ಜಯಪ್ರದಾ ವಿರುದ್ಧ ಅವಹೇಳನಕಾರಿ ಹೇಳಿಕೆ: ಆಜಂ ಖಾನ್ ವಿರುದ್ಧ ಎಫ್‌ಐಆರ್

ಶುಕ್ರವಾರ, ಏಪ್ರಿಲ್ 19, 2019
22 °C

ಜಯಪ್ರದಾ ವಿರುದ್ಧ ಅವಹೇಳನಕಾರಿ ಹೇಳಿಕೆ: ಆಜಂ ಖಾನ್ ವಿರುದ್ಧ ಎಫ್‌ಐಆರ್

Published:
Updated:

ಲಖನೌ: ಮಾಜಿ ಸಂಸದೆ, ನಟಿ ಜಯಪ್ರದಾ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ ಆರೋಪಕ್ಕೆ ಸಂಬಂಧಿಸಿ ಸಮಾಜವಾದಿ ಪಕ್ಷದ ಮುಖಂಡ ಆಜಂ ಖಾನ್ ವಿರುದ್ಧ ಎಫ್‌ಐಆರ್ ದಾಖಲಾಗಿದೆ.

ಉತ್ತರ ಪ್ರದೇಶದ ರಾಂಪುರದಲ್ಲಿ ಭಾನುವಾರ ಚುನಾವಣಾ ರ್‍ಯಾಲಿಯಲ್ಲಿ ಮಾತನಾಡಿದ್ದ ಆಜಂ ಖಾನ್, ‘ಆಕೆಯನ್ನು (ಜಯಪ್ರದಾ) ರಾಂಪುರದಲ್ಲಿ ರಾಜಕೀಯಕ್ಕೆ ಕರೆತಂದಿದ್ದೇ ನಾನು. ಯಾರೂ ಸಹ ಆಕೆಯನ್ನು ಸ್ಪರ್ಶಿಸದಂತೆ ನಾನು ನೋಡಿಕೊಂಡದ್ದಕ್ಕೆ ನೀವೆಲ್ಲ ಸಾಕ್ಷಿಯಾಗಿದ್ದೀರಿ. ಆಕೆಯ ನಿಜವಾದ ಮುಖವನ್ನು ಗುರುತಿಸಲು 17 ವರ್ಷಗಳು ಬೇಕಾಯಿತು. ಆಕೆ ‘ಖಾಕಿ ಅಂಡರ್‌ವೇರ್’ ಎಂಬುದು 17 ದಿನಗಳ ಹಿಂದೆ ನನಗೆ ತಿಳಿಯಿತು’ ಎಂದು ಹೇಳಿದ್ದರು. ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಸಮ್ಮುಖದಲ್ಲೇ ಖಾನ್ ಈ ಹೇಳಿಕೆ ನೀಡಿದ್ದರು.

ರಾಜ್ಯಸಭಾ ಸದಸ್ಯ ಅಮರ್‌ ಸಿಂಗ್‌ ಅವರ ಆಪ್ತೆಯಾಗಿರುವ ಜಯಪ್ರದಾ, ಎರಡು ಬಾರಿ ಸಮಾಜವಾದಿ ಪಕ್ಷದಿಂದ ಸ್ಪರ್ಧಿಸಿ ಲೋಕಸಭೆಗೆ ಆಯ್ಕೆಯಾಗಿದ್ದಾರೆ. ಅಮರ್‌ ಸಿಂಗ್‌ ಅವರನ್ನು ಸಮಾಜವಾದಿ ಪಕ್ಷದಿಂದ ಇತ್ತೀಚೆಗೆ ಉಚ್ಚಾಟನೆ ಮಾಡಲಾಗಿದೆ. ಇದರ ಬೆನ್ನಲ್ಲೇ ಜಯಪ್ರದಾ ಅವರು ಬಿಜೆಪಿ ಸೇರಿದ್ದಾರೆ.

ಇದನ್ನೂ ಓದಿ: ಬಿಜೆಪಿ ಸೇರಿದ ನಟಿ ಜಯಪ್ರದಾ​

ಮಾಧ್ಯಮಗಳ ವಿರುದ್ಧ ಅಸಮಾಧಾನ: ಹೇಳಿಕೆಯನ್ನು ತಪ್ಪಾಗಿ ಬಿಂಬಿಸಲಾಗಿದೆ ಎಂದು ಮಾಧ್ಯಮಗಳ ವಿರುದ್ಧ ಆಜಂ ಖಾನ್ ಅಸಮಾಧಾನ ಸೂಚಿಸಿದ್ದಾರೆ. ಅಲ್ಲದೆ, ಭಾಷಣದ ವೇಳೆ ಯಾರ ಹೆಸರನ್ನೂ ಉಲ್ಲೇಖಿಸಿಲ್ಲ ಎಂದೂ ಹೇಳಿದ್ದಾರೆ.

‘ನಾನು ರಾಂಪುರದಿಂದ 9 ಬಾರಿ ಶಾಸಕನಾಗಿ ಆಯ್ಕೆಯಾಗಿದ್ದೇನೆ. ಸಚಿವನಾಗಿಯೂ ಕಾರ್ಯನಿರ್ವಹಿಸಿದ್ದೇನೆ. ಏನು ಮಾತನಾಡಬೇಕು ಎಂಬುದು ನನಗೆ ಗೊತ್ತು. ನಾನು ಯಾರ ಹೆಸರನ್ನಾದರೂ ಉಲ್ಲೇಖಿಸಿದ್ದನ್ನು, ಹೆಸರು ಹೇಳಿ ಅವಮಾನ ಮಾಡಿದ್ದನ್ನು ಯಾರೇ ಸಾಬೀತುಪಡಿಸಿದರೂ ಚುನಾವಣಾ ಕಣದಿಂದ ಹಿಂದೆ ಸರಿಯಲಿದ್ದೇನೆ’ ಎಂದು ಅವರು ಹೇಳಿದ್ದಾರೆ.

ಮಹಿಳಾ ಆಯೋಗ ತರಾಟೆ: ಜಯಪ್ರದಾ ವಿರುದ್ಧ ನೀಡಿರುವ ಹೇಳಿಕೆಗೆ ಸಂಬಂಧಿಸಿ ರಾಷ್ಟ್ರೀಯ ಮಹಿಳಾ ಆಯೋಗವು ಆಜಂ ಖಾನ್ ಅವರನ್ನು ತರಾಟೆಗೆ ತೆಗೆದುಕೊಂಡಿದೆ. ಖಾನ್ ಹೇಳಿಕೆ ನಾಚಿಕೆಗೇಡಿನದ್ದು. ಈ ಕುರಿತು ವಿವರಣೆ ಕೋರಿ ಅವರಿಗೆ ನೋಟಿಸ್ ನೀಡಲಾಗುವುದು. ಚುನಾವಣೆಯಲ್ಲಿ ಅವರು ಸ್ಪರ್ಧಿಸುವುದಕ್ಕೆ ತಡೆಯೊಡ್ಡುವಂತೆ ಚುನಾವಣಾ ಆಯೋಗಕ್ಕೂ ಮನವಿ ಮಾಡಲಾಗುವುದು ಎಂದು ಆಯೋಗ ತಿಳಿಸಿದೆ.

ಬರಹ ಇಷ್ಟವಾಯಿತೆ?

 • 16

  Happy
 • 3

  Amused
 • 1

  Sad
 • 0

  Frustrated
 • 3

  Angry

Comments:

0 comments

Write the first review for this !