ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೆಹಲಿ ಗಲಭೆ: ಹಿಂಸೆ ನಿಯಂತ್ರಿಸದ ಪೊಲೀಸ್‌

ಕಾನೂನು ಕ್ರಮ ಕೈಗೊಳ್ಳುವಲ್ಲಿ ವಿಫಲ: ಸುಪ್ರೀಂ, ದೆಹಲಿ ಹೈಕೋರ್ಟ್‌ ಆಕ್ರೋಶ
Last Updated 26 ಫೆಬ್ರುವರಿ 2020, 19:50 IST
ಅಕ್ಷರ ಗಾತ್ರ

ನವದೆಹಲಿ : ಪೌರತ್ವ ತಿದ್ದುಪಡಿ ಕಾಯ್ದೆಯ (ಸಿಎಎ) ಪರ–ವಿರುದ್ಧ ಇರುವವರ ನಡುವಣ ಸಂಘರ್ಷವನ್ನು ನಿಯಂತ್ರಿಸುವಲ್ಲಿ ಪೊಲೀಸರು ವಿಫಲರಾಗಿದ್ದಾರೆ ಎಂದು ಸುಪ್ರೀಂ ಕೋರ್ಟ್‌ ಮತ್ತು ದೆಹಲಿ ಹೈಕೋರ್ಟ್‌ ಬುಧವಾರ ಆಕ್ರೋಶ ವ್ಯಕ್ತಪಡಿಸಿವೆ.

ಗಲಭೆ ನಿಯಂತ್ರಿಸುವಲ್ಲಿ ಪೊಲೀಸರು ವೃತ್ತಿಪರವಾಗಿ ನಡೆದುಕೊಂಡಿಲ್ಲ ಎಂದು ಸುಪ್ರೀಂ ಕೋರ್ಟ್‌ ಅತೃಪ್ತಿ ವ್ಯಕ್ತಪಡಿಸಿತು.ಹಿಂಸೆಗೆ ಕುಮ್ಮಕ್ಕು ನೀಡಿದವರು ಓಡಾಡಿಕೊಂಡು ಇರುವುದಕ್ಕೆ ಅವಕಾಶ ಕೊಟ್ಟ ಕಾನೂನು ಜಾರಿ ಸಂಸ್ಥೆಗಳನ್ನು ನ್ಯಾಯಮೂರ್ತಿ ಎಸ್‌.ಕೆ.ಕೌಲ್‌ ನೇತೃತ್ವದ ಪೀಠವು ತರಾಟೆಗೆ ತೆಗೆದುಕೊಂಡಿತು. ಪೊಲೀಸರು ಕಾನೂನು ಪ್ರಕಾರ ಕ್ರಮಕೈಗೊಳ್ಳಬೇಕೇ ಹೊರತು, ಯಾರದ್ದೋ ಆದೇಶಕ್ಕಾಗಿ ಕಾಯಬಾರದು. ಯಾರೋ ಒಬ್ಬರು ಪ್ರಚೋದನಕಾರಿ ಭಾಷಣ ಮಾಡಿದ್ದಾರೆ ಎಂದಾದರೆ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಹೇಳಿತು.

ಗಲಭೆಗೆ ಕುಮ್ಮಕ್ಕು ನೀಡುವಂತಹ ಹೇಳಿಕೆಗಳನ್ನು ನೀಡುತ್ತಿರುವ ಬಿಜೆಪಿ ಮುಖಂಡರ ವಿರುದ್ಧ ಎಫ್‌ಐಆರ್‌ ದಾಖಲಿಸಲು ವಿಫಲವಾಗಿರುವ ದೆಹಲಿ ಪೊಲೀಸರ ಮೇಲೆ ದೆಹಲಿ ಹೈಕೋರ್ಟ್‌ ಹರಿಹಾಯ್ದಿದೆ.

ದೆಹಲಿಯಲ್ಲಿ 1984 (ಮೂರು ಸಾವಿರಕ್ಕೂ ಹೆಚ್ಚು ಜನರ ಬಲಿ ಪಡೆದ ಸಿಖ್‌ ವಿರೋಧಿ ಗಲಭೆ) ಮರುಕಳಿಸಲು ಅವಕಾಶ ನೀಡುವುದಿಲ್ಲ ಎಂದು ಹೈಕೋರ್ಟ್‌ ಹೇಳಿದೆ. ದ್ವೇಷಪೂರಿತ ಭಾಷಣ ಮಾಡಿರುವ ಕೇಂದ್ರ ಸಚಿವ ಅನುರಾಗ್‌ ಠಾಕೂರ್‌, ಸಂಸದ ಪರ್ವೇಶ್‌ ವರ್ಮಾ ಮತ್ತು ಮಾಜಿ ಶಾಸಕ ಕಪಿಲ್‌ ಮಿಶ್ರಾ ವಿರುದ್ಧ ಎಫ್‌ಐಆರ್ ದಾಖಲಿಸುವ ವಿಚಾರದಲ್ಲಿ ಗುರುವಾರ ನಿರ್ಧಾರ ಕೈಗೊಳ್ಳುವಂತೆ ನ್ಯಾಯಮೂರ್ತಿಗಳಾದ ಎಸ್‌. ಮುರಳೀಧರ್‌ ಮತ್ತು ಎ.ಜೆ. ಭಂಭಾನಿ ಅವರ ಪೀಠವು ಹೇಳಿದೆ.

ಸೂಕ್ತ ಸಮಯದಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗುವುದು ಎಂದು ಸಾಲಿಸಿಟರ್‌ ಜನರಲ್‌ ಹೇಳಿದ್ದು ಪೀಠ
ವನ್ನು ಕೆರಳಿಸಿತು. ‘ಸುತ್ತಲೂ ನಡೆಯುತ್ತಿರುವುದನ್ನು ನೋಡಿ ಸುಮ್ಮನೇಇರುವುದು ಸಾಂವಿಧಾನಿಕ ನ್ಯಾಯಾಲಯಕ್ಕೆ ಸಾಧ್ಯವಿಲ್ಲ. ಪ್ರಕರಣ ದಾಖಲಿಸಲು ಸೂಕ್ತ ಸಮಯ ಎಂದರೆ ಏನು? ನಗರವು ಪೂರ್ಣವಾಗಿ ಹೊತ್ತಿ ಉರಿದ ನಂತರ ಪ್ರಕರಣ ದಾಖಲಿಸುತ್ತೀರಾ? ಪೊಲೀಸರು ಕೆಲಸ ಮಾಡುತ್ತಿದ್ದಾರೆ ಎಂಬುದನ್ನು ನೀವು ತೋರಿಸಬೇಕಿದೆ’ ಎಂದು ಪೀಠವು ಹೇಳಿತು.

ದ್ವೇಷ ಭಾಷಣ ಮಾಡಿರುವ ಇತರರ ವಿರುದ್ಧವೂ ಪ್ರಕರಣ ದಾಖಲಿಸುವಂತೆ ನಿರ್ದೇಶನ ನೀಡಿತು.

ಸೇನೆ ನಿಯೋಜಿಸಿ: ಹಿಂಸಾಚಾರದಿಂದ ತತ್ತರಿಸಿರುವ ಈಶಾನ್ಯ ದೆಹಲಿಯ ಪ್ರದೇಶಗಳಲ್ಲಿ ಭದ್ರತೆಗೆ ಸೇನೆಯನ್ನು ನಿಯೋಜಿಸಬೇಕು ಎಂದು ಎಎಪಿಯ ಮುಖಂಡರಾದ ಸಂಜಯ್‌ ಸಿಂಗ್‌ ಮತ್ತು ಗೋಪಾಲ್‌ ರಾಯ್‌ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ.

***

ಮೃತರ ಸಂಖ್ಯೆ 27ಕ್ಕೆ ಏರಿಕೆ

ಈಶಾನ್ಯ ದೆಹಲಿಯ ಕೆಲವು ಭಾಗಗಳಲ್ಲಿನ ಹಿಂಸಾಚಾರ ಬುಧವಾರವೂ ಮುಂದುವರಿದಿದೆ. ಗಲಭೆಯಲ್ಲಿ ಇನ್ನಿಬ್ಬರು ಮೃತ‍ಪಟ್ಟಿದ್ದಾರೆ. ಇದರೊಂದಿಗೆ ಬಲಿಯಾದವರ ಸಂಖ್ಯೆ 27ಕ್ಕೆ ಏರಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಗಲಭೆಯಲ್ಲಿ ಗಾಯಗೊಂಡವರನ್ನು ಎಲ್‌ಎನ್‌ಜೆಪಿ ಆಸ್ಪತ್ರೆಗೆ ದಾಖಲಿಸಲಾಗುತ್ತಿದೆ. ಬುಧವಾರ ಒಬ್ಬ ವ್ಯಕ್ತಿ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ. ಮತ್ತೊಬ್ಬರು ಆಸ್ಪತ್ರೆಗೆ ಕರೆತರುವ ಮುನ್ನವೇ ಮೃತಪಟ್ಟಿದ್ದರು ಎಂದು ಆಸ್ಪ‍ತ್ರೆಯ ಮೇಲ್ವಿಚಾರಕ ಕಿಶೋರ್‌ ಸಿಂಗ್‌ ತಿಳಿಸಿದ್ದಾರೆ.

ಗಲಭೆಯಲ್ಲಿ ಹುತಾತ್ಮರಾದ ಹೆಡ್‌ಕಾನ್‌ಸ್ಟೆಬಲ್‌ ಕುಟುಂಬಕ್ಕೆ ₹1 ಕೋಟಿ ಪರಿಹಾರ ನೀಡುವುದಾಗಿ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಪ್ರಕಟಿಸಿದ್ದಾರೆ.

****

ಹಿಂಸೆಯ ಸುತ್ತ

-ಹಿಂಸಾಚಾರದ ಸಂತ್ರಸ್ತರನ್ನು ಅತ್ಯುನ್ನತ ಅಧಿಕಾರ ಸ್ಥಾನದಲ್ಲಿರುವವರು ಭೇಟಿಯಾಗಿ ವಿಶ್ವಾಸ ತುಂಬಬೇಕು.ಝಡ್‌ ಶ್ರೇಣಿಯ ಭದ್ರತೆ ಎಲ್ಲರಿಗೂ ಇದೆ ಎಂಬುದನ್ನು ತೋರಿಸಬೇಕಾದ ಸಮಯ ಇದು ಎಂದು ಹೈಕೋರ್ಟ್ ಹೇಳಿದೆ

-ಹೊರಗಡೆ ಏನು ನಡೆಯುತ್ತಿದೆ ಎಂದು ನೋಡಲು ಮನೆಯಿಂದ ಹೊರಗೆ ಬಂದ ಗುಪ್ತಚರ ವಿಭಾಗದ (ಐ.ಬಿ) ಅಧಿಕಾರಿ ಅಂಕಿತ್‌ ಶರ್ಮಾ (26) ಅವರ ಮೃತದೇಹ ಚರಂಡಿಯಲ್ಲಿ ಬುಧವಾರ ಬೆಳಿಗ್ಗೆ ಪತ್ತೆಯಾಗಿದೆ

-ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ದೆಹಲಿ ಹಿಂಸಾಚಾರದ ವಿಚಾರ ಪ್ರಸ್ತಾಪವೇ ಆಗಿಲ್ಲ ಎಂದು ಸಚಿವ ಪ್ರಕಾಶ್‌ ಜಾವಡೇಕರ್‌ ತಿಳಿಸಿದ್ದಾರೆ.

*****

ದೆಹಲಿಯ ವಿವಿಧ ಭಾಗಗಳ ಪರಿಸ್ಥಿತಿಯ ವಿಸ್ತೃತ ಪರಾಮರ್ಶೆ ನಡೆಸಿದ್ದೇನೆ. ಶಾಂತಿ ಮತ್ತು ಸಹಜ ಸ್ಥಿತಿ ಸ್ಥಾಪನೆಗೆ ಪೊಲೀಸ್‌ ಮತ್ತು ಇತರ ಸಂಸ್ಥೆಗಳು ಕೆಲಸ ಮಾಡುತ್ತಿವೆ

- ನರೇಂದ್ರ ಮೋದಿ, ಪ್ರಧಾನಿ

ಗಲಭೆಯ ಹಿಂದೆ ಇರುವುದು ಭಾರಿ ಕರ್ತವ್ಯಲೋಪ. ಕೇಂದ್ರ ಗೃಹ ಸಚಿವರು ಇದರ ಸಂಪೂರ್ಣ ಹೊಣೆ ಹೊರಬೇಕು. ತಕ್ಷಣವೇ ರಾಜೀನಾಮೆ ನೀಡಬೇಕು

-ಸೋನಿಯಾ ಗಾಂಧಿ, ಕಾಂಗ್ರೆಸ್‌ ಅಧ್ಯಕ್ಷೆ

ಹಿಂಸಾಚಾರ ನಿಲ್ಲುತ್ತಿದೆ. ತಪ್ಪಿತಸ್ಥರನ್ನು ಗುರುತಿಸಲು ತನಿಖೆ ನಡೆಯುತ್ತಿದೆ. ಆರೋಪಿಗಳನ್ನು ಬಿಡುವ ಪ್ರಶ್ನೆಯೇ ಇಲ್ಲ. ಇಂತಹ ಸಂದರ್ಭದಲ್ಲಿ ಸರ್ಕಾರವನ್ನು ಟೀಕಿಸುವುದು ಕೊಳಕು ರಾಜಕಾರಣ

ಪ್ರಕಾಶ್‌ ಜಾವಡೇಕರ್‌, ಕೇಂದ್ರ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT