ಮಂಗಳವಾರ, ಫೆಬ್ರವರಿ 25, 2020
19 °C

ದೆಹಲಿ ಚುನಾವಣೆ 2020: ಬಿಎಸ್‌ಪಿ ಕಳಪೆ ಸಾಧನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಬಿಎಸ್‌ಪಿಯ ಮತಗಳಿಕೆ ಪ್ರಮಾಣ ಶೇ 1ಕ್ಕಿಂತ ಕಡಿಮೆಯಾಗಿದೆ. ಒಟ್ಟು 68 ಅಭ್ಯರ್ಥಿಗಳನ್ನು ಬಿಎಸ್‌ಪಿ ಈ ಬಾರಿ ಕಣಕ್ಕಿಳಿಸಿತ್ತು.

ಈ ಬಾರಿಯ ಬಿಎಸ್‌ಪಿ ಮತಗಳಿಕೆ ಪ್ರಮಾಣ ಕೇವಲ ಶೇ 0.58 ಮಾತ್ರ. ಇದು ದೆಹಲಿಯಲ್ಲಿ ಬಿಎಸ್‌ಪಿಯ ಈವರೆಗಿನ ಅತ್ಯಂತ ಕಳಪೆ ಸಾಧನೆ ಎನಿಸಿದೆ. ರಾಷ್ಟ್ರ ರಾಜಧಾನಿಯ ಚದುರಂಗದಾಟದಲ್ಲಿ ಬಿಎಸ್‌ಪಿ ಅಪ್ರಸ್ತುತವಾಗುತ್ತಿದೆಯೇ ಎಂಬ ಪ್ರಶ್ನೆಯನ್ನೂ ಇದು ಹುಟ್ಟುಹಾಕಿದೆ. ಈವರೆಗಿನ ಮತ ಎಣಿಕೆ ಅಂಕಿಅಂಶಗಳ ಪ್ರಕಾರ ಬಿಜೆಪಿಯ ‘ಶಾಹೀನ್ ಬಾಗ್’ ಹೂಂಕಾರಕ್ಕೆ ಆಪ್ ‘ನೀರು–ವಿದ್ಯುತ್’ ಮೂಲಕ ಸಡ್ಡು ಹೊಡೆಯಿತು.

‘ಬಿಜೆಪಿಗೆ ಬಡಿಗೆಯೇಟು’ ಎನ್ನುವ ಕಾಂಗ್ರೆಸ್‌ ಕಥನಕ್ಕೆ ಮನ್ನಣೆ ದಕ್ಕಲಿಲ್ಲ. ಇಂತಲ್ಲಿ ಬಿಎಸ್‌ಪಿ ಯಾವುದೇ ಪರ್ಯಾಯ ಕಥನ ಕಟ್ಟಲು ಪ್ರಯತ್ನವನ್ನೇ ಮಾಡಲಿಲ್ಲ. ಬಿಎಸ್‌ಪಿ 1993ರಲ್ಲಿ ಮೊದಲ ಬಾರಿಗೆ ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿತ್ತು. 55 ಕ್ಷೇತ್ರಗಳನ್ನು ಅಭ್ಯರ್ಥಿಗಳನ್ನು ನಿಲ್ಲಿಸಿ, ಶೇ 1.88ರಷ್ಟು ಮತಗಳಿಸಿತ್ತು. 1998ರ ಚುನಾವಣೆಯಲ್ಲಿ 40 ಅಭ್ಯರ್ಥಿಗಳನ್ನು ನಿಲ್ಲಿಸಿ ಶೇ 5.76 ಮತಗಳಿಸಿತ್ತು.

2003ರ ಚುನಾವಣೆಯಲ್ಲಿ ಬಿಎಸ್‌ಪಿ ಮತಗಳಿಕೆ ಪ್ರಮಾಣ ಶೇ 8.96ಕ್ಕೇರಿತು. 2007ರ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಬಹುಮತಗಳಿಸಿದ ಬೆನ್ನಿಗೆ ನಡೆದ 2008ರ ದೆಹಲಿ ಚುನಾವಣೆಯಲ್ಲಿ ಬಿಎಸ್‌ಪಿ ಮತಗಳಿಕೆ ಪ್ರಮಾಣ ಶೇ 14.05ಕ್ಕೆ ಮುಟ್ಟಿತ್ತು. 2013ರಲ್ಲಿ 69 ಅಭ್ಯರ್ಥಿಗಳನ್ನು ನಿಲ್ಲಿಸಿದ್ದ ಬಿಎಸ್‌ಪಿ ಗಳಿಸಿದ್ದು ಕೇವಲ ಶೇ 5.35ರಷ್ಟು ಮತಗಳನ್ನು ಮಾತ್ರ. 2015ಕ್ಕೆ ಇದು ಶೇ 1.30ಗೆ ಕುಸಿಯಿತು. 12 ಮೀಸಲು ಕ್ಷೇತ್ರಗಳಿರುವ ದೆಹಲಿಯಲ್ಲಿ 20 ಲಕ್ಷ ದಲಿತ ಮತದಾರರಿದ್ದಾರೆ ಎಂದು ಅಂದಾಜಿಸಲಾಗಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು