ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನ್ಹಯ್ಯ ಸೇರಿ ವಿದ್ಯಾರ್ಥಿ ಮುಖಂಡರ ವಿರುದ್ಧ 1,200 ಪುಟಗಳ ಆರೋಪ ಪಟ್ಟಿ ಸಲ್ಲಿಕೆ

Last Updated 14 ಜನವರಿ 2019, 18:41 IST
ಅಕ್ಷರ ಗಾತ್ರ

ನವದೆಹಲಿ:ಜವಹರಲಾಲ್‌ ನೆಹರು ವಿಶ್ವವಿದ್ಯಾಲಯದ ವಿದ್ಯಾರ್ಥಿ ಸಂಘದ (ಜೆಎನ್‌ಯುಎಸ್‌ಯು) ಮಾಜಿ ಅಧ್ಯಕ್ಷ ಕನ್ಹಯ್ಯಕುಮಾರ್‌ ಹಾಗೂ ಸಯ್ಯದ್‌ ಖಾಲಿದ್‌ ಹಾಗೂ ಅನಿರ್ಬಾನ್‌ ಭಟ್ಟಾಚಾರ್ಯ ವಿರುದ್ಧ ದೆಹಲಿ ಪೊಲೀಸರು ಸೋಮವಾರ ಜಿಲ್ಲಾ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದರು.

2016ರಲ್ಲಿ ಜೆಎನ್‌ಯು ಕ್ಯಾಂಪಸ್‌ನಲ್ಲಿ ದೇಶವಿರೋಧಿ ಘೋಷಣೆ ಕೂಗಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕನ್ಹಯ್ಯಕುಮಾರ್‌ ಮತ್ತು ಇತರರ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಿಸಿದ್ದರು.

ಸಂಸತ್‌ ಭವನದ ಮೇಲಿನ ದಾಳಿಯ ಸೂತ್ರಧಾರ ಅಫ್ಜಲ್‌ ಗುರು ಸ್ಮರಣಾರ್ಥ ಜೆಎನ್‌ಯು ಕ್ಯಾಂಪಸ್‌ನಲ್ಲಿ 2016ರ ಫೆಬ್ರುವರಿ 9ರಂದು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಕೆಲವು ವಿದ್ಯಾರ್ಥಿಗಳು ದೇಶವಿರೋಧಿ ಘೋಷಣೆ ಕೂಗಿದ್ದರು ಎಂದು ಪೊಲೀಸರು ಆರೋಪಿಸಿದ್ದರು. ವಿದ್ಯಾರ್ಥಿಗಳಾಗಿದ್ದ ಉಮರ್‌ ಖಾಲಿದ್‌ ಮತ್ತು ಅನಿರ್ಬನ್‌ ಭಟ್ಟಾಚಾರ್ಯ, ಅಕ್ಬಿಬ್‌ ಹುಸೇನ್‌, ಮುಜೀಬ್‌ ಹುಸೇನ್‌, ಮುನೀಬ್‌ ಹುಸೇನ್‌, ಉಮರ್‌ ಗುಲ್‌, ರಾಯಿಯಾ ರಸೂಲ್‌, ಬಶೀರ್‌ ಭಟ್‌ ಮತ್ತು ಬಶರತ್‌ ಎಂಬುವರ ವಿರುದ್ಧ ಪ್ರಕರಣ ದಾಖಲಿಸಲಾಗಿದ್ದು. ಆಗ ಜೆಎನ್‌ಯುಎಸ್‌ಯು ಅಧ್ಯಕ್ಷರಾಗಿದ್ದ ಕನ್ಹಯ್ಯಕುಮಾರ್‌ ಕುಮಾರ್‌ ಕೂಡ ಈ ಕಾರ್ಯಕ್ರಮದ ಭಾಗವಾಗಿದ್ದರು ಎಂದು ಪೊಲೀಸರು ಆರೋಪಿಸಿದ್ದಾರೆ.

ಈ ಆರೋಪಪಟ್ಟಿಯನ್ನು ಮಂಗಳವಾರ ಪರಿಶೀಲಿಸಲಾಗುವುದು ಎಂದು ಜಿಲ್ಲಾ ನ್ಯಾಯಾಧೀಶರಾದ ಸುಮಿತ್‌ ಆನಂದ್‌ ಹೇಳಿದರು.

ದೇಶದ್ರೋಹ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂರು ವರ್ಷಗಳ ಬಳಿಕ ಕನ್ಹಯ್ಯ ಕುಮಾರ್‌, ಸಯ್ಯದ್‌ ಖಾಲಿದ್‌ ಹಾಗೂ ಅನಿರ್ಬಾನ್‌ ಭಟ್ಟಾಚಾರ್ಯ ವಿರುದ್ಧ ಆರೋಪ ಪಟ್ಟಿ ಸಲ್ಲಿಸಿದ್ದಾರೆ.

ಸೋಮವಾರ ಪೊಲೀಸರು ಪಟಿಯಾಲಾ ಹೌಸ್‌ ಕೋರ್ಟ್‌ಗೆ ಸುಮಾರು 1,200 ಪುಟಗಳ ಆರೋಪ ಪಟ್ಟಿ ಸಲ್ಲಿಸಿದ್ದಾರೆ. ವಿಡಿಯೊ ಸಾಕ್ಷ್ಯಗಳು ಹಾಗೂ ಪ್ರತ್ಯಕ್ಷದರ್ಶಿಗಳ ಹೇಳಿಕೆಗಳ ಜತೆಗೆ ಆರೋಪ ಪಟ್ಟಿಯನ್ನು ಮುಚ್ಚಿದ ಪೆಟ್ಟಿಗೆಯೊಂದರಲ್ಲಿ ಸಲ್ಲಿಸಲಾಗಿದೆ.

ಕನ್ಹಯ್ಯ ಕುಮಾರ್‌, ಸಯ್ಯದ್‌ ಖಾಲಿದ್‌ ಹಾಗೂ ಅನಿರ್ಬಾನ್‌ ಭಟ್ಟಾಚಾರ್ಯ ಮೂವರ ವಿರುದ್ಧವೂ ಐಪಿಎಸ್‌ ಸೆಕ್ಷನ್‌ 124 ಎ(ದೇಶದ್ರೋಹ), 323(ಸ್ವಯಂ ಪ್ರೇರಿತರಾಗಿ ನೋವುಂಟು ಮಾಡುವುದು), 465(ಸುಳ್ಳು ಸೃಷ್ಟಿ), 471(ನಕಲಿ ದಾಖಲೆಗಳ ಬಳಕೆ), 143(ಕಾನೂನಿಗೆ ವಿರುದ್ಧ ಸಭೆ ಸೇರುವುದು), 149(ಒಂದೇ ಉದ್ದೇಶದೊಂದಿಗೆ ಕಾನೂನಿಗೆ ವಿರುದ್ಧ ಸಭೆ), 147(ಗಲಭೆ) ಹಾಗೂ 120ಬಿ(ಅಪರಾಧ ಸಂಚು) ಅಡಿಯಲ್ಲಿ ಆರೋಪ ಪಟ್ಟಿ ಸಲ್ಲಿಕೆಯಾಗಿರುವುದಾಗಿ ಪೊಲೀಸ್‌ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ವಿದ್ಯಾರ್ಥಿ ಮುಖಂಡರಾದ ಅ‍ಪರಜಿತಾ ರಾಜಾ, ಶೆಹ್ಲಾ ರಶೀದ್‌ ಹಾಗೂಜಮ್ಮು ಮತ್ತು ಕಾಶ್ಮೀರದ ಏಳು ವಿದ್ಯಾರ್ಥಿಗಳ ಹೆಸರಗಳು ಆರೋಪ ಪಟ್ಟಿಯಲ್ಲಿ ಒಳಗೊಂಡಿದೆ.

’ಮುಖಕ್ಕೆ ಮುಸುಕು ಹಾಕಿಕೊಂಡಿದ್ದ ಕಾಶ್ಮೀರ ಮೂಲದ ವಿದ್ಯಾರ್ಥಿಗಳು ಸಭೆಯಿಂದ ಹೊರಹೋಗುವಾಗ ಮುಸುಕು ತೆರೆದಿದ್ದಾರೆ. ಕಾನೂನಿಗೆ ವಿರುದ್ಧವಾಗಿ ಸೇರಲಾದ ಸಭೆಯಲ್ಲಿ ಭಾರತ ವಿರೋಧಿ ಘೋಷಣೆಗಳನ್ನು ಕೂಗಿರುವುದು ವಿಡಿಯೊ ಕ್ಲಿಪ್‌ಗಳ ದೃಶ್ಯಗಳಲ್ಲಿ ಸೆರೆಯಾಗಿದೆ. ಈ ಚಟುವಟಿಕೆಯಲ್ಲಿ ಅವರು ಭಾಗಿಯಾಗಿರುವುದು ಸ್ಪಷ್ಟವಾಗಿದೆ’ ಎಂದು ಪೊಲೀಸ್‌ ಅಧಿಕಾರಿ ವಿವರಿಸಿದ್ದಾರೆ.

ಜೆಎನ್‌ಯು ವಿದ್ಯಾರ್ಥಿ ಸಂಘಟನೆಯ ಆಗಿನ ಅಧ್ಯಕ್ಷ ಕನ್ಹಯ್ಯ ಕುಮಾರ್‌ ನೇತೃತ್ವದಲ್ಲಿ2016ರ ಫೆಬ್ರುವರಿ 9ರಂದು ಪ್ರತಿಭಟನೆ ನಡೆದಿತ್ತು ಹಾಗೂ ಅದರಲ್ಲಿ ಭಾರತ ವಿರೋಧಿ ಘೋಷಣೆಗಳನ್ನು ಕೂಗಿರುವ ಬಗ್ಗೆ ತನಿಖೆಯಿಂದ ತಿಳಿದುಬಂದಿರುವುದಾಗಿ ಆರೋಪ ಪಟ್ಟಿಯಲ್ಲಿ ಹೇಳಲಾಗಿದೆ.

’ಹಮ್‌ ಕ್ಯಾ ಚಾಹತೇ ಆಜಾದಿ(ಬೇಕೇ ಬೇಕು ಸ್ವಾತಂತ್ರ)’, ’ಹಮ್‌ ಲೇಕೇ ರಹೇಂಗೆ ಆಜಾದಿ(ನಾವು ಪಡೆದೇ ತೀರುತ್ತೇವೆ ಸ್ವಾತಂತ್ರ)’, ’ಗೋ ಇಂಡಿಯಾ, ಗೋ ಬ್ಯಾಕ್‌’, ’ಭಾರತ್‌ ತೇರೆ ತುಕಡೇ ಹೋಂಗೆ, ಇನ್‌ಶಾಲ್ಲಾಹ್‌(ದೇವರ ಸಾಕ್ಷಿಯಾಗಿ ಭಾರತ ಛಿದ್ರವಾಗಲಿದೆ)’, ’ಕಾಶ್ಮೀರ್‌ ಕಿ ಆಜಾದಿ ತಕ್‌ ಜಂಗ್‌ ರಹೇಗಿ(ಕಾಶ್ಮೀರ ಸ್ವತಂತ್ರವಾಗುವವರೆಗೂ ನಮ್ಮ ಹೋರಾಟ ನಿಲ್ಲದು)’,..ಹೀಗೆ ಹಲವು ಘೋಷಣೆಗಳನ್ನು ಅಂದಿನ ಕಾರ್ಯಕ್ರಮದಲ್ಲಿ ಕೂಗಲಾಗಿತ್ತು ಎಂದು ಆರೋಪಿಸಲಾಗಿದೆ.

ಸಂಸತ್‌ ಭವನದ ಮೇಲೆ ದಾಳಿ ಸಂಚಿನಲ್ಲಿ ಅಫ್ಜಲ್‌ ಗುರುವಿಗೆ ಗಲ್ಲುಶಿಕ್ಷೆ ವಿರೋಧಿಸಿ ಜೆಎನ್‌ಯು ಆವರಣದಲ್ಲಿ 2016ರಲ್ಲಿ ನಡೆಸಲಾದ ಸಭೆಯಲ್ಲಿ ಆಕ್ಷೇಪಾರ್ಹ ಹಾಗೂ ಭಾರತ ವಿರೋಧಿ ಘೋಷಣೆಗಳನ್ನು ಕೂಗಲಾಗಿತ್ತು ಎಂದು ಆರೋಪಿಸಿ ದೇಶದ್ರೋಹ ಪ್ರಕರಣ ದಾಖಲಾಗಿತ್ತು.

‘ರಾಜಕೀಯ ಪ್ರೇರಿತ’

‘ನನ್ನ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಸಿರುವುದು ರಾಜಕೀಯ ಪ್ರೇರಿತವಾಗಿದೆ‘ ಎಂದು ಕನ್ಹಯ್ಯಕುಮಾರ್‌ ದೂರಿದ್ದಾರೆ. ಚುನಾವಣಾ ಸಮಯದಲ್ಲಿ ಪ್ರಕರಣಕ್ಕೆ ಮರುಜೀವ ನೀಡಿರುವುದರ ಬಗ್ಗೆ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

’ಆರೋಪ ಪಟ್ಟಿ ಸಲ್ಲಿಸಿರುವುದಕ್ಕೆ ಚಿಂತೆಯಿಲ್ಲ. ಸತ್ಯ ಹೊರಗೆ ಬರಲೇಬೇಕು. ಆದರೆ, ಪೊಲೀಸರು ನಮ್ಮ ವಿರುದ್ಧ ಸಲ್ಲಿಸಲಾಗಿರುವ ವಿಡಿಯೊ ದಾಖಲೆಗಳನ್ನು ನಾನು ನೋಡಬೇಕು‘ ಎಂದು ಅವರು ಹೇಳಿದ್ದಾರೆ.

ಸಿಪಿಐ ನಾಯಕ ಡಿ. ರಾಜಾ ಅವರ ಪುತ್ರಿ ಅಪರಾಜಿತಾ ವಿರುದ್ಧವೂ ಇದೇ ಪ್ರಕರಣಕ್ಕೆ ಸಂಬಂಧಿದಂತೆ ದೋಷಾರೋಪ ಪಟ್ಟಿ ಸಲ್ಲಿಸಲಾಗಿದೆ.

‘ಮೂರು ವರ್ಷಗಳ ನಂತರ ದೆಹಲಿ ಪೊಲೀಸರು ಆರೋಪ ಪಟ್ಟಿ ಸಲ್ಲಿಸಿದ್ದಾರೆ. ನ್ಯಾಯಾಲಯದ ಒಳಗೆ ಕಾನೂನು ಪ್ರಕಾರವಾಗಿ, ನ್ಯಾಯಾಲಯದ ಹೊರಗೆ ರಾಜಕೀಯವಾಗಿ ಇದರ ವಿರುದ್ಧ ಹೋರಾಡುತ್ತೇವೆ‘ ಎಂದು ಡಿ. ರಾಜಾ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT