ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಫುಲ್‌ ಪಟೇಲ್‌ಗೆ ಇ.ಡಿ.ಸಮನ್ಸ್‌

ಯುಪಿಎ ಅವಧಿಯಲ್ಲಿ ನಡೆದ ಬಹುಕೋಟಿ ಹಗರಣ
Last Updated 1 ಜೂನ್ 2019, 20:15 IST
ಅಕ್ಷರ ಗಾತ್ರ

ನವದೆಹಲಿ: ಯುಪಿಎ ಅಧಿಕಾರ ಅವಧಿಯಲ್ಲಿ ಸರ್ಕಾರಿ ಸ್ವಾಮ್ಯದ ಏರ್‌ ಇಂಡಿಯಾ ಸಂಸ್ಥೆಗೆ ಉಂಟಾದ ನಷ್ಟಕ್ಕೆ ಸಂಬಂಧಿಸಿದಂತೆ ಬಹುಕೋಟಿ ಹಗರಣದ ವಿಚಾರಣೆಗೆ ಹಾಜರಾಗಲು ಜಾರಿ ನಿರ್ದೇಶನಾಲಯ (ಇ.ಡಿ) ರಾಷ್ಟ್ರೀಯತಾವಾದಿ ಕಾಂಗ್ರೆಸ್‌ ಪಕ್ಷದ (ಎನ್‌ಸಿಪಿ) ನಾಯಕ ಹಾಗೂ ನಾಗರಿಕ ವಿಮಾನಯಾನ ಖಾತೆ ಮಾಜಿ ಸಚಿವ ಪ್ರಫುಲ್‌ ಪಟೇಲ್‌ ಅವರಿಗೆ ಸಮನ್ಸ್‌ ಜಾರಿ ಮಾಡಿದೆ.

ರಾಜ್ಯಸಭಾ ಸದಸ್ಯರಾಗಿರುವ ಪಟೇಲ್‌ ಅವರಿಗೆ ಜೂನ್‌ 6 ರಂದು ಬೆಳಿಗ್ಗೆ 11ಕ್ಕೆ ಇ.ಡಿ ಕಚೇರಿಯಲ್ಲಿ ತನಿಖಾಧಿಕಾರಿಗಳ ಎದುರು ಹಾಜರಾಗುವಂತೆ ಸಮನ್ಸ್‌ ನೀಡಲಾಗಿದೆ ಎಂದು ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ.

ಅಂದಿನ ಪ್ರಧಾನಿ ಮನಮೋಹನ್‌ ಸಿಂಗ್‌ ಅವರ ನೇತೃತ್ವದ ಯುಪಿಎ ಸರ್ಕಾರದ ಅವಧಿಯಲ್ಲಿ ನಡೆದ ಬಹುಕೋಟಿ ಹಗರಣಕ್ಕೆ ಸಂಬಂಧಿಸಿ ರಾಜಕೀಯ ನಾಯಕರೊಬ್ಬರ ವಿರುದ್ಧ ತೆಗೆದುಕೊಂಡ ಮೊದಲನೇ ಪ್ರಮುಖ ಹೆಜ್ಜೆ ಇದಾಗಿದೆ.

ವಿಮಾನಗಳ ಖರೀದಿ– ಮಾರಾಟ ವ್ಯವಹಾರದಲ್ಲಿ ವಶೀಲಿ ಕಾರ್ಯ ಮಾಡುತ್ತಿದ್ದ ಆರೋಪಿ ದೀಪಕ್‌ ತಲ್ವಾರ್‌ ಅವರು ಕೆಲವು ಮಾಹಿತಿಗಳನ್ನು ಬಹಿರಂಗಪಡಿಸಿದ್ದರಿಂದ ಪಟೇಲ್‌ ಅವರನ್ನು ವಿಚಾರಣೆಗೆ ಒಳಪಡಿಸಲು ಇ.ಡಿ ಮುಂದಾಗಿದೆ. ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್‌ಎ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

ಅಖಿಲ ಭಾರತ ಫುಟ್‌ಬಾಲ್‌ ಫೆಡರೇಶನ್ ಅಧ್ಯಕ್ಷರೂ ಆಗಿರುವ ಪಟೇಲ್‌ ಅವರಿಗೆ ವಿಚಾರಣೆಗೆ ಬರುವಾಗ ತಮ್ಮ ವೈಯಕ್ತಿಕ ಮತ್ತು ಹಣಕಾಸು ವ್ಯವಹಾರಕ್ಕೆ ಸಂಬಂಧಿಸಿದ ಅಧಿಕೃತ ದಾಖಲೆಗಳನ್ನು ತರುವಂತೆ ಸೂಚಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ದುಬೈಯಿಂದ ಇದೇ ವರ್ಷ ಭಾರತಕ್ಕೆ ಬಂದ ದೀಪಕ್‌ ಅವರನ್ನು ಇ.ಡಿ ಬಂಧಿಸಿ, ನ್ಯಾಯಾಂಗ ವಶಕ್ಕೆ ಒಪ್ಪಿಸಿದೆ. ತಲ್ವಾರ್‌ ವಿರುದ್ಧ ಇತ್ತೀಚೆಗೆ ಆರೋಪಪಟ್ಟಿ ಸಲ್ಲಿಸಲಾಗಿದೆ. ತಲ್ವಾರ್‌ ಅವರು ಪಟೇಲ್‌ ಜತೆಗೆ ನಿರಂತರ ಸಂಪರ್ಕದಲ್ಲಿದ್ದರು ಎಂದು ಹೇಳಲಾಗಿದೆ.

ಆರೋಪಿ ತಲ್ವಾರ್ ಅವರು ಎಮಿರೇಟ್ಸ್ ಮತ್ತು ಏರ್ ಅರೇಬಿಯಾ ಪರವಾಗಿ ಪಟೇಲ್‌ ಜತೆಗೆ ಮಾತುಕತೆ ನಡೆಸಿ ಕೆಲವು ನಿರ್ಧಾರಗಳನ್ನು ಅಂತಿಮಗೊಳಿಸಿದ್ದಾರೆ ಎಂದು ಆರೋಪಪಟ್ಟಿಯಲ್ಲಿ ಹೇಳಲಾಗಿದೆ. ತಲ್ವಾರ್‌ ಮತ್ತು ಪಟೇಲ್‌ ನಡುವೆ ಇ–ಮೇಲ್‌ ಸಂದೇಶ, ಸಂಭಾಷಣೆ ನಡೆದಿರುವ ಬಗ್ಗೆಯೂ ಕೆಲವು ಸಾಕ್ಷ್ಯಗಳಿವೆ ಎಂದು ಇ.ಡಿ ನ್ಯಾಯಾಲಯಕ್ಕೆ ತಿಳಿಸಿದೆ.

‘ಎಮಿರೇಟ್ಸ್‌, ಏರ್‌ ಅರೇಬಿಯಾ ಹಾಗೂ ಕತಾರ್‌ನ ವಿಮಾನಯಾನ ಸಂಸ್ಥೆಗಳಿಗೆ ವಿಮಾನ ಸಂಚಾರ ಹಕ್ಕುಗಳಿಗೆ ಅನುಕೂಲ ಮಾಡಲು ವಶೀಲಿ ಮಾಡಿದ್ದಾರೆ.ವಿದೇಶಿ ವಿಮಾನಯಾನ ಸಂಸ್ಥೆಗಳಿಗೆ ಲಾಭ ಮಾಡುವ ಮೂಲಕ ಸರ್ಕಾರಿ ಒಡೆತನದ ಏರ್‌ ಇಂಡಿಯಾ ಸಂಸ್ಥೆಗೆ ನಷ್ಟವಾಗುವ ರೀತಿಯಲ್ಲಿ ವ್ಯವಹಾರ ಕುದುರಿಸುತ್ತಿದ್ದ ತಲ್ವಾರ್‌ಗೆ ವಿದೇಶಿ ಸಂಸ್ಥೆಗಳು 2008–09ರಲ್ಲಿ ₹ 272 ಕೋಟಿ ನೀಡಿದ್ದವು’ ಎಂದು ಇ.ಡಿ ಹೇಳಿದೆ.

*
ಇ.ಡಿ ಎದುರು ಹಾಜರಾಗಿ, ತನಿಖೆಗೆ ಸಹಕಾರ ನೀಡುತ್ತೇನೆ. ವಿಮಾನಯಾನ ಕ್ಷೇತ್ರದಲ್ಲಿರುವ ಜಟಿಲ ಸಮಸ್ಯೆಗಳ ಬಗ್ಗೆ ಇ.ಡಿ ಅಧಿಕಾರಿಗಳೂ ಅರಿಯಬೇಕಿದೆ.
-ಪ್ರಫುಲ್‌ ಪಟೇಲ್‌, ಎನ್‌ಸಿಪಿ ನಾಯಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT