ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫ್ರಾನ್ಸ್ ಸರ್ಕಾರದ ಖಾತರಿಯೇ ಇಲ್ಲ

Last Updated 13 ಫೆಬ್ರುವರಿ 2019, 19:28 IST
ಅಕ್ಷರ ಗಾತ್ರ

ನವದೆಹಲಿ: ರಫೇಲ್‌ ಒಪ್ಪಂದದಲ್ಲಿ ಫ್ರಾನ್ಸ್‌ ಸರ್ಕಾರದ ಖಾತರಿಯ ಬದಲಿಗೆ ‘ಭರವಸೆ ಪತ್ರ’ಕ್ಕೆ ತೃಪ್ತವಾದ ಎನ್‌ಡಿಎ ಸರ್ಕಾರದ ಕ್ರಮದಿಂದ ಆಗುವ ಅನನುಕೂಲಗಳತ್ತ ಮಹಾಲೇಖಪಾಲರ (ಸಿಎಜಿ) ವರದಿಯು ಬೆಳಕು ಚೆಲ್ಲಿದೆ.

ಮುಂಗಡ ಪಾವತಿಗೆ ಸಂಬಂಧಿಸಿ ಶೇ 15ರಷ್ಟು ಬ್ಯಾಂಕ್‌ ಖಾತರಿ ನೀಡಬೇಕು ಎಂಬ ಅಂಶ 2007ರಲ್ಲಿ ಯುಪಿಎ ನಡೆಸಿದ ಮಾತುಕತೆಯಲ್ಲಿ ಇತ್ತು. ಆದರೆ, ಎನ್‌ಡಿಎ ಮಾಡಿಕೊಂಡ ಒಪ್ಪಂದದಲ್ಲಿ ಬ್ಯಾಂಕ್‌ ಖಾತರಿಯ ವಿಚಾರವೂ ಇಲ್ಲ ಎಂದು ವರದಿ ಹೇಳಿದೆ.

ಒಪ್ಪಂದದಲ್ಲಿ ಯಾವುದೇ ಲೋಪ ಉಂಟಾದರೆ ಭಾರತ ಸರ್ಕಾರವು ಡಾಸೋ ಕಂಪೆನಿಯ ಜತೆಗೆ ನೇರವಾಗಿ ಮಾತುಕತೆ ನಡೆಸಿ ಪರಿಹರಿಸಿಕೊಳ್ಳಬೇಕಾಗುತ್ತದೆ. ಫ್ರಾನ್ಸ್‌ ಸರ್ಕಾರಕ್ಕೂ ಇದಕ್ಕೂ ಯಾವುದೇ ಸಂಬಂಧ ಇರುವುದಿಲ್ಲ. ಮಧ್ಯಸ್ಥಿಕೆ ನ್ಯಾಯಾಲಯದಲ್ಲಿ ದಾವೆ ಹೂಡುವುದಕ್ಕೆ ಅವಕಾಶ ಇದೆ. ಆದರೆ, ನ್ಯಾಯಾಲಯವು ಭಾರತ ಸರ್ಕಾರದ ಪರವಾಗಿ ತೀರ್ಪು ಕೊಟ್ಟರೆ, ಅದನ್ನು ಡಾಸೋ ಕಂಪನಿ ಈಡೇರಿಸದಿದ್ದರೆ ಲಭ್ಯವಿರುವ ಎಲ್ಲ ನ್ಯಾಯಾಂಗ ಹೋರಾಟವನ್ನೂ ಭಾರತ ಮಾಡಬೇಕಾಗುತ್ತದೆ. ಕಾನೂನು ಹೋರಾಟದ ಎಲ್ಲ ಅವಕಾಶಗಳು ಮುಗಿದ ಬಳಿಕವಷ್ಟೇ ಫ್ರಾನ್ಸ್‌ ಸರ್ಕಾರವು ಡಾಸೋ ಪರವಾಗಿ ಹಣ ಪಾವತಿ ಮಾಡುವುದಕ್ಕೆ ಸಾಧ್ಯ ಎಂದು ವರದಿಯಲ್ಲಿ ವಿವರಿಸಲಾಗಿದೆ.

ಡಾಸೋ ಕಂಪನಿಗೆ ಶೇ 60ರಷ್ಟು ಮೊತ್ತವನ್ನು ಮುಂಗಡ ಪಾವತಿಸಬೇಕಾಗುತ್ತದೆ. ಹಾಗಾಗಿ, ಫ್ರಾನ್ಸ್‌ ಸರ್ಕಾರದ ಖಾತರಿ ಇರಲೇಬೇಕು ಎಂದು ಕಾನೂನು ಸಚಿವಾಲಯವು ಸಲಹೆ ನೀಡಿತ್ತು. ಹಾಗಿದ್ದರೂ ಫ್ರಾನ್ಸ್‌ ಸರ್ಕಾರದ ಖಾತರಿ ಪಡೆದುಕೊಂಡಿಲ್ಲ ಎಂದು ವರದಿ ಹೇಳಿದೆ.

ಅಂಬಾನಿಗೆ ಹಣ ಎಲ್ಲಿಂದ ಬರುತ್ತಿದೆ?

‘ಎರಿಕ್‌ಸನ್ ಕಂಪನಿಗೆ ₹ 550 ಕೋಟಿ ಪಾವತಿ ಮಾಡಲು ರಿಲಯನ್ಸ್ ಮತ್ತು ಅನಿಲ್ ಅಂಬಾನಿ ಬಳಿ ಹಣವಿಲ್ಲ. ಆದರೆ ರಫೇಲ್‌ ತಯಾರಿಕೆಗೆ ಹಣ ಹೂಡಲು, ಖಾಸಗಿ ಜೆಟ್‌ ವಿಮಾನಗಳಲ್ಲಿ ಓಡಾಡಲು ಮತ್ತು ಭವ್ಯ ಬಂಗಲೆಗಳಲ್ಲಿ ವಾಸಿಸಲು ಅವರಿಗೆ ಹಣ ಎಲ್ಲಿಂದ ಬರುತ್ತಿದೆ’ ಎಂದು ಹಿರಿಯ ವಕೀಲ ದುಶ್ಯಂತ್ ಧವೆ ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿದ್ದಾರೆ ಎಂದು ಬಾರ್ ಅಂಡ್ ಬೆಂಚ್ ವರದಿ ಮಾಡಿದೆ.

ಮೊಬೈಲ್ ಉಪಕರಣಗಳ ತಯಾರಕ ಕಂಪನಿಗೆ ಅನಿಲ್ ಅಂಬಾನಿ ಒಡೆತನದ ರಿಲಯನ್ಸ್ ಕಮ್ಯುನಿಕೇಷನ್ಸ್ ಬಾಕಿ ಪಾವತಿ ಮಾಡಿಲ್ಲ. ಈ ಸಂಬಂಧ ಎರಿಕ್‌ಸನ್ ಸುಪ್ರೀಂ ಕೋರ್ಟ್ ಮೊರೆ ಹೋಗಿತ್ತು. ಹಣ ಪಾವತಿ ಮಾಡುವಂತೆ ಸುಪ್ರೀಂ ಕೋರ್ಟ್‌ ಅಂಬಾನಿಗೆ ಗಡುವು ನೀಡಿತ್ತು. ಗಡುವು ಮುಗಿದಿದ್ದರೂ ಅಂಬಾನಿ ಹಣ ಪಾವತಿ ಮಾಡಿಲ್ಲ.

ಪೂರೈಕೆಯಲ್ಲಿ ವ್ಯತ್ಯಾಸ ಇಲ್ಲ

* 2006ರ ಮಾತುಕತೆಯ ಪ್ರಕಾರ, ಒಪ್ಪಂದವಾದ 50ನೇ ತಿಂಗಳಲ್ಲಿ 18 ವಿಮಾನಗಳನ್ನು ಪೂರೈಸಬೇಕಿತ್ತು. ಎನ್‌ಡಿಎ ಸರ್ಕಾರದ ಒಪ್ಪಂದದ ಪ್ರಕಾರ, ಒಪ್ಪಂದವಾಗಿ 36ರಿಂದ 53ನೇ ತಿಂಗಳ ನಡುವೆ 18 ವಿಮಾನಗಳನ್ನು ಪೂರೈಸಬೇಕು

* ನಂತರದ 18 ವಿಮಾನಗಳನ್ನು ಎಚ್‌ಎಎಲ್‌ನಲ್ಲಿ ತಯಾರಿಸಿ 49ರಿಂದ 72 ತಿಂಗಳಲ್ಲಿ ಪೂರೈಸಬೇಕು ಎಂಬುದು ಯುಪಿಎ ಅವಧಿಯ ಮಾತುಕತೆಯಲ್ಲಿ ನಿಗದಿ. ಎನ್‌ಡಿಎ ಒಪ್ಪಂದದ ಪ್ರಕಾರ, ಉಳಿದ 18 ವಿಮಾನಗಳನ್ನು 67 ತಿಂಗಳೊಳಗೆ ಪೂರೈಸಬೇಕು

ಒಪ್ಪಂದ 11 ಭಾಗ

ಸಿಎಜಿ ವರದಿಯು ಯುಪಿಎ ಸರ್ಕಾರವು 2007ರಲ್ಲಿ ನಡೆಸಿದ್ದ ಮಾತುಕತೆಯಲ್ಲಿ ನಿಗದಿ ಮಾಡಿದ್ದ ಬೆಲೆ ಮತ್ತು ಎನ್‌ಡಿಎ ಸರ್ಕಾರದ ಒಪ್ಪಂದವನ್ನು ಹೋಲಿಕೆ ಮಾಡಿದೆ. ಎನ್‌ಡಿಎ ಮಾಡಿಕೊಂಡಿರುವ ಒಪ್ಪಂದವನ್ನು 11ಭಾಗಗಳಾಗಿ ವಿಭಜಿಸಿ ವಿವರಿಸಲಾಗಿದೆ. ಯಾವ ಭಾಗಕ್ಕೆ ಹೆಚ್ಚು ದರ ಮತ್ತು ಯಾವುದಕ್ಕೆ ಕಡಿಮೆ ಎಂಬುದನ್ನು ವಿವರಿಸಲಾಗಿದೆ.

ದರ ಹೋಲಿಕೆಯ ಭಾಗಗಳು

1. ವಿಮಾನದ ಮೂಲ ಬೆಲೆ

2. ಸೇವೆಗಳು, ಕಾರ್ಯಾಚರಣೆ ಬೆಂಬಲ ಸಲಕರಣೆಗಳು ಮತ್ತು ತಾಂತ್ರಿಕ ನೆರವು

3. ಭಾರತದ ಕೋರಿಕೆಯಂತೆ ಅಳವಡಿಸಲಾದ ಸಾಧನಗಳು (ಶೇ 17.08ರಷ್ಟು ಕಡಿಮೆ ದರ)

4. ಸಿದ್ಧತಾ ಮಾನದಂಡಗಳು

5. ಎಂಜಿನಿಯರಿಂಗ್‌ ಬೆಂಬಲ ಪ್ಯಾಕೇಜ್‌ (ಶೇ 6.54ರಷ್ಟು ಹೆಚ್ಚು ದರ)

6. ಕಾರ್ಯಕ್ಷಮತೆ ಆಧರಿತ ವ್ಯವಸ್ಥೆಗಳು(ಶೇ 6.54ರಷ್ಟು ಹೆಚ್ಚು ದರ)

7. ಸಲಕರಣೆಗಳು, ಟೆಸ್ಟರ್‌ಗಳು ಮತ್ತು ನಿಲ್ದಾಣಕ್ಕೆ ಬೇಕಿರುವ ಸಲಕರಣೆಗಳು

8. ಶಸ್ತ್ರಾಸ್ತ್ರ ಪ್ಯಾಕೇಜ್‌ (ಶೇ 1.05ರಷ್ಟಿ ಕಡಿಮೆ ದರ)

9. ಕಾರ್ಯಾಚರಣೆಗೆ ಅಗತ್ಯವಾದ ಉಪಕರಣಗಳು

10. ಪೈಲಟ್‌ ಮತ್ತು ತಂತ್ರಜ್ಞರ ತರಬೇತಿ

11. ಅಣಕು ವಿಮಾನ (ಸಿಮ್ಯುಲೇಟರ್‌) ಮತ್ತು ಅದರ ತರಬೇತಿ ನಿರ್ವಹಣೆಯ ವಾರ್ಷಿಕ ವೆಚ್ಚ

ಮುದ್ರಿಸಿದ ಕಾಗದದಷ್ಟೂ ಬೆಲೆಯೂವರದಿಗೆ ಇಲ್ಲ

ರಫೇಲ್ ಮಾತುಕತೆ ನಡೆಸಿದ ತಂಡದ ಸದಸ್ಯರ ಭಿನ್ನಮತದ ಬಗ್ಗೆ ಸಿಎಜಿ ವರದಿಯಲ್ಲಿ ಪ್ರಸ್ತಾಪವೇ ಇಲ್ಲ. ಹಾಗಾಗಿ ಈ ವರದಿಗೆ ಅದನ್ನು ಮುದ್ರಿಸಿದ ಹಾಳೆಗಳಷ್ಟು ಬೆಲೆಯೂ ಇಲ್ಲ ಎಂದು ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಹೇಳಿದ್ದಾರೆ.

ಕಡಿಮೆ ದರದಲ್ಲಿ ರಫೇಲ್‌ ಖರೀದಿಸಲಾಗಿದೆ ಮತ್ತು ತ್ವರಿತವಾಗಿ ಪೂರೈಕೆ ಆಗಲಿದೆ ಎಂಬ ಸರ್ಕಾರದ ಹೇಳಿಕೆ ಹುಸಿ ಎಂಬುದನ್ನು ಸಿಎಜಿ ವರದಿ ಸಾಬೀತು ಮಾಡಿದೆ ಎಂದು ಮಾಧ್ಯಮಗೋಷ್ಠಿಯಲ್ಲಿ ಅವರು ಹೇಳಿದರು.

‘ಯಾವುದೇ ಅವ್ಯವಹಾರ ನಡೆದಿಲ್ಲ ಎಂದು ನೀವು ಹೇಳುತ್ತಿದ್ದೀರಿ. ಹಾಗಿರುವಾಗ ಜಂಟಿ ಸದನ ಸಮಿತಿಯಿಂದ ತನಿಖೆ ನಡೆಸಲು ಭಯ ಯಾಕೆ’ ಎಂದು ಅವರು ಪ್ರಶ್ನಿಸಿದ್ದಾರೆ.

ಕಾಂಗ್ರೆಸ್‌ ಆರೋಪ: ಯುಪಿಎ ಅವಧಿಯಲ್ಲಿ ಪ್ರತಿ ವಿಮಾನಕ್ಕೆ ₹520 ಕೋಟಿ ನೀಡಲು ಒಪ‍್ಪಿಕೊಳ್ಳಲಾಗಿತ್ತು. ಆದರೆ, ಎನ್‌ಡಿಎ ಸರ್ಕಾರ ಮಾಡಿಕೊಂಡ ಒಪ್ಪಂದದಲ್ಲಿ ದರ ₹1,600 ಕೋಟಿಗೆ ಏರಿಕೆಯಾಗಿದೆ ಎಂಬುದು ಕಾಂಗ್ರೆಸ್‌ನ ಪ್ರಮುಖ ಆರೋಪವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT