ಬುಧವಾರ, ಆಗಸ್ಟ್ 4, 2021
20 °C

Covid-19 India Update | 2.66 ಲಕ್ಷ ಜನರಿಗೆ ಸೋಂಕು; 1.29 ಮಂದಿ ಗುಣಮುಖ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ದೇಶದಲ್ಲಿ ಒಟ್ಟು ಕೋವಿಡ್–19 ಪ್ರಕರಣಗಳ ಸಂಖ್ಯೆ ಮಂಗಳವಾರ ಬೆಳಿಗ್ಗೆ ವೇಳೆಗೆ 2.66 ಲಕ್ಷವನ್ನು ದಾಟಿದೆ. ಪ್ರತಿದಿನ ಪತ್ತೆಯಾಗುವ ಹೊಸ ಪ್ರಕರಣಗಳ ಸಂಖ್ಯೆ ಸತತ ಏಳನೇ ದಿನವೂ 9 ಸಾವಿರವನ್ನು ದಾಟಿದೆ. ಆದರೆ, ‘ಬೇರೆ ದೇಶಗಳಿಗೆ ಹೋಲಿಸಿದರೆ ಭಾರತದ ಸ್ಥಿತಿ ಉತ್ತಮವಾಗಿದೆ’ ಎಂದು ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ಹೇಳಿದ್ದಾರೆ.

ಮಂಗಳವಾರ ಬೆಳಿಗ್ಗೆ 8ರ ವೇಳೆಗೆ ದೇಶದಲ್ಲಿ ಪತ್ತೆಯಾದ ಕೋವಿಡ್–19 ಪ್ರಕರಣಗಳ ಒಟ್ಟು ಸಂಖ್ಯೆ 2,66,598ಕ್ಕೆ ತಲುಪಿತ್ತು. ಕೋವಿಡ್–19‌ನಿಂದ ಸತ್ತವರ ಸಂಖ್ಯೆ 7,466 ಆಗಿತ್ತು. ಒಟ್ಟು ಪ್ರಕರಣಗಳಲ್ಲಿ 1,29,917 ಲಕ್ಷ ಪ್ರಕರಣಗಳು ಸಕ್ರಿಯವಾಗಿವೆ. 1,29,214 ಜನರು ಸೋಂಕಿನಿಂದ ಗುಣಮುಖರಾಗಿದ್ದಾರೆ.

ಕೋವಿಡ್–19 ಹರಡುವಿಕೆ ತಡೆಯಲು ಕೇಂದ್ರ ಸರ್ಕಾರವು ಹೇರಿದ್ದ 75 ದಿನಗಳ ಲಾಕ್‌ಡೌನ್‌ ಅನ್ನು ಬಹುಪಾಲು ಸಡಿಲಿಕೆ ಮಾಡಿರುವ ಸಂದರ್ಭದಲ್ಲೇ ಸೋಂಕಿತರ ಸಂಖ್ಯೆ ತೀವ್ರಗತಿಯಲ್ಲಿ ಏರಿಕೆಯಾಗುತ್ತಿದೆ. ದೇಶದ ಹಲವು ನಗರಗಳಲ್ಲಿ ಸೋಂಕು ಸಮುದಾಯಕ್ಕೆ ಹರಡಿದೆ ಎಂದು ವಿಜ್ಞಾನಿಗಳು ಆತಂಕ ವ್ಯಕ್ತಪಡಿಸಿದ್ದಾರೆ.

ರಾಜ್ಯಗಳಿಗೆ ಕೇಂದ್ರದ ತಂಡ: ಕೋವಿಡ್–19 ಸೋಂಕು ವ್ಯಾಪಕವಾಗಿ ಹರಡಿರುವ ದೇಶದ 15 ರಾಜ್ಯಗಳ 50 ಜಿಲ್ಲೆಗಳಿಗೆ ಕೇಂದ್ರ ಸರ್ಕಾರವು ತಜ್ಞರ ತಂಡವನ್ನು ಕಳುಹಿಸಿದೆ. ಈ ನಗರಗಳಲ್ಲಿ ಮನೆ–ಮನೆ ಸಮೀಕ್ಷೆ ನಡೆಸಲು, ಕ್ವಾರಂಟೈನ್ ಮತ್ತು ಕೋವಿಡ್–19 ಚಿಕಿತ್ಸೆ ಮೇಲೆ ನಿಗಾ ಇಡುವಲ್ಲಿ ಸ್ಥಳೀಯ ಸಂಸ್ಥೆಗಳಿಗೆ ಕೇಂದ್ರದ ತಂಡವು ನೆರವು ನೀಡಲಿದೆ. ಕರ್ನಾಟಕದ 4 ಜಿಲ್ಲೆಗಳಿಗೆ ಕೇಂದ್ರ ತಂಡವನ್ನು ನಿಯೋಜನೆ ಮಾಡಲಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ಮಾಹಿತಿ ನೀಡಿದ್ದಾರೆ.

‘ವಿಶ್ವದ ಬೇರೆ ದೇಶಗಳಿಗೆ ಹೋಲಿಸಿದರೆ ಭಾರತದಲ್ಲಿ ಸೋಂಕು ನಿಯಂತ್ರಣದಲ್ಲಿ ಇದೆ. ಆದರೆ ನಾವು ಇಷ್ಟಕ್ಕೇ ತೃಪ್ತಿಪಡುವಂತಿಲ್ಲ. ಸೋಂಕು ಮತ್ತಷ್ಟು ಹರಡುವ ಅಪಾಯವಿದೆ. ಹೀಗಾಗಿ ಅಂತರ ಕಾಯ್ದುಕೊಳ್ಳುವುದು, ಸಾನಿಟೈಸರ್ ಬಳಸುವುದು ಮತ್ತು ಸ್ವಚ್ಛತೆ ಕಾಪಾಡಿಕೊಳ್ಳುವುದನ್ನು ಮತ್ತಷ್ಟು ಕಟ್ಟುನಿಟ್ಟಾಗಿ ಪಾಲಿಸಬೇಕು’ ಎಂದು ಅವರು ಕರೆ ನೀಡಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು