ಭಾನುವಾರ, ಜನವರಿ 26, 2020
31 °C
ಅಪರಾಧಿಗಳ ಪತ್ತೆ ಹಚ್ಚುವ ಉದ್ದೇಶ

ಮುಖಚಹರೆ ಪತ್ತೆ ವ್ಯವಸ್ಥೆ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಬೆಂಗಳೂರು, ಮನಮಾಡ್ ಹಾಗೂ ಭುಸಾವಲ್‌ನಲ್ಲಿನ ರೈಲು ನಿಲ್ದಾಣಗಳಲ್ಲಿ ಕೃತಕ ಬುದ್ಧಿಮತ್ತೆ ಆಧಾರಿತ ಮುಖಚಹರೆ ಪತ್ತೆ ವ್ಯವಸ್ಥೆಯನ್ನು ಅಳವಡಿಸಲಾಗಿದೆ ಎಂದು ರೈಲ್ವೆ ಇಲಾಖೆ ಅಧಿಕಾರಿಗಳು ಬುಧವಾರ ತಿಳಿಸಿದ್ದಾರೆ.

ಅಪರಾಧಿಗಳನ್ನು ಪತ್ತೆ ಹಚ್ಚುವ ಉದ್ದೇಶದಿಂದ ಈ ವ್ಯವಸ್ಥೆ ಪರಿಚಯಿಸಲಾಗುತ್ತಿದೆ. ಅಪರಾಧ ಮತ್ತು ಅಪರಾಧಿಗಳ ಪತ್ತೆ ವ್ಯವಸ್ಥೆ ಅಡಿಯಲ್ಲಿರುವ ಮಾಹಿತಿಗಳನ್ನು ಇದರೊಂದಿಗೆ ಜೋಡಿಸುವುದು ರೈಲ್ವೆ ರಕ್ಷಣಾ ಪಡೆ (ಆರ್‌ಪಿಎಫ್) ಉದ್ದೇಶ. ರೈಲು ನಿಲ್ದಾಣಗಳಲ್ಲಿ ಇರಬಹುದಾದ ಅಪರಾಧಿಗಳನ್ನು ಪತ್ತೆಹಚ್ಚಲು ಈ ವ್ಯವಸ್ಥೆ ಬಳಸಿಕೊಳ್ಳಲು ಆರ್‌ಪಿಎಫ್ ಚಿಂತನೆ ನಡೆಸಿದೆ.

‘ಪ್ರಾಯೋಗಿಕವಾಗಿ ಈ ನಿಲ್ದಾಣಗಳಲ್ಲಿ ವ್ಯವಸ್ಥೆ ಜಾರಿಗೆ ತರಲಾಗಿದೆ. ಪರೀಕ್ಷೆ ನಡೆಸಿದ ಬಳಿಕ ಎಲ್ಲಾ ರೈಲು ನಿಲ್ದಾಣಗಳಲ್ಲಿಯೂ ಇದನ್ನು ಅಳವಡಿಸಲಾಗುತ್ತದೆ’ ಎಂದು ಅಧಿಕಾರಿಗಳು ಹೇಳಿದ್ದಾರೆ.

ಬೆಂಗಳೂರು ಕೇಂದ್ರ, ಯಶವಂತಪುರ, ಮೈಸೂರು ಸೇರಿದಂತೆ  ನೈರುತ್ಯ ವಲಯದ 11 ನಿಲ್ದಾಣಗಳಲ್ಲಿ ಸಿಸಿಟಿವಿ ಕ್ಯಾಮೆರಾ ಸಹಿತ ಸಮಗ್ರ ರಕ್ಷಣಾ ವ್ಯವಸ್ಥೆಗಳನ್ನು ಅಳವಡಿಸಲಾಗಿದೆ.

ಕೇವಲ ನಿಲ್ದಾಣಗಳ ನಿಯಂತ್ರಣ ಕೊಠಡಿಗಳು ಮಾತ್ರವಲ್ಲದೆ ಹುಬ್ಬಳ್ಳಿ, ಮೈಸೂರು ಹಾಗೂ ಬೆಂಗಳೂರಿನಲ್ಲಿರುವ ವಿಭಾಗೀಯ ಕೇಂದ್ರಕಚೇರಿಗಳಿಂದಲೂ ಸಿಬ್ಬಂದಿ ಸಿಸಿಟಿವಿ ದೃಶ್ಯಾವಳಿಗಳ ಮೇಲೆ ನಿಗಾ ಇರಿಸಬಹುದು.

ಬೆಂಗಳೂರಿನಲ್ಲೂ ವಿಡಿಯೊ ಕಣ್ಗಾವಲು ವ್ಯವಸ್ಥೆ

ನಿರ್ಭಯಾ ನಿಧಿ ಅಡಿಯಲ್ಲಿ 983 ನಿಲ್ದಾಣಗಳಲ್ಲಿ ವಿಡಿಯೊ ಕಣ್ಗಾವಲು ವ್ಯವಸ್ಥೆ (ವಿಎಸ್‌ಎಸ್‌) ಅಳವಡಿಕೆಗೆ ರೈಲ್ವೆ ಮಂಡಳಿ ಒಪ್ಪಿಗೆ ನೀಡಿದೆ. ಇದಕ್ಕಾಗಿ ರೈಲ್ವೆ ಇಲಾಖೆಗೆ ಈ ವರ್ಷ ₹ 250 ಕೋಟಿ ಅನುದಾನ ಬಿಡುಗಡೆ ಆಗಿದೆ.

ಮೊದಲ ಹಂತದಲ್ಲಿ 200 ನಿಲ್ದಾಣಗಳಲ್ಲಿ ಈ ವ್ಯವಸ್ಥೆ ಅಳವಡಿಸಲಾಗುತ್ತಿದ್ದು, ನೈರುತ್ಯ ವಲಯದ ಬೆಂಗಳೂರು ಕಂಟೋನ್ಮೆಂಟ್, ಬಳ್ಳಾರಿ, ಬೆಳಗಾವಿ, ಬಂಗಾರಪೇಟೆ, ಹಾಸನ, ಶಿವಮೊಗ್ಗ ಹಾಗೂ ಸತ್ಯಸಾಯಿ ಪ್ರಶಾಂತಿ ನಿಲಯಂ ನಿಲ್ದಾಣಗಳಲ್ಲಿ ಈಗಾಗಲೇ ಜಾರಿಗೆ ಬಂದಿದೆ.

ಸಿಸಿಟಿವಿ ಕ್ಯಾಮೆರಾಗಳಿಂದ ದೊರಕುವ ಲೈವ್‌ ಫೀಡ್‌ಗಳನ್ನು ಆರ್‌ಪಿಎಫ್‌ನ ನಿಯಂತ್ರಣ ಕೊಠಡಿಗಳಲ್ಲಿ ಪ್ರದರ್ಶಿಸಲಾಗುತ್ತದೆ. ತನಿಖಾ ಉದ್ದೇಶಕ್ಕಾಗಿ 30 ದಿನಗಳ ಕಾಲ ವಿಡಿಯೊಗಳನ್ನು ಸಂಗ್ರಹಿಸಿಡಲಾಗುತ್ತದೆ. ಪ್ರಮುಖ ವಿಡಿಯೊಗಳಿದ್ದರೆ ಇನ್ನೂ ದೀರ್ಘಾವಧಿಗೆ ಇರಿಸಲಾಗುತ್ತದೆ. 

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು