ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅತಿ ಕಡಿಮೆ ಅವಧಿಯ ಸಿಎಂ: ಬಿಎಸ್‌ವೈ, ಜಗದಂಬಿಕಾ ಪಾಲ್‌ ಸಾಲಿಗೆ ಸೇರಿದ ಫಡಣವೀಸ್

Last Updated 26 ನವೆಂಬರ್ 2019, 12:36 IST
ಅಕ್ಷರ ಗಾತ್ರ

ಮುಂಬೈ:ಅಧಿಕಾರ ಸ್ವೀಕರಿಸಿದ ಮೂರೇ ದಿನಗಳಲ್ಲಿ ಮಹಾರಾಷ್ಟ್ರದ ಮುಖ್ಯಮಂತ್ರಿ ಹುದ್ದೆಗೆ ಬಿಜೆಪಿಯ ದೇವೇಂದ್ರ ಫಡಣವೀಸ್ ರಾಜೀನಾಮೆ ನೀಡಿದ್ದಾರೆ. ಇದರೊಂದಿಗೆ, ಅತಿ ಕಡಿಮೆ ಅವಧಿಗೆ ಮುಖ್ಯಮಂತ್ರಿಯಾದ ನಾಯಕರ ಸಾಲಿಗೆ ಅವರೂ ಸೇರಿದ್ದಾರೆ.

2018ರಲ್ಲಿ ಕರ್ನಾಟಕದಲ್ಲಿ ಈಗಿನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೂ ಇಂತಹದ್ದೇ ಸ್ಥಿತಿ ಬಂದೊದಗಿತ್ತು.ಚುನಾವಣೆಯಲ್ಲಿ 104 ಸ್ಥಾನ ಗೆದ್ದು ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದರೂ ಸರ್ಕಾರ ರಚನೆಗೆ ಅಗತ್ಯ ಸಂಖ್ಯಾ ಬಲ ಇರಲಿಲ್ಲ. ಆದಾಗ್ಯೂ, 2018ರ ಮೇ 16ರಂದು ಸರ್ಕಾರ ರಚಿಸಲು ರಾಜ್ಯಪಾಲರು ಆಹ್ವಾನ ನೀಡಿದ್ದರು. ಮೇ 17ರಂದು ಪ್ರಮಾಣ ವಚನ ಸ್ವೀಕರಿಸಿ, ಮುಖ್ಯಮಂತ್ರಿ ಗದ್ದುಗೆ ಅಲಂಕರಿಸಿದ್ದ ಯಡಿಯೂರಪ್ಪ, ಕಾಂಗ್ರೆಸ್‌–ಜೆಡಿಎಸ್‌ ಶಾಸಕರನ್ನು ಸೆಳೆದುಕೊಂಡು ವಿಶ್ವಾಸ ಮತ ಗೆಲ್ಲಬಹುದೆಂಬ ಲೆಕ್ಕಾಚಾರದಲ್ಲಿದ್ದರು. ಆದರೆ ಬಹುಮತ ಸಾಬೀತುಪಡಿಸಲಾಗದೆ ಮೇ 19ರಂದು ಅವರು ರಾಜೀನಾಮೆ ನೀಡಿದ್ದರು.ನಂತರ, 78 ಕ್ಷೇತ್ರಗಳಲ್ಲಿ ಗೆಲುವು ಕಂಡಿದ್ದ ಕಾಂಗ್ರೆಸ್‌ ಮತ್ತು ಬಿಎಸ್‌ಪಿಯ ಒಂದು ಸ್ಥಾನ, 37 ಕ್ಷೇತ್ರಗಳಲ್ಲಿ ಗೆದ್ದಿರುವ ಜೆಡಿಎಸ್‌, ಇಬ್ಬರು ಪಕ್ಷೇತರ ಶಾಸಕರ ‘ಮೈತ್ರಿ ಸರ್ಕಾರ’ ಅಸ್ತಿತ್ವಕ್ಕೆ ಬಂದಿತ್ತು.

2000ನೇ ಇಸವಿಯಲ್ಲಿ ಬಿಹಾರದಲ್ಲಿ ಜೆಡಿ(ಯು) ಪಕ್ಷದ ನಿತೀಶ್ ಕುಮಾರ್ ಅವರು ಮುಖ್ಯಮಂತ್ರಿ ಸ್ಥಾನ ಅಲಂಕರಿಸಿದ 7 ದಿನಗಳಲ್ಲಿ ರಾಜೀನಾಮೆ ನೀಡಿದ್ದರು.

1998ರಲ್ಲಿ ಉತ್ತರ ಪ್ರದೇಶದಲ್ಲಿ ಜಗದಂಬಿಕಾ ಪಾಲ್‌ ಒಂದೇ ದಿನದಲ್ಲಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕಾಗಿ ಬಂದಿತ್ತು.

1998ರ ಫೆಬ್ರುವರಿ 21ರಂದು ಉತ್ತರಪ್ರದೇಶದಲ್ಲಿ ಕಲ್ಯಾಣ್ ಸಿಂಗ್ ನೇತೃತ್ವದ ಸರ್ಕಾರವನ್ನು ರಾಜ್ಯಪಾಲ ರಮೇಶ್ ಭಂಡಾರಿ ವಜಾಗೊಳಿಸಿದ್ದರು. ಮರುದಿನ (ಫೆ.22) ಆಗಿನ ಕಾಂಗ್ರೆಸ್‌ ಮುಖಂಡ ಜಗದಂಬಿಕಾ ಪಾಲ್ ಅವರನ್ನು ಮುಖ್ಯಮಂತ್ರಿಯನ್ನಾಗಿ ನೇಮಕ ಮಾಡಲಾಗಿತ್ತು. ಇದರ ವಿರುದ್ಧ ಕಲ್ಯಾಣ್ ಸಿಂಗ್ ಹೈಕೋರ್ಟ್‌ ಮೆಟ್ಟಿಲೇರಿದ್ದರು. ತೀರ್ಪು ಕಲ್ಯಾಣ್ ಸಿಂಗ್ ಪರವಾಗಿ ಬಂದಿದ್ದರಿಂದ ಫೆಬ್ರುವರಿ 23ರಂದು ಅವರು ಮತ್ತೆ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದರು. ಪರಿಣಾಮವಾಗಿ ಜಗದಂಬಿಕಾ ಪಾಲ್ ಒಂದೇ ದಿನದಲ್ಲಿ ರಾಜೀನಾಮೆ ನೀಡಬೇಕಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT