ಬುಧವಾರ, ಜನವರಿ 22, 2020
16 °C

ಪೌರತ್ವ ತಿದ್ದುಪಡಿ ಕಾಯ್ದೆ ಜಾರಿಗೆ ಬಿಡಲಾರೆ, ನನ್ನ ಸರ್ಕಾರ ವಜಾ ಮಾಡಿ: ಮಮತಾ

ಪಿಟಿಐ Updated:

ಅಕ್ಷರ ಗಾತ್ರ : | |

ಕೋಲ್ಕತ್ತಾ: ‘ನಾನು ಬದುಕಿರುವವರೆಗೆ ಪಶ್ಚಿಮ ಬಂಗಾಳದಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ಮತ್ತು ರಾಷ್ಟ್ರೀಯ ಪೌರತ್ವ ನೋಂದಣಿ (ಎನ್‌ಆರ್‌ಸಿ)  ಜಾರಿಯಾಗಲು ಬಿಡುವುದಿಲ್ಲ. ಬೇಕಿದ್ದರೆ ನನ್ನ ಸರ್ಕಾರ ವಜಾ ಮಾಡಿ,’ ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಕೇಂದ್ರಕ್ಕೆ ಸವಾಲು ಹಾಕಿದ್ದಾರೆ.

ಪೌರತ್ವ ತಿದ್ದುಪಡಿ ಕಾಯ್ದೆ ಮತ್ತು ರಾಷ್ಟ್ರೀಯ ಪೌರತ್ವ ನೋಂದಣಿ ವಿರುದ್ಧ ಕೋಲ್ಕತ್ತಾದಲ್ಲಿ ಇಂದು ನಡೆದ ಬೃಹತ್‌ ಪ್ರತಿಭಟನೆಯ ನೇತೃತ್ವ ವಹಿಸಿದ್ದ ಟಿಎಂಸಿ ವರಿಷ್ಠೆ, ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಕೇಂದ್ರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.

‘ಪೌರತ್ವ ತಿದ್ದುಪಡಿ ಕಾಯ್ದೆಯಂಥ ಕೆಟ್ಟ ಕಾನೂನನ್ನು ಪಶ್ಚಿಮ ಬಂಗಾಳ ಪ್ರವೇಶಿಸಲು ನಾನು ಬಿಡುವುದಿಲ್ಲ. ಈ ಕಾಯ್ದೆಯನ್ನು ಕೊನೆಗಾಣಿಸುವವರೆಗೆ ನಾನು ಹೋರಾಟ ಮುಂದುವರಿಸುತ್ತೇನೆ. ಪ್ರಜಾಸತ್ತಾತ್ಮಕವಾಗಿಯೇ ಪ್ರತಿಭಟನೆ ಮಾಡುತ್ತೇನೆ. ನಾನು ಬದುಕಿರುವವರೆಗೆ ಪಶ್ಚಿಮ ಬಂಗಾಳದಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ಮತ್ತು ಎನ್‌ಆರ್‌ಸಿ ಜಾರಿಯಾಗಲು ನಾನು ಬಿಡುವುದಿಲ್ಲ. ನಿಮ್ಮಿಂದಾದರೆ ನನ್ನ ಸರ್ಕಾರ ವಜಾ ಮಾಡಿ. ನನ್ನನ್ನು ಜೈಲು ಕಂಬಿಗಳ ಹಿಂದೆ ದೂಡಿ. ನಾನು ಮಾತ್ರ ಹೋರಾಟ ಮುಂದುವರಿಸುತ್ತೇನೆ,’ ಎಂದು ಅವರು ಹೇಳಿದ್ದಾರೆ.

‘ರಾಜ್ಯದ ಹೊರಗಿನ ಕೆಲ ಶಕ್ತಿಗಳು ಇಲ್ಲಿನ ಜನರನ್ನು ದಿಕ್ಕು ತಪ್ಪಿಸುತ್ತಿದ್ದಾರೆ. ಅಲ್ಪಸಂಖ್ಯಾತರೊಂದಿಗೆ ಸ್ನೇಹಿತರಂತೆ ವರ್ತಿಸುತ್ತಾ ಅವರನ್ನು ಹಿಂಸಾಚಾರಕ್ಕೆ ದೂಡುತ್ತಿದ್ದಾರೆ. ಇವರು ಬಿಜೆಪಿಯ ಆಜ್ಞಾನುಸಾರ ನಡೆದುಕೊಳ್ಳುತ್ತಿದ್ದಾರೆ. ಅವರ ಬಲೆಗೆ ಯಾರೂ ಸಿಲುಕಬೇಡಿ,’ ಎಂದೂ ಅವರು ಜನರನ್ನು ಎಚ್ಚರಿಸಿದ್ದಾರೆ. 

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು