ಭಾನುವಾರ, ಮೇ 9, 2021
25 °C

ಇಡೀ ರಾಷ್ಟ್ರವೇ ಕೇರಳದ ಜತೆಗಿದೆ: ಪ್ರಧಾನಿ ಮೋದಿ ಭರವಸೆ

ಏಜೆನ್ಸಿಸ್‌ Updated:

ಅಕ್ಷರ ಗಾತ್ರ : | |

ನವದೆಹಲಿ: ಕಳೆದ ಹಲವು ದಿನಗಳಿಂದ ಸುರಿದ ಭಾರಿ ಮಳೆ ಕೇರಳದ ವಾರ್ಷಿಕ ಸುಗ್ಗಿಯ ಹಬ್ಬವಾದ ‘ಓಣಂ’ ಆಚರಣೆಯ ಸದ್ದಡಗಿಸಿದೆ.

‘ಕೇರಳ ರಾಜ್ಯಕ್ಕೆ ಇಡೀ ರಾಷ್ಟ್ರ ಭುಜದಂತೆ ನಿಂತಿದೆ. ಜತೆಗೆ, ಅಲ್ಲಿನ ಜನರ ಸಂತೋಷ ಹಾಗೂ ಸಮೃದ್ಧಿಗಾಗಿ ಪ್ರಾರ್ಥಿಸುತ್ತಿದೆ’ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ.

‘ಕಳೆದ ಹಲವು ದಿನಗಳಿಂದ ಕೇರಳದ ಪ್ರವಾಹ ಸಂತ್ರಸ್ತರು ಎದುರಿಸುತ್ತಿರುವ ಸಮಸ್ಯೆಗಳಿಂದ ಹೊರಬರಲು ‘ಓಣಂ’ ಹೆಚ್ಚಿನ ಶಕ್ತಿ ನೀಡಲಿದೆ’ ಎಂದು ಮೋದಿ ಟ್ವೀಟ್‌ ಮಾಡಿದ್ದಾರೆ.

ನಿರಂತರವಾಗಿ ಸುರಿದ ಭಾರಿ ಮಳೆಯಿಂದಾಗಿ ಅಪಾರ ಹಾನಿ ಉಂಟು ಮಾಡಿದೆ. ಜತೆಗೆ, ಪ್ರವಾಹಕ್ಕೆ ಸಿಲುಕಿ ಇದುವರೆಗೆ 265ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ.

ಕೇರಳದಲ್ಲಿ ಮಹಾಪ್ರವಾಹದ ಕೇಂದ್ರ ಬಿಂದು ಇಡುಕ್ಕಿ. ಈ ಜಿಲ್ಲೆಯಲ್ಲಿ 81 ದಿನಗಳ ಅವಧಿಯಲ್ಲಿ 3,521 ಮಿ.ಮೀ ಮಳೆಯಾಗಿದೆ. ಇಲ್ಲಿ ವಾಡಿಕೆಗಿಂತ ಶೇ 93 ರಷ್ಟು ಅಧಿಕ ಮಳೆ ಬಿದ್ದಿದೆ. ಪ್ರವಾಹದಿಂದಾಗಿ 51 ಮಂದಿ ಜೀವ ಕಳೆದುಕೊಂಡಿದ್ದಾರೆ. ಹತ್ತಕ್ಕೂ ಹೆಚ್ಚು ಮಂದಿ ನಾಪತ್ತೆಯಾಗಿದ್ದಾರೆ.

ತ್ರಿಶೂರ್‌ನಲ್ಲಿ 43, ಎರ್ನಾಕುಲಂ 38, ಅಲಪುಳ 34, ಮಲಪ್ಪುರಂ ಜಿಲ್ಲೆಯಲ್ಲಿ 30 ಮಂದಿ ಮೃತಪಟ್ಟಿರುವುದಾಗಿ ವರದಿಯಾಗಿದೆ.

ಪ್ರವಾಹದಿಂದ 8.69 ಲಕ್ಷ ಜನ ಸಂಕಷ್ಟಕ್ಕೆ ಸಿಲುಕಿದ್ದಾರೆ. 2,287 ನಿರಾಶ್ರಿತ ಶಿಬಿರಗಳನ್ನು ತೆರೆಯಲಾಗಿದೆ. ಪ್ರವಾಹ ಪೀಡಿತ ಕುಟುಂಬಗಳಿಗೆ ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ(ಸಿಎಂಡಿಆರ್‌ಎಫ್‌) ₹242.73 ಕೋಟಿ ಹಣವನ್ನು 3.91 ಲಕ್ಷ ಬ್ಯಾಂಕ್‌ ಖಾತೆಗಳಿಗೆ ತಲಾ ₹10 ಸಾವಿರ ಮೊತ್ತವನ್ನು ವರ್ಗಾವಣೆ ಮಾಡಲಾಗಿದೆ ಎಂದು ಸರ್ಕಾರ ತಿಳಿಸಿದೆ.

ಸೆಪ್ಟೆಂಬರ್‌ ಮೊದಲ ವಾರದಿಂದಲ್ಲೇ ಆದಾಲತ್‌ ಕಾರ್ಯಕ್ರಮಗಳನ್ನು ನಡೆಸಲಾಗುತ್ತದೆ. ಪ್ರವಾಹದಿಂದ ದಾಖಲೆಗಳನ್ನು ಕಳೆದುಕೊಂಡಿರುವ ಸಂತ್ರಸ್ತರು ರಾಜ್ಯದ ವಿವಿಧ ಇಲಾಖೆಗಳಲ್ಲಿ ಹೊಸ ದಾಖಲೆಗಳನ್ನು ಪಡೆಯಬಹುದು. ಈ ನಿಟ್ಟಿನಲ್ಲಿ ಮಾಹಿತಿ ತಂತ್ರಜ್ಞಾನ ಹಾಗೂ ಇತರೆ ಇಲಾಖೆಗಳು ಕಾರ್ಯಪ್ರವೃತ್ತವಾಗಿವೆ. 

ನೆರೆಯಿಂದ 1.31 ಲಕ್ಷ ಮನೆಗಳು ಸಂಪೂರ್ಣವಾಗಿ ನಾಶವಾಗಿವೆ. ಪ್ರವಾಹ ಪೀಡಿತ ಪ್ರದೇಶಗಳಲ್ಲಿ ನೀರಿನ ಸಂಬಂಧಿತ ರೋಗಗಳ ಹರಡುವಿಕೆ ತಡೆಗಟ್ಟಲು ನೈರ್ಮಲ್ಯಕ್ಕೆ ಹೆಚ್ಚು ಒತ್ತು ನೀಡಲಾಗುತ್ತಿದೆ. ಜತೆಗೆ, ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಸಣ್ಣ ಪ್ರಮಾಣದ ಕೈಗಾರಿಕೆಗಳನ್ನು ಪುನರ್‌ ಸ್ಥಾಪಿಸಲು ₹10 ಲಕ್ಷದವರೆಗೆ ಬಡ್ಡಿ ರಹಿತ ಸಾಲ ನೀಡುವುದಾಗಿ ಸರ್ಕಾರ ಘೋಷಿಸಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು