ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೆಹಲಿ ಕಾಂಗ್ರೆಸ್‌ನಲ್ಲಿ ಅತೃಪ್ತಿಯ ಹೊಗೆ

ಶೀಲಾ ದೀಕ್ಷಿತ್‌ ಕಾರ್ಯವೈಖರಿಗೆ ಆಕ್ಷೇಪ
Last Updated 14 ಜುಲೈ 2019, 20:00 IST
ಅಕ್ಷರ ಗಾತ್ರ

ನವದೆಹಲಿ: ಲೋಕಸಭೆಗೆ ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ದೆಹಲಿಯ ಆಡಳಿತಾರೂಢ ಆಮ್‌ ಆದ್ಮ ಪಕ್ಷವನ್ನು (ಎಎಪಿ) ಹಿಂದಿಕ್ಕಿ ಕಾಂಗ್ರೆಸ್‌ ಎರಡನೇ ಸ್ಥಾನಕ್ಕೆ ಏರಿತ್ತು. ಆದರೆ, ಪಕ್ಷದೊಳಗಿನ ಒಳಜಗಳದಿಂದಾಗಿ ಈ ಜನಬೆಂಬಲವನ್ನು ಇನ್ನಷ್ಟು ವಿಸ್ತರಿಸಿಕೊಳ್ಳಲು ಆ ಪಕ್ಷಕ್ಕೆ ಸಾಧ್ಯವಾಗುತ್ತಿಲ್ಲ.

ದೆಹಲಿ ಘಟಕದ ಅಧ್ಯಕ್ಷೆ ಶೀಲಾ ದೀಕ್ಷಿತ್‌ ಅವರ ಕಾರ್ಯವೈಖರಿ ಬಗ್ಗೆ ಕೆಲವು ಗುಂಪುಗಳಿಗೆ ಅಸಮಾಧಾನ ಇದೆ. ಅವರು ‘ತೆರೆ ಮರೆಯ’ ಕಾರ್ಯಾಚರಣೆ ನಡೆಸುತ್ತಿದ್ದಾರೆ ಎಂದು ಆರೋಪಿಸಲಾಗುತ್ತಿದೆ.

ದೆಹಲಿ ಕಾಂಗ್ರೆಸ್‌ ಉಸ್ತುವಾರಿ ಪಿ.ಸಿ. ಚಾಕೊ ಮತ್ತು ಮೂವರು ಕಾರ್ಯಾಧ್ಯಕ್ಷರು ಶೀಲಾ ಅವರಿಗೆ ಪ್ರತ್ಯೇಕವಾಗಿ ಪತ್ರ ಬರೆದು ತಮ್ಮ ಅತೃಪ್ತಿ ವ್ಯಕ್ತಪಡಿಸಿದ್ದಾರೆ. ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿರುವ ರಾಹುಲ್‌ ಗಾಂಧಿ ಅವರು ಮಧ್ಯಪ್ರವೇಶಿಸಬೇಕು ಎಂದು 29 ಮುಖಂಡರು ಕೋರಿದ್ದಾರೆ.

ಶೀಲಾ ಅವರಂತಹ ಹಿರಿಯ ನಾಯಕಿ ಪಕ್ಷದ ನಿರ್ದೇಶನಗಳನ್ನು ಉಲ್ಲಂಘಿಸಬಾರದಿತ್ತು ಎಂದು ಚಾಕೊ ಹೇಳಿದ್ದಾರೆ. ತಮ್ಮ ಬೆಂಬಲಿಗರು ನಿಯಮಗಳನ್ನು ಉಲ್ಲಂಘಿಸಲು ಅವರು ಅವಕಾಶ ಕೊಡಬಾರದು ಎಂದು ಒತ್ತಾಯಿಸಿದ್ದಾರೆ.

ಪಕ್ಷದ ಕೇಂದ್ರೀಯ ನಾಯಕತ್ವದ ಬಗೆಗಿನ ಗೊಂದಲವೂ ದೆಹಲಿಯಲ್ಲಿ ಕಾಂಗ್ರೆಸ್‌ ತನ್ನ ನೆಲೆ ಗಟ್ಟಿಗೊಳಿಸಲು ಅಡ್ಡಿಯಾಗಿದೆ. ಸ್ಥಳೀಯ ವಿಚಾರಗಳಿಗೆ ಸಂಬಂಧಿಸಿ ರ‍್ಯಾಲಿ ಅಥವಾ ಪ್ರತಿಭಟನೆ ನಡೆಸುವುದಕ್ಕೂ ಪಕ್ಷಕ್ಕೆ ಸಾಧ್ಯವಾಗಿಲ್ಲ.

ತಾಲ್ಲೂಕು ಮತ್ತು ಜಿಲ್ಲಾ ಘಟಕಕ್ಕೆ ವೀಕ್ಷಕರನ್ನು ನೇಮಿಸುವ ವಿಚಾರದಲ್ಲಿ ಭಿನ್ನಾಭಿಪ್ರಾಯ ಉಂಟಾಗಿದೆ. ಮೂವರು ಕಾರ್ಯಾಧ್ಯಕ್ಷರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆಯೇ ವೀಕ್ಷಕರನ್ನು ನೇಮಿಸಲಾಗಿದೆ ಎಂಬ ಆರೋಪ ಕೇಳಿ ಬಂದಿದೆ.

‘ದೆಹಲಿ ಕಾಂಗ್ರೆಸ್ ಘಟಕದ ಅಧ್ಯಕ್ಷೆ ಶೀಲಾ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗ ಇಂತಹ ನಿರ್ಧಾರ ಕೈಗೊಂಡಿರುವುದು ನಮಗೆ ಆಘಾತ ಉಂಟು ಮಾಡಿದೆ. ಇಂತಹ ನಿರ್ಧಾರಕ್ಕೆ ಮೊದಲು ವಿಸ್ತೃತವಾದ ಸಮಾಲೋಚನೆ ನಡೆಯಬೇಕು. ಕೆಲವು ವ್ಯಕ್ತಿಗಳು ತೆರೆಮರೆಯಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದಾರೆ ಎಂಬ ಭಾವನೆ ಬರುವಂತಾಗಿದೆ’ ಎಂದು 29 ಮುಖಂಡರು ಬರೆದಿರುವ ಪತ್ರದಲ್ಲಿ ಹೇಳಲಾಗಿದೆ.

ಲೋಕಸಭಾ ಚುನಾವಣೆಯಲ್ಲಿ ಪಕ್ಷದ ಸೋಲಿನ ಬಗ್ಗೆ ಅಧ್ಯಯನ ಮಾಡಲು ಶೀಲಾ ಅವರು ಏಕಪಕ್ಷೀಯವಾಗಿ ಸಮಿತಿ ರಚಿಸಿದ್ದಾರೆ. ಎಲ್ಲ 280 ತಾಲ್ಲೂಕು ಘಟಕಗಳನ್ನು ಬರ್ಖಾಸ್ತು ಮಾಡಿದ್ದಾರೆ ಎಂಬ ಆರೋಪವೂ ಇದೆ.

ಕಾರ್ಯಾಧ್ಯಕ್ಷರಾದ ಹಾರೂನ್‌ ಯೂಸುಫ್‌, ದೇವೇಂದರ್‌ ಯಾದವ್‌ ಮತ್ತು ರಾಜೇಶ್‌ ಲಿಲೋಟಿಯಾ ಹಾಗೂ ತಮ್ಮ ಗಮನಕ್ಕೆ ತಾರದೆ ಯಾವ ನಿರ್ಧಾರವನ್ನೂ ಕೈಗೊಳ್ಳಬಾರದು ಎಂದು ಚಾಕೊ ಹೇಳಿದ್ದಾರೆ. ತಾಲ್ಲೂಕು ಸಮಿತಿ ಬರ್ಖಾಸ್ತು ಮತ್ತು ವೀಕ್ಷಕರ ನೇಮಕ ನಿರ್ಧಾರವನ್ನು ತಡೆ ಹಿಡಿದಿರುವುದಾಗಿಯೂ ಅವರು ತಿಳಿಸಿದ್ದಾರೆ.

ಶೀಲಾ ಅವರು ಕೈಗೊಳ್ಳುತ್ತಿರುವ ಏಕಪಕ್ಷೀಯ ನಿರ್ಧಾರಗಳು ಅನಗತ್ಯ ಭಿನ್ನಾಭಿಪ್ರಾಯ ಮತ್ತು ಸಂಘರ್ಷಕ್ಕೆ ಕಾರಣವಾಗುತ್ತದೆ ಎಂದು ಅವರು ಎಚ್ಚರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT