ಮುಗಿಯದ ಪ್ರಶ್ನೆಗಳು... ಸಿಗದ ಉತ್ತರ...!

ಭಾನುವಾರ, ಜೂಲೈ 21, 2019
22 °C
ಮಕ್ಕಳ ಸಾವು: ಶಂಕಿತ ಮಿದುಳ ಜ್ವರಕ್ಕೆ ಬಿಹಾರ ತತ್ತರ

ಮುಗಿಯದ ಪ್ರಶ್ನೆಗಳು... ಸಿಗದ ಉತ್ತರ...!

Published:
Updated:
Prajavani

ಮುಜಫ್ಫರಪುರ (ಬಿಹಾರ): ರೇಣುಕುಮಾರಿ ಎಂಬ ಮಹಿಳೆ ಎರಡು ದಿನಗಳ ಹಿಂದೆ ತನ್ನ ಐದು ವರ್ಷದ ಮಗಳನ್ನು ಇಲ್ಲಿನ ಶ್ರೀಕೃಷ್ಣ ಮೆಡಿಕಲ್‌ ಕಾಲೇಜು ಮತ್ತು ಆಸ್ಪತ್ರೆಗೆ (ಎಸ್‌ಕೆಎಂಸಿಎಚ್‌) ದಾಖಲಿಸಿದಾಗ ತೀವ್ರ ಆತಂಕದಲ್ಲಿದ್ದರು. ಮಗಳು ಜ್ವರದಿಂದ ಪಾರಾಗಿ ಮತ್ತೆ ಮಡಿಲಲ್ಲಿ ಆಡುತ್ತಾಳೆ ಎಂಬ ಭರವಸೆಯನ್ನೂ ಕಳೆದುಕೊಂಡಿದ್ದರು.

ಅಕ್ಕಪಕ್ಕದ ಹಾಸಿಗೆಯಲ್ಲಿದ್ದ ಅನೇಕ ಹಸುಳೆಗಳು ಮಸಣ ಸೇರಿದ್ದರಿಂದ ರೇಣುಕುಮಾರಿ ತನ್ನ ಮಗಳು ಬದುಕುವ ಬಗ್ಗೆ ಸಹಜವಾಗಿಯೇ ಗಾಬರಿಗೊಂಡಿದ್ದರು. ಆದರೆ, ಚಿಕಿತ್ಸೆ ಫಲ ನೀಡಿತ್ತು. ಬಾಲಕಿ ಗುಣಮುಖಳಾದಳು.

ಇದನ್ನೂ ಓದಿ: ‘ಮಕ್ಕಳ ಸಾವಿಗೆ ಲಿಚಿ ಮಾತ್ರ ಕಾರಣವಲ್ಲ’

‘ಕಾಯಿಲೆಗೆ ಯಾವುದೇ ಹೆಸರಿನಿಂದ ಕರೆದರೂ ಸರಿ. ಇಲ್ಲಿನ ವೈದ್ಯರು ನೀಡಿದ ಔಷಧಿಯಿಂದ ನನ್ನ ಮಗಳು ಗುಣಮುಖಳಾಗಿದ್ದಾಳೆ. ಆಸ್ಪತ್ರೆಯಿಂದ ಬಿಡುಗಡೆ ಮಾಡುವುದನ್ನೇ ಕಾಯುತ್ತಿದ್ದೇವೆ’ ಎಂದ ರೇಣುಕುಮಾರಿ ಮಾತಿನಲ್ಲಿ ಬೇಗನೇ ಮನೆ ಸೇರುವ ಧಾವಂತ ಇತ್ತು.

ಆದರೆ, ಇನ್ನೊಂದೆಡೆ ಈ ಎಇಎಸ್‌ನಿಂದಾಗಿಯೇ (ಅಲ್ಲಿ ಇದನ್ನು ಚಮ್ಕಿ ಬುಖಾರ್‌ ಎಂದೂ ಕರೆಯುತ್ತಾರೆ) ಈ ವರೆಗೆ 138 ಮಕ್ಕಳು ಮೃತಪಟ್ಟಿದ್ದಾರೆ ಎನ್ನಲಾಗುತ್ತಿದ್ದು, ಈ ಸಂಖ್ಯೆ ಹೆಚ್ಚುತ್ತಲೇ ಇದೆ. ಕಾಯಿಲೆಬಾಧಿತ ಮಕ್ಕಳ ಪಾಲಕರಲ್ಲಿ ಆತಂಕವೂ ಮನೆ ಮಾಡಿದೆ. ಈ ಘಟನಾವಳಿ ಅವರು ಪ್ರತಿಭಟನೆ ನಡೆಸುವಂತೆಯೂ ಮಾಡಿದೆ.

ನಿಲ್ಲದ ಆರೋಪ–ಒಪ್ಪದ ವೈದ್ಯರು: ಮುಜಫ್ಫರಪುರ ಜಿಲ್ಲೆಯಲ್ಲಿ ಎಇಎಸ್‌ನಿಂದಾಗಿಯೇ 138 ಜನ ಮಕ್ಕಳು ಮೃತಪಟ್ಟಿದ್ದಾರೆ ಎಂಬ ಆರೋಪವನ್ನು ಎಸ್‌ಕೆಎಂಸಿಎಚ್‌ ವೈದ್ಯರು ನಿರಾಕರಿಸುತ್ತಾರೆ.

ಪೂರ್ತಿಯಾಗಿ ಮಾಗದ ಲಿಚ್ಚಿ ಹಣ್ಣಿನಲ್ಲಿನ ವಿಷಕಾರಿ ವಸ್ತುವಿನ ಪರಿಣಾಮ ಈ ಮಾರಣಹೋಮ ನಡೆದಿದೆ ಎಂದೂ ಹೇಳಲಾಗುತ್ತಿದೆ. ಮಕ್ಕಳ ಸಾವಿಗೆ ಸಂಬಂಧಿಸಿದಂತೆ ಹೀಗೆ ಹಲವಾರು ಪ್ರಶ್ನೆಗಳು ಏಳುತ್ತಲೇ ಇವೆ. ಆದರೆ, ನಿಖರ ಉತ್ತರ ಮಾತ್ರ ಮರೀಚಿಕೆ
ಯಾಗಿದೆ. ಆರೋಪ–ಪ್ರತ್ಯಾರೋಪಗಳು ಕೇಳಿ ಬರುತ್ತಿದ್ದು, ಇಡೀ ಪ್ರಕರಣಕ್ಕೆ ರಾಜಕೀಯ ಸೋಂಕು ತಗುಲಿದೆ.

ಸಾವಿನ ಸಂಖ್ಯೆ ಇಳಿಯುವ ವಿಶ್ವಾಸ
‘ಪಟ್ನಾ ಹಾಗೂ ದರ್ಭಂಗಾದಿಂದ ಹೆಚ್ಚುವರಿಯಾಗಿ ವೈದ್ಯರನ್ನು ಆಸ್ಪತ್ರೆಗೆ ಕಳುಹಿಸಲಾಗಿದೆ. ಹೀಗಾಗಿ ಎಲ್ಲ ಮಕ್ಕಳಿಗೂ ಸಕಾಲದಲ್ಲಿ ಚಿಕಿತ್ಸೆ ನೀಡಲು ಸಾಧ್ಯವಾಗುತ್ತಿದ್ದು, ಸಾವಿನ ಸಂಖ್ಯೆ ಶೀಘ್ರವೇ ಕಡಿಮೆಯಾಗಲಿದೆ’ ಎಂದು ಎಸ್‌ಕೆಎಂಸಿಎಚ್‌ನ ವೈದಕೀಯ ಸೂಪರಿಂಟೆಂಡೆಂಟ್‌ ಡಾ.ಎಸ್‌.ಕೆ.ಶಾಹಿ ವಿಶ್ವಾಸ ವ್ಯಕ್ತಪಡಿಸುತ್ತಾರೆ.

‘ದಣಿವರಿಯದೇ ಇಲ್ಲಿನ ವೈದ್ಯರು ಮಕ್ಕಳಿಗೆ ಚಿಕಿತ್ಸೆ ನೀಡುವಲ್ಲಿ ನಿರತರಾಗಿದ್ದಾರೆ. ಈ ವರೆಗೆ 118 ಜನ ಮಕ್ಕಳನ್ನು ಡಿಸ್‌ಚಾರ್ಜ್‌ ಮಾಡಲಾಗಿದೆ. 372 ಜನ ಮಕ್ಕಳಿಗೆ ಚಿಕಿತ್ಸೆ ನೀಡಲಾಗುತ್ತಿದೆ’ ಎಂದೂ ಹೇಳುತ್ತಾರೆ.

ಈಡೇರದ ಭರವಸೆ
ಈ ಭಾಗದ ಪ್ರಮುಖ ಆಸ್ಪತ್ರೆಯಾಗಿರುವ ಶ್ರೀಕೃಷ್ಣ ಮೆಡಿಕಲ್‌ ಕಾಲೇಜು ಮತ್ತು ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸುವ ವಿಷಯವೇ ಗೊಂದಲ ಮೂಡಿಸುವಂತಿದೆ. ಇತ್ತೀಚೆಗೆ ಆಸ್ಪತ್ರೆಗೆ ಭೇಟಿ ನೀಡಿದ್ದ ಮುಖ್ಯಮಂತ್ರಿ ನಿತೀಶ್‌ಕುಮಾರ್‌ಗೆ ಪಾಲಕರ ಪ್ರತಿಭಟನೆಯ ಬಿಸಿ ತಾಗಿತ್ತು.

ಆಸ್ಪತ್ರೆ 600 ಹಾಸಿಗೆ ಸಾಮರ್ಥ್ಯ ಹೊಂದಿದ್ದು, ಇದನ್ನು 1,500 ಹಾಸಿಗೆಗೆ ಹೆಚ್ಚಿಸಲು ನಿತೀಶ್‌ ಕುಮಾರ್‌ ಆದೇಶಿಸಿದ್ದಾರೆ. ಆದರೆ, 2014ರಲ್ಲಿ ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್‌ ಅವರು ಆಸ್ಪತ್ರೆಯನ್ನು ಮೇಲ್ದರ್ಜೆಗೆ ಏರಿಸುವುದಾಗಿ ಘೋಷಿಸಿದ್ದರು. ಈಗ ಪುನಃ ಅವರು, ಇಲ್ಲಿ 100 ಹಾಸಿಗೆ ಸಾಮರ್ಥ್ಯದ ತೀವ್ರನಿಗಾ ಘಟಕ (ಐಸಿಯು) ಸ್ಥಾಪಿಸುವುದಾಗಿ ಘೋಷಿಸಿದ್ದಾರೆ. ಇದು ಜನರಲ್ಲಿ ಅಸಮಾಧಾನ, ಆಕ್ರೋಶಕ್ಕೆ ಕಾರಣವಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 1

  Frustrated
 • 0

  Angry

Comments:

0 comments

Write the first review for this !