ಬಿಜೆಪಿ ಸೇರಿದ ನಟಿ ಜಯಪ್ರದಾ

ಸೋಮವಾರ, ಏಪ್ರಿಲ್ 22, 2019
29 °C

ಬಿಜೆಪಿ ಸೇರಿದ ನಟಿ ಜಯಪ್ರದಾ

Published:
Updated:

ನವದೆಹಲಿ: ಸಮಾಜವಾದಿ ಪಕ್ಷದ (ಎಸ್‌ಪಿ) ಮಾಜಿ ಸಂಸದೆ ಮತ್ತು ನಟಿ ಜಯಪ್ರದಾ ಅವರು ಮಂಗಳವಾರ ಬಿಜೆಪಿ ಸೇರಿದ್ದಾರೆ. ಎಸ್‌ಪಿ ಮುಖಂಡ ಅಜಂ ಖಾನ್‌ ಅವರು ಸ್ಪರ್ಧಿಸುತ್ತಿರುವ ರಾಂಪುರ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಜಯಪ್ರದಾ ಕಣಕ್ಕಿಳಿಯುವ ಸಾಧ್ಯತೆ ಇದೆ.

ರಾಜ್ಯಸಭಾ ಸದಸ್ಯ ಅಮರ್‌ ಸಿಂಗ್‌ ಅವರ ಆಪ್ತೆಯಾಗಿರುವ ಜಯಪ್ರದಾ, ಎರಡು ಬಾರಿ ಎಸ್‌ಪಿ ಟಿಕೆಟ್‌ನಲ್ಲಿ ಲೋಕಸಭೆಗೆ ಆಯ್ಕೆಯಾಗಿದ್ದರು. ಅಮರ್‌ ಸಿಂಗ್‌ ಅವರನ್ನು ಎಸ್‌ಪಿಯಿಂದ ಇತ್ತೀಚೆಗೆ ಉಚ್ಚಾಟನೆ ಮಾಡಲಾಗಿದೆ. 

ಬಿಜೆಪಿ ಸೇರಿದ ಜಯಪ್ರದಾ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಹೊಗಳಿದ್ದಾರೆ. ಮೋದಿ ಅವರು ದಿಟ್ಟ ನಾಯಕ, ಅವರ ಕೈಯಲ್ಲಿ ದೇಶ ಸುರಕ್ಷಿತ ಎಂದು ಹೇಳಿದ್ದಾರೆ. 

ಜಯಪ್ರದಾ ಅವರು ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸುವ ಬಗ್ಗೆ ಯಾವುದೇ ನಿರ್ಧಾರ ಆಗಿಲ್ಲ. ಹಿಂದೆ ಎರಡು ಬಾರಿ ಅವರು ರಾಂಪುರದಿಂದ ಗೆದ್ದಿದ್ದರು. ಹಾಗಾಗಿ ಅವರನ್ನು ಅಲ್ಲಿಂದ ಕಣಕ್ಕಿಳಿಸುವ ಬಗ್ಗೆ ಚಿಂತನೆ ನಡೆದಿದೆ ಎಂದು ಬಿಜೆಪಿ ಮೂಲಗಳು ಹೇಳಿವೆ. 

ತೆಲುಗು ದೇಶಂ ಪಾರ್ಟಿ (ಟಿಡಿಪಿ) ಸೇರುವ ಮೂಲಕ ಜಯಪ್ರದಾ ಅವರು ತಮ್ಮ ರಾಜಕೀಯ ಜೀವನ ಆರಂಭಿಸಿದ್ದರು. ಟಿಡಿಪಿ ಅವರನ್ನು ರಾಜ್ಯಸಭೆಗೆ ಆರಿಸಿ ಕಳುಹಿಸಿತ್ತು. ಬಳಿಕ ಎಸ್‌ಪಿ ಸೇರಿದ್ದರು. ಬಿಜೆಪಿ ಸೇರಿರುವುದು ತಮ್ಮ ಜೀವನದ ಅತ್ಯಂತ ಮಹತ್ವದ ಕ್ಷಣ, ಈ ಪಕ್ಷಕ್ಕಾಗಿ ಸಂಪೂರ್ಣ ಬದ್ಧತೆಯಿಂದ ಕೆಲಸ ಮಾಡುವುದಾಗಿ ಅವರು ಹೇಳಿದ್ದಾರೆ. 

ಉತ್ತರ ಪ್ರದೇಶದ 80 ಕ್ಷೇತ್ರಗಳ ಪೈಕಿ ಅತಿ ಹೆಚ್ಚು ಮುಸ್ಲಿಮರು ಇರುವ ಕ್ಷೇತ್ರ ರಾಂಪುರ. ಮುಸ್ಲಿಂ ಮತದಾರರ ಪ್ರಮಾಣ ಶೇ 50ಕ್ಕೂ ಹೆಚ್ಚು. ಹಾಗಾಗಿ, ಈ ಕ್ಷೇತ್ರದಲ್ಲಿ ಬಿಜೆಪಿಗೆ ಯಾವಾಗಲೂ ಕಠಿಣ ಸವಾಲು ಇರುತ್ತದೆ. ಮುಸ್ಲಿಂ ಮತಗಳ ವಿಭಜನೆ ಮತ್ತು ಹಿಂದೂ ಮತಗಳ ಕ್ರೋಡೀಕರಣದ ಮೂಲಕ ಇಲ್ಲಿ ಗೆಲ್ಲಲು ಬಿಜೆಪಿ ಯತ್ನಿಸುತ್ತದೆ. ಕಳೆದ ಚುನಾವಣೆಯಲ್ಲಿ ಮೋದಿ ಅಲೆಯಲ್ಲಿ ಈ ಕ್ಷೇತ್ರದಲ್ಲಿ ಬಿಜೆಪಿಯ ನೇಪಾಲ್‌ ಸಿಂಗ್‌ ಗೆದ್ದಿದ್ದರು. 

ಬಿಜೆಪಿಯ ತಾರಾಬಲ ಈಗ ಇನ್ನಷ್ಟು ಹೆಚ್ಚಾಗಿದೆ. ನಟಿ ಹೇಮಾಮಾಲಿನಿ, ನಟ ಪರೇಶ್‌ ರಾವಲ್‌ ಈಗಾಗಲೇ ಬಿಜೆಪಿಯಲ್ಲಿ ಇದ್ದಾರೆ. 

ಬರಹ ಇಷ್ಟವಾಯಿತೆ?

 • 4

  Happy
 • 1

  Amused
 • 1

  Sad
 • 0

  Frustrated
 • 3

  Angry

Comments:

0 comments

Write the first review for this !