ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇತಿಹಾಸದ ಪುಟ ಸೇರಲಿದೆ ‘ಮೈಸೂರು’ ಭವನ!

₹ 82 ಕೋಟಿ ವೆಚ್ಚದಲ್ಲಿ ತಲೆ ಎತ್ತಲಿದೆ ನೂತನ ಕಟ್ಟಡ, ಮುಖ್ಯಮಂತ್ರಿ ಕುಮಾರಸ್ವಾಮಿಯಿಂದ ಶಂಕುಸ್ಥಾಪನೆ ಇಂದು
Last Updated 7 ಮಾರ್ಚ್ 2019, 20:30 IST
ಅಕ್ಷರ ಗಾತ್ರ

ನವದೆಹಲಿ: ರಾಜ್ಯದ ಮುಖ್ಯಮಂತ್ರಿಯಾಗಿದ್ದ ಎಸ್‌.ನಿಜಲಿಂಗಪ್ಪ ಅಧ್ಯಕ್ಷತೆಯಲ್ಲಿ ಅಂದಿನ ಕೇಂದ್ರ ಗೃಹ ಸಚಿವ ಲಾಲ್ ಬಹದ್ದೂರ್ ಶಾಸ್ತ್ರಿ ಅಡಿಗಲ್ಲು ಇರಿಸಿದ್ದ, ನಂತರ ಪ್ರಧಾನಿ ಇಂದಿರಾ ಗಾಂಧಿ ಅವರು ಉದ್ಘಾಟಿಸಿದ್ದ ಇಲ್ಲಿನ ಕರ್ನಾಟಕ (ಮೈಸೂರು) ಭವನದ ಹಳೆಯ ಕಟ್ಟಡ ಕೆಲವೇ ದಿನಗಳಲ್ಲಿ ಇತಿಹಾಸದ ಪುಟ ಸೇರಲಿದೆ.

ಕೌಟಿಲ್ಯ ಮಾರ್ಗದಲ್ಲಿರುವ, 51 ವರ್ಷ ಹಳೆಯದಾದ ಮೂರಂತಸ್ತಿನ ಈ ಬೃಹತ್‌ ಕಟ್ಟಡವನ್ನು ಕೆಡವಿ ಅದೇ ಜಾಗದಲ್ಲಿ ಅಂದಾಜು ₹ 82 ಕೋಟಿ ವೆಚ್ಚದಲ್ಲಿ ಐದು ಅಂತಸ್ತಿನ ನೂತನ ಕಟ್ಟಡ ಕಟ್ಟುವುದಕ್ಕೆ ಕರ್ನಾಟಕ ಸರ್ಕಾರ ಯೋಜನೆ ರೂಪಿಸಿದೆ.

ಇದೇ 8ರಂದು ಶುಕ್ರವಾರ ನಡೆಯಲಿರುವ ಸಮಾರಂಭದಲ್ಲಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಹೊಸ ಕಟ್ಟಡದ ಶಂಕುಸ್ಥಾಪನೆ ನೆರವೇರಿಸಲಿದ್ದು, ಲೋಕೋಪಯೋಗಿ ಸಚಿವ ಎಚ್‌.ಡಿ. ರೇವಣ್ಣ ಮತ್ತಿತರ ಗಣ್ಯರು ಹಾಜರಿರಲಿದ್ದಾರೆ.

ಇತಿಹಾಸಕ್ಕೆ ಸಾಕ್ಷಿ:

1963ರ ಆಗಸ್ಟ್‌ 10ರಂದು ಮೈಸೂರು ರಾಜ್ಯದ ಮುಖ್ಯಮಂತ್ರಿ ಎಸ್‌.ನಿಜಲಿಂಗಪ್ಪ ಅಧ್ಯಕ್ಷತೆಯಲ್ಲಿ ಶಾಸ್ತ್ರಿ ಅವರು ‘ಮೈಸೂರು ಭವನ’ ಎಂಬ ಹೆಸರಿನ ಈ ಕಟ್ಟಡ ನಿರ್ಮಾಣಕ್ಕೆ ಅಡಿಗಲ್ಲು ಇರಿಸಿದ್ದರು. 1967ರ ಡಿಸೆಂಬರ್‌ 20ರಂದು ಪ್ರಧಾನಿ ಇಂದಿರಾ ಕಟ್ಟಡ ಉದ್ಘಾಟಿಸಿದ್ದರು. ರಾಜ್ಯವು ‘ಕರ್ನಾಟಕ’ ಎಂದು ಮರು ನಾಮಕರಣ ಹೊಂದಿದ್ದರೂ, ‘ಮೈಸೂರು’ ರಾಜ್ಯದ ಅವಧಿಯಲ್ಲಿ ನಿರ್ಮಿಸಲಾದ ಈ ಕಟ್ಟಡ ರಾಜ್ಯದ ಇತಿಹಾಸಕ್ಕೆ ಸಾಕ್ಷಿ ಎಂಬಂತಿದೆ.

ಎನ್‌.ಧರ್ಮಸಿಂಗ್‌ ಆಡಳಿತಾವಧಿಯಲ್ಲಿ ‘ಕಾವೇರಿ’ ಎಂದು ಮರು ನಾಮಕರಣಗೊಂಡಿರುವ ಈ ಕಟ್ಟಡದಲ್ಲಿ ನಿವಾಸಿ ಆಯುಕ್ತರು, ಉಪ ನಿವಾಸಿ ಆಯುಕ್ತರು, ಸರ್ಕಾರದ ದೆಹಲಿ ಪ್ರತಿನಿಧಿ, ಸಂಸದರ ಕೋಶ, ಶಿಷ್ಟಾಚಾರ ಪಾಲನೆ ಸಿಬ್ಬಂದಿ, ಆಡಳಿತದ ಕೆಲವು ಕಚೇರಿಗಳು ಇವೆ. ಅತಿಥಿಗಳಿಗೆ ಜಿಮ್‌, ನೂರಾರು ಜನ ಕುಳಿತುಕೊಳ್ಳಬಹುದಾದ ಸುಸಜ್ಜಿತ ಸಭಾಂಗಣ, ಅತಿಥಿಗಳ ಪ್ರಾಥಮಿಕ ಚಿಕಿತ್ಸೆಗಾಗಿ ಕ್ಲಿನಿಕ್‌ನ ಕೊಠಡಿಗಳೂ ಇವೆ.

ಈ ಕಟ್ಟಡ ‘ಚಿಕ್ಕದು’ ಎಂಬ ಕಾರಣದಿಂದ ಇದರ ಹಿಂಭಾಗದಲ್ಲೇ 2010ರಲ್ಲಿ ಹೊಸ ಕಟ್ಟಡ ಕಟ್ಟಲಾಗಿದೆ. ಮುಖ್ಯಮಂತ್ರಿ, ರಾಜ್ಯಪಾಲರು, ಮಂತ್ರಿಗಳು, ಶಾಸಕರು, ಮಾಜಿ ಮಂತ್ರಿಗಳು, ಹಾಲಿ, ನಿವೃತ್ತ ಐಎಎಸ್‌, ಐಪಿಎಸ್‌ ಅಧಿಕಾರಿಗಳು ಹಾಗೂ ರಾಜ್ಯದ ಹಾಲಿ, ನಿವೃತ್ತ ನ್ಯಾಯಾಧೀಶರು ಸೇರಿದಂತೆ ಅತಿ ಗಣ್ಯರ ವಾಸ್ತವ್ಯಕ್ಕೆ ಸುಸಜ್ಜಿತ ಕೊಠಡಿಗಳ ಸೌಲಭ್ಯ ಇದೆ. ಅತಿಥಿಗಳು, ಕರ್ನಾಟಕ ಭವನದ ಸರ್ಕಾರಿ ಸಿಬ್ಬಂದಿ ಮತ್ತು ಪತ್ರಕರ್ತರಿಗೆ ಅತ್ಯಂತ ಕಡಿಮೆ ದರದಲ್ಲಿ ಊಟ, ತಿಂಡಿ ಪೂರೈಸುವ ಸುಸಜ್ಜಿತವಾದ ಎರಡು ಕ್ಯಾಂಟೀನ್‌ಗಳೂ ಈ ಹೊಸ ಕಟ್ಟಡದಲ್ಲೇ ಇವೆ.

ಆದರೆ, ಇತ್ತೀಚಿನ ವರ್ಷಗಳಲ್ಲಿ ರಾಷ್ಟ್ರ ರಾಜಧಾನಿಗೆ ಬರುತ್ತಿರುವ ಕರ್ನಾಟಕದ ಅತಿ ಗಣ್ಯರ ಸಂಖ್ಯೆ ಹೆಚ್ಚುತ್ತಿದ್ದು, ಹೊಸ ಮತ್ತು ಹಳೆಯ ಕಟ್ಟಡಗಳಲ್ಲಿ ಸ್ಥಳಾವಕಾಶ ಇಲ್ಲ ಎಂಬ ಕಾರಣ ಮುಂದಿರಿಸಿ ಹೊಸ ಕಟ್ಟಡ ನಿರ್ಮಿಸಿ ಕೊಠಡಿಗಳ ಸಂಖ್ಯೆ ಹೆಚ್ಚಿಸುವ ಯೋಜನೆ ರೂಪಿಸಲಾಗಿದೆ.

ಇತ್ತೀಚೆಗಷ್ಟೇ ನವೀಕರಣ

ಮೂರು ವರ್ಷಗಳ ಹಿಂದಷ್ಟೇ ಹಳೆಯ ಕಟ್ಟಡದಲ್ಲಿನ ಕಚೇರಿಗಳ ಒಳಾಂಗಣ ನವೀಕರಣ ಕಾರ್ಯ ನಡೆದಿದ್ದು, ಇದಕ್ಕಾಗಿಯೇ ಅಂದಾಜು ₹ 10 ಕೋಟಿ ವ್ಯಯಿಸಲಾಗಿದೆ.

‘ಹೊರಾಂಗಣದ ಅಂದಕ್ಕೆ ಅಳವಡಿಸಲಾದ ಕೆಲವು ಸಜ್ಜಾಗಳ ತುಣುಕುಗಳು ಉದುರುತ್ತಿವೆ, ಕೆಲವು ಕಾಲಂಗಳು ಬಿರುಕು ಬಿಟ್ಟಿವೆ, ಮೇಲ್ಮಹಡಿಯ ಛಾವಣಿಯ ಸ್ವಲ್ಪ ಭಾಗ ಬಿರುಕು ಬಿಟ್ಟಿದೆ ಎಂಬುದನ್ನು ಹೊರತುಪಡಿಸಿ ಹಳೆಯ ಕಟ್ಟಡ ಈಗಲೂ ಗಟ್ಟಿಮುಟ್ಟಾಗಿಯೇ ಇದೆ. ಇದನ್ನು ಕೆಡವಿ, ರಾಜ್ಯದ ತೆರಿಗೆದಾರರ ಹಣದಲ್ಲಿ ಹೊಸ ಕಟ್ಟಡ ನಿರ್ಮಿಸುವ ಅಗತ್ಯವಾದರೂ ಏನಿದೆ’ ಎಂಬುದು ಇಲ್ಲಿಗೆ ಭೇಟಿ ನೀಡುವ ಕನ್ನಡಿಗರ ಪ್ರಶ್ನೆಯಾಗಿದೆ.

‘ಹೊಸ ಕಟ್ಟಡ ನಿರ್ಮಿಸಬೇಕು ಎಂಬ ಪ್ರಸ್ತಾವ ಅನೇಕ ವರ್ಷಗಳಿಂದ ಇದ್ದರೂ ಮೂರು ವರ್ಷಗಳ ಹಿಂದೆ ಕೋಟ್ಯಂತರ ಹಣ ವ್ಯಯಿಸಿ ನವೀಕರಣ ಕಾರ್ಯ ಕೈಗೆತ್ತಿಕೊಂಡಿರುವುದು ವ್ಯರ್ಥವಲ್ಲವೇ’ ಎಂದೂ ಅವರು ಕೇಳುತ್ತಾರೆ.

ಹಳೆಯ ಕಟ್ಟಡವು ವಾಸಯೋಗ್ಯವಲ್ಲ ಎಂದು ತಾಂತ್ರಿಕ ತಂಡ ವರದಿ ಸಲ್ಲಿಸಿದೆ. ಇದನ್ನು ಕೆಡವಿ, ಅವಶೇಷಗಳನ್ನು ಬೇರೆಡೆ ಸಾಗಿಸುವುದಕ್ಕೇ ಕನಿಷ್ಠ ಆರು ತಿಂಗಳ ಬೇಕಾಗುತ್ತದೆ. ಇದಕ್ಕಾಗಿ ಟೆಂಡರ್‌ ಪ್ರಕ್ರಿಯೆ ಪೂರ್ಣಗೊಂಡಿದೆ. ಹೊಸ ಕಟ್ಟಡದ ನಿರ್ಮಾಣ ಕಾರ್ಯ ನಂತರವಷ್ಟೇ ಆರಂಭವಾಗಿ, ಪೂರ್ಣಗೊಳ್ಳಲು ಮೂರು ವರ್ಷವಾದರೂ ಬೇಕು. ಅಲ್ಲಿಯವರೆಗೆ ಇಲ್ಲಿನ ಕಚೇರಿಗಳನ್ನು ಸರ್ದಾರ್‌ ಪಟೇಲ್‌ ಮಾರ್ಗದಲ್ಲಿರುವ ಹಾಗೂ ಸಿರಿ ಪೋರ್ಟ್‌ ಬಳಿ ಇರುವ ಇನ್ನೆರಡು ಭವನಗಳಿಗೆ ಸ್ಥಳಾಂತರಿಸಲಾಗುತ್ತದೆ ಎಂದು ಕರ್ನಾಟಕ ಭವನದ ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ.

ಕನ್ನಡದ ಸೊಗಡಿಲ್ಲದ ಭವನಗಳು!

ವಾಸ್ತು ವೈಭವಕ್ಕೆ ಕರ್ನಾಟಕ ಹೆಸರುವಾಸಿ. ಆದರೆ, ರಾಜ್ಯ ಇಲ್ಲಿ ಹೊಂದಿರುವ ಮೂರು ಭವನಗಳ ನಾಲ್ಕು ಕಟ್ಟಡಗಳಲ್ಲಿ ಅದರ ಕುರುಹು ಇಲ್ಲವೇ ಇಲ್ಲ ಎಂಬುದು ಇಲ್ಲಿ ವಾಸಿಸಿರುವ ಕನ್ನಡಿಗರ ದೂರು.

ಬೇರೆ ರಾಜ್ಯಗಳ ಭವನಗಳ ಕಟ್ಟಡಗಳಲ್ಲಿ ಆ ರಾಜ್ಯದ ಸೊಗಡಿದೆ, ಸ್ವಂತಿಕೆ ಇದೆ. ಅಲ್ಲಿಗೆ ಹೋದರೆ ಆ ರಾಜ್ಯಗಳಿಗೇ ಹೋದಂತೆ ಭಾಸವಾಗುತ್ತದೆ. ಹೊಸದಾಗಿ ನಿರ್ಮಿಸಲಾಗುತ್ತಿರುವ ಕಟ್ಟಡದ ವಾಸ್ತು ವೈಭವವಾದರೂ ಕನ್ನಡದ ಸೊಗಡನ್ನು ಒಳಗೊಂಡಿರಲಿ ಎಂಬುದು ಅವರ ಮನವಿಯಾಗಿದೆ.

ರಾಜ್ಯದಿಂದ ಉತ್ತರ ಭಾರತ ಪ್ರವಾಸಕ್ಕೆ ಬರುವ ತಮ್ಮ ರಾಜ್ಯಗಳ ಜನತೆಗೆ ಆಯಾ ರಾಜ್ಯ ಸರ್ಕಾರಗಳು ಪ್ರವಾಸೋದ್ಯಮ ಇಲಾಖೆಯ ಮೂಲಕ ಅನುಕೂಲ ಕಲ್ಪಿಸುತ್ತಿವೆ. ಆದರೆ, ಕರ್ನಾಟಕದ ಭವನಗಳಲ್ಲಿ ಪ್ರವಾಸೋದ್ಯಮ ಇಲಾಖೆಯ ಕಚೇರಿ ಇಲ್ಲ. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಕಚೇರಿಗೂ ಜಾಗೆ ನೀಡಲಾಗಿಲ್ಲ. ಜನರೊಂದಿಗೆ ಸಂಪರ್ಕ ಹೊಂದಿರುವ ಕಚೇರಿಗಳಿಗೆ ಭವನಗಳಲ್ಲಿ ಕಚೇರಿ ಒದಗಿಸಿ, ದೆಹಲಿಗೆ ಬರುವ ಕನ್ನಡಿಗರಿಗೆ ನೆರವಾಗುವಂತೆ ರಾಜ್ಯ ಸರ್ಕಾರ ನೋಡಿಕೊಳ್ಳಬೇಕು ಎಂಬುದು ಅನೇಕರ ಆಗ್ರಹವಾಗಿದೆ.

ವಿವಿಧ ರಾಜ್ಯಗಳ ಭವನಗಳಲ್ಲಿ ಆ ರಾಜ್ಯಗಳನ್ನೇ ನೆನಪಿಸುವ ಊಟ, ತಿಂಡಿ ದೊರೆಯುತ್ತದೆ. ಕರ್ನಾಟಕ ಭವನದಲ್ಲಿ ಸಾರ್ವಜನಿಕರಿಗೆ ಊಟ, ತಿಂಡಿ ನೀಡುವುದೇ ಇಲ್ಲ. ತಿಂಡಿಗೆ ಇಡ್ಲಿ, ದೋಸೆ, ಉಪ್ಪಿಟ್ಟು ಸಿಗುತ್ತದೆ ಎಂಬುದು ಸೌಭಾಗ್ಯದ ಸಂಗತಿ. ಮಧ್ಯಾಹ್ನ ಮತ್ತು ರಾತ್ರಿ ದೊರೆಯುವ ಊಟ ಉತ್ತರ ಭಾರತ ಶೈಲಿಯದ್ದೇ ಆಗಿರುತ್ತದೆ. ಜೋಳದ ರೊಟ್ಟಿ, ಚಪಾತಿ, ಮುದ್ದೆ, ಬಸ್ಸಾರು ಸಿಗುವುದೇ ಇಲ್ಲ ಎಂದು ಇಲ್ಲಿಗೆ ಬರುವ ಅನೇಕ ರಾಜಕಾರಣಿಗಳು ದೂರುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT