ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಗಣಿಗೇ ಸುಪಾರಿ ಸಂಚಗಾರ..!

Last Updated 3 ನವೆಂಬರ್ 2018, 19:31 IST
ಅಕ್ಷರ ಗಾತ್ರ

ಅಂದು ನನ್ನ ಅಜ್ಜಿ ಕೂಸುಗಳ ಕುಂಚಿಗೆ(ಕುಲಾವಿ)ಗಳನ್ನು ಗ್ವಾತದಲ್ಲಿ ಎದ್ದಿ ಹಿಂಡುತ್ತಿದ್ದಳು. (ಗ್ವಾತ ಎಂದರೆ ದನದ ಕೊಟ್ಟಿಗೆಯಲ್ಲಿ ದನಗಳನ್ನು ಕಟ್ಟುವ ಹಿಂಬದಿಯ ಜಾಗದ ಇಳಿಜಾರಿನಲ್ಲಿ ಒಂದು ಗಡಿಗೆಯನ್ನು ಹುಗಿದಿರುತ್ತಿದ್ದರು. ಅದರಲ್ಲಿ ಬಂದು ಸಂಗ್ರಹವಾಗುವ ದನಗಳ ಮೂತ್ರವನ್ನೇ ಗ್ವಾತ ಎನ್ನುತ್ತಾರೆ) ನಾನು ‘ಬೇ ಯಮ್ಮಾ.. ಗೊಮ್ಮನಾರು ಗ್ವಾತದಾಗ ಕೂಸಿನ ಕುಂಚಿಗಿ ಎದ್ದೀಯಲ್ಲ, ನಿನಗೇನರ ಬುದ್ದಿಗಿದ್ದಿ ಐತಿಲ್ಲೋ’ ಅಂತ ಒದರಿದೆ.

ನಮ್ಮ ಅಜ್ಜಿ ‘ನಿನಗೇನ್ ಗೊತ್ತಕ್ಕೈತಿ ಸುಮ್ಮನ ಹೋಗ್’ ಎಂದು ನನ್ನನ್ನು ಜಬರಿಸಿದಳು. ಮಕ್ಕಳ ತಲೆಗೆ ಹಾಕುವ ಕುಂಚಿಗೆಗೆ ತಲೆಗೆ ಹಾಕಿದ ಎಣ್ಣೆ ಮೆತ್ತಿಕೊಂಡು ಕಮಟು ಆಗಿರುತ್ತದೆ. ಆ ಕಮಟಿನಲ್ಲಿ ಕೀಟಾಣುಗಳು ಸೇರಿಕೊಂಡು ಕೂಸುಗಳಿಗೆ ಹೇನು ಹಿಪ್ಪೆಗಳಾಗಬಾರದು ಎಂದು ಹೀಗೆ ಮಾಡುತ್ತಿದ್ದಳಂತೆ. ಗೋಮೂತ್ರ ಉಷ್ಣಕಾರಕ.

ಕೊಬ್ಬರಿ ಎಣ್ಣೆ ಶೀತಕಾರಕ. ಇದನ್ನು ಸಮತೋಲನ ಮಾಡುವ ವಾಹಕವಾಗಿ ಗ್ವಾತದಲ್ಲಿ ಎದ್ದಿ ಹಿಂಡಿ ಒಣಗಿಸಿದ ಕುಂಚಿಗಿಯನ್ನು ಕೂಸುಗಳಿಗೆ ಕಟ್ಟುತ್ತಿದ್ದರಂತೆ. ಗ್ವಾತದ ಗಡಿಗೆಯಲ್ಲಿಯ ಗಂಜಳವನ್ನು ತುಂಬಿ ತಿಪ್ಪೆಗೆ ಹಾಕುವುದಿತ್ತು. ಇದರಿಂದ ತಿಪ್ಪೆಯಲ್ಲಿ ಕಿಟ್ಟದಂತ ಗೊಬ್ಬರ ತಯಾರಾಗುತ್ತಿತ್ತು. ಗೋಮೂತ್ರವನ್ನು ಕೆಮ್ಮು, ನೆಗಡಿ, ಜ್ವರ, ಚರ್ಮರೋಗ ಮುಂತಾದವುಗಳಿಗೆ ಔಷಧಿಯಾಗಿ ಇಂದಿಗೂ ಹಳ್ಳಿಗಳಲ್ಲಿ ಬಳಸುತ್ತಾರೆ. ಉಪನಯನ ಸಂದರ್ಭದಲ್ಲಿ ವಟುಗಳಿಗೆ ತಿನ್ನಿಸುವ ಪಂಚಗವ್ಯವು ಗೋಮಯ(ಸೆಗಣಿ), ಗೋಮೂತ್ರ, ಹಾಲು, ಮೊಸರು ಮತ್ತು ತುಪ್ಪಗಳ ಮಿಶ್ರಣವೇ ಆಗಿದೆ.

ನಾಗಾಸಾಧುಗಳು ಸಗಣಿ, ಗಂಜಳ ಮೈಮೇಲೆ ಸುರಿದುಕೊಂಡು ಹೋಳಿ ಆಡುತ್ತಾರೆ. ನಮ್ಮ ಉತ್ತರ ಕರ್ನಾಟಕದ ಗದುಗಿನ ಕೆಲವು ಊರುಗಳಲ್ಲಿ ಪಂಚಮಿಯ ದಿನ ಸಗಣಿ ಎರಚಾಡುವ ಪದ್ಧತಿ ಇದೆ. ಚಾಮರಾಜನಗರದ ಹತ್ತಿರದ ಗುಮಟಾಪುರದಲ್ಲಿ ದೀಪಾವಳಿ ಹಬ್ಬದಂದು ಸೆಗಣಿಯನ್ನು ಮೈಗೆಲ್ಲ ಎರಚಾಡಿಕೊಂಡು ಗೋರೆಹಬ್ಬ ಆಚರಿಸುತ್ತಾರೆ. ಅಂದರೆ ಈ ಸಗಣಿ ಮತ್ತು ಗಂಜಳದ ಮಹತ್ವ ಎಷ್ಟಿರಬಹುದು ಯೋಚಿಸಿ! ಸಾಕ್ಷಾತ್ ಶಿವನೇ ತನ್ನ ವಾಹನ ನಂದಿಯ ಸಗಣಿಯನ್ನು ಸುಟ್ಟು ಅದರ ಬೂದಿಯನ್ನು ಮೈಗೆಲ್ಲ ಬಳಿದುಕೊಂಡಿರುತ್ತಾನೆ.

ಚಳಿ, ತಾಪ, ಕಾಯಿಲೆಗಳಿಂದ ಈ ಬೂದಿ ರಕ್ಷಣೆ ನೀಡುತ್ತದೆ ಎಂಬ ಕಾರಣದಿಂದ ನಾಗಾಸಾಧುಗಳು ಸದಾ ಮೈಗೆ ಬೂದಿ ಬಳಿದುಕೊಂಡಿರುತ್ತಾರಂತೆ. ಕೃಷಿಗೂ ಜೀವಾಮೃತವಾದ ಇಂತಹ ಸೆಗಣಿ ಗಂಜಳಕ್ಕೂ ಇಂದು ಕಂಟಕ ಬಂದೊದಗಿದೆ. ಜಮಷೆಡ್‌ಪುರಲ್ಲಿ 350 ದನದ ಕೊಟ್ಟಿಗಳಿವೆಯಂತೆ. ಅವುಗಳಿಂದ ಉತ್ಪನ್ನವಾಗುವ ಸಗಣಿ ಗಂಜಳದಿಂದ ಶಹರ ಹೊಲಸಾಗುತ್ತಿದೆಯಂತೆ! ಹಾಗಾಗಿ ಸಗಣಿ ಮುಕ್ತ ನಗರವನ್ನಾಗಿ ಮಾಡಲು ಅಲ್ಲಿನ ಶಹರ ಸಮಿತಿ ತೀರ್ಮಾನಿಸಿದೆಯಂತೆ(ಪ್ರಜಾವಾಣಿ ವರದಿ 3–9–2–2018).

ಸಗಣಿ ಗಂಜಳವನ್ನು ಸಿಮೆಂಟ್ ಗುಂಡಿಯಲ್ಲಿ, ಟಾರ್ ರಸ್ತೆ ಮೇಲೆ, ಗಟಾರದಲ್ಲಿ ಸುರಿಯುವುದರಿಂದ ಸಹಜ ಹ್ಯೂಮಸ್ (ಜೀವದ್ರವ್ಯ) ಕ್ರಿಯೆಗೆ ಅಡಚಣೆಯಾಗುತ್ತದೆ. ಅದರಲ್ಲಿ ಹಂದಿ, ನಾಯಿಗಳು ತಿಳಲಿ ಆಡುವುದರಿಂದ ಕ್ರಿಮಿಕೀಟಗಳು ಹುಟ್ಟಿ ಮತ್ತಷ್ಟು ಗಬ್ಬೆದ್ದು ಹೋಗುತ್ತದೆ. ದನಕರುಗಳ ಸಾಕಣೆಯೇ ಕಡಿಮೆಯಾಗಿ ಯಂತ್ರೋಪಕರಣಗಳ ಉಳುಮೆ ಹೆಚ್ಚಾಗಿದೆ. ಕೊಟ್ಟಿಗೆಗಳು ಕೋಳಿ ಫಾರಂಗಳಾಗಿ ಬದಲಾಗಿವೆ. ಗೊಬ್ಬರವಿಲ್ಲದ ಹೊಲಗಳು ಬರಡಾಗುತ್ತಿವೆ. ಇಂತಹ ಹೊತ್ತಿನಲ್ಲಿ ಸಗಣಿಗೆ ಚಿನ್ನದ ಬೆಲೆ ಇದೆ. ಕೈಯಲ್ಲಿ ರೊಕ್ಕ ಹಿಡಿದುಕೊಂಡು ಹುಡುಕಿದರೂ ಗೊಬ್ಬರ ಸಿಗುತ್ತಿಲ್ಲ. ಲಭ್ಯವಿರುವಷ್ಟನ್ನಾದರೂ ಸರಿಯಾಗಿ ಸಂಗ್ರಹಿಸಿ ಕೃಷಿಗೆ ಬಳಸಿದರೆ ಸೌಖ್ಯದ ದಿನಗಳು ಬಂದಾವು. ಕತ್ತೆಗೇನು ಗೊತ್ತು ಕಸ್ತೂರಿ ವಾಸನೆ ಎನ್ನುತ್ತಾರಲ್ಲಾ ಹಾಗೆ ಸಗಣಿ ವಾಸನೆ (ಮಹತ್ವ) ಎಂತಹದು ಎಂಬುದು ಉತ್ತುಬಿತ್ತುವ ರೈತನಿಗೆ ಮಾತ್ರ ಗೊತ್ತಾಗುತ್ತದೆ. ರೈತನ ಹೆಂಡತಿ ಗರತಿಯ ಬಾಯಲ್ಲೇ ಕೇಳಿ:

ಕಸವ ಹೊಡೆದ ಕೈ ಕಸ್ತೂರಿ ನಾತವ
ಬಸವಣ್ಣ ನಿನ್ನ ಸಗಣಿ ಬಳಿದ ಕೈ
ಎಸಳ ಯಾಲಕ್ಕಿ ಗೊನಿ ನಾತ
ಎಂದು ಸಗಣಿಯ ಪಾವಿತ್ರ್ಯವನ್ನು ಅವಳು ಹೇಳಿದರೆ. ಗೋವು ತನ್ನ ಸಗಣಿಯನ್ನು ಕಂಡು ಅಸಹ್ಯ ಪಟ್ಟುಕೊಳ್ಳುವವರಿಗೆ ಏನು ಹೇಳುತ್ತದೆ ನೋಡಿ:
ಇಟ್ಟರೆ ಸಗಣಿಯಾದೆ ತಟ್ಟಿದರೆ ಕುರುಳಾದೆ
ಸುಟ್ಟರೆ ನೊಸಲಿಗೆ ವಿಭೂತಿಯಾದೆ
ತಟ್ಟದೆ ಹಾಕಿದರೆ ಮೇಲುಗೊಬ್ಬರವಾದೆ
ನೀನಾರಿಗಾದೆಯೋ ಎಲೆ ಮಾನವ

ಸಗಣಿಯ ಮಹತ್ವ ಕೇವಲ ಕೃಷಿಗೆ ಮಾತ್ರವಿಲ್ಲ. ಅದು ವಿಜ್ಞಾನಕ್ಕೂ ಇದೆ. ಹೇಗಂತಿರಾ? ಪರಮಾಣು ವಿಕಿರಣಗಳ ಸೋರಿಕೆಯ ವೇಳೆ ಅಪಾಯಕಾರಿ ಅಲ್ಫಾ, ಬೀಟಾ ಹಾಗೂ ಗಾಮಾ ಕಿರಣಗಳನ್ನು ಹೀರಿಕೊಳ್ಳುವ ಗುಣ ಸಗಣಿಗಿದೆ. ಪರಮಾಣು ಕೇಂದ್ರಗಳಲ್ಲಿ ಸಗಣಿ ಸಂರಕ್ಷಣೆಗಾಗಿ ಬಳಕೆಯಾಗುತ್ತದೆ. ಬ್ರಿಟಿಷರು ಭಾರತದ ದೇಶಿ ಸಂಸ್ಥಾನಗಳನ್ನು ಸೋಲಿಸಲು ಸಗಣಿಯನ್ನು ಬಳಸುತ್ತಿದ್ದರು ಎಂದರೆ ನಿಮಗೆ ಅಚ್ಚರಿಯಾಗಬಹುದು.

ವೀರರಾಣಿ ಕಿತ್ತೂರ ಚನ್ನಮ್ಮಳನ್ನು ಯುದ್ಧದಲ್ಲಿ ನೇರವಾಗಿ ಎದುರಿಸಲಾಗದ ಬ್ರಿಟಿಷರು ಕಿತ್ತೂರಿನ ಮದ್ದುಗುಂಡು ಉಗ್ರಾಣದಲ್ಲಿ ದೇಶದ್ರೋಹಿಗಳ ಮೂಲಕ ಸಗಣಿಯನ್ನು ಸುರುವಿ ಆ ಮದ್ದುಗುಂಡುಗಳು ಸ್ಫೋಟವಾಗದಂತೆ ಮಾಡಿದರು. ಕುತಂತ್ರ ಮತ್ತು ಮೋಸದಿಂದ ಚನ್ನಮ್ಮಾಜಿಯನ್ನು ಸೆರೆಹಿಡಿದರು.

ಅಂದು ನಮ್ಮ ಸಗಣಿಗೆ, ನಮ್ಮವರಿಗೆ ಸುಪಾರಿ ಕೊಟ್ಟ ಬ್ರಿಟಿಷರು ನಮ್ಮನ್ನೇ ಸೋಲಿಸಿದರು. ಇಂದು ನಮ್ಮವರೂ ಕೊಡುತ್ತಿದ್ದಾರೆ ಸುಪಾರಿ, ಸಂಚಗಾರ ಸಗಣಿಯನ್ನು ಭೂಮಿಯಿಂದಲೇ ಮಾಯ ಮಾಡಲು. ಎಂದಿಗೆ ಸಗಣಿ, ಜೇನು ಮತ್ತು ಕಪ್ಪೆಗಳು ಈ ಭೂಮಿಯ ಮೇಲೆ ಇಲ್ಲದಂತಾಗುತ್ತವೆಯೋ ಅವತ್ತಿಗೆ ಕೃಷಿ ಅವಸಾನವಾಯಿತು ಎಂದು ತಿಳಿದುಕೊಳ್ಳಬೇಕು ಎಂದು ಕೃಷಿ ವಿಜ್ಞಾನಿಗಳು ಹೇಳುತ್ತಾರೆ.

ದೇಶಿ ಆಕಳಿನ ಒಂದು ಗ್ರಾಮ್ ಸಗಣಿಯಲ್ಲಿ 300ರಿಂದ 500ಕೋಟಿ ಸೂಕ್ಷ್ಮಜೀವಿಗಳು ಇರುತ್ತವೆ. ಇವು ಭೂಮಿಯ ಫಲವತ್ತತೆಯನ್ನು ಹೆಚ್ಚಿಸಲು ಸಹಕಾರಿ. ಹಸುವಿನ ಶುದ್ಧ ಮೂತ್ರದಲ್ಲಿ ಮಿನರಲ್ ಮತ್ತು ಆ್ಯಂಟಿ ಬ್ಯಾಕ್ಟೀರಿಯಲ್ ಅಂಶವಿರುತ್ತದೆ. ಅದರ ಪಾನ ಮತ್ತು ಸ್ನಾನದಿಂದ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆಯಂತೆ.

ಕಳೆದ ವರ್ಷ ರೈಲ್ವೆ ಇಲಾಖೆಯು ಬಯೋ ಶೌಚಾಲಯ ಶುದ್ಧಿಗಾಗಿ 3500 ಟ್ರಕ್ ಸಗಣಿ ಖರೀದಿಸಿತ್ತು. ಅಡುಗೆಗೆ ಬಯೋ ಗ್ಯಾಸ್ ತಯಾರಿಸಲು ಸಗಣಿ ಉಪಯೋಗವಾಗುತ್ತಿದೆ.

ನಾವು ಸಣ್ಣವರಿದ್ದಾಗ ಶಾಲೆಗೆ ಹೋಗುವಾಗ ಊರ ಜಂಗಲಿ ದನಗಳು ನಮ್ಮನ್ನು ಎದುರುಗೊಳ್ಳುತ್ತಿದ್ದವು. ಕಾಡಿಗೆ ಮೇಯಲು ಹೋಗುತ್ತಿದ್ದ ಅವುಗಳ ಮೈ ಚಪ್ಪರಿಸುತ್ತ, ಅವು ರಸ್ತೆ ತುಂಬ ಹಾಕಿದ ಸಗಣಿ ಹ್ವಾಂತ್ಲಾಗಳ ಮೇಲಿಂದ ಜಿಗಿಯುತ್ತ ಹೋಗುತ್ತಿದ್ದೆವು. ಇವತ್ತು ಹಳ್ಳಿಗೆ ಹೋದರೆ ದನಗಳೇ ಇಲ್ಲ. ರಸ್ತೆ ತುಂಬ ವಾಹನಗಳ ದಂಡು, ಹೊಗೆ, ಕರ್ಕಶ ಶಬ್ದ. ಹಳ್ಳಿಯ ಮನೆಯ ಗೋಡೆಗೆಲ್ಲ ರೊಟ್ಟಿ ಬಡಿದ ಹಾಗೆ ಸಗಣಿ ಕುಳ್ಳು(ಬೆರಣಿ) ತಟ್ಟಿರುವುದು ಸಾಮಾನ್ಯವಾಗಿರುತ್ತಿತ್ತು.

ಪ್ರತಿ ಮನೆಯ ಹಿತ್ತಲಿನಲ್ಲಿ ಕುಳ್ಳಬಾನಗಳು (ಉರುವಲಿಗಾಗಿ) ಇರುತ್ತಿದ್ದವು. ಕುಳ್ಳು ಎಂದಾಕ್ಷಣ ಹೋಳಿ ಹುಣ್ಣಿಮೆ ನೆನಪಾಗುತ್ತದೆ. ಹೋಳಿ ಹಬ್ಬ ಇನ್ನೇನು ಒಂದು ವಾರ ಇದೆ ಎನ್ನುತ್ತಿದ್ದಂತೆ, ಕಾಮದಹನಕ್ಕೆ ಬೇಕಾದ ಕುಳ್ಳನ್ನು ಮಂದಿ ಮನಿಯ ಹಿತ್ತಲುಗಳಿಂದ ಕಳ್ಳತನ ಮಾಡುವ ಕಾಯಕವನ್ನು ನಾವು ಆರಂಭಿಸುತ್ತಿದ್ದೆವು. ಕಳ್ಳತನ ಮಾಡುವಾಗ ಕೈಗೆ ಸಿಕ್ಕರೆ ಜನ ಹಾಕ್ಕೊಂಡು ಬಡಿಯುತ್ತಿದ್ದರು. ಆದರೂ ಆ ಕಳ್ಳತನಕ್ಕೆ ದೈವೀ ಪ್ರೇರಣೆ ಇರುತ್ತಿತ್ತು.

ಈಗ ಹಟ್ಟಿಹಬ್ಬಕ್ಕೆ ಗುಳ್ಳವ್ವನನ್ನು ಇಡಲು ಸಹ ಸಗಣಿ ಸಿಗುತ್ತಿಲ್ಲ. ಹಬ್ಬಕ್ಕೆ ಮತ್ತು ಉಪನಯನಕ್ಕೆ ಸಗಣಿ, ಹೋಮ, ಹವನ, ಸಂಸ್ಕಾರಕ್ಕೆ ಬೆರಣಿಯನ್ನು ಅಮೇಜಾನ್‌ನಲ್ಲಿ ತರಿಸಿಕೊಳ್ಳುವ ಕಾಲ ಬಂದಿದೆ. ಮನೆಯಲ್ಲಿ ದನದ ಹಕ್ಕಿ, ನೆಲಗಳು ಇಲ್ಲ. ಸಗಣಿಯಿಂದ ನೆಲ ಸಾರಿಸುವ ಪ್ರಮೆಯವೇ ಇಲ್ಲ. ಎಲ್ಲವೂ ಸಿಮೆಂಟ್, ಟಾರು, ಟೈಲ್ಸ್‌ಮಯ ಆಗಿದೆ. ಸಗಣಿ ಎಂದರೆ ರೈತರ ಪಾಲಿಗೆ ಲಕ್ಷ್ಮಿ. ಅಂತಹ ಸಗಣಿಯ ಸಂಗ್ರಹಕ್ಕಾಗಿಯೇ ದನಗಳನ್ನು ಕೊಟ್ಟಿಗೆಯ ತುಂಬ ಸಾಕುವ ಕಾಲ ಒಂದಿತ್ತು. ಕೃಷಿ ಮತ್ತು ಫಸಲು ಸಮೃದ್ಧವಾಗಬೇಕಾದರೆ ಸಗಣಿ ಗೊಬ್ಬರ ಬೇಕೇಬೇಕು.

ಬೆಳೆಗಳಿಗೆ ಕ್ರಿಮಿಕೀಟ ತಗುಲದಂತೆ ಮಾಡಲು ಗಂಜಳದ ಉಪಯೋಗ ಮಾಡಲೇಬೇಕು. ರೈತನ ಬದುಕಿನ ಅವಿಭಾಜ್ಯ ಅಂಗವಾಗಿದ್ದ ಪಶುಗಳನ್ನು ಕಾಮಧೇನು ಎನ್ನುತ್ತಾರೆ. ಕಾಮಧೇನುವಿನ ಕೊಡುಗೆ ಸಗಣಿಯಿಂದ ಮನೆ, ಗೋಡೆ ಸಾರಿಸುವುದು, ಗೋಮೂತ್ರದಿಂದ ಮನೆ ಶುದ್ಧಗೊಳಿಸುವುದು ಮಾಡುತ್ತಿದ್ದರು. ಸಗಣಿ ರೋಗ ನಿರೋಧಕ, ಗೋಮೂತ್ರ ಕ್ರಿಮಿನಾಶಕ. ಇದರಿಂದ ಸೊಳ್ಳೆ ನೊಣಗಳು ಬಾಧಿಸುವುದಿಲ್ಲ ಎಂದು ಹಿರಿಯರು ಹೇಳುತ್ತಾರೆ. ನಾನು ಹೀಗೇ ಒಮ್ಮೆ ವಿಜ್ಞಾನ ಲೇಖಕ ನಾಗೇಶ ಹೆಗಡೆಯವರನ್ನು ‘ಮಕ್ಕಳಲ್ಲಿ ರೋಗನಿರೋಧಕ ಶಕ್ತಿ ಹೆಚ್ಚು ಮಾಡಲು ಏನು ಮಾಡಬೇಕು’ ಎಂದು ಕೇಳಿದೆ. ಅವರು ‘ಮಕ್ಕಳನ್ನು ಮಣ್ಣು ಮತ್ತು ಸಗಣಿಯಲ್ಲಿ ಆಟ ಆಡಲು ಬಿಡಬೇಕು’ ಎಂದರು. ಸಗಣಿ ಎಂದರೆ ಮೂಗು ಮುಚ್ಚಿಕೊಳ್ಳುವ ಹುಚ್ಚು ಜನರಿಗೇನು ಗೊತ್ತು ಎಸಳ ಯಾಲಕ್ಕಿ ಗೊನೆ ನಾತ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT