ಭಾನುವಾರ, ಮಾರ್ಚ್ 29, 2020
19 °C

ಲಾಕ್‌ಡೌನ್ ಆದೇಶಕ್ಕೆ ಬೆಲೆ ಕೊಡದ ಜನ: ಕರ್ಫ್ಯೂ ಜಾರಿ ಆದೇಶ ಹೊರಡಿಸಿದ ಪಂಜಾಬ್

ಏಜೆನ್ಸೀಸ್ Updated:

ಅಕ್ಷರ ಗಾತ್ರ : | |

ಕೊರೊನಾವೈರಸ್‌ ಸೋಂಕು ಹರಡುವುದನ್ನು ತಡೆಗಟ್ಟುವ ಉದ್ದೇಶದಿಂದ ಪಂಜಾಬ್ ರಾಜ್ಯ ಸರ್ಕಾರ ಲಾಕ್‌ಡೌನ್ ಆದೇಶ ಹೊರಡಿಸಿತ್ತು. ಜನ ಸರ್ಕಾರದ ಆದೇಶಕ್ಕೆ ಬೆಲೆಕೊಡದ ಕಾರಣ ಇದೀಗ ರಾಜ್ಯದಲ್ಲಿ ಕರ್ಫ್ಯೂ ಜಾರಿ ಮಾಡಲಾಗಿದೆ. ಈ ಮೂಲಕ ಕೊರೊನಾ ತಡೆಗೆ ಕರ್ಫ್ಯೂ ಜಾರಿ ಮಾಡಿದ ಮೊದಲ ರಾಜ್ಯ ಎನಿಸಿಕೊಂಡಿದೆ.

'ಕರ್ಫ್ಯೂ ಆದೇಶವನ್ನು ಕಟ್ಟುನಿಟ್ಟಾಗಿ ಜಾರಿಮಾಡಲಾಗುವುದು. ತೀರಾ ಅಗತ್ಯ ವಸ್ತುಗಳ ಸರಬರಾಜು ಮತ್ತು ಅತ್ಯಗತ್ಯ ಸೇವೆಗಳಿಗೆ ಮಾತ್ರ ವಿನಾಯ್ತಿ ನೀಡಲಾಗಿದೆ' ಎಂದು ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ತಿಳಿಸಿದ್ದಾರೆ.

ಮುಖ್ಯ ಕಾರ್ಯದರ್ಶಿ ಮತ್ತು ಪೊಲೀಸ್‌ ಮುಖ್ಯಸ್ಥರೊಂದಿಗೆ ಸಮಾಲೋಚನೆ ನಡೆಸಿದ ನಂತರ ಮುಖ್ಯಮಂತ್ರಿ ಕರ್ಫ್ಯೂ ಆದೇಶ ಹೊರಡಿಸಿದರು. 'ಕರ್ಫ್ಯೂ ವೇಳೆ ಯಾವುದೇ ಮುಲಾಜು, ರಿಯಾಯ್ತಿ ಯಾರಿಗೂ ಸಿಗುವುದಿಲ್ಲ' ಎಂದು ಅಮರಿಂದರ್‌ ಕಟುವಾಗಿ ಹೇಳಿದರು ಎಂದು ಪಂಜಾಬ್‌ನ ಹಲವು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

'ಜನರು ಮನೆಯೊಳಗೆ ಇರಬೇಕು ಎಂಬ ಉದ್ದೇಶದಿಂದ ನಾವು ಲಾಕ್‌ಡೌನ್ ಆದೇಶ ಹೊರಡಿಸಿದೆವು. ಆದರೆ ಜನರು ಹೊರಗೆ ಬರುವುದು ನಿಲ್ಲಿಸಲಿಲ್ಲ. ಹೀಗಾಗಿ ಕರ್ಫ್ಯೂ ಜಾರಿ ಅನಿವಾರ್ಯವಾಯಿತು' ಎಂದು ಮುಖ್ಯಮಂತ್ರಿ ಅಭಿಪ್ರಾಯಪಟ್ಟಿದ್ದಾಗಿ ಪಂಜಾಬ್ ರಾಜ್ಯ ಸರ್ಕಾರದ ವಕ್ತಾರರು ಹೇಳಿದ್ದಾರೆ.

ಪಂಜಾಬ್‌ನ ಎಲ್ಲ ಜಿಲ್ಲಾಧಿಕಾರಿಗಳಿಗೆ ಈ ಸಂಬಂಧ ಅಗತ್ಯ ಆದೇಶಗಳನ್ನು ಹೊರಡಿಸಲು ಸೂಚಿಸಲಾಗಿದೆ. ನಿರ್ಬಂಧದಿಂದ ರಿಯಾಯ್ತಿ ಬೇಕಾದವರು ನಿರ್ದಿಷ್ಟ ಸಮಯ ಮತ್ತು ಉದ್ದೇಶ ಉಲ್ಲೇಖಿಸಿ ಅನುಮತಿ ಪಡೆದುಕೊಳ್ಳಬೇಕು ಎಂದು ಸರ್ಕಾರದ ವಕ್ತಾರರು ಹೇಳಿದ್ದಾರೆ.

ಪಂಜಾಬ್‌ನಲ್ಲಿ ಈವರೆಗೆ 21 ಕೊರೊನಾ ವೈರಸ್ ಸೋಂಕು ಪ್ರಕರಣಗಳು ವರದಿಯಾಗಿವೆ. ಓರ್ವ ಸೋಂಕಿತ ಮೃತಪಟ್ಟಿದ್ದಾರೆ. ಕರ್ಫ್ಯೂ ಆದೇಶ ಹೊರಡಿಸಿದ ತಕ್ಷಣ ಬೀದಿಗಳಲ್ಲಿ ಕಾಣಿಸಿಕೊಂಡ ಪೊಲೀಸರು ಅಂಗಡಿಗಳ ಬಾಗಿಲು ಹಾಕಿಸಿದರು. ಬೀದಿಗಳಲ್ಲಿ ಕಾಣಿಸಿದ ಜನರನ್ನು ಮನೆಗಳಿಗೆ ಹಿಂದಿರುಗಲು ಸೂಚಿಸಿದರು.

ಕೆಲ ಪ್ರಮುಖ ನಗರಗಳಲ್ಲಿ ಜನರು ಅಗತ್ಯ ವಸ್ತುಗಳ ಖರೀದಿಗೆ ಮುಗಿಬಿದ್ದಿದ್ದು ಕಂಡು ಬಂತು. ಭಾನುವಾರವಷ್ಟೇ ಪಂಜಾಬ್‌ನಲ್ಲಿ ಲಾಕ್‌ಡೌನ್ ಆದೇಶ ಹೊರಡಿಸಲಾಗಿತ್ತು. ಆದರೆ ರಾಜ್ಯದ ಪ್ರಮುಖ ನಗರಗಳಾದ ಅಮೃತಸರ, ಮೊಗಾ ಮತ್ತು ಲೂಧಿಯಾನಗಳಲ್ಲಿ ಜನರು ಗುಂಪುಗೂಡಿ ಮಾರುಕಟ್ಟೆಗಳಲ್ಲಿ ಕಾಣಿಸಿಕೊಂಡಿದ್ದರು. 

ಗುಂಪುಗೂಡಬೇಡಿ ಎಂಬ ಪೊಲೀಸರ ಮನವಿಗೂ ಜನರು ಬೆಲೆ ಕೊಟ್ಟಿರಲಿಲ್ಲ. ಹೀಗಾಗಿ ರಾಜ್ಯ ಸರ್ಕಾರ ಕರ್ಫ್ಯೂ ಜಾರಿಗೆ ನಿರ್ಧರಿಸಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು