‘ಮಕ್ಕಳ ಸಾವಿಗೆ ಲಿಚಿ ಮಾತ್ರ ಕಾರಣವಲ್ಲ’

ಭಾನುವಾರ, ಜೂಲೈ 21, 2019
22 °C

‘ಮಕ್ಕಳ ಸಾವಿಗೆ ಲಿಚಿ ಮಾತ್ರ ಕಾರಣವಲ್ಲ’

Published:
Updated:
Prajavani

ನವದೆಹಲಿ: ಕಳೆದ 15ದಿನಗಳಲ್ಲಿ ಎಸ್‌ಕೆಎಂಸಿ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕರ ಮೇಲೆ ಅದೆಷ್ಟು ಜನ ಮಕ್ಕಳ ಪೋಷಕರು ರೇಗಾಡಿದ್ದಾರೆ ಎಂಬುದಕ್ಕೆ ಲೆಕ್ಕವಿಲ್ಲ. ರಾಜ್ಯ ರಾಜಧಾನಿಯಿಂದ ಅನೇಕ ಮೇಲಧಿಕಾರಿಗಳು ಕರೆಮಾಡಿ ಇವರ ವಿರುದ್ಧ ಹರಿಹಾಯ್ದಿದ್ದಾರೆ. ಆದರೂ ಅಧೀಕ್ಷಕ ಡಾ. ಎಸ್‌.ಕೆ. ಶಾಹಿ ಮಾನಸಿಕ ಸಮತೋಲನ ಕಳೆದುಕೊಳ್ಳಲಿಲ್ಲ. ಇವೆಲ್ಲವನ್ನೂ ಅವರು ಶಾಂತಚಿತ್ತದಿಂದ ಸಹಿಸಿಕೊಂಡು ಮಕ್ಕಳ ಆರೋಗ್ಯ ಕಾಪಾಡುವ ನಿಟ್ಟಿನಲ್ಲಿ ಅವಿರತವಾಗಿ ಶ್ರಮಿಸಿದ್ದಾರೆ. ಬಿಡುವಿಲ್ಲದ ಕೆಲಸದ ನಡುವೆಯೂ ಅವರು ಮಕ್ಕಳ ಸಾವಿನ ಕಾರಣದ ಬಗ್ಗೆ ‘ಪ್ರಜಾವಾಣಿ’ ಜೊತೆ ಮಾತನಾಡಿದರು. ಅವರ ಜೊತೆ ನಡೆಸಿದ ಮಾತುಕತೆಯ ಸಾರಾಂಶ ಇಲ್ಲಿದೆ.

* ಇಷ್ಟೊಂದು ಮಕ್ಕಳ ಸಾವಿನ ಹಿಂದಿನ ಕಾರಣವೇನು? ಇದರಲ್ಲಿ ‘ಲಿಚಿ’ ಹಣ್ಣಿನ ಪಾತ್ರ ಇದೆಯೇ?
ನಿಜ ಹೇಳಬೇಕೆಂದರೆ ಮಕ್ಕಳ ಸಾವಿಗೆ ಕಾರಣ ಏನೆಂಬುದು ಸ್ಪಷ್ಟವಾಗಿ ತಿಳಿದುಬಂದಿಲ್ಲ. ಒಬ್ಬೊಬ್ಬ ವೈದ್ಯರು, ತಜ್ಞರು ಅವರವರದ್ದೇ ಆದ ಕಾರಣಗಳನ್ನು ಕೊಡುತ್ತಿದ್ದಾರೆ. ಒಂದು ಮಾತಂತೂ ಸತ್ಯ, ಲಿಚಿ ಹಣ್ಣು ಒಂದೇ ಮಕ್ಕಳ ಸಾವಿಗೆ ಕಾರಣ ಅಲ್ಲ.

* ಲಿಚಿ ಹಣ್ಣು ತಿಂದ ಬಳಿಕವೇ ಮಕ್ಕಳು, ವಿಶೇಷವಾಗಿ ಗ್ರಾಮೀಣ ಪ್ರದೇಶದ ಬಡ ಕುಟುಂಬಗಳ ಮಕ್ಕಳು ಸತ್ತಿವೆ ಎಂದು ಹೇಳಲಾಗುತ್ತಿದೆಯಲ್ಲ?
ಹಾಗಿದ್ದರೆ, ನಗರದ ಮಕ್ಕಳೂ ಲಿಚಿ ಹಣ್ಣು ತಿನ್ನುತ್ತಾರಲ್ಲ, ಅವರೇಕೆ ಸಾಯಲಿಲ್ಲ? (ಕಳೆದ 20 ವರ್ಷಗಳಲ್ಲಿ ನಗರ ಪ್ರದೇಶದ ನಾಲ್ವರು ಮಕ್ಕಳಲ್ಲಿ ಮಾತ್ರ ಮಿದುಳಿನ ಉರಿಯೂತದ (ಎಇಎಸ್‌) ಸಮಸ್ಯೆ ಕಾಣಿಸಿಕೊಂಡಿದೆ). ಮುಜಪ್ಫರ್‌ಪುರದಲ್ಲಿ ಬೆಳೆಯಲಾಗುವ ಲಿಚಿ ಹಣ್ಣುಗಳನ್ನು ದೇಶದ ವಿವಿಧ ಭಾಗಗಳಿಗೆ ಕಳುಹಿಸಲಾಗುತ್ತದೆ ಮಾತ್ರವಲ್ಲ ವಿದೇಶಗಳಿಗೆ ರಫ್ತು ಸಹ ಮಾಡಲಾಗುತ್ತಿದೆ. ಈ ಹಣ್ಣಿನ ಬಗ್ಗೆ ಅಂಥ ಯಾವುದೇ ದೂರು ಇಲ್ಲ.

* ಹಾಗಿದ್ದರೆ ಸಮಸ್ಯೆ ಇರುವುದೆಲ್ಲಿ?
ಸಮಸ್ಯೆ ಇರುವುದು ಬಡತನ ಮತ್ತು ಅಪೌಷ್ಟಿಕತೆಯಲ್ಲಿ. ಸತ್ತ ಮಕ್ಕಳಲ್ಲಿ ಹೆಚ್ಚಿನವರು ಅಪೌಷ್ಟಿಕತೆಯ ಸಮಸ್ಯೆ ಎದುರಿಸುತ್ತಿದ್ದವರೇ. ಇಂಥವರಲ್ಲಿ ಅನೇಕ ಮಕ್ಕಳ ಮನೆಯವರಿಗೆ ಮೂರು ಹೊತ್ತಿನ ಊಟಕ್ಕೂ ಗತಿ ಇಲ್ಲ. ಇಂಥ ಮನೆಯ ಮಕ್ಕಳು ಲಿಚಿ ಹಣ್ಣಿನ ತೋಟಗಳಲ್ಲಿ ಸುತ್ತಾಡಿ, ಖಾಲಿ ಹೊಟ್ಟೆಗೆ ಈ ಹಣ್ಣುಗಳನ್ನು ಸೇವಿಸುತ್ತಿದ್ದರು. ಇದರಿಂದಾಗಿ ಅವರ ದೇಹದಲ್ಲಿ ಗ್ಲೂಕೋಸ್‌ ಅಂಶ ಗಣನೀಯ ಪ್ರಮಾಣದಲ್ಲಿ ಕಡಿಮೆಯಾಗುತ್ತಿತ್ತು.

* ಇಂಥ ಸಂದರ್ಭದಲ್ಲೇನಾಗುತ್ತದೆ?
ಬರಿಹೊಟ್ಟೆಗೆ ಲಿಚಿ  ಹಣ್ಣನ್ನು ಸೇವಿಸಿದರೆ ಮಿದುಳಿನ ಉರಿಯೂತ ಉಂಟಾಗುತ್ತದೆ. ನಮ್ಮ ದೇಹದೊಳಗೆ ಗ್ಲೂಕೋಸ್‌ ಅಂಶ ಒಮ್ಮೆಲೇ ಕುಸಿದಾಗ, ದೇಹವು ತನ್ನೊಳಗಿದ್ದ ಮೀಸಲು ಗ್ಲೂಕೋಸ್‌ ಅನ್ನು ಬಳಸುತ್ತದೆ. ಆದರೆ ಇಂಥ ಮಕ್ಕಳ ಶರೀರದೊಳಗೆ ಮೀಸಲು ಗ್ಲೂಕೋಸ್‌ ಇರುವುದೇ ಇಲ್ಲ. ಇಂಥ ಸಂದರ್ಭದಲ್ಲಿ ಅವರಿಗೆ ಕೂಡಲೇ ಕೃತಕ ಗ್ಲೂಕೋಸ್‌ ಕೊಟ್ಟರೆ ಬದುಕುಳಿಯುತ್ತಾರೆ. ಮಕ್ಕಳಿಗೆ ಸಕಾಲದಲ್ಲಿ ಚಿಕಿತ್ಸೆ ಲಭಿಸುವುದು ಮುಖ್ಯ. ಸ್ವಲ್ಪ ವಿಳಂಬವಾದರೂ ಪ್ರಾಣ ಹೋಗುವ ಸಾಧ್ಯತೆ ಇರುತ್ತದೆ.

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 1

  Sad
 • 1

  Frustrated
 • 0

  Angry

Comments:

0 comments

Write the first review for this !