ನ್ಯಾ. ದೀಪಕ್ ಮಿಶ್ರಾ ಮೇಲಿತ್ತು ಬಾಹ್ಯ ಪ್ರಭಾವ: ನ್ಯಾ.ಜೋಸೆಫ್ ಕುರಿಯನ್ ಆರೋಪ

7
ಸುಪ್ರೀಂ ಕೋರ್ಟ್‌ನ ನಿವೃತ್ತ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ವಿರುದ್ಧ ಆರೋಪ

ನ್ಯಾ. ದೀಪಕ್ ಮಿಶ್ರಾ ಮೇಲಿತ್ತು ಬಾಹ್ಯ ಪ್ರಭಾವ: ನ್ಯಾ.ಜೋಸೆಫ್ ಕುರಿಯನ್ ಆರೋಪ

Published:
Updated:

ನವದೆಹಲಿ: ‘ಸುಪ್ರೀಂ ಕೋರ್ಟ್‌ನ ಹಿಂದಿನ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ಅವರು ಬಾಹ್ಯ ಶಕ್ತಿಗಳ ಪ್ರಭಾವದಲ್ಲಿ ಕೆಲಸ ಮಾಡುತ್ತಿದ್ದರು’ ಎಂದು ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಕುರಿಯನ್ ಜೋಸೆಫ್ ಆರೋಪಿಸಿದ್ದಾರೆ.

ಪ್ರಕರಣಗಳ ಹಂಚಿಕೆಯಲ್ಲಿ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ಪಕ್ಷಪಾತ ಮಾಡುತ್ತಿದ್ದಾರೆ ಎಂದು 2018ರ ಜನವರಿ 18ರಂದು ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದ್ದ ಸುಪ್ರೀಂ ಕೋರ್ಟ್‌ನ ನಾಲ್ವರು ನ್ಯಾಯಮೂರ್ತಿಗಳಲ್ಲಿ ಜೋಸೆಫ್ ಸಹ ಒಬ್ಬರು. ಅವರು ನವೆಂಬರ್ 29ರಂದಷ್ಟೇ ಸೇವೆಯಿಂದ ನಿವೃತ್ತರಾಗಿದ್ದಾರೆ.

‘ಕೆಲವು ಬಾಹ್ಯ ಶಕ್ತಿಗಳು ದೀಪಕ್ ಮಿಶ್ರಾ ಅವರನ್ನು ರಿಮೋಟ್‌ನಂತೆ ನಿಯಂತ್ರಿಸುತ್ತಿದ್ದವು. ಆ ಶಕ್ತಿಗಳ ಪ್ರಭಾವವು ನ್ಯಾಯಾಂಗದ ಕಾರ್ಯನಿರ್ವಹಣೆಯನ್ನು ಬಾಧಿಸುತ್ತಿದ್ದವು’ ಎಂದು ಜೋಸೆಫ್ ಆರೋಪಿಸಿದ್ದಾರೆ.

ಆ ಬಾಹ್ಯಶಕ್ತಿಗಳು ಯಾವುವು ಎಂಬುದರ ಬಗ್ಗೆ ಮಾಹಿತಿ ನೀಡಲು ನಿರಾಕರಿಸಿದ್ದಾರೆ. ಆದರೆ, ‘ದೀಪಕ್ ಮಿಶ್ರಾ ಅವರ ವಿರುದ್ಧ ಪತ್ರಿಕಾಗೋಷ್ಠಿ ನಡೆಸಿದ್ದ ನಾಲ್ವರು ನ್ಯಾಯಮೂರ್ತಿಗಳು ಮತ್ತು ಸುಪ್ರೀಂ ಕೋರ್ಟ್‌ನ ಉಳಿದ ನ್ಯಾಯಮೂರ್ತಿಗಳು ಈ ಬಾಹ್ಯ ಪ್ರಭಾವವನ್ನು ಗ್ರಹಿಸಿದ್ದರು’ ಎಂದಷ್ಟೇ ಅವರು ಹೇಳಿದ್ದಾರೆ.

‘ಬಾಹ್ಯ ಶಕ್ತಿ ಎಂದರೆ ರಾಜಕೀಯ ಪಕ್ಷಗಳೇ’ ಎಂದು ಪತ್ರಕರ್ತರು ಅವರನ್ನು ಪ್ರಶ್ನಿಸಿದ್ದಾರೆ. ‘ಪ್ರಕರಣಗಳ ವಿಚಾರದಲ್ಲಿ ಮುಖ್ಯ ನ್ಯಾಯಮೂರ್ತಿ ಪಕ್ಷಪಾತ ಮಾಡುತ್ತಿದ್ದಾರೆ ಎಂಬುದಷ್ಟೇ ಇತರ ನ್ಯಾಯಮೂರ್ತಿಗಳ ಕಾಳಜಿಯ ವಿಷಯವಾಗಿತ್ತು. ಈ ಬಗ್ಗೆ ನಾನು ಇನ್ನೇನೂ ಹೇಳಲು ಬಯಸುವುದಿಲ್ಲ’ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

‘ಪಕ್ಷಪಾತದ ಬಗ್ಗೆ ನಾವು ನಾಲ್ವರು ನ್ಯಾಯಮೂರ್ತಿಗಳೂ ದೀಪಕ್ ಮಿಶ್ರಾ ಅವರ ಜತೆ ಚರ್ಚಿಸಿದ್ದೆವು. ಲಿಖಿತ ಮನವಿಯನ್ನೂ ಮಾಡಿದ್ದೆವು. ಅವೆರಡೂ ಕೆಲಸ ಮಾಡಲಿಲ್ಲ. ಹೀಗಾಗಿ ಪತ್ರಿಕಾಗೋಷ್ಠಿ ನಡೆಸಬೇಕಾಯಿತು. ಪತ್ರಿಕಾಗೋಷ್ಠಿಯ ನಂತರ ತುಸು ಬದಲಾವಣೆ ಆಯಿತು’ ಎಂದು ಅವರು ವಿವರಿಸಿದ್ದಾರೆ. 

‘ನ್ಯಾಯಾಂಗ ತನಿಖೆಯಾಗಲಿ’

ದೀಪಕ್ ಮಿಶ್ರಾ ಅವರು ಬಾಹ್ಯ ಪ್ರಭಾವಕ್ಕೆ ಒಳಗಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್ ಹೇಳುತ್ತಲೇ ಇತ್ತು. ಮಿಶ್ರಾ ಅವರ ಜತೆ ಕೆಲಸ ಮಾಡಿದ್ದ ನ್ಯಾಯಮೂರ್ತಿ ಕುರಿಯನ್ ಜೋಸೆಫ್ ಅವರು ಈ ಅನುಮಾನ ನಿಜ ಎಂಬುದನ್ನು ಈಗ ದೃಢಪಡಿಸಿದ್ದಾರೆ. ನ್ಯಾಯಾಂಗವನ್ನು ಪ್ರಭಾವಿಸುತ್ತಿದ್ದ ಬಾಹ್ಯ ಶಕ್ತಿ ಯಾವುದು ಎಂಬುದನ್ನು ಪತ್ತೆ ಮಾಡಲು ಸಂಸದೀಯ ಸಮಿತಿ ತನಿಖೆ ಮತ್ತು ನ್ಯಾಯಾಂಗ ತನಿಖೆಗಳನ್ನು ಪ್ರತ್ಯೇಕವಾಗಿ ನಡೆಸಬೇಕು ಎಂದು ಕಾಂಗ್ರೆಸ್ ಒತ್ತಾಯಿಸಿದೆ.
**

ಕೇಂದ್ರ ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯನ್ನು ಕೈಗೊಂಬೆಯಂತೆ ಆಡಿಸುತ್ತಿತ್ತು ಎಂಬುದು ಈಗ ಸ್ಪಷ್ಟವಾಗಿದೆ
ರಣದೀಪ್ ಸಿಂಗ್ ಸುರ್ಜೇವಾಲ, ಕಾಂಗ್ರೆಸ್ ವಕ್ತಾರ

**

ಸಿಬಿಐ ನ್ಯಾಯಾಧೀಶ ಬಿ.ಎಚ್‌.ಲೋಯಾ ಸಾವಿನ ಪ್ರಕರಣವಷ್ಟೇ ನಮ್ಮ ಮಾಧ್ಯಮಗೋಷ್ಠಿಗೆ ಕಾರಣವಾಗಿರಲಿಲ್ಲ. ಅದಕ್ಕೂ ಮೊದಲು ನಾವು ಮಾಡಿದ್ದ ಮನವಿಗಳನ್ನು ಮಿಶ್ರಾ ಕಡೆಗಣಿಸಿದ್ದರು
– ಕುರಿಯನ್ ಜೋಸೆಫ್, ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !