ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೇಂದ್ರದ ಆರ್ಥಿಕ ನೀತಿ ಟೀಕಿಸಿದ ನಿರ್ಮಲಾ ಪತಿ

ರಾವ್–ಸಿಂಗ್ ಆರ್ಥಿಕ ಪದ್ಧತಿ ಅಳವಡಿಸಿಕೊಳ್ಳಿ: ಆಂಗ್ಲ ಪತ್ರಿಕೆಯೊಂದರ ಅಂಕಣದಲ್ಲಿ ಸಲಹೆ
Last Updated 14 ಅಕ್ಟೋಬರ್ 2019, 20:01 IST
ಅಕ್ಷರ ಗಾತ್ರ

ಬೆಂಗಳೂರು: ಆರ್ಥಿಕ ಪ್ರಗತಿ ಮಂದಗತಿಗೆ ಇಳಿದಿರುವ ಈಗಿನ ಸ್ಥಿತಿಯನ್ನು ನಿಭಾಯಿಸಲುಮಾಜಿ ಪ್ರಧಾನಿಗಳಾದ ನರಸಿಂಹರಾವ್ ಹಾಗೂ ಮನಮೋಹನ್ ಸಿಂಗ್ (ರಾವ್–ಸಿಂಗ್) ಅವರ ಆರ್ಥಿಕ ಮಾದರಿಗಳನ್ನು ಕೇಂದ್ರ ಸರ್ಕಾರ ಅಳವಡಿಸಿಕೊಳ್ಳಬೇಕು ಎಂದು ರಾಜಕೀಯ ಅರ್ಥಶಾಸ್ತ್ರಜ್ಞ ಪರಕಾಲ ಪ್ರಭಾಕರ್‌ ಸಲಹೆ ನೀಡಿದ್ದಾರೆ. ಪ್ರಭಾಕರ್‌ ಅವರು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರ ಪತಿ.

‘ದಿ ಹಿಂದೂ’ ಪತ್ರಿಕೆಯಲ್ಲಿ ಬರೆದಿರುವ ಅಂಕಣದಲ್ಲಿ ಕೇಂದ್ರ ಸರ್ಕಾರದ ಆರ್ಥಿಕ ನೀತಿ ಬಗ್ಗೆ ಅವರು ಕಳವಳ ವ್ಯಕ್ತಪಡಿಸಿದ್ದಾರೆ. ನರೇಂದ್ರ ಮೋದಿ ನೇತೃತ್ವದ ಸರ್ಕಾರವು ಹೊಸ ನೀತಿಗಳನ್ನು ರೂಪಿಸಲು ಮುಂದಡಿ ಇಡುತ್ತಿಲ್ಲ ಎಂದು ಅವರು ಹೇಳಿದ್ದಾರೆ.

ರಾವ್–ಸಿಂಗ್ ಅವರು ನೆಹರೂ ಕಾಲದ ಸಮಾಜವಾದವನ್ನು ವಿಮರ್ಶಿಸುವ ಬದಲಾಗಿ, ಉದಾರೀಕರಣಕ್ಕೆ ದಾರಿ ಮಾಡಿಕೊಡುವ ಹೊಸ ಆರ್ಥಿಕ ನೀತಿಗಳನ್ನು ರೂಪಿಸಿದ್ದರು ಎಂದು ಪ್ರಭಾಕರ್ ವಿಶ್ಲೇಷಿಸಿದ್ದಾರೆ.

‘ಒಂದರ ನಂತರ ಒಂದರಂತೆ ವಿವಿಧ ಕ್ಷೇತ್ರಗಳು ಗಂಭೀರ ಸವಾಲುಗಳನ್ನು ಎದುರಿಸುತ್ತಿವೆ ಎಂಬುದನ್ನು ಬಿಂಬಿಸುವ ಅಂಕಿ ಅಂಶಗಳು ದಿನನಿತ್ಯ ಪ್ರಕಟವಾಗುತ್ತಿದ್ದರೂ, ಕೇಂದ್ರ ಸರ್ಕಾರ ಮಾತ್ರ ಈ ಎಲ್ಲವನ್ನೂ ನಿರಾಕರಿಸುವ ಧೋರಣೆ ಅನುಸರಿಸುತ್ತಿದೆ’ ಎಂದು ಅವರು ಟೀಕಿಸಿದ್ದಾರೆ.

ಬಿಜೆಪಿಯ ಯಾವ ವಿವರಣೆಯೂ ಇಲ್ಲದ ನಿರಾಕರಣವಾದದಲ್ಲಿ ಈಗಿನ ಸಮಸ್ಯೆಗಳ ಬೇರು ಇದೆ. ದೇಶದ ಅರ್ಥ ವ್ಯವಸ್ಥೆಯ ಬಗ್ಗೆ ಬಿಜೆಪಿ ಕಳೆದ ವರ್ಷಗಳಲ್ಲಿ ಸುಸಂಬದ್ಧವಾದ ಯೋಜನೆಯನ್ನು ಹಾಕಿಕೊಳ್ಳದಿರುವುದು ಕೂಡ ಇದಕ್ಕೆ ಕಾರಣ ಎಂದು ಅವರು ಹೇಳಿದ್ದಾರೆ.

‘ಕೇಂದ್ರ ಹಾಗೂ ವಿವಿಧ ರಾಜ್ಯಗಳಲ್ಲಿ ಬಿಜೆಪಿ ಅಧಿಕಾರ ಹಿಡಿದಿದ್ದರೂ ಕೂಡ, ಕೇಂದ್ರದ ಆರ್ಥಿಕ ಯೋಜನೆಗಳನ್ನು ಒಪ್ಪಿಕೊಂಡೇ ಜನರು ಮತ ನೀಡಿದ್ದಾರೆ ಎಂದು ಹೇಳಲಾಗದು’ ಎಂದು ಪ್ರಭಾಕರ್‌ ಹೇಳಿದ್ದಾರೆ.

ಬಿಜೆಪಿ ದೇಶದ ರಾಜಕೀಯ ಸಂವಾದದ ಕೇಂದ್ರ ಸ್ಥಾನಕ್ಕೆ ಬರಲು ಮತ್ತು ಬಳಿಕ ಕೇಂದ್ರ ಹಾಗೂ ರಾಜ್ಯಗಳಲ್ಲಿ ಅಧಿಕಾರ ಹಿಡಿಯಲು ಪಕ್ಷವು ಮುಂದಿಟ್ಟ ಆರ್ಥಿಕ ನೀಲನಕ್ಷೆ ಕಾರಣ ಅಲ್ಲ. ಈ ಆರ್ಥಿಕ ನೀತಿಯನ್ನು ಜನರು ಒಪ್ಪಿಕೊಂಡಿದ್ದಾರೆ ಎಂದೂ ಅಲ್ಲ. ಬಿಜೆಪಿಯ ಅತ್ಯುನ್ನತ ವೇದಿಕೆಗಳಲ್ಲಿ ದೇಶದ ಆರ್ಥಿಕತೆಯ ದಿಕ್ಕಿನ ಬಗ್ಗೆ ಗಂಭೀರ ಚರ್ಚೆ ಯಾವತ್ತೂ ನಡೆದೇ ಇಲ್ಲ ಎಂದು ಅವರು ಹೇಳಿದ್ದಾರೆ.

ಕಾಂಗ್ರೆಸ್ಸೇತರ ಪಕ್ಷದ ವ್ಯಕ್ತಿಯೊಬ್ಬರು 1998–2004ರ ಅವಧಿಯಲ್ಲಿ ಪ್ರಧಾನಿಯಾದರೂ ಆರ್ಥಿಕ ನೀತಿಯಲ್ಲಿ ಯಾವ ಬದಲಾವಣೆಯೂ ಆಗಲಿಲ್ಲ. ಬಿಜೆಪಿ ವಿಶಿಷ್ಟ ಆರ್ಥಿಕನೀತಿಯ ಪಕ್ಷ ಎಂದು ಜನರು ಗುರುತಿಸದಿದ್ದುದೇ ಅಟಲ್‌ ಬಿಹಾರಿ ವಾಜಪೇಯಿ ನೇತೃತ್ವದಲ್ಲಿ ನಡೆದ ‘ಭಾರತ ಪ್ರಕಾಶಿಸುತ್ತಿದೆ’ ಅಭಿಯಾನ ವಿಫಲವಾಗಲು ಕಾರಣ ಎಂದು ಅವರು ವಿಶ್ಲೇಷಿಸಿದ್ದಾರೆ.‌

ಇಂತಹ ವಿಚಾರಗಳಲ್ಲಿ ಈಗಿನ ಸರ್ಕಾರವು ಹೆಚ್ಚು ಚಾತುರ್ಯದಿಂದ ವರ್ತಿಸುತ್ತಿದೆ. ಹಾಗಾಗಿಯೇ ಆರ್ಥಿಕ ಕ್ಷೇತ್ರದಲ್ಲಿ ತನ್ನ ಸಾಧನೆಯನ್ನು ಈ ಸರ್ಕಾರ ಹೇಳಿಕೊಳ್ಳುತ್ತಿಲ್ಲ. ಬದಲಿಗೆ, ರಾಷ್ಟ್ರೀಯವಾದ, ಭದ್ರತೆ, ಪೌರುಷದ ರಾಜಕಾರಣವನ್ನೇ ಮುಂದಿಟ್ಟುಕೊಂಡು ಪುನರಾಯ್ಕೆ ಬಸುತ್ತಿದೆ ಎಂದಿದ್ದಾರೆ.

ಕೇಂದ್ರದ ಆಡಳಿತಾರೂಢ ಪಕ್ಷವು ನೆಹರೂ ಅವರ ಆರ್ಥಿಕ ಸಿದ್ಧಾಂತಗಳನ್ನು ರಾಜಕೀಯ ಕಾರಣಗಳಿಗಾಗಿ ಈಗಲೂ ಟೀಕಿಸುತ್ತಿದೆ ಎಂದು ‘ಎ ಲೋಡ್‌ಸ್ಟರ್ ಟು ಸ್ಟೀರ್ ದಿ ಎಕಾನಮಿ’ ಹೆಸರಿನ ಲೇಖನದಲ್ಲಿ ಅವರು ಹೇಳಿದ್ದಾರೆ.

ನೆಹರೂ ಆರ್ಥಿಕ ಸಿದ್ಧಾಂತದ ಮೇಲೆ ನಡೆಸುತ್ತಿರುವ ದಾಳಿಯ ಹಿಂದೆ ಇರುವುದು ರಾಜಕೀಯ ಕಾರಣ ಮಾತ್ರ. ಅದು ಒಂದು ಪ್ರಬುದ್ಧ ಅರ್ಥಶಾಸ್ತ್ರೀಯ ಟೀಕೆ ಅಲ್ಲ ಎಂಬುದನ್ನು ಬಿಜೆಪಿಯ ಚಿಂತಕರ ಚಾವಡಿ ಅರ್ಥ ಮಾಡಿಕೊಂಡೇ ಇಲ್ಲ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

‘ರಾವ್–ಸಿಂಗ್ ಅವರ ಆರ್ಥಿಕ ಶಿಸ್ತಿನ ಪೂರ್ಣಪ್ರಮಾಣದ ಅಳವಡಿಕೆ ಹಾಗೂ ಗಂಭೀರ ಪ್ರಯತ್ನಕ್ಕೆ ಬಿಜೆಪಿ ನೇತೃತ್ವದ ಸರ್ಕಾರ ಮುಂದಾದರೆ ಆರ್ಥಿಕತೆಗೆ ಹೊಸ ದಿಕ್ಕು ಸಿಗಲಿದೆ’ ಎಂದು ಪ್ರಭಾಕರ್ ಹೇಳಿದ್ದಾರೆ.

ಮಾರುಕಟ್ಟೆ ಆಧರಿ ತಜಾಗತೀಕರಣದ ಇಂದಿನ ದಿನಗಳಲ್ಲಿ ಸಮಗ್ರ ಮಾನವೀಯತೆಗೆ ಸಂಬಂಧಿಸಿದ ಆರ್ಥಿಕ ನೀತಿಗಳು ರಚನೆಯಾಗುತ್ತಿಲ್ಲ. ಇಂತಹ ಸಂದರ್ಭದಲ್ಲಿ ಬಿಜೆಪಿ ತನ್ನ ಸೈದ್ಧಾಂತಿಕ ಚೌಕಟ್ಟಿನಿಂದ ಹೊರಬಂದು, ರಾವ್–ಸಿಂಗ್ ಅವರ ಆರ್ಥಿಕ ಸಿದ್ಧಾಂತಗಳನ್ನು ಒಪ್ಪಿಕೊಳ್ಳಬೇಕು’ ಎಂದು ಸಲಹೆ ನೀಡಿದ್ದಾರೆ.

‘ಆರ್ಥಿಕತೆಯನ್ನು ಸರ್ಕಾರ ಮರಳಿ ತನ್ನ ಹಿಡಿತಕ್ಕೆ ತೆಗೆದುಕೊಂಡಿರುವ ಬಗ್ಗೆ ಇನ್ನಷ್ಟೇ ಸೂಚನೆಗಳು ಸಿಗಬೇಕಿವೆ. ಸವಾಲುಗಳನ್ನು ಎದುರಿಸಲು ಸರ್ಕಾರ ಸಮಗ್ರ ಕಾರ್ಯತಂತ್ರ ರೂಪಿಸಿದ್ದಕ್ಕೆ ಈಗಿರುವ ಪುರಾವೆಗಳು ಏನೇನೂ ಸಾಲದು’ ಎಂದು ಪ್ರಭಾಕರ್ ಅಭಿಪ್ರಾಯಪಟ್ಟಿದ್ದಾರೆ.

ನೀತಿ ಸಮರ್ಥಿಸಿಕೊಂಡ ನಿರ್ಮಲಾ

ತಮ್ಮ ಪತಿ ಹಾಗೂ ರಾಜಕೀಯ ಅರ್ಥಶಾಸ್ತ್ರಜ್ಞ ಪರಕಾಲ ಪ್ರಭಾಕರ್ ಅವರ ಲೇಖನಕ್ಕೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ಪ್ರತಿಕ್ರಿಯೆ ನೀಡಿದ್ದಾರೆ.

‘2014–19ರ ಐದು ವರ್ಷಗಳಲ್ಲಿ ನಾವು ಮೂಲಭೂತ ಸುಧಾರಣೆಗಳನ್ನು ತಂದಿದ್ದೇವೆ’ ಎಂದು ಹೇಳಿದ್ದಾರೆ. ಜಿಎಸ್‌ಟಿ, ಆಧಾರ್ ಮತ್ತು ಅಡುಗೆ ಅನಿಲ ಪೂರೈಕೆಯಂತಹ ಯೋಜನೆಗಳ ಪಟ್ಟಿಯನ್ನು ಅವರು ನೀಡಿದ್ದಾರೆ.

ಪರಕಾಲ ಪ್ರಭಾಕರ್ ಅವರು ಆಂಧ್ರ ಸರ್ಕಾರದಲ್ಲಿ ಸಂವಹನ ಸಲಹೆಗಾರರಾಗಿ ಕೆಲಸ ಮಾಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT