ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೆಎನ್‌ಯು: ಹಾಸ್ಟೆಲ್‌ ಶುಲ್ಕ ಹೆಚ್ಚಳ ಖಂಡಿಸಿ ಬೃಹತ್‌ ಪ್ರತಿಭಟನೆ

ಪೊಲೀಸರು – ವಿದ್ಯಾರ್ಥಿಗಳ ನಡುವೆ ಘರ್ಷಣೆ
Last Updated 11 ನವೆಂಬರ್ 2019, 20:48 IST
ಅಕ್ಷರ ಗಾತ್ರ

ನವದೆಹಲಿ:ಜವಾಹರ ಲಾಲ್ ನೆಹರು ವಿಶ್ವವಿದ್ಯಾಲಯದ ಆಡಳಿತ ಮಂಡಳಿಯು ವಿದ್ಯಾರ್ಥಿ ವಿರೋಧಿ ಧೋರಣೆ ಅನುಸರಿಸುತ್ತಿದೆ ಎಂದು ಆರೋಪಿಸಿ, ವಿ.ವಿಯ ವಿದ್ಯಾರ್ಥಿ ಸಂಘಟನೆ ಸೋಮವಾರ ನಡೆಸಿದ ಬೃಹತ್ ಪ್ರತಿಭಟನೆಯು ಪೊಲೀಸರು ಮತ್ತು ವಿದ್ಯಾರ್ಥಿಗಳ ನಡುವೆ ಘರ್ಷಣೆಗೆ ಕಾರಣವಾಯಿತು.

ಹಾಸ್ಟೆಲ್ ಶುಲ್ಕ ಏರಿಕೆಗೆ, ವಿದ್ಯಾರ್ಥಿಗಳಿಗೆ ವಸ್ತ್ರಸಂಹಿತೆ ಜಾರಿಗೆ, ಕ್ಯಾಂಪಸ್‌ನಲ್ಲಿ ಪ್ರತಿಭಟನೆಗೆ ತಡೆ ನೀಡಲು ಮತ್ತು ಕರ್ಪ್ಯೂ ಸಮಯ ನಿಗದಿಗೆ ಅವಕಾಶ ನೀಡುವ ಹಾಸ್ಟೆಲ್‌ ಕರಡು ಕೈಪಿಡಿಯನ್ನು ಹಿಂದಕ್ಕೆ ಪಡೆಯಬೇಕೆಂದು ಒತ್ತಾಯಿಸಿ ಜೆಎನ್‌ಯು ವಿದ್ಯಾರ್ಥಿ ಸಂಘಟನೆ ಪ್ರತಿಭಟನೆ ನಡೆಸಿತು.

ವಿ.ವಿಯಿಂದ ಮೂರು ಕಿ.ಮೀ ದೂರವಿರುವ ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿಯ (ಎಐಸಿಟಿಇ) ಸಭಾಂಗಣದಲ್ಲಿ ಆಯೋಜಿತವಾಗಿದ್ದ ಜೆಎನ್‌ಯು ಘಟಿಕೋತ್ಸವದಲ್ಲಿ ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು ಭಾಗವಹಿಸಿದ್ದರು. ಎಐಸಿಟಿಇ ತನಕ ಪ್ರತಿಭಟನೆ ನಡೆಸುವುದಾಗಿ ವಿದ್ಯಾರ್ಥಿ ಸಂಘಟನೆ ಹೇಳಿತ್ತು. ಆದರೆ, ಮುನ್ನೆಚ್ಚರಿಕೆ ಕ್ರಮವಾಗಿ ಪೊಲೀಸರು ಎಐಸಿಟಿಇಯ ಸುತ್ತಮುತ್ತ ಭದ್ರತೆ ಕೈಗೊಂಡಿದ್ದರು. ನಾಯ್ಡು ಅವರನ್ನು ಭೇಟಿ ಮಾಡಲು ಎಐಸಿಟಿಐನತ್ತ ಹೊರಟ ಪ್ರತಿಭಟನನಿರತ ವಿದ್ಯಾರ್ಥಿಗಳನ್ನು ಪೊಲೀಸರು ತುಸು ದೂರದಲ್ಲೇ ತಡೆದರು.ಈ ವೇಳೆ ಪೊಲೀಸರು ಮತ್ತು ವಿದ್ಯಾರ್ಥಿಗಳ ನಡುವೆ ವಾಗ್ವಾದ ನಡೆಯಿತು.

ಬೆಳಿಗ್ಗೆ 11.30ರ ನಂತರ ಪೊಲೀಸರು ಹಾಕಿದ್ದ ಬ್ಯಾರಿಕೇಡ್ ಮುರಿದು ಎಐಸಿಟಿಇ ಸಭಾಂಗಣದತ್ತ ನುಗ್ಗಲು ಯತ್ನಿಸಿದ ಕೆಲ ವಿದ್ಯಾರ್ಥಿಗಳನ್ನು ಪೊಲೀಸರು ಬಂಧಿಸಿದರು. ಆಗ ವಿದ್ಯಾರ್ಥಿಗಳು ಪೊಲೀಸರ ವಿರುದ್ಧ ಘೋಷಣೆ ಕೂಗಿ ಪ್ರತಿಭಟಿಸಿದರು. ಕೊನೆಗೆ ಪೊಲೀಸರು ಜಲಫಿರಂಗಿ ಪ್ರಯೋಗಿಸಿ ಪ್ರತಿಭಟನನಿರತ ವಿದ್ಯಾರ್ಥಿಗಳನ್ನು ಸ್ಥಳದಿಂದ ಚದುರಿಸಿದರು.

ಸಭಾಂಗಣದಲ್ಲೇ ಉಳಿದ ಸಚಿವ
ಜೆಎನ್‌ಯು ಘಟಿಕೋತ್ಸವದಲ್ಲಿ ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರೊಂದಿಗೆ ಅತಿಥಿಯಾಗಿ ತೆರಳಿದ್ದ ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ರಮೇಶ್ ಪೋಖ್ರಿಯಾಲ್ ‘ನಿಶಾಂಕ್’ ಅವರು ಅಲ್ಲಿನ ಸಭಾಂಗಣದಲ್ಲೇ
6 ತಾಸುಗಳ ಕಾಲ ಉಳಿಯಬೇಕಾಯಿತು.

ವಿದ್ಯಾರ್ಥಿಗಳ ಪ್ರತಿಭಟನೆ ತಾರಕಕ್ಕೇರುವ ಮುನ್ನವೇ ವೆಂಕಯ್ಯನಾಯ್ಡು ಅವರು ಸಭಾಂಗಣದಿಂದ ನಿರ್ಗಮಿಸಿದರು. ಆದರೆ, ಸಚಿವ ‘ನಿಶಾಂಕ್’, ಸ್ಥಳದಿಂದ ತೆರಳುವ ಹೊತ್ತಿಗೆ ವಿದ್ಯಾರ್ಥಿಗಳ ಪ್ರತಿಭಟನೆ ತೀವ್ರವಾಗಿತ್ತು. ಇದರಿಂದ ಅವರು ಕೆಲಕಾಲ ಸಭಾಂಗಣದಲ್ಲೇ ಇರಬೇಕಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT