ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚೆಕ್ ಪೋಸ್ಟ್‌ ಅಕ್ರಮ ತಡೆಗೆ ಸಂಚಾರಿ ದಳ: ಸಚಿವ ತಮ್ಮಣ್ಣ

ಪ್ರಜಾವಾಣಿ ‘ಒಳನೋಟ’ಕ್ಕೆ ಸ್ಪಂದನೆ
Last Updated 6 ಮಾರ್ಚ್ 2019, 2:31 IST
ಅಕ್ಷರ ಗಾತ್ರ

ಬೆಂಗಳೂರು: ‘ಸಾರಿಗೆ ಇಲಾಖೆಯ ಚೆಕ್‌ ಪೋಸ್ಟ್‌ಗಳಲ್ಲಿ ರೌಡಿಗಳಿಂದ ನಡೆಯುತ್ತಿರುವ ವಸೂಲಿ ನಿಲ್ಲಿಸಲು ವಿಶೇಷ ಸಂಚಾರಿ ದಳ ರಚಿಸಲಾಗುವುದು’ ಎಂದು ಸಾರಿಗೆ ಸಚಿವ ಡಿ.ಸಿ. ತಮ್ಮಣ್ಣ ತಿಳಿಸಿದರು.

ಇದೇ 3ರಂದು ‘ಪ್ರಜಾವಾಣಿ’ಯ ‘ಒಳನೋಟ’ದಲ್ಲಿ ಆರ್‌ಟಿಒ ಕಚೇರಿಗಳ ಸುಲಿಗೆ ಹಾಗೂ ಚೆಕ್‌ಪೋಸ್ಟ್‌ಗಳಲ್ಲಿನ ಅಕ್ರಮ ವಸೂಲಾತಿಯ ಬಗ್ಗೆ ಸವಿಸ್ತಾರ ವರದಿ ಪ್ರಕಟವಾಗಿತ್ತು. ಇದನ್ನು ಉಲ್ಲೇಖಿಸದೇ ಪ್ರತಿಕ್ರಿಯಿಸಿದ ಸಚಿವರು, ‘ಚೆಕ್ ಪೋಸ್ಟ್‌ಗಳಲ್ಲಿ ಯಾವುದೇ ಅಕ್ರಮ ನಡೆಯದಂತೆ ನೋಡಿಕೊಳ್ಳಲು ಈಗಾಗಲೇ ಸಿಸಿ ಟಿವಿ ಕ್ಯಾಮರಾಗಳನ್ನು ಅಳವಡಿಸಲಾಗಿದೆ. ಆದರೂ ಖಾಸಗಿ ವಾಹನಗಳಿಂದ ರೌಡಿಗಳು ಹಣ ವಸೂಲಿ ಮಾಡುತ್ತಿದ್ದಾರೆಂಬ ಆರೋಪಗಳನ್ನು ತಳ್ಳಿ ಹಾಕುವುದಿಲ್ಲ’ ಎಂದರು.

ಚೆಕ್ ಪೋಸ್ಟ್‌ ಮೂಲಕ ಹೋಗುವ ವಾಹನಗಳು ನಿರ್ದಿಷ್ಟ ಜಾಗದಲ್ಲಿ ನಿಂತಿರುವ ರೌಡಿಗಳಿಗೆ ಹಣ ನೀಡಬೇಕಾಗುತ್ತದೆ ಎಂದು ಮಾಧ್ಯಮ ಪ್ರತಿನಿಧಿಗಳು ಪ್ರಸ್ತಾಪಿಸಿದಾಗ, ‘ಈ ವ್ಯವಸ್ಥೆ ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ಅದನ್ನು ತಕ್ಷಣ ನಿಯಂತ್ರಿಸಲು ಸಾಧ್ಯವಿಲ್ಲ. ಆದರೆ, ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಲು ಬದ್ಧ’ ಎಂದರು.

ಬೆಂಗಳೂರಿನ ಹೊರವಲಯದಲ್ಲಿರುವ ಚೆಕ್ ಪೋಸ್ಟ್ ಒಂದರಲ್ಲಿ ವಾಹನದಲ್ಲಿ ಪ್ರಯಾಣಿಸುತ್ತಿದ್ದವರ ಮೇಲೆ ಹಲ್ಲೆ ಮಾಡಿ ಮೊಬೈಲ್ ಮತ್ತು ಹಣವನ್ನು ರೌಡಿಗಳು ದೋಚಿರುವ ಬಗ್ಗೆ ಸಚಿವರ ಗಮನ ಸೆಳೆದಾಗ, ಇಂಥ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸುವುದಾಗಿ ಭರವಸೆ ನೀಡಿದರು.

ಆರ್‌ಟಿಓ ನೇಮಕಾತಿ ನಿಯಮ ಬದಲು: ‘ಆರ್‌ಟಿಒ ಹುದ್ದೆಗಳು ಖಾಲಿ ಇರುವುದರಿಂದ ಒಬ್ಬ ಅಧಿಕಾರಿ 3–4 ಕಚೇರಿಗಳಲ್ಲಿ ಕೆಲಸ ನಿರ್ವಹಿಸಬೇಕಾಗಿದೆ. ಹೀಗಾಗಿ, ಮಧ್ಯವರ್ತಿಗಳ ಹಾವಳಿಯ ದೂರುಗಳು ಬರುತ್ತಿವೆ. ಇದನ್ನು ನಿಯಂತ್ರಿಸುವ ಉದ್ದೇಶದಿಂದ ನಿಯಮಗಳಿಗೆ ಬದಲಾವಣೆ ತಂದು ಆರ್‌ಟಿಒಗಳನ್ನು ನೇಮಕಾತಿ ಮಾಡಿಕೊಳ್ಳಲು ತೀರ್ಮಾನಿಸಲಾಗಿದೆ’ ಎಂದು ಅವರು ಹೇಳಿದರು.

‘ಕೇಂದ್ರ ಸರ್ಕಾರದ ನಿಯಮದಂತೆ ಆರ್‌ಟಿಒ ನೇಮಕಾತಿ ನಡೆಯುತ್ತಿರುವುದರಿಂದ ನೇಮಕಾತಿ ಪ್ರಕ್ರಿಯೆಯ ವಿರುದ್ಧ ಅಭ್ಯರ್ಥಿಗಳು ಕೋರ್ಟ್‌ ಮೆಟ್ಟಿಲೇರುತ್ತಿದ್ದಾರೆ. ಈಗಿರುವ ನಿಯಮದ ಪ್ರಕಾರ ಆರ್‌ಟಿಒ ಆಗಲು ಅಭ್ಯರ್ಥಿ ಒಂದು ವರ್ಷ ಗ್ಯಾರೇಜ್‌ನಲ್ಲಿ ಕೆಲಸ ಮಾಡಬೇಕು. ಆದರೆ, ಕೆಲವರು ಬೋಗಸ್‌ ಪ್ರಮಾಣ ಪತ್ರ ನೀಡಿ ಕೆಲಸ ಗಿಟ್ಟಿಸಿಕೊಂಡಿರುವುದರಿಂದ ನ್ಯಾಯಾಲಯದಲ್ಲಿ ಪ್ರಶ್ನಿಸುವಂತಾಗಿದೆ. ಈ ಕಾರಣಕ್ಕೆ, ನೇಮಕಾತಿ ಬಳಿಕ ಸಂಸ್ಥೆಯ ಗ್ಯಾರೇಜ್‌ಗಳಲ್ಲಿ ಒಂದು ವರ್ಷ ತರಬೇತಿ ನೀಡುವ ನಿಯಮ ರೂಪಿಸುವ ಬಗ್ಗೆ ಚಿಂತನೆ ನಡೆದಿದೆ’ ಎಂದು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT