ಗುರುವಾರ , ಮೇ 6, 2021
25 °C
ಪರಿಸರ ತಜ್ಞ ರಾಜೇಂದ್ರ ಕೇರ್ಕರ್‌ ಅಭಿಪ್ರಾಯ

ಮಹದಾಯಿ ನದಿ ನೀರು ತಿರುಗಿಸಿದರೆ ಗೋವಾಕ್ಕೆ ಹಾನಿ

ಪಿಟಿಐ Updated:

ಅಕ್ಷರ ಗಾತ್ರ : | |

ಪಣಜಿ: ಮಹದಾಯಿ ನದಿ ನೀರು ತಿರುಗಿಸಿಕೊಳ್ಳಲು ಕರ್ನಾಟಕಕ್ಕೆ ನ್ಯಾಯಮಂಡಳಿಯು ಅನುಮತಿ ನೀಡಿರುವುದರಿಂದ ಗೋವಾಕ್ಕೆ ಅಪಾರ ಹಾನಿಯಾಗಲಿದೆ ಎಂದು ಪರಿಸರ ತಜ್ಞ ಮತ್ತು ಮಾಂಡೋವಿ ಬಚಾವೊ ಅಭಿಯಾನದ (ಎಂಬಿಎ) ಕಾರ್ಯದರ್ಶಿ ರಾಜೇಂದ್ರ ಕೇರ್ಕರ್‌ ಹೇಳಿದ್ದಾರೆ.

ನ್ಯಾಯಮಂಡಳಿಯು ಗೋವಾಕ್ಕೆ ಮಹದಾಯಿ ನೀರಿನ ಹಂಚಿಕೆಯಲ್ಲಿ ಕಡಿತ ಮಾಡಿರುವುದರಿಂದಲೂ ರಾಜ್ಯದ ಕರಾವಳಿಯಲ್ಲಿ ಮೀನುಗಾರಿಕೆ, ಕೃಷಿ, ಪರಿಸರ ಹಾಗೂ ಜೀವವೈವಿಧ್ಯದ ಮೇಲೆ ದುಷ್ಪರಿಣಾಮ ಉಂಟಾಗಲಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.

ದೇಶದಲ್ಲೇ ಗೋವಾ ಅತ್ಯಂತ ಸಣ್ಣ ರಾಜ್ಯ. ಆದರೂ ವಿಸ್ಮಯಕಾರಿ ಜೀವವೈವಿಧ್ಯದ ಪರಿಸರವಿದೆ. ಅಪರೂಪದ ಜೀವಿ ಸಂಕುಲಗಳಿಗೂ ಆಶ್ರಯ ತಾಣವಾಗಿದೆ. ರಾಜ್ಯದ ಜೀವನಾಡಿಯಾದ ಮಹದಾಯಿ ನದಿಯು, 111 ಕಿಲೋ ಮೀಟರ್‌ ಉದ್ದ ಹರಿಯುತ್ತಿದ್ದು, ಗೋವಾದಲ್ಲಿ 76 ಕಿ.ಮೀ ಮತ್ತು ಕರ್ನಾಟಕದಲ್ಲಿ 35 ಕಿ.ಮೀ ನದಿಯ ಹರಿವು ಇದೆ. ಈ ನದಿಯ ನೀರನ್ನು ಬೇರೆ ನದಿ ಕಣಿವೆಗೆ ತಿರುಗಿಸಿದರೆ ಇಲ್ಲಿನ ಪರಿಸರಕ್ಕಷ್ಟೇ ಅಲ್ಲ, ಗೋವಾ ಜನತೆಯ ಬದುಕಿಗೂ ಹಾನಿಯಾಗಲಿದೆ ಎಂದು ಅವರು ತಿಳಿಸಿದ್ದಾರೆ.

ಕರ್ನಾಟಕವು ಮಹದಾಯಿಯ ನದಿ ನೀರು ತಿರುಗಿಸುವ ಯೋಜನೆ ಅನುಷ್ಠಾನಗೊಳಿಸಿದರೆ, ನದಿಯ ದಿಕ್ಕು ಮತ್ತು ಸ್ವರೂಪವೇ ಬದಲಾಗಲಿದೆ. ನದಿಯಲ್ಲಿ ಹರಿವು ಕಡಿಮೆಯಾದರೆ, ಈ ಪ್ರದೇಶದ ಜೀವವೈವಿಧ್ಯದ ಸುಸ್ಥಿರತೆಯು ಸಮತೋಲನ ಕಳೆದುಕೊಳ್ಳಲಿದೆ. ಸಸ್ಯ ಮತ್ತು ಪ್ರಾಣಿ ಸಂಕುಲದ ಮೇಲೂ ದುಷ್ಪರಿಣಾಮ ಆಗಲಿದೆ ಎಂದು ತಿಳಿಸಿದ್ದಾರೆ.

ಗೋವಾ, ಕರ್ನಾಟಕ ಹಾಗೂ ಮಹಾರಾಷ್ಟ್ರ ರಾಜ್ಯಗಳ ನಡುವಿನ ನೀರು ಹಂಚಿಕೆಯ ವಿವಾದ ದಶಕಕ್ಕೂ ಹಳೆಯದಾಗಿದ್ದು, ಇದನ್ನು ಇತ್ಯರ್ಥಪಡಿಸಿದ ಮಹದಾಯಿ ಜಲ ವಿವಾದ ನ್ಯಾಯಮಂಡಳಿಯು (ಎಂಡಬ್ಯುಡಿಟಿ) ಕಳೆದ ವಾರವಷ್ಟೇ ಅಂತಿಮ ತೀರ್ಪು ನೀಡಿದೆ.

ನ್ಯಾಯಮೂರ್ತಿ ಜೆ.ಎಂ.ಪಾಂಚಾಲ್ ನೇತೃತ್ವದ ನ್ಯಾಯಮಂಡಳಿ ಅಂತಿಮ ತೀರ್ಪಿನಲ್ಲಿ ಕರ್ನಾಟಕಕ್ಕೆ 13.4 ಟಿಎಂಸಿ ಅಡಿ, ಗೋವಾಕ್ಕೆ 24 ಮತ್ತು ಮಹಾರಾಷ್ಟ್ರಕ್ಕೆ 1.33 ಟಿಎಂಸಿ ನೀರು ಹಂಚಿಕೆ ಮಾಡಿದೆ. ನದಿಯ ಸ್ವಲ್ಪ ನೀರನ್ನು ಕುಡಿಯುವ ಉದ್ದೇಶಕ್ಕೆ ಮಲಪ್ರಭಾ ನದಿಗೆ ತಿರುಗಿಸಿಕೊಳ್ಳಲು ನ್ಯಾಯಮಂಡಳಿ ಅನುಮತಿ ಕೊಟ್ಟಿದೆ. ಗೋವಾ 122 ಟಿಎಂಸಿ ಅಡಿ ನೀರಿಗೆ ಬೇಡಿಕೆ ಇಟ್ಟಿತ್ತು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು