ಶುಕ್ರವಾರ, ಫೆಬ್ರವರಿ 28, 2020
19 °C
ಕಾಂಗ್ರೆಸ್‌ ಶೂನ್ಯ ಸಾಧನೆ

ದೆಹಲಿ ಚುನಾವಣೆ: ಎಎಪಿ ಹ್ಯಾಟ್ರಿಕ್‌; ನಡೆಯದ ಮೋದಿ–ಶಾ ಆಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್‌ ಶಾ ನೇತೃತ್ವದಲ್ಲಿ ನಡೆದ ಬಿಜೆಪಿಯ ಅಭೂತಪೂರ್ವ ಚುನಾವಣಾ ರ‍್ಯಾಲಿಗಳು, ಪೌರತ್ವ (ತಿದ್ದುಪಡಿ) ಕಾಯ್ದೆ ಎಬ್ಬಿಸಿದ್ದ ಅಬ್ಬರದ ಅಲೆಗಳು, ಎದುರಾಳಿಗಳು ನಡೆಸಿದ ತೀವ್ರ ವಾಗ್ದಾಳಿಗಳು ಯಾವುವೂ ರಾಷ್ಟ್ರದ ರಾಜಧಾನಿ, ದೆಹಲಿಯ ವಿಧಾನಸಭಾ ಚುನಾವಣೆಯಲ್ಲಿ ಆಮ್‌ ಆದ್ಮಿ ಪಕ್ಷದ (ಎಎಪಿ) ಸತತ ಮೂರನೇ ಗೆಲುವಿನ ಓಟಕ್ಕೆ ತಡೆಯೊಡ್ಡಲು ಯಶಸ್ವಿಯಾಗಲಿಲ್ಲ. ಎಎಪಿಯ ನಾಗಾಲೋಟದಲ್ಲಿ  ಬಿಜೆಪಿ ಹಾಗೂ ಕಾಂಗ್ರೆಸ್‌ ಎರಡೂ ಅಕ್ಷರಶಃ ದೂಳೀಪಟವಾಗಿ ಹೋದವು.

ಕಳೆದ ಚುನಾವಣೆಗೆ ಹೋಲಿಸಿದರೆ ಈ ಸಲ ಬಿಜೆಪಿಯ ಸಾಧನೆ ಕೊಂಚ ಸುಧಾರಿಸಿದರೆ, ಕಾಂಗ್ರೆಸ್‌ ಪಕ್ಷದ್ದು ಮತ್ತೆ ಶೂನ್ಯ ಸಂಪಾದನೆ. ಎಂಟು ತಿಂಗಳ ಹಿಂದೆಯಷ್ಟೇ ನಡೆದ ಲೋಕಸಭಾ ಚುನಾವಣೆಯಲ್ಲಿ ಒಂದೂ ಕ್ಷೇತ್ರ ಗೆಲ್ಲದಿದ್ದ ಅರವಿಂದ ಕೇಜ್ರಿವಾಲ್‌ ನೇತೃತ್ವದ ಎಎಪಿ, ಈಗ ಪುನಃ ಪುಟಿದೆದ್ದು ನಿಂತಿತು.

ಪೌರತ್ವ (ತಿದ್ದುಪಡಿ) ಕಾಯ್ದೆ ವಿರುದ್ಧ ಶಾಹೀನ್‌ ಬಾಗ್‌ನಲ್ಲಿ ನಡೆದ ಪ್ರತಿಭಟನೆಗಳನ್ನೇ ಅಸ್ತ್ರ ಮಾಡಿಕೊಂಡ ಶಾ ಪಡೆ, ಮತಗಳ ದ್ರುವೀಕರಣಕ್ಕೆ ಕೈಹಾಕಿದರೆ, ಶಿಕ್ಷಣ, ಆರೋಗ್ಯ, ಮೂಲಸೌಕರ್ಯ ವಲಯಗಳಲ್ಲಿ ತನ್ನ ನೇತೃತ್ವದ ಸರ್ಕಾರ ಮಾಡಿದ ಸಾಧನೆಗಳನ್ನೇ ಎಎಪಿ ಚುನಾವಣಾ ವಿಷಯ ಮಾಡಿಕೊಂಡಿತ್ತು. ‘ವಿಧಾನಸಭಾ ಚುನಾವಣೆಯಲ್ಲಿ ನಮಗೆ ಮುಖ್ಯವಾಗಿರುವುದು ಸ್ಥಳೀಯ ವಿಷಯಗಳೇ ಹೊರತು ರಾಷ್ಟ್ರೀಯ ವಿದ್ಯಮಾನಗಳಲ್ಲ’ ಎನ್ನುವುದು ಮತದಾರರು ಬರೆದ ತೀರ್ಪಿನ ಒಟ್ಟು ಸಾರ.

ಕೇಂದ್ರ ಸಚಿವ ಪ್ರಕಾಶ್‌ ಜಾವಡೇಕರ್, ಕೇಜ್ರಿವಾಲ್‌ ಅವರನ್ನು ‘ಉಗ್ರ’ ಎಂದು ವೈಯಕ್ತಿಕವಾಗಿ ನಿಂದಿಸಿದ್ದು ಕೂಡ ಬಿಜೆಪಿಗೆ ಬಲು ದುಬಾರಿಯಾಗಿ ಪರಿಣಮಿಸಿತು. ‘ಜನರಿಗೆ ಬೇಕಾಗಿದ್ದ ಸೌಲಭ್ಯಗಳನ್ನು ನೀಡಿದ್ದಕ್ಕೆ ಬಹುಮಾನದ ರೂಪವಾಗಿ ಈ ಗೆಲುವು ಸಿಕ್ಕಿದೆ. ಇದೊಂದು ಹೊಸ ವಿಧದ ರಾಜಕೀಯದ ಆರಂಭ’ ಎಂದು ತಮ್ಮ ಪಕ್ಷದ ಸಾಧನೆಯನ್ನು ಸಂಭ್ರಮಿಸಿದರು ಕೇಜ್ರಿವಾಲ್‌.

ಗೆದ್ದ ಪ್ರಮುಖರು

* ಅರವಿಂದ ಕೇಜ್ರಿವಾಲ್‌

* ಮನೀಶ್‌ ಸಿಸೋಡಿಯಾ

* ರಾಘವ್‌ ಛಡ್ಡಾ

* ಗೋಪಾಲ್‌ ರಾಯ್‌

* ಸತ್ಯೇಂದರ್‌ ಜೈನ್‌

* ಆತಿಶಿ ಮರ್ಲೆನಾ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು