿಕೆ ಪೂರ್ಣ ಪ್ರಮಾಣದಲ್ಲಿ ಆರಂಭ ಆಗಿಲ್ಲ
Last Updated 4 ಮೇ 2020, 21:17 IST
ಅಕ್ಷರ ಗಾತ್ರ
ADVERTISEMENT
""
""

ನವದೆಹಲಿ/ಬೆಂಗಳೂರು: ಕೊರೊನಾ ವೈರಾಣು ಪಸರಿಸುವಿಕೆ ತಡೆಗಾಗಿ ಹೇರಲಾದ ಲಾಕ್‌ಡೌನ್‌ನ ಮೂರನೇ ಹಂತ ಸೋಮವಾರದಿಂದ ಆರಂಭವಾಗಿದೆ. ಈ ಹಂತದಲ್ಲಿ ಬಹುತೇಕ ನಿರ್ಬಂಧಗಳನ್ನು ಸಡಿಲಿಸಿರುವುದರಿಂದ ದೇಶದ ಹಲವು ಭಾಗಗಳಲ್ಲಿ ಜನಜೀವನ ಸಹಜ ಸ್ಥಿತಿಗೆ ಮರಳುವ ಲಕ್ಷಣಗಳು ಗೋಚರಿಸಿವೆ.

ಮೂರನೇ ಹಂತದಲ್ಲಿ, ಆರ್ಥಿಕ ಚಟುವಟಿಕೆಗಳ ಆರಂಭಕ್ಕೆ ಹೆಚ್ಚಿನ ಉತ್ತೇಜನ ಇದೆ. ಆದರೆ, ಕರ್ನಾಟಕವೂ ಸೇರಿ 10 ಪ್ರಮುಖ ರಾಜ್ಯಗಳ ಶೇ 78ರಷ್ಟು ಭಾಗಗಳಲ್ಲಿ ಆರ್ಥಿಕ ಚಟುವಟಿಕೆಗಳು ಪೂರ್ಣ ಪ್ರಮಾಣದಲ್ಲಿ ಆರಂಭ ಆಗಿಲ್ಲ. ದೇಶದ ಒಟ್ಟು ಆಂತರಿಕ ಉತ್ಪನ್ನದಲ್ಲಿ (ಜಿಡಿಪಿ) ಈ ಹತ್ತು ರಾಜ್ಯಗಳ ಪಾಲು ಮೂರನೇ ಎರಡಷ್ಟಿದೆ.

ಈ ರಾಜ್ಯಗಳ ಐದನೇ ಒಂದರಷ್ಟು ಭಾಗ ಮಾತ್ರ ಹಸಿರು ವಲಯದಲ್ಲಿ ಇರುವುದು ಆರ್ಥಿಕ ಚಟುವಟಿಕೆಗಳು ಆರಂಭ ಆಗದಿರುವುದಕ್ಕೆ ಮುಖ್ಯ ಕಾರಣ. ದೇಶದ ಒಟ್ಟು ಆರ್ಥಿಕತೆಯಲ್ಲಿ ಸೇವಾವಲಯದ ಪಾಲು ಶೇ 53ರಷ್ಟಿದೆ. ಹೋಟೆಲ್‌, ಸಾರಿಗೆ, ಸಂವಹನ, ಸಿನಿಮಾದಂತಹ ಕ್ಷೇತ್ರಗಳಿಗೆ ಇದರಲ್ಲಿ ಸಿಂಹಪಾಲು. ಇವುಗಳಲ್ಲಿ ಹೆಚ್ಚಿನ ಸೇವೆಗಳ ಪುನರಾರಂಭಕ್ಕೆ ಅನುಮತಿ ಇಲ್ಲ.

ಹತ್ತು ರಾಜ್ಯಗಳಾದ ಮಹಾರಾಷ್ಟ್ರ, ಗುಜರಾತ್‌, ಕರ್ನಾಟಕ, ತಮಿಳುನಾಡು, ಆಂಧ್ರ ಪ್ರದೇಶ, ಉತ್ತರ ಪ್ರದೇಶ, ಪಶ್ಚಿಮ ಬಂಗಾಳ, ದೆಹಲಿ, ತೆಲಂಗಾಣ ಮತ್ತು ಕೇರಳದ ಒಟ್ಟು ಉತ್ಪನ್ನದ ಮೊತ್ತ ₹163 ಲಕ್ಷ ಕೋಟಿ. ದೇಶದ ಒಟ್ಟು ಜಿಡಿಪಿ ₹211 ಕೋಟಿ. ಉಳಿದ 23 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಪಾಲು ₹46 ಕೋಟಿ ಮಾತ್ರ.

ಪ್ರಮುಖ ಹತ್ತು ರಾಜ್ಯಗಳ 327 ಜಿಲ್ಲೆಗಳ ಪೈಕಿ 72 ಜಿಲ್ಲೆಗಳು ಮಾತ್ರ ಹಸಿರು ವಲಯದಲ್ಲಿ ಇವೆ. ಹಸಿರು ಮತ್ತು ಕಿತ್ತಳೆ ವಲಯಗಳಲ್ಲಿ ಕೈಗಾರಿಕಾ ಚಟುವಟಿಕೆಗಳಿಗೆ ಅವಕಾಶ ಇದೆ. ಆದರೆ, ಕೈಗಾರಿಕೆಗಳು ಕಚ್ಚಾ ಸರಕುಗಳಿಗಾಗಿ ವಿವಿಧ ಪ್ರದೇಶಗಳನ್ನು ಅವಲಂಬಿಸಿವೆ. ಇಂತಹ ಸರಕು ಪೂರೈಸುವ ಹಲವು ಜಿಲ್ಲೆಗಳು ಕೆಂಪು ವಲಯದಲ್ಲಿ ಇವೆ. ಇದು ಕೈಗಾರಿಕೆಗಳ ಆರಂಭಕ್ಕೆ ದೊಡ್ಡ ತೊಡಕಾಗಿದೆ.

ರಾಜ್ಯದಲ್ಲಿ ಜನ ಸಂಚಾರ ಶುರು: ಕರ್ನಾಟಕದಲ್ಲಿ, ಕೆಂಪು ವಲಯ ಹಾಗೂ ಕಂಟೈನ್‌ಮೆಂಟ್ ಪ್ರದೇಶ‌‌ ವ್ಯಾಪ್ತಿಯಿಂದ ಹೊರಗಿರುವ ಜಿಲ್ಲೆಗಳಲ್ಲಿ ವ್ಯಾಪಾರ ವಹಿವಾಟು, ಬಸ್‌ಗಳ ಓಡಾಟ ಆರಂಭವಾಗಿವೆ.

ಕೆಂಪುವಲಯ ವ್ಯಾಪ್ತಿಯಲ್ಲಿರುವ ಬೆಂಗಳೂರು ನಗರ, ಗ್ರಾಮಾಂತರ, ಮೈಸೂರು ಹಾಗೂ ಸೋಂಕು ಪ್ರಕರಣಗಳು ಹೆಚ್ಚಿನ ಸಂಖ್ಯೆಯಲ್ಲಿರುವ ಹಾಗೂ ಸೂಕ್ಷ್ಮ ಪ್ರದೇಶಗಳೆಂದು ಗುರುತಿಸಿದ ಕೆಲವು ಜಿಲ್ಲೆಗಳಲ್ಲಿ ಕೂಡ ಬಸ್ ಓಡಾಟಕ್ಕೆ ಅವಕಾಶ ನೀಡಿಲ್ಲ. ಕೆಲವು ಕಡೆಗಳಲ್ಲಿ ಮಂಗಳವಾರ ಬಸ್‌ ಸಂಚಾರ ಆರಂಭವಾಗಲಿದೆ. ಬಹುತೇಕ ಕಡೆಗಳಲ್ಲಿ ಬಸ್‌ ಸಂಚಾರ ಆರಂಭವಾಗಿರುವುದು, ನಾಡಿಗೆ ‘ಸಂಚಲನ’ ತಂದ ಅನುಭವ ಮೂಡಿಸಿದೆ.

ಕೆಂಪು ವಲಯ ಹಾಗೂ ಹೆಚ್ಚಿನ ಸಂಖ್ಯೆ ಕಂಟೈನ್‌ಮೆಂಟ್‌ ಪ್ರದೇಶಗಳು ಇರುವ ಜಿಲ್ಲೆಗಳನ್ನು ಬಿಟ್ಟು ಉಳಿದ ಕಡೆ ಬಟ್ಟೆ ಅಂಗಡಿಗಳು, ಆಭರಣ ಅಂಗಡಿಗಳು, ಪಾರ್ಸೆಲ್ ಕೊಂಡೊಯ್ಯುವ ಹೋಟೆಲ್‌ಗಳು ತೆರೆದಿದ್ದು, ಬಹುತೇಕ ಕಡೆಗಳಲ್ಲಿ ಜನ ಉತ್ಸಾಹದಿಂದ ಓಡಾಡುತ್ತಿರುವ ದೃಶ್ಯ ಸಾಮಾನ್ಯವಾಗಿತ್ತು. ಕೈಗಾರಿಕೆ, ಸಿದ್ದ ಉಡುಪು ಘಟಕ‌ಗಳು ಅನೇಕ ಕಡೆ ಆರಂಭವಾಗಿದ್ದು, ವಾಣಿಜ್ಯೋದ್ಯಮ ಚಟುವಟಿಕೆಗಳು ಮೆದುಗತಿಯಲ್ಲಿ ಶುರುವಾಗುತ್ತಿರುವ ಕುರುಹುಗಳು ಕಾಣಿಸಿವೆ.

ರಾಜಧಾನಿ ಬೆಂಗಳೂರಿನಲ್ಲಿ ಕಂಟೈನ್‌ಮೆಂಟ್‌ ಪ್ರದೇಶ ಬಿಟ್ಟು ಉಳಿದೆಡೆ ಬೆಳಿಗ್ಗೆ 7ರಿಂದ ರಾತ್ರಿ 7ರವರೆಗೆ ಸಂಚಾರಕ್ಕೆ ಅವಕಾಶ ಮಾಡಿಕೊಟ್ಟಿದ್ದರಿಂದಾಗಿ ಜನಜೀವನ ಯಥಾಸ್ಥಿತಿಗೆ ಮರಳುತ್ತಿರುವ ಲಕ್ಷಣ ಕಾಣಿಸಿತು. ಆದರೆ, ಬಿಎಂಟಿಸಿ ಬಸ್‌, ಮೆಟ್ರೊ ಸಂಚಾರಕ್ಕೆ ನಿರ್ಬಂಧ ಮುಂದುವರಿದಿರುವುದರಿಂದಾಗಿ ರಸ್ತೆಗಳಲ್ಲಿ ಜನ ಸಂಚಾರ ಹೆಚ್ಚಾಗಿ ಇರಲಿಲ್ಲ.

ಮದ್ಯಕ್ಕೆ ಮುತ್ತಿಗೆ | ₹45 ಕೋಟಿ ವಹಿವಾಟು

ಬೆಂಗಳೂರು:42 ದಿನಗಳ ಬಳಿಕ ತೆರೆದ ಅಂಗಡಿಗಳಿಗೆ ಜನ ಮುಗಿಬಿದ್ದು ಮದ್ಯ ಖರೀದಿಸಿದ್ದರಿಂದ ಬಹಳ ಕಡೆ ದಾಸ್ತಾನು ಖಾಲಿಯಾಗಿ ಮಧ್ಯಾಹ್ನದ ವೇಳೆಗೆ ವ್ಯಾಪಾರ ಬಂದ್‌ ಆಯಿತು. ಮೊದಲ ದಿನವೇ ₹ 45 ಕೋಟಿ ವಹಿವಾಟು ನಡೆದಿದೆ.

ಅಬಕಾರಿ ಇಲಾಖೆ ಮೂಲಗಳ ಪ್ರಕಾರ 8.5 ಲಕ್ಷ ಲೀಟರ್‌ ಭಾರತೀಯ ತಯಾರಿಕಾ ಮದ್ಯ (ಐಎಂಎಲ್‌) ಹಾಗೂ 3.9 ಲಕ್ಷ ಲೀಟರ್‌ ಬಿಯರ್‌ ವ್ಯಾಪಾರವಾಗಿದೆ.

ಕೆಲವೆಡೆ ಗರಿಷ್ಠ ಚಿಲ್ಲರೆ ಮಾರಾಟ ದರಕ್ಕಿಂತ (ಎಂಆರ್‌ಪಿ) ಹೆಚ್ಚಿನ ದರಕ್ಕೆ ಮಾರಿರುವ ದೂರುಗಳು ಬಂದಿದ್ದು, ಕ್ರಮ ಕೈಗೊಳ್ಳಲಾಗುವುದು ಎಂದು ಮೂಲಗಳು ತಿಳಿಸಿವೆ.

ರಾಜ್ಯ ಸರ್ಕಾರ ಬಜೆಟ್‌ನಲ್ಲಿ ಮದ್ಯದ ದರಗಳನ್ನು ಶೇ 6ರಷ್ಟು ಏರಿಸಿದ್ದು, ಅದರಂತೆ ಹೊಸ ದರಗಳನ್ನು ನಿಗದಿಪಡಿಸಿ ಸಂಜೆ 5 ಗಂಟೆ ಬಳಿಕ ರಾಜ್ಯ ಪಾನೀಯ ನಿಗಮ (ಕೆಎಸ್‌ಬಿಸಿಎಲ್‌) ವಹಿವಾಟು ಆರಂಭಿಸಿತು. ಪಾನೀಯ ನಿಗಮದ ಡಿಪೊಗಳಲ್ಲಿ ಸಾಕಷ್ಟು ಮದ್ಯ ದಾಸ್ತಾನಿದೆ ಎಂದೂ ಮೂಲಗಳು ಸ್ಪಷ್ಟಪಡಿಸಿವೆ.

‘ಮಂಗಳವಾರದ ನಂತರ ಗ್ರಾಹಕರಿಗೆ ಎಲ್ಲ ಬ್ರ್ಯಾಂಡ್‌ ಬಿಯರ್ ಮತ್ತು ಮದ್ಯ ಬಾಟಲಿಗಳು ದೊರೆಯಲಿವೆ. ಮದ್ಯ ಪೂರೈಕೆಗೆ ಸಮಸ್ಯೆ ಆಗಬಾರದೆಂಬ ಕಾರಣಕ್ಕೆ ಮದ್ಯ ತಯಾರಿಕಾ ಘಟಕಗಳು ಕಾರ್ಯಾರಂಭ ಮಾಡಲು ಅನುಮತಿ ನೀಡಲಾಗಿದೆ’ ಎಂದು ಅಬಕಾರಿ ಆಯುಕ್ತ ಡಾ. ಲೋಕೇಶ್‌ ತಿಳಿಸಿದರು.

ಸೋಮವಾರ ಬೆಳಿಗ್ಗೆ 9ಗಂಟೆಯಿಂದ ಸಿಎಲ್‌– 1 ಸನ್ನದು ಹೊಂದಿರುವ 700 ಮತ್ತು ಸಿಎಲ್‌– 2 ಸನ್ನದು ಇರುವ 3,500 ಅಂಗಡಿಗಳನ್ನು ತೆರೆಯಲಾಗಿದೆ. ಇನ್ನೂ 300 ಮಳಿಗೆಗಳು ಬಂದ್‌ ಆಗಿವೆ ಎಂದು ರಾಜ್ಯ ಮದ್ಯ ಮಾರಾಟಗಾರರ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಗೋವಿಂದರಾಜ ಹೆಗ್ಡೆ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT