ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಸತ್ತಿನಲ್ಲಿ ಚುನಾವಣಾ ಬಾಂಡ್‌ ಗದ್ದಲ

ಲೋಕಸಭೆ: ಮಾತಿಗೆ ಕತ್ತರಿ, ಕಾಂಗ್ರೆಸ್‌ ಸಂಸದರ ಸಭಾತ್ಯಾಗ l ಜೆಪಿಸಿಗೆ ಆಗ್ರಹ
Last Updated 21 ನವೆಂಬರ್ 2019, 19:53 IST
ಅಕ್ಷರ ಗಾತ್ರ

ನವದೆಹಲಿ: ರಾಜಕೀಯ ಪಕ್ಷಗಳಿಗೆ ದೇಣಿಗೆ ನೀಡುವುದಕ್ಕೆ ರೂಪಿಸಲಾದ ಚುನಾವಣಾ ಬಾಂಡ್‌ ಯೋಜನೆಯು ಸಂಸತ್ತಿನಲ್ಲಿ ಕೋಲಾಹಲಕ್ಕೆ ಕಾರಣವಾಗಿದೆ. ದೇಣಿಗೆ ನೀಡುವವರ ವಿವರ ಮತ್ತು ದೇಣಿಗೆ ಪಡೆದ ಪಕ್ಷದ ವಿವರ ಗೋ‍ಪ್ಯವಾಗಿ ಇಡುವ ಈ ಯೋಜನೆಗೆ ಸಂಬಂಧಿಸಿ ಉಭಯ ಸದನಗಳಲ್ಲಿಯೂ ಗುರುವಾರ ಗದ್ದಲ ನಡೆಯಿತು.

ಚುನಾವಣಾ ಬಾಂಡ್‌ ಯೋಜನೆಯು ಪಾರದರ್ಶಕವಾಗಿಲ್ಲ ಎಂದು ಭಾರತೀಯ ರಿಸರ್ವ್‌ ಬ್ಯಾಂಕ್‌ ವ್ಯಕ್ತಪಡಿಸಿದ್ದ ಆಕ್ಷೇಪವನ್ನು ಕಡೆಗಣಿಸಿ, ಯೋಜನೆಯನ್ನು ಘೋಷಿಸಲಾಗಿದೆ. ಮಾಹಿತಿ ಹಕ್ಕು ಕಾಯ್ದೆ ಅಡಿ ಸಲ್ಲಿಸಲಾಗಿದ್ದ ಅರ್ಜಿಗೆ ನೀಡಲಾಗಿದ್ದ ಉತ್ತರದಲ್ಲಿ ಈ ಮಾಹಿತಿ ಇದೆ.
ಇದನ್ನು ಆಧಾರವಾಗಿಟ್ಟುಕೊಂಡು ಸರ್ಕಾರದ ವಿರುದ್ಧ ಕಾಂಗ್ರೆಸ್‌ ಮುಗಿಬಿದ್ದಿದೆ.

ಲೋಕಸಭೆಯಲ್ಲಿ ಈ ವಿಚಾರವನ್ನು ಚರ್ಚೆಗೆ ಎತ್ತಿಕೊಳ್ಳಲು ಸ್ಪೀಕರ್ ಓಂ ಪ್ರಕಾಶ್ ಬಿರ್ಲಾ ನಿರಾಕರಿಸಿದರು. ಆಗ ಕಾಂಗ್ರೆಸ್‌ ಸಂಸದರು, ಸ್ಪೀಕರ್ ಅವರ ಪೀಠದ ಎದುರು 15 ನಿಮಿಷ ಪ್ರತಿಭಟನೆ ನಡೆಸಿದರು. ನಂತರ ಚರ್ಚೆಗೆ ಅವಕಾಶ ನೀಡಲಾಯಿತು.

ರಾಜ್ಯಸಭೆಯಲ್ಲಿ ಈ ವಿಚಾರದ ಚರ್ಚೆಗೆ ಅವಕಾಶ ನೀಡದ ಕಾರಣ ಕಾಂಗ್ರೆಸ್‌ ಸದಸ್ಯರು ಪ್ರತಿಭಟಿಸಿದರು. ಸದನವನ್ನು ಮುಂದೂಡಲಾಯಿತು.

ಭ್ರಷ್ಟಾಚಾರಕ್ಕೆ ಅಧಿಕೃತ ಮುದ್ರೆ

ಕಾಂಗ್ರೆಸ್‌ ಸಂಸದ ಮನೀಷ್ ತಿವಾರಿ, ಲೋಕಸಭೆಯಲ್ಲಿ ಚುನಾವಣಾ ಬಾಂಡ್‌ ವಿಚಾರವನ್ನು ಪ್ರಸ್ತಾಪಿಸಿದರು. ‘ಚುನಾವಣಾ ಬಾಂಡ್‌ ಯೋಜನೆಗೆ ಚುನಾವಣಾ ಆಯೋಗ ಮತ್ತು ಆರ್‌ಬಿಐಗಳು ಆಕ್ಷೇಪ ವ್ಯಕ್ತಪಡಿಸಿದ್ದವು. ಆದರೂ, ಯೋಜನೆಯನ್ನು ಜಾರಿಗೆ ತರಲಾಗಿದೆ. ಚುನಾವಣಾ ಬಾಂಡ್‌ ಮೂಲಕ ಭ್ರಷ್ಟಾಚಾರಕ್ಕೆ ಅಧಿಕೃತ ಮುದ್ರೆ ಒತ್ತಲಾಗಿದೆ’ ಎಂದು ತಿವಾರಿ ಆರೋಪಿಸಿದರು. ‘ಪ್ರಧಾನಿ ಕಚೇರಿಯ...’ ಎಂದು ಅವರು ಮಾತು ಮುಂದುವರಿಸುತ್ತಿದ್ದಂತೆಯೇ ಅವರ ಮೈಕ್ ಅನ್ನು ಆಫ್‌ ಮಾಡಲಾಯಿತು. ಇದರಿಂದ ಸಿಟ್ಟಿಗೆದ್ದ ಕಾಂಗ್ರೆಸ್‌ ಸದಸ್ಯರು ಸದನದಿಂದ ಹೊರನಡೆದರು.

ಈ ಯೋಜನೆ ತನಿಖೆಗೆ ಜಂಟಿ ಸಂಸದೀಯ ಸಮಿತಿ (ಜೆಪಿಸಿ) ರಚಿಸಬೇಕು ಎಂದು ಕಾಂಗ್ರೆಸ್‌ ಆಗ್ರಹಿಸಿದೆ.

ಉದ್ದೇಶವೇ ವ್ಯರ್ಥ ಎಂದಿದ್ದ ‘ಸುಪ್ರೀಂ’

‘ಚುನಾವಣಾ ಬಾಂಡ್‌ ಖರೀದಿಸುವವರ ಗುರುತು ಬಹಿರಂಗ ಆಗುವುದಿಲ್ಲ ಎಂದಾದರೆ ರಾಜಕೀಯ ಪಕ್ಷಗಳಿಗೆ ದೇಣಿಗೆ ನೀಡಿಕೆಯಲ್ಲಿ ಪಾರದರ್ಶಕತೆ ತರುವ ಈ ಯೋಜನೆಯ ಉದ್ದೇಶವೇ ವ್ಯರ್ಥ’ ಎಂದು 2019ರ ಏಪ್ರಿಲ್‌ 12ರಂದು ಸುಪ್ರೀಂ ಕೋರ್ಟ್‌ ಹೇಳಿತ್ತು.

ನಾಯಕರ ಪ್ರತಿಕ್ರಿಯೆ

ಪ್ರಧಾನಿ ನರೇಂದ್ರ ಮೋದಿ ಅವರು ಭ್ರಷ್ಟಾಚಾರ ರಹಿತ ಸರ್ಕಾರ ನಡೆಸುತ್ತಿದ್ದಾರೆ. ನಮ್ಮ ಸರ್ಕಾರದಲ್ಲಿ ಭ್ರಷ್ಟಾಚಾರಕ್ಕೆ ಅವಕಾಶವೇ ಇಲ್ಲ ಎಂದು ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ ಜೋಷಿ ಹೇಳಿದರು.

ಇದು ಅತ್ಯಂತ ದೊಡ್ಡ ಹಗರಣ, ದೇಶವನ್ನು ಲೂಟಿ ಹೊಡೆಯಲಾಗುತ್ತಿದೆ. ಈ ವಿಚಾರದ ಬಗ್ಗೆ ಸಂಸತ್ತಿನಲ್ಲಿ ಚರ್ಚೆ ನಡೆಯಲೇಬೇಕು ಎಂದು ಲೋಕಸಭೆಯ ಕಾಂಗ್ರೆಸ್ ನಾಯಕಅಧಿರ್ ರಂಜನ್ ಚೌಧರಿ ಆಗ್ರಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT