ಪುಲ್ವಾಮಾ ದಾಳಿಗೆ ಬಿಜೆಪಿ ಸಂಚು ಹೂಡಿತ್ತೇ? ವೈರಲ್ ಆಗಿದೆ ತಿರುಚಿದ ಆಡಿಯೊ

ಬುಧವಾರ, ಮಾರ್ಚ್ 20, 2019
31 °C

ಪುಲ್ವಾಮಾ ದಾಳಿಗೆ ಬಿಜೆಪಿ ಸಂಚು ಹೂಡಿತ್ತೇ? ವೈರಲ್ ಆಗಿದೆ ತಿರುಚಿದ ಆಡಿಯೊ

Published:
Updated:

ಬೆಂಗಳೂರು: ಪುಲ್ವಾಮಾದಲ್ಲಿ 40 ಸಿಆರ್‌ಪಿಎಫ್‌ ಯೋಧರ ಸಾವಿಗೆ ಕಾರಣವಾದ ದಾಳಿಗೆ ಬಿಜೆಪಿ ಸಂಚು ಹೂಡಿತ್ತು ಎಂಬ ಆಡಿಯೊವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಅವಿ ದಂಡಿಯಾ ಎಂಬ ವ್ಯಕ್ತಿ ಫೇಸ್‌ಬುಕ್‌ ಲೈವ್‌ನಲ್ಲಿ ಬಿಜೆಪಿ ವಿರುದ್ಧ ಆರೋಪ ಮಾಡಿದ್ದು, ಆಡಿಯೊ ಪ್ರಸಾರ ಮಾಡಿದ್ದಾರೆ. ಲೈವ್‌ ಅನ್ನು 24 ಗಂಟೆ ಒಳಗೆ ಹತ್ತು ಲಕ್ಷಕ್ಕೂ ಹೆಚ್ಚು ಜನ ವೀಕ್ಷಿಸಿದ್ದಾರೆ.

ಇದು  ತಿರುಚಿದ ಆಡಿಯೊ ಎಂಬುದನ್ನು ಆಲ್ಟ್‌ನ್ಯೂಸ್ ಸುದ್ದಿತಾಣ ಸಾಕ್ಷ್ಯ ಸಮೇತ ಬಹಿರಂಗಪಡಿಸಿದೆ.

ವಿಡಿಯೊದಲ್ಲೇನಿದೆ?: ದಂಡಿಯಾ ಬಿಡುಗಡೆ ಮಾಡಿರುವ ತಿರುಚಿದ ಆಡಿಯೊದಲ್ಲಿ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಮತ್ತು ಅಪರಿಚಿತ ಮಹಿಳೆಯೊಬ್ಬರ ಧ್ವನಿಯಿದೆ. ಜನರಲ್ಲಿ ದೇಶಭಕ್ತಿ ಹೆಚ್ಚಿಸುವ ಸಲುವಾಗಿ ಯೋಧರ ಮೇಲೆ ದಾಳಿಗೆ ಸಂಚು ಹೂಡುವ ಕುರಿತಾದ ಮಾತುಕತೆ ಇದೆ.

ಟ್ವಿಟರ್‌ನಲ್ಲಿ 8,700 ಫಾಲೋವರ್ಸ್‌ ಅನ್ನು ಹೊಂದಿರುವ ಅವಿ ದಂಡಿಯಾ ತಾನು ‘ಟೀಮ್ ಕ್ಲೀನ್ ಜೈಪುರ’ ಮತ್ತು ‘ಸ್ಕ್ರೀಮ್ಸ್ ಆಫ್ ಸೋಲ್’ನ ಸ್ಥಾಪಕ, ಮಹೋಬ್ಬತ್‌ಕೆದಂಗೆಯ ಸದಸ್ಯ ಎಂದು ಬರೆದುಕೊಂಡಿದ್ದಾರೆ.

ದಂಡಿಯಾರ ಫೇಸ್‌ಬುಕ್‌ ಲೈವ್‌ ಅನ್ನು ಭಾರತದ ವಿರುದ್ಧ ಆರೋಪ ಮಾಡಲು ಪಾಕಿಸ್ತಾನದ thepost.com.pk, defence.pk, siasat.pk, zemtv.com, dailycapital.pk. ವೆಬ್‌ಸೈಟ್‌ಗಳೂ ಬಳಸಿಕೊಂಡಿವೆ.

ದಂಡಿಯಾ ಬಿಡುಗಡೆ ಮಾಡಿರುವ ಆಡಿಯೊ ಸಂಪೂರ್ಣ ನಕಲಿ. ವಿವಿಧ ಸಂದರ್ಶನಗಳಲ್ಲಿ ಬಿಜೆಪಿ ನಾಯಕರು ನೀಡಿದ್ದ ಹೇಳಿಕೆಗಳ ಕೆಲವು ಭಾಗಗಳನ್ನು ಕತ್ತರಿಸಿ, ಕೆಲವನ್ನು ಸೇರಿಸಿ ಸಂಕಲಿಸಿದ ಆಡಿಯೊವಿದು ಎಂದು ಆಲ್ಟ್‌ನ್ಯೂಸ್ ವರದಿ ಮಾಡಿದೆ.

ನಕಲಿ ಆಡಿಯೊ ಸೃಷ್ಟಿಸಿ ದೇಶವನ್ನು ಮುಜುಗರಕ್ಕೀಡುಮಾಡಲಾಗಿದೆ ಎಂಬುದಾಗಿ ಟ್ವಿಟರ್‌ ಖಾತೆದಾರ ಆರಿಫ್ ಖಾನ್ ಎಂಬುವವರೂ ಸಾಮಾಜಿಕ ಜಾಲತಾಣ ಬಳಕೆದಾರರನ್ನು ಎಚ್ಚರಿಸಿದ್ದಾರೆ.

‘ನಮ್ಮ ದೇಶವನ್ನು ಅವಮಾನಿಸಲು ಪಾಕಿಸ್ತಾನ ಮತ್ತು ಐಎಸ್‌ಐಯಿಂದ ದಂಡಿಯಾ ಹಣ ತೆಗೆದುಕೊಂಡಿದ್ದಾರೆ. ಸಂದರ್ಶನ ಮತ್ತು ಸಾರ್ವಜನಿಕ ಸಭೆಗಳಲ್ಲಿ ಮಾತನಾಡಿದ ಆಡಿಯೊಗಳನ್ನು ಮಹಿಳೆಯೊಬ್ಬರ ಧ್ವನಿಯ ಜತೆ ಸೇರಿಸಿ ಪುಲ್ವಾಮಾ ದಾಳಿಗೆ ದೇಶದೊಳಗೇ ಸಂಚು ಹೂಡಲಾಗಿದೆ ಎಂಬಂತೆ ಬಿಂಬಿಸಿದ್ದಾರೆ. ಇವರನ್ನು ಬಂಧಿಸಬೇಕು’ ಎಂದು ಆರಿಫ್ ಖಾನ್ ಆಗ್ರಹಿಸಿದ್ದಾರೆ.

ಹೀಗೆ ಸಾಗುತ್ತೆ  ತಿರುಚಿದ ಆಡಿಯೊದ ಸಂಭಾಷಣೆ:

ಅಮಿತ್ ಶಾ: ದೇಶದ ಜನರನ್ನು ಹಾದಿತಪ್ಪಿಸಬಹುದು. ಚುನಾವಣೆಗಾಗಿ ಯುದ್ಧ ನಡೆಯಬೇಕು ಎಂದು ನಾವು ಭಾವಿಸುತ್ತೇವೆ.

ಅಪರಿಚಿತ ಮಹಿಳೆ: ನೀವು ಹೇಳಿದ ಮಾತ್ರಕ್ಕೆ ಅದು ಆಗಲಾರದು ಅಮಿತ್‌ಜೀ. ಯಾವುದೇ ಉದ್ದೇಶವಿಲ್ಲದೆ ಯುದ್ಧ ಮಾಡಲಾಗದು. ಉಗ್ರರು ದಾಳಿ ನಡೆಸಿದರೆ ಆ ಬಗ್ಗೆ ತನಿಖೆ ನಡೆಸಬಹುದು.

ರಾಜನಾಥ್ ಸಿಂಗ್: ಯೋಧರ ವಿಷಯದಲ್ಲಿ ನಮ್ಮ ದೇಶ ಅತಿ ಸಂವೇದನಾಶೀಲವಾಗಿದೆ. ಯೋಧರಿಗಾಗಿ ಜನ ಭಾವುಕರಾಗುತ್ತಾರೆ.

ಅಪರಿಚಿತ ಮಹಿಳೆ: ಯೋಧರನ್ನು ಹುತಾತ್ಮರನ್ನಾಗಿಸಲು ನೀವು ಬಯಸುತ್ತೀರಾ?

ರಾಜನಾಥ್ ಸಿಂಗ್: ಇಂತಹ ಕೆಲಸ ಮಾಡಲು ನಿಮ್ಮಿಂದ ಸಾಧ್ಯವಾಗದೇ?

ಅಪರಿಚಿತ ಮಹಿಳೆ: ಒಬ್ಬ ಅಥವಾ ಇಬ್ಬರು ಯೋಧರಿಂದ ಏನೂ ಆಗದು. ನಾವು ಉರಿಯಲ್ಲಿ ಮಾಡಿದ್ದರಿಂದ ಏನೂ ಆಗಲಿಲ್ಲ. ಚುನಾವಣೆ ಹತ್ತಿರವಿದೆ. ರಾಷ್ಟ್ರೀಯ ಭದ್ರತೆಯನ್ನು ನಿಮ್ಮ ಆದ್ಯತೆಯಾಗಿ ಮಾಡಿಕೊಳ್ಳಬೇಕು. ಈ ವಿಚಾರದಲ್ಲಿ ರಾಜಕೀಯ ಮಾಡಿ.

ರಾಜನಾಥ್ ಸಿಂಗ್: ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದ ಪ್ರಶ್ನೆಗಳನ್ನು ರಾಜಕೀಯಗೊಳಿಸಬೇಕು.

ಅಪರಿಚಿತ ಮಹಿಳೆ: ರಾಜಕೀಯಕ್ಕಾಗಿ ಯುದ್ಧ ಮಾಡಲು ನೀವು ಬಯಸುತ್ತೀರಾ? ಕಾಶ್ಮೀರ ಅಥವಾ ಕಾಶ್ಮೀರದ ಸಮೀಪ ಪ್ರದೇಶಗಳಲ್ಲಿ ಏನಾದರೂ ಮಾಡೋಣ.

ರಾಜನಾಥ್ ಸಿಂಗ್: ಜಮ್ಮು ಅಥವಾ ಶ್ರೀನಗರ

ಅಪರಿಚಿತ ಮಹಿಳೆ: ಕೆಲ ಯೋಧರು, ಕೆಲವು ಪ್ಯಾರಾಮಿಲಿಟರಿ ಪಡೆಗಳ ಸಿಬ್ಬಂದಿ, ಕೆಲವು ಸಿಆರ್‌ಪಿಎಫ್ ಯೋಧರು ಮೃತಪಡುವಂತೆ ಮಾಡಲು ನಾವಲ್ಲಿ ಸ್ಫೋಟ ಮಾಡಿಸಬಹುದು. 100–50 ಯೋಧರು ಹುತಾತ್ಮರಾದರೆ ರಾಷ್ಟ್ರೀಯತೆಯ ಭಾವನೆ ಒಗ್ಗಟ್ಟಾಗಲಿದೆ.

ರಾಜನಾಥ್ ಸಿಂಗ್: ಯೋಧರು ಹುತಾತ್ಮರಾಗುವುದನ್ನು ರಾಜಕೀಯಗೊಳಿಸಬೇಕು

ಅಪರಿಚಿತ ಮಹಿಳೆ: ಇದು ಕೆಟ್ಟ ರಾಜಕೀಯ ಅಮಿತ್‌ ಜೀ

ಅಮಿತ್ ಶಾ: ಇದು ರಾಜಕೀಯವಲ್ಲ

ಅಪರಿಚಿತ ಮಹಿಳೆ: ಮತ್ತೇನಿದು. ಇದು ಕೆಟ್ಟ ರಾಜಕೀಯ

ಅಮಿತ್ ಶಾ: ನೀವು ನನ್ನಲ್ಲಿ ನೇರವಾಗಿ ಮಾತನಾಡುತ್ತಿದ್ದೀರಿ ತಾನೇ? ಇದು ಯಾಕೆ ಆಗಬೇಕು ಹೇಗೆ ಆಗಬೇಕು ಎಂಬುದನ್ನು ಕೇಳಿ.

ಅಪರಿಚಿತ ಮಹಿಳೆ: ನಾನೇನೂ ಕೇಳಲು ಬಯಸುವುದಿಲ್ಲ ಅಮಿತ್‌ ಜೀ. ನಾನಿದನ್ನು ಮಾಡದಿದ್ದರೆ ಬೇರೆ ಯಾರಾದರೂ ಮಾಡುತ್ತಾರೆ. ನೀವು ಬಾಂಬ್‌ ಸ್ಫೋಟ ಬಯಸುತ್ತೀರಿ ಎಂದಾದರೆ ನಾವದನ್ನು ಮಾಡುತ್ತೇವೆ. ನೀವೇನು ಬಯಸುತ್ತೀರೋ ಅದು ಆಗಲಿದೆ. ಯೋಧರು ಹುತಾತ್ಮರಾದರೆ ಅವರ ಕುಟುಂಬದವರಿಗೆ ಏನಾಗಲಿದೆ ಎಂಬುದು ತಿಳಿದಿದೆಯೇ?

ಅಮಿತ್ ಶಾ: ಪ್ರತಿಯೊಬ್ಬ ಯೋಧನ ಮನೆಯ ಪರಿಸ್ಥಿತಿ ಹೇಗಿರಲಿದೆ?

ಅಪರಿಚಿತ ಮಹಿಳೆ: ಭೀತಿ ಹೆಚ್ಚಾಗಲಿದೆ.

ಅಮಿತ್ ಶಾ: ಭೀತಿ ಹೆಚ್ಚಾಗಲಿದೆ. ಬೇರೆ ದಾರಿಯಿಲ್ಲ.

ಅಪರಿಚಿತ ಮಹಿಳೆ: ಬೇರೆ ಹಲವು ದಾರಿಗಳಿವೆ ಅಮಿತ್‌ ಜೀ. ನಿಮ್ಮ ಬಳಿ ಇವಿಎಂಗಳಿರಲಿಲ್ಲವೇ? ಯೋಧರನ್ನು ಹುತಾತ್ಮರಾಗಿಸಲು ನೀವು ಯಾಕೆ ಬಯಸುತ್ತೀರಿ ಎಂಬುದು ಅರ್ಥವಾಗುತ್ತಿಲ್ಲ. ಏನೇ ಆಗಲಿ, ನೀವು ಬಯಸುತ್ತೀರಿ ಎಂದಾದರೆ ನಾವು ಸ್ಫೋಟ ಮಾಡುತ್ತೇವೆ. 100–50 ಯೋದರು ಹುತಾತ್ಮರಾಗಲಿದ್ದಾರೆ. ಆದರೆ, ಯೋಧರು ಹುತಾತ್ಮರಾಗುವುದಕ್ಕಾಗಿಯೇ ಸೇನೆ ಸೇರಬೇಕು ಎಂದು ನೀವು ಹೇಳಬಾರದಲ್ಲವೇ? ಸೇನೆಗೆ ಈಗಾಗಲೇ ಶತ್ರುಗಳಿದ್ದು, ನೀವೂ ಶತ್ರುವಾಗಲಿದ್ದೀರಿ.

ಅಮಿತ್ ಶಾ: ಹೀಗೆ ಆಗದಿದ್ದರೆ ನಾವು ಬದಲಾವಣೆ ತರಲು ಹೇಗೆ ಸಾಧ್ಯ?

ಅಪರಿಚಿತ ಮಹಿಳೆ: ನಾನು ನಿಮ್ಮ ಜತೆ ವಾದ ಮಾಡಲು ಇಚ್ಛಿಸುವುದಿಲ್ಲ. ನಾನು ನಿಮ್ಮ ಕೆಲಸ ಪೂರೈಸಿಕೊಡುತ್ತೇನೆ. ನನಗೆ ಸ್ವಲ್ಪ ಹಣ ಕಳುಹಿಸಿ. ನಾನು ಮತ್ತೆ ನಿಮಗೆ ಫೆಬ್ರುವರಿ 12–13ರಂದು ಕರೆ ಮಾಡುತ್ತೇನೆ. ನನಗೆ ಹಣ ಕಳುಹಿಸಿ.

ಅಮಿತ್ ಶಾ: ನಾನು ನಿಮಗೆ ತಿಳಿಸುತ್ತೇನೆ.

ಸತ್ಯಾಂಶವೇನು?

(ರಾಜನಾಥ್ ಸಿಂಗ್ ಫೆಬ್ರುವರಿ 22ರಂದು ಇಂಡಿಯಾ ಟುಡೆ ಸುದ್ದಿವಾಹಿನಿಗೆ ನೀಡಿದ್ದ ಸಂದರ್ಶನ)

‘ಯೋಧರ ವಿಷಯದಲ್ಲಿ ನಮ್ಮ ದೇಶ ಅತೀ ಸಂವೇದನಾಶೀಲವಾಗಿದೆ’ ಎಂಬ ರಾಜನಾಥ್ ಸಿಂಗ್ ಹೇಳಿಕೆಯನ್ನು ಅವರು ಫೆಬ್ರುವರಿ 22ರಂದು ಇಂಡಿಯಾ ಟುಡೆ ಸುದ್ದಿವಾಹಿನಿಗೆ ನೀಡಿದ್ದ ಸಂದರ್ಶನದಿಂದ ತೆಗೆದುಕೊಳ್ಳಲಾಗಿದೆ. ಪುಲ್ವಾಮಾ ದಾಳಿಯ ಬಳಿಕ ಗೃಹ ಸಚಿವರು ನೀಡಿದ ಮೊದಲ ಸಂದರ್ಶನ ಇದು.

ಸಂದರ್ಶನದ 8:39ನೇ ನಿಮಿಷದಲ್ಲಿ ರಾಜನಾಥ್ ಹೇಳಿರುವ, ‘ಯೋಧರ ವಿಷಯದಲ್ಲಿ ನಮ್ಮ ಸರ್ಕಾರ ಅತೀ ಸಂವೇದನಾಶೀಲವಾಗಿದೆ’ ವಾಕ್ಯವನ್ನು ಆಡಿಯೊದಲ್ಲಿ ತೆಗೆದುಕೊಂಡಿರುವ ದಂಡಿಯಾ, ‘ಸರ್ಕಾರ’ ಎಂಬ ಶಬ್ದಕ್ಕೆ ಕತ್ತರಿ ಹಾಕಿ ಆ ಜಾಗದಲ್ಲಿ ‘ದೇಶ’ ಎಂಬ ಶಬ್ದವನ್ನು ಸೇರಿಸಿದ್ದಾರೆ.

ಸಂದರ್ಶನದ 10:41ನೇ ನಿಮಿಷದಲ್ಲಿ ರಾಜನಾಥ್ ಹೇಳಿರುವ, ‘ದೇಶಭಕ್ತಿಯ ಭಾವನೆ ಅವರ ಕಣಕಣದಲ್ಲಿದೆ’ ಎಂಬ ಮಾತು ಇದೆ. ಇದು ಲೆಫ್ಟಿನೆಂಟ್ ಕರ್ನಲ್ ದೀಪೇಂದ್ರ ಸಿಂಗ್ ಹೂಡಾ (ಭಾರತೀಯ ಸೇನೆಯ ಉತ್ತರ ಕಮಾಂಡ್‌ನ ನಿವೃತ್ತ ಕಮಾಂಡಿಂಗ್ ಇನ್ ಚೀಫ್) ಅವರನ್ನುದ್ದೇಶಿಸಿ ಹೇಳಿದ್ದಾಗಿದೆ. ‘ದೇಶಭಕ್ತಿ’ ಎಂಬ ಶಬ್ದವನ್ನು ಆಡಿಯೊದಲ್ಲಿ ಕೈಬಿಡಲಾಗಿದೆ. ಯೋಧರ ಬಗೆಗಿನ ದೇಶದ ಜನತೆಯ ಭಾವನೆಯ ಬಗ್ಗೆ ರಾಜನಾಥ್ ಮಾತನಾಡುತ್ತಿದ್ದಾರೆ ಎಂದು ಬಿಂಬಿಸುವುದು ದಂಡಿಯಾ ಉದ್ದೇಶವಾಗಿತ್ತು ಎಂದು ಆಲ್ಟ್‌ನ್ಯೂಸ್ ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಸಂದರ್ಶನದ 5:10ನೇ ನಿಮಿಷದಲ್ಲಿ ರಾಜನಾಥ್, ‘ದೇಶದ ಭದ್ರತೆಗೆ ಸಂಬಂಧಿಸಿದ ಪ್ರಶ್ನೆಗಳನ್ನು ರಾಜಕೀಯಗೊಳಿಸಬಾರದು’ ಎಂದು ಹೇಳಿದ್ದಾರೆ. ಇದು ಪುಲ್ವಾಮಾ ದಾಳಿ ವೇಳೆ ಪ್ರಧಾನಿಯವರು ಜಿಮ್‌ ಕಾರ್ಬೆಟ್‌ನಲ್ಲಿ ವ್ಯಸ್ತರಾಗಿದ್ದರು ಎಂಬ ಕಾಂಗ್ರೆಸ್‌ನ ಆರೋಪಕ್ಕೆ ಸಂಬಂಧಿಸಿ ಶ್ವೇತಾ ಸಿಂಗ್ ಅವರ ಪ್ರಶ್ನೆಗೆ ನೀಡಿದ ಉತ್ತರವಾಗಿದೆ.

ಅಮಿತ್ ಶಾ ಅವರು ಯಾವ ಸಂದರ್ಭದಲ್ಲಿ ಮಾತನಾಡಿದ್ದನ್ನು ಆಡಿಯೊದಲ್ಲಿ ಬಳಸಲಾಗಿದೆ ಎಂಬುದನ್ನು ಇನ್ನೂ ಪತ್ತೆಹಚ್ಚಲಾಗಿಲ್ಲ. ಆದರೂ ಬೇರಾವುದೋ ಸಂದರ್ಭದಲ್ಲಿ ಸಾರ್ವಜನಿಕ ವೇದಿಕೆಯಲ್ಲಿ ಅಥವಾ ಸಂದರ್ಶನದಲ್ಲಿ ಮಾತನಾಡಿದ್ದನ್ನು ಆಡಿಯೊದಲ್ಲಿ ಬಳಸಲಾಗಿದೆ ಎಂಬುದು ಸ್ಪಷ್ಟ. ಇದಕ್ಕೆ ಸಾಕಷ್ಟು ಪುರಾವೆ ತಮ್ಮ ಬಳಿ ಇದೆ. ಇದನ್ನೂ ಶೀಘ್ರದಲ್ಲೇ ಪತ್ತೆಹಚ್ಚಿ ವರದಿ ಮಾಡುವುದಾಗಿಯೂ ಆಲ್ಟ್‌ನ್ಯೂಸ್‌ ತಿಳಿಸಿದೆ.

ಅನಿವಾಸಿ ಭಾರತೀಯ ಎಂದು ಹೇಳಿಕೊಂಡಿರುವ ದಂಡಿಯಾ ಅವರ ಫೇಸ್‌ಬುಕ್ ಪೇಜ್‌ ಸುಮಾರು 2 ಲಕ್ಷ ಫಾಲೋವರ್‌ಗಳನ್ನು ಹೊಂದಿದೆ. ಸುಮಾರು 85,000 ಜನ ಈಗಾಗಲೇ ಆಡಿಯೊವನ್ನು ಶೇರ್ ಮಾಡಿದ್ದಾರೆ. ಅಸಂಖ್ಯಾತ ಜನ ಈ ಆಡಿಯೊ ನಿಜವೆಂದು ನಂಬಿದ್ದಾರೆ ಎಂದು ವರದಿ ಉಲ್ಲೇಖಿಸಿದೆ.

ಬರಹ ಇಷ್ಟವಾಯಿತೆ?

 • 11

  Happy
 • 3

  Amused
 • 2

  Sad
 • 1

  Frustrated
 • 5

  Angry

Comments:

0 comments

Write the first review for this !