ಶನಿವಾರ, ಫೆಬ್ರವರಿ 29, 2020
19 °C
ಅಪರಾಧ ಹಿನ್ನೆಲೆಯವರ ಸ್ಪರ್ಧೆಗೆ ಕಡಿವಾಣ: ಚೌಕಟ್ಟು ರೂಪಿಸಲು ಸುಪ್ರೀಂ ಕೋರ್ಟ್‌ ಸೂಚನೆ

ಅಪರಾಧೀಕರಣಕ್ಕೆ ಅಂಕುಶ: ಆಯೋಗಕ್ಕೆ ಹೊಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಅಪರಾಧ ಹಿನ್ನೆಲೆಯ ಜನರು ರಾಜಕಾರಣಕ್ಕೆ ಬರುವುದನ್ನು ತಡೆಯಲು ಅಗತ್ಯವಾದ ಚೌಕಟ್ಟನ್ನು ಆಯೋಗವು ರೂಪಿಸಬೇಕು. ಇದು ರಾಷ್ಟ್ರೀಯ ಹಿತಾಸಕ್ತಿಯಿಂದ ಬಹಳ ಮುಖ್ಯವಾದುದು ಎಂದು ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿಗಳಾದ ಆರ್‌.ಎಫ್‌. ನರಿಮನ್‌ ಮತ್ತು ಎಸ್‌. ರವೀಂದ್ರ ಭಟ್‌ ಅವರ ಪೀಠವು ಶುಕ್ರವಾರ ಸೂಚಿಸಿತು. ಒಂದು ವಾರದಲ್ಲಿ ಇದನ್ನು ಸಿದ್ಧಪಡಿಸುವಂತೆ ಪೀಠವು ಹೇಳಿದೆ.

ಚುನಾವಣೆಗೆ ಸ್ಪರ್ಧಿಸುವವರು ತಮ್ಮ ವಿರುದ್ಧ ಇರುವ ಅಪರಾಧ ಪ್ರಕರಣಗಳ ವಿವರಗಳನ್ನು ಮಾಧ್ಯಮದಲ್ಲಿ ಪ್ರಕಟಿಸಬೇಕು ಎಂದು ಸುಪ್ರೀಂ ಕೋರ್ಟ್‌ 2018ರಲ್ಲಿ ನೀಡಿದ ನಿರ್ದೇಶನವು ಅಪರಾಧ ಹಿನ್ನೆಲೆಯವರನ್ನು ಚುನಾವಣಾ ರಾಜಕಾರಣದಿಂದ ದೂರ ಇರಿಸುವಲ್ಲಿ ಫಲಕಾರಿ ಆಗಿಲ್ಲ ಎಂದು ಚುನಾವಣಾ ಆಯೋಗವು ಪೀಠಕ್ಕೆ ತಿಳಿಸಿತು.  

ಅಭ್ಯರ್ಥಿಗಳು ತಮ್ಮ ವಿರುದ್ಧ ಇರುವ ಅಪರಾಧ ಪ್ರಕರಣಗಳ ವಿವರಗಳನ್ನು ಮಾಧ್ಯಮದಲ್ಲಿ ಪ್ರಕಟಿಸುವ ಬದಲಿಗೆ, ಅಂತಹ ಹಿನ್ನೆಲೆಯ ವ್ಯಕ್ತಿಗಳಿಗೆ ಟಿಕೆಟ್‌ ನೀಡದಂತೆ ರಾಜಕೀಯ ಪಕ್ಷಗಳಿಗೆ ಸೂಚಿಸಬೇಕು ಎಂದು ಆಯೋಗವು ಸಲಹೆ ನೀಡಿದೆ. 

ಅಭ್ಯರ್ಥಿಗಳು ತಮ್ಮ ವಿರುದ್ಧದ ಅಪರಾಧ ಪ್ರಕರಣಗಳ ವಿವರಗಳನ್ನು ಪ್ರಕಟಿಸಬಹುದಾದ ಪ್ರಮುಖ ಪತ್ರಿಕೆಗಳು ಮತ್ತು ಸುದ್ದಿ ವಾಹಿನಿಗಳು ಯಾವುವು ಎಂಬುದನ್ನು ಗುರುತಿಸಲು ಅಧಿಕಾರಿಗಳು ವಿಫಲರಾಗಿದ್ದಾರೆ.

ಇಂತಹ ಅಧಿಕಾರಿಗಳ ವಿರುದ್ಧ ನ್ಯಾಯಾಂಗ ನಿಂದನೆ ಕ್ರಮ ಕೈಗೊಳ್ಳಬೇಕು ಎಂದು ವಕೀಲ ಅಶ್ವಿನಿ ಕುಮಾರ್‌ ಉಪಾಧ್ಯಾಯ ಅವರು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಅದರ ಆಧಾರದಲ್ಲಿ, ಕೇಂದ್ರ ಸರ್ಕಾರ ಮತ್ತು ಚುನಾವಣಾ ಆಯೋಗಕ್ಕೆ 2019ರ ಮಾರ್ಚ್‌ನಲ್ಲಿ  ಸುಪ್ರೀಂ ಕೋರ್ಟ್‌ ನೋಟಿಸ್‌ ನೀಡಿತ್ತು. 

ಅಪರಾಧ ಹಿನ್ನೆಲೆಯ ಅಭ್ಯರ್ಥಿಗಳು ಪ್ರಕರಣಗಳ ವಿವರಗಳನ್ನು ಮಾಧ್ಯಮದಲ್ಲಿ ಪ್ರಕಟಿಸುವುದಕ್ಕೆ ಬೇಕಾದಂತೆ, ಚುನಾವಣಾ ಚಿಹ್ನೆ ಆದೇಶ ಮತ್ತು ಮಾದರಿ ನೀತಿ ಸಂಹಿತೆಗೆ ತಿದ್ದುಪಡಿ ಮಾಡಿಲ್ಲ ಎಂದೂ  ಅರ್ಜಿಯಲ್ಲಿ ಹೇಳಲಾಗಿದೆ. 

2018ರ ತೀರ್ಪು
ಯಾವುದೇ ವ್ಯಕ್ತಿ ಪಕ್ಷವೊಂದರ ಟಿಕೆಟ್‌ನಲ್ಲಿ ಸ್ಪರ್ಧಿಸುವುದಿದ್ದರೆ, ತಮ್ಮ ವಿರುದ್ಧ ಬಾಕಿ ಇರುವ ಅಪರಾಧ ಪ್ರಕರಣಗಳ ಮಾಹಿತಿಯನ್ನು ಪಕ್ಷಕ್ಕೆ ನೀಡಬೇಕು ಎಂದು ಸುಪ್ರೀಂ ಕೋರ್ಟ್‌ನ ಐವರು ನ್ಯಾಯಮೂರ್ತಿಗಳ ಪೀಠವು 2018ರ ಸೆಪ್ಟೆಂಬರ್‌ನಲ್ಲಿ ಆದೇಶ ನೀಡಿತ್ತು. ಈ ಮಾಹಿತಿಯನ್ನು ಪಕ್ಷವು ತನ್ನ ವೆಬ್‌ಸೈಟ್‌ನಲ್ಲಿ ಪ್ರಕಟಿಸಬೇಕು ಎಂದೂ ಆದೇಶದಲ್ಲಿ ಹೇಳಲಾಗಿತ್ತು. 

ಅಭ್ಯರ್ಥಿಯ ವಿರುದ್ಧ ಇರುವ ಪ್ರಕರಣಗಳ ಬಗ್ಗೆ ಅಭ್ಯರ್ಥಿ ಮತ್ತು ಅವರು ಪ್ರತಿನಿಧಿಸುವ ರಾಜಕೀಯ ಪಕ್ಷವು ಅವರು ಸ್ಪರ್ಧಿಸುವ ಪ್ರದೇಶದಲ್ಲಿ ವ್ಯಾಪಕ ಪ್ರಸಾರ ಇರುವ ಪತ್ರಿಕೆ ಮತ್ತು ವಿದ್ಯುನ್ಮಾನ ಮಾಧ್ಯಮಗಳಲ್ಲಿ ಪ್ರಚಾರ ನೀಡಬೇಕು. ನಾಮಪತ್ರ ಸಲ್ಲಿಕೆಯ ಬಳಿಕ ಕನಿಷ್ಠ ಮೂರು ಬಾರಿ ಇದು ಪ್ರಕಟವಾಗಬೇಕು ಎಂದೂ ಆದೇಶದಲ್ಲಿ ಇತ್ತು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು