ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊರೊನಾ ಲಾಕ್‌ಡೌನ್: ಮನೆಬಾಗಿಲಿಗೆ ಉಚಿತ ಆಹಾರ ಪೂರೈಕೆ ಆರಂಭಿಸಿದ ಕೇರಳ ಸರ್ಕಾರ

Last Updated 28 ಮಾರ್ಚ್ 2020, 4:12 IST
ಅಕ್ಷರ ಗಾತ್ರ

ತಿರುವನಂತಪುರ: ಸಮುದಾಯ ಅಡುಗೆ ಕೇಂದ್ರಗಳನ್ನು ಸ್ಥಾಪಿಸುವ ಮೂಲಕ ಅವಶ್ಯ ಇರುವವರ ಮನೆ ಬಾಗಿಲಿಗೆ ಉಚಿತವಾಗಿ ಸಿದ್ಧ ಆಹಾರ ಪೂರೈಸುವ ಯೋಜನೆಯನ್ನು ಕೇರಳ ಸರ್ಕಾರ ಆರಂಭಿಸಿದೆ. ಸದ್ಯ 941 ಪಂಚಾಯತ್‌ಗಳಲ್ಲಿ ಸಮುದಾಯ ಅಡುಗೆ ಕೇಂದ್ರಗಳನ್ನು ಸ್ಥಾಪಿಸಲಾಗಿದೆ.

ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಯೋಜನೆ ಘೋಷಿಸಿದ (ಬುಧವಾರ ಈ ಯೋಜನೆ ಘೋಷಣೆ ಮಾಡಲಾಗಿತ್ತು) ಮರುದಿನವೇ 43 ಸಮುದಾಯ ಅಡುಗೆ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. 2,215 ಮನೆಗಳಿಗೆ ಸಿದ್ಧ ಆಹಾರ ಪೂರೈಸಲಾಗಿದ್ದು, ಈ ಪೈಕಿ 1,639 ಮನೆಗಳಿಗೆ ಉಚಿತವಾಗಿ ಆಹಾರ ವಿತರಿಸಲಾಗಿದೆ. ಶುಕ್ರವಾರದ ವೇಳೆಗೆ ಇನ್ನೂ 528 ಸಮುದಾಯ ಅಡುಗೆ ಕೇಂದ್ರಗಳು ಸ್ಥಾಪನೆಯಾಗಿವೆ. ಉಳಿದವು ಇನ್ನೆರಡು ದಿನಗಳಲ್ಲಿ ಸ್ಥಾಪನೆಯಾಗಲಿವೆ ಎಂದು ಸರ್ಕಾರಿ ಮೂಲಗಳನ್ನು ಉಲ್ಲೇಖಿಸಿ ಡೆಕ್ಕನ್ ಹೆರಾಲ್ಡ್ ವರದಿ ಮಾಡಿದೆ.

ಕೊರೊನಾ ಲಾಕ್‌ಡೌನ್‌ ಪರಿಣಾಮದಿಂದ ದುರ್ಬಲವರ್ಗದವರು, ಬಡವರು, ನಿರ್ಗತಿಕರಿಗೆ ಆಹಾರ ಸಮಸ್ಯೆಯಾಗಿದೆ ಎಂಬ ವರದಿಗಳನ್ನು ಗಮನದಲ್ಲಿಟ್ಟುಕೊಂಡು ಈ ಯೋಜನೆ ರೂಪಿಸಲಾಗಿದೆ.

ಆರ್ಥಿಕವಾಗಿ ದುರ್ಬಲರಾಗರುವವರಿಗೆ ಉಚಿತವಾಗಿ ಅಹಾರ ನೀಡಲಾಗುತ್ತಿದೆ. ಸಾರ್ವಜನಿಕರೂ ಇದರ ಪ್ರಯೋಜನೆ ಪಡೆಯಬಹುದಾಗಿದ್ದು, ಅವರಿಗೆ ಸಸ್ಯಾಹಾರಿ ಊಟಕ್ಕೆ ₹ 20 ನಿಗದಿಪಡಿಸಲಾಗಿದೆ. ಕಾರ್ಯಕರ್ತರಿಗೆ ಒಂದು ಊಟಕ್ಕೆ ₹ 5ರಂತೆ ಸೇವಾ ಶುಲ್ಕ ನೀಡಬೇಕಾಗುತ್ತದೆ.

ರಾಜ್ಯದ ಬಡತನ ನಿರ್ಮೂಲನಾ ಮಿಷನ್ ‘ಕುಟುಂಬಶ್ರೀ’ ಸಮುದಾಯ ಅಡುಗೆ ಕೇಂದ್ರಗಳ ಸ್ಥಾಪನೆ ಜವಾಬ್ದಾರಿ ವಹಿಸಿಕೊಂಡಿದೆ. ಅನೇಕ ಹೋಟೆಲ್‌ಗಳು, ಕೇಟರಿಂಗ್‌ನವರು ಅಡುಗೆ ಪರಿಕರಗಳು, ಅಡುಗೆಮನೆಗೆ ಸ್ಥಳ ನೀಡಲು ಮುಂದೆ ಬಂದಿದ್ದಾರೆ ಎಂದು ‘ಕುಟುಂಬಶ್ರೀ’ಯ ಕಾರ್ಯನಿರ್ವಾಹಕ ನಿರ್ದೇಶಕ ಹರಿಕಿಶೋರ್ ತಿಳಿಸಿದ್ದಾರೆ.

ಆಹಾರಕ್ಕೆ ಆರ್ಡರ್‌ ಮಾಡಲು ಪ್ರತಿ ಪಂಚಾಯತ್ ಮಟ್ಟದಲ್ಲಿ ವಾಟ್ಸ್‌ಆ್ಯಪ್ ಮತ್ತು ಎಸ್ಎಂಎಸ್ ಪ್ಲಾಟ್‌ಫಾರ್ಮ್‌ಗಳನ್ನು ರಚಿಸಲಾಗಿದೆ. ಪ್ರತಿ ಪಂಚಾಯತ್‌ನಲ್ಲಿ 500 ಜನರಿಗೆ ಆಹಾರ ಸಿದ್ಧಪಡಿಸಬಲ್ಲ ಕನಿಷ್ಠ ಒಂದಾದರೂ ಸಮುದಾಯ ಅಡುಗೆ ಕೇಂದ್ರ ಇರುತ್ತದೆ. ಆರಂಭದ ದಿನಗಳಲ್ಲಿ ಊಟ ಮಾತ್ರ ವಿತರಿಸಲಾಗುವುದು. ನಂತರದ ದಿನಗಳಲ್ಲಿ ಬೆಳಿಗ್ಗಿನ ಉಪಾಹಾರ ಮತ್ತು ರಾತ್ರಿಯ ಊಟ ನೀಡುವ ಬಗ್ಗೆಯೂ ಪರಿಗಣಿಸಲಾಗುವುದು ಎಂದು ‘ಕುಟುಂಬಶ್ರೀ’ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT