ಸೋಮವಾರ, ಜುಲೈ 26, 2021
26 °C

ಪ್ರಾಥಮಿಕ ವಿಚಾರಣೆ ವಿವರ ಬಹಿರಂಗಕ್ಕೆ ಸಿಬಿಐಗೆ ಸೂಚನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: 2014–18 ಅವಧಿಯಲ್ಲಿ ಭ್ರಷ್ಟಾಚಾರಕ್ಕೆ ಸಂಬಂಧಿಸಿದ ದೂರುಗಳಲ್ಲಿ ಎಫ್‌ಐಆರ್‌ ದಾಖಲಿಸದೇ ಮುಕ್ತಾಯ ಮಾಡಿದ ಪ್ರಕರಣಗಳಲ್ಲಿ ಕೈಗೊಂಡಿದ್ದ ಪ್ರಾಥಮಿಕ ವಿಚಾರಣೆಯ ವಿವರಗಳನ್ನು ಬಹಿರಂಗಪಡಿಸುವಂತೆ ಕೇಂದ್ರೀಯ ಮಾಹಿತಿ ಆಯೋಗವು (ಸಿಐಸಿ) ಸಿಬಿಐಗೆ ಸೂಚನೆ ನೀಡಿದೆ.

ಸಿಐಸಿಯ ಈ ನಿರ್ದೇಶನ ಸಿಬಿಐನ ಕಾರ್ಯವೈಖರಿಯಲ್ಲಿ ಪಾರದರ್ಶಕತೆಗೆ ಒತ್ತು ನೀಡಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

ಈ ಸಂಬಂಧ ಮಾಹಿತಿ ಹಕ್ಕು ಕಾಯ್ದೆಯಡಿ (ಆರ್‌ಟಿಐ) ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿ ಸಿಐಸಿ ಈ ಆದೇಶ ನೀಡಿದೆ. ‘ಸಿಬಿಐ ಅನ್ನು ಆರ್‌ಟಿಐ ವ್ಯಾಪ್ತಿಯಿಂದ ಹೊರಗಿಡಲಾಗಿದೆ. ಆದರೆ, ಮಾನವ ಹಕ್ಕುಗಳ ಉಲ್ಲಂಘನೆ ಮತ್ತು ಭ್ರಷ್ಟಾಚಾರ ಕುರಿತ ಆರೋಪಗಳಿಗೆ ಸಂಬಂಧಿಸಿದ ದಾಖಲೆಗಳನ್ನು ಬಹಿರಂಗಪಡಿಸದಂತೆ ಸಿಬಿಐಗೆ ರಕ್ಷಣೆ ಇಲ್ಲ’ ಎಂಬ ಅರ್ಜಿದಾರರ ವಾದಕ್ಕೆ ಸಿಐಸಿ ಸಹಮತ ವ್ಯಕ್ತಪಡಿಸಿದೆ.

‘2014–18ರ ಅವಧಿಯಲ್ಲಿ ಬಂದ ದೂರುಗಳಿಗೆ ಸಂಬಂಧಿಸಿ ಪ್ರಾಥಮಿಕ ವಿಚಾರಣೆಯ ಸಂಖ್ಯೆ, ಆರೋಪಗಳ ಸಾರಾಂಶ, ತನಿಖೆ ಆರಂಭಿಸಿದ ದಿನಾಂಕ, ಎಫ್‌ಐಆರ್‌ ದಾಖಲಿಸದೇ ಪ್ರಾಥಮಿಕ ವಿಚಾರಣೆಯನ್ನು ಮುಕ್ತಾಯಗೊಳಿಸಿದ ದಿನಾಂಕ ಕುರಿತ ಮಾಹಿತಿಯನ್ನು ಅರ್ಜಿದಾರರಿಗೆ ಒದಗಿಸುವಂತೆ ಕೇಂದ್ರೀಯ ಸಾರ್ವಜನಿಕ ಮಾಹಿತಿ ಅಧಿಕಾರಿಗೆ ಸೂಚಿಸಲಾಗಿದೆ‘ ಎಂದು ಮಾಹಿತಿ ಆಯುಕ್ತ ದಿವ್ಯಪ್ರಕಾಶ್ ಸಿನ್ಹಾ ಹೇಳಿದ್ದಾರೆ.

ಪಿಟಿಐ ಸುದ್ದಿಸಂಸ್ಥೆಯ ವರದಿಗಾರರೊಬ್ಬರು ಈ ಮಾಹಿತಿ ಕೋರಿ 2018ರ ಮೇ 2ರಂದು ಆರ್‌ಟಿಐ ಅಡಿ ಅರ್ಜಿ ಸಲ್ಲಿಸಿದ್ದರು. 

‘ಭ್ರಷ್ಟಾಚಾರಕ್ಕೆ ಸಂಬಂಧಿಸಿದ ಆರೋಪಗಳ ಹಿನ್ನೆಲೆಯಲ್ಲಿ ಕೈಗೊಂಡ ಪ್ರಾಥಮಿಕ ವಿಚಾರಣೆಯ ವಿವರಗಳು ‘ದಾಖಲೆಗಳು’ ಎನಿಸುತ್ತವೆ. ಆರ್‌ಟಿಐ ವ್ಯಾಪ್ತಿಯಿಂದ ರಕ್ಷಣೆ ಇದೆ ಎಂಬ ಕಾರಣ ನೀಡಿ ಈ ದಾಖಲೆಗಳನ್ನು ಬಹಿರಂಗಪಡಿಸಲು ಸಿಬಿಐ ನಿರಾಕರಿಸುವಂತಿಲ್ಲ’ ಎಂದು ಅರ್ಜಿದಾರರು ವಾದಿಸಿದ್ದರು.

ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್‌ ಆದೇಶ ನೀಡಿದ ನಂತರ, ಸಿಬಿಐ 24 ಗಂಟೆಯೊಳಗಾಗಿ ಎಲ್ಲ ಎಫ್‌ಐಆರ್‌ಗಳನ್ನು ಸಾರ್ವಜನಿಕರಿಗೆ ಲಭ್ಯವಾಗುವಂತೆ ಪ್ರಚುರಪಡಿಸುತ್ತಿತ್ತು. ಆದರೆ, ಪ್ರಾಥಮಿಕ ವಿಚಾರಣೆಯ ಸಾರಾಂಶ ಹಾಗೂ ವಿಚಾರಣೆ ವೇಳೆ ಕಂಡುಬಂದ ವಿಷಯಗಳನ್ನು ಮಾತ್ರ ಬಹಿರಂಗಪಡಿಸುತ್ತಿರಲಿಲ್ಲ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು