ಭಾನುವಾರ, ಜೂಲೈ 5, 2020
27 °C

ಕೋವಿಡ್‌: ಹಿರಿಯರ ಗಮನಕ್ಕೆ ಇಲ್ಲಿವೆ ಆರೋಗ್ಯ ಸಚಿವಾಲಯದ ಸಲಹೆಗಳು

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ‘ವೃದ್ಧರಲ್ಲಿ ರೋಗನಿರೋಧಕ ಶಕ್ತಿ ಕಡಿಮೆ ಇರುವುದರಿಂದ, ಇಂಥವರು ಕೋವಿಡ್‌–19ಗೆ ಒಳಗಾದರೆ, ತೀವ್ರ ಅಪಾಯ ಎದುರಾಗಬಹುದು. ಆದ್ದರಿಂದ ಹಿರಿಯ ನಾಗರಿಕರು ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು’ ಎಂದು ಕೇಂದ್ರದ ಆರೋಗ್ಯ ಸಚಿವಾಲಯವು ಸಲಹೆ ನೀಡಿದೆ.

‘ಕೊರೊನಾ ವೈರಸ್‌ ಹರಡುವಿಕೆಯ ಸರಪಣಿಯನ್ನು ತುಂಡರಿಸುವ ಉದ್ದೇಶದಿಂದ ಸರ್ಕಾರವು ಲಾಕ್‌ಡೌನ್‌ ಸೇರಿದಂತೆ ಕೆಲವು ಕಠಿಣ ಕ್ರಮಗಳನ್ನು ಕೈಗೊಂಡಿದೆ. ಈ ನಿಯಮಗಳನ್ನು ಪ್ರತಿಯೊಬ್ಬರೂ ಪಾಲಿಸಬೇಕು’ ಎಂದಿರುವ ಸಚಿವಾಲಯವು, ಹಿರಿಯ ನಾಗರಿಕರು ಮಾಡಬೇಕಾದ ಮತ್ತು ಮಾಡಬಾರದಾದ ಕೆಲಸಗಳ ಪಟ್ಟಿಯೊಂದನ್ನು ಬಿಡುಗಡೆ ಮಾಡಿದೆ.

ಏನು ಮಾಡಬೇಕು?

* ಸಾಬೂನಿನಿಂದ ಆಗಾಗ ಕೈ ಮತ್ತು ಮುಖವನ್ನು ತೊಳೆಯುತ್ತಿರಬೇಕು. ಮನೆಯಿಂದ ಹೊರಗೆ ಬರಬಾರದು. ಅತಿಥಿಗಳ ಭೇಟಿಯಿಂದ ದೂರವಿರಬೇಕು, ಭೇಟಿಯಾಗುವುದು ಅನಿವಾರ್ಯ ಆಗಿದ್ದರೆ ಕನಿಷ್ಠ ಒಂದು ಮೀಟರ್‌ ಅಂತರ ಕಾಯ್ದುಕೊಳ್ಳಬೇಕು

* ಮನೆಯಲ್ಲೇ ತಯಾರಿಸಿದ, ಪೌಷ್ಟಿಕಾಂಶಸಹಿತ ಆಹಾರವನ್ನು ಬಿಸಿಯಾಗಿರುವಾಗಲೇ ಸೇವಿಸಬೇಕು, ಆಗಾಗ ನೀರು ಅಥವಾ ದ್ರವ ಆಹಾರ ಸೇವಿಸುತ್ತಿರಬೇಕು. ರೋಗನಿರೋಧಕ ಶಕ್ತಿ ಹೆಚ್ಚಿಸಲು ತಾಜಾ ಹಣ್ಣಿನ ರಸವನ್ನು ಕುಡಿಯಬೇಕು

* ವೈದ್ಯರು ಸೂಚಿಸಿದ್ದ ಔಷಧಗಳನ್ನು ತಪ್ಪದೆ ಸೇವಿಸಬೇಕು. ಕಣ್ಣು, ಮಂಡಿಚಿಪ್ಪು ಬದಲಾವಣೆ ಮುಂತಾದ ಶಸ್ತ್ರಚಿಕಿತ್ಸೆಗಳನ್ನು ಸ್ವಲ್ಪ ಕಾಲದವರೆಗೆ ಮುಂದೂಡಬೇಕು

* ಜ್ವರ, ಕೆಮ್ಮು, ಉಸಿರಾಟದ ಸಮಸ್ಯೆ ಕಾಣಿಸಿಕೊಂಡರೆ ಕೂಡಲೇ ಸಮೀಪದ ಆರೋಗ್ಯ ಕೇಂದ್ರಕ್ಕೆ ಭೇಟಿನೀಡಿ, ವೈದ್ಯರು ನೀಡುವ ಸೂಚನೆಗಳನ್ನು ಪಾಲಿಸಬೇಕು

ಏನು ಮಾಡಬಾರದು?

* ಮುಖವನ್ನು ಕರವಸ್ತ್ರದಿಂದ ಮುಚ್ಚದೆಯೇ ಕೆಮ್ಮುವುದಾಗಲಿ, ಸೀನುವುದಾಗಲಿ ಮಾಡಬೇಡಿ. ಕೆಮ್ಮುವಾಗ ಬರಿಗೈಯನ್ನು ಅಡ್ಡ ಹಿಡಿಯಬೇಡಿ. ಕೆಮ್ಮು, ಜ್ವರದಿಂದ ಬಳಲುತ್ತಿರುವವರ ಸಮೀಪ ಹೋಗಬೇಡಿ

* ಸ್ವಯಂ ಚಿಕಿತ್ಸೆ ಮಾಡಿಕೊಳ್ಳಬೇಡಿ. ಸಕಾಲದಲ್ಲಿ ಆಸ್ಪತ್ರೆಗೆ ಭೇಟಿನೀಡಿ, ನಿಯಮಿತವಾಗಿ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಿ

* ಸಾಧ್ಯವಾದಷ್ಟು ಮಟ್ಟಿಗೆ ದೂರವಾಣಿಯ ಮೂಲಕವೇ ವೈದ್ಯರಿಂದ ಸಲಹೆ ಪಡೆಯಿರಿ. ಉದ್ಯಾನ, ಮಾರುಕಟ್ಟೆ, ಧಾರ್ಮಿಕ ಕ್ಷೇತ್ರ ಮುಂತಾದ ಜನಸಂದಣಿಯ ಪ್ರದೇಶಗಳಿಗೆ ಹೋಗಬೇಡಿ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು