ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂತ್ರಸ್ತೆಗೆ ಅಪಘಾತ: ಸದನದಲ್ಲಿ ಗದ್ದಲ

Last Updated 29 ಜುಲೈ 2019, 20:05 IST
ಅಕ್ಷರ ಗಾತ್ರ

ನವದೆಹಲಿ: ಉನ್ನಾವ್‌ ಅತ್ಯಾಚಾರ ಸಂತ್ರಸ್ತೆ ಪ್ರಯಾಣಿಸುತ್ತಿದ್ದ ಕಾರಿಗೆ ಲಾರಿ ಡಿಕ್ಕಿಯಾಗಿ ಇಬ್ಬರು ಮೃತಪಟ್ಟ ಘಟನೆಯು ರಾಜ್ಯಸಭೆಯಲ್ಲಿ ಸೋಮವಾರ ಪ‍್ರತಿಧ್ವನಿಸಿದೆ.

ಪೂರ್ವ ನಿರ್ಧಾರಿತ ವಿಷಯಗಳನ್ನು ಕೈಬಿಟ್ಟು, ಈ ಪ್ರಕರಣದ ಬಗ್ಗೆ ಚರ್ಚೆಗೆ ಅವಕಾಶ ನೀಡಬೇಕು ಎಂದು ಸಿಪಿಎಂ, ಟಿಎಂಸಿ ಹಾಗೂ ಎಎಪಿ ಸದಸ್ಯರು ಸೋಮವಾರ ಸಭಾಪತಿಗೆ ನೋಟಿಸ್‌ ನೀಡಿದ್ದರು. ನೋಟಿಸನ್ನು ಸಭಾಪತಿ ಮಾನ್ಯ ಮಾಡಲಿಲ್ಲ. ಆದರೆ, ಘಟನೆಯ ಬಗ್ಗೆ ಮಾತನಾಡಲು ಎಸ್‌ಪಿ ಮುಖಂಡ ರಾಂಗೋಪಾಲ್‌ ಯಾದವ್‌ ಅವರಿಗೆ ಅವಕಾಶ ನೀಡಿದರು.

ಅಪಘಾತ ಒಂದು ಸಂಚು ಎಂದು ವಾದಿಸಿದ ಯಾದವ್‌, ‘ಅಪಘಾತದಲ್ಲಿ ಬದುಕಿ ಉಳಿದವರ ಹತ್ಯೆ ನಡೆಸುವ ಪ್ರಯತ್ನ ನಡೆದಿದೆ. ಸಂತ್ರಸ್ತೆಯ ಭದ್ರತಾ ಸಿಬ್ಬಂದಿಯು ರಜೆಯ ಮೇಲಿದ್ದರು, ಅಪಘಾತ ನಡೆಸಿದ್ದ ಲಾರಿಯ ನೋಂದಣಿ ಸಂಖ್ಯೆಯನ್ನು ಗ್ರೀಸ್‌ನಿಂದ ಮುಚ್ಚಲಾಗಿತ್ತು’ ಎಂದರು.

ಈ ಸಂದರ್ಭದಲ್ಲಿ ಇತರ ಪಕ್ಷಗಳ ಸದಸ್ಯರೂ ಬಿಜೆಪಿ ವಿರುದ್ಧ ಹರಿಹಾಯ್ದರು. ‘ಪ್ರಕರಣದತ್ತ ಗಮನ ಹರಿಸುವಂತೆ ಕೇಂದ್ರದ ಗೃಹಸಚಿವರಿಗೆ ಸೂಚನೆ ನೀಡಲಾಗುವುದು’ ಎಂದು ಸಭಾಪತಿ ವೆಂಕಯ್ಯ ನಾಯ್ಡು ಅವರು ಭರವಸೆ ನೀಡಿದರೂ ವಿರೋಧಪಕ್ಷಗಳ ಸಿಟ್ಟು ತಣ್ಣಗಾಗಲಿಲ್ಲ. ಪರಿಣಾಮವಾಗಿ ಕಲಾಪವನ್ನು ಸ್ವಲ್ಪ ಹೊತ್ತಿನಕಾಲ ಮುಂದೂಡಬೇಕಾಯಿತು.

ವಿರೋಧಿಗಳಿಗೆ ಅಸ್ತ್ರ:ಬಿಜೆಪಿ ವಿರುದ್ಧ ಹೋರಾಡಲು ಈ ಘಟನೆಯು ವಿರೋಧ ಪಕ್ಷಗಳಿಗೆ ಪ್ರಮುಖ ಅಸ್ತ್ರವಾಗಿ ಒದಗಿಬಂದಿದೆ. ಘಟನೆಯ ಬಗ್ಗೆ ಸಿಬಿಐ ತನಿಖೆ ನಡೆಸಬೇಕು ಎಂದು ವಿರೋಧ ಪಕ್ಷಗಳು ಒತ್ತಾಯಿಸಿವೆ.

‘ಆಕೆ (ಸಂತ್ರಸ್ತೆ) ಅಪಘಾತದಲ್ಲಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ. ಆರೋಪಿಯು ಇನ್ನೂ ಬಿಜೆಪಿಯ ಶಾಸಕರಾಗಿ ಮುಂದುವರಿದಿದ್ದಾರೆ. ಇನ್ನೊಂದೆಡೆ ರಾಜ್ಯದ ಬಿಜೆಪಿ ಸರ್ಕಾರವು ‘ಭಯಮುಕ್ತ ರಾಜ್ಯ’ದ ಬಗ್ಗೆ ಪ್ರಚಾರಾಂದೋಲನ ನಡೆಸುತ್ತಿದೆ’ ಎಂದು ಕಾಂಗ್ರೆಸ್‌ ನಾಯಕಿ ಪ್ರಿಯಾಂಕಾ ಗಾಂಧಿ ಟ್ವೀಟ್‌ ಮಾಡಿದ್ದಾರೆ.

‘ಈ ಇಡೀ ಘಟನೆಯ ಬಗ್ಗೆ ಸುಪ್ರೀಂ ಕೋರ್ಟ್‌ ಗಮನ ಹರಿಸಬೇಕು. ಕೋರ್ಟ್‌ ಮಧ್ಯಪ್ರವೇಶದಿಂದ ಮಾತ್ರ ಸಂತ್ರಸ್ತೆಗೆ ನ್ಯಾಯ ಸಿಗಲು ಸಾಧ್ಯ’ ಎಂದು ಕಾಂಗ್ರೆಸ್‌ ವಕ್ತಾರ ಮನೀಶ್‌ ತಿವಾರಿ ಒತ್ತಾಯಿಸಿದ್ದಾರೆ.

‘ಉತ್ತರಪ್ರದೇಶದಲ್ಲಿ ದಿನನಿತ್ಯವೂ ಇಂಥ ಘಟನೆಗಳು ವರದಿಯಾಗುತ್ತಿದ್ದು, ಕಾನೂನು ಸುವ್ಯವಸ್ಥೆ ಕೈಮೀರಿ ಹೋಗುತ್ತಿದೆ’ ಎಂದು ತಿವಾರಿ ಟೀಕಿಸಿದ್ದಾರೆ.

ಪ್ರಕರಣದ ತನಿಖೆಗೆ ಉನ್ನತಮಟ್ಟದ ಸಮಿತಿಯನ್ನು ರಚಿಸಬೇಕು ಎಂದು ಟಿಎಂಸಿ ನಾಯಕಿ ಮಮತಾ ಬ್ಯಾನರ್ಜಿ, ಪ್ರಧಾನಿ ನರೇಂದ್ರ ಮೋದಿ ಅವರನ್ನು ಒತ್ತಾಯಿಸಿದ್ದಾರೆ.

‘ಇದೊಂದು ವ್ಯವಸ್ಥಿತ ಸಂಚು. ಅಪಘಾತ ಘಟನೆಯು ಕಾನೂನಿನ ಅಪಹಾಸ್ಯ’ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಆರೋಪಿಸಿದ್ದಾರೆ. ಬಿಎಸ್‌ಪಿ ನಾಯಕಿ ಮಾಯಾವತಿಯೂ ಇದೇ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ದೆಹಲಿಯಲ್ಲಿ ಚಿಕಿತ್ಸೆ
ಲಖನೌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸಂತ್ರಸ್ತೆಯನ್ನು ಭೇಟಿಮಾಡಿರುವ ದೆಹಲಿ ಮಹಿಳಾ ಆಯೋಗದ ಮುಖ್ಯಸ್ಥೆ ಸ್ವಾತಿ ಮಲಿವಾಲ್‌ ಅವರು, ‘ಹೆಚ್ಚಿನ ಚಿಕಿತ್ಸೆಗಾಗಿ ಸಂತ್ರಸ್ತೆಯನ್ನು ದೆಹಲಿಗೆ ಕರೆದೊಯ್ಯಲಾಗುವುದು’ ಎಂದಿದ್ದಾರೆ.

ಉತ್ತರಪ್ರದೇಶದ ಮುಖ್ಯಮಂತ್ರಿಗೆ ಪತ್ರ ಬರೆದಿರುವ ಅವರು, ಸಂತ್ರಸ್ತೆಗೆ ಹೆಚ್ಚಿನ ಚಿಕಿತ್ಸೆಯ ಅಗತ್ಯವಿದ್ದು, ಆಕೆಯನ್ನು ದೆಹಲಿಗೆ ಕರೆದೊಯ್ಯಲು ತುರ್ತಾಗಿ ಹೆಲಿಕಾಪ್ಟರ್‌ ವ್ಯವಸ್ಥೆ ಮಾಡುವಂತೆ ಮನವಿ ಮಾಡಿದ್ದಾರೆ.

‘ಮಹಿಳೆಗೆ ದೆಹಲಿಯ ಅತ್ಯುತ್ತಮ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಬೇಕಾಗಿದೆ ಎಂದು ವೈದ್ಯರು ಹೇಳಿದ್ದಾರೆ. ನಾನು ಆಸ್ಪತ್ರೆಯವರ ಜೊತೆ ಮಾತುಕತೆ ನಡೆಸುತ್ತಿದ್ದೇನೆ. ಚಿಕಿತ್ಸೆಯ ಹೊಣೆಯನ್ನು ನಾವು ಹೊರುತ್ತೇವೆ’ ಎಂದು ಮಲಿವಾಲ್‌ ಟ್ವೀಟ್‌ ಮಾಡಿದ್ದಾರೆ.

ಸಿಬಿಐ ತನಿಖೆಗೆ ಸಿದ್ಧ: ‘ಸಂತ್ರಸ್ತರ ಕುಟುಂಬದವರು ಮನವಿ ಮಾಡಿದರೆ ರಸ್ತೆ ಅಪಘಾತದ ಬಗ್ಗೆ ಸಿಬಿಐ ತನಿಖೆ ನಡೆಸಲು ಸಿದ್ಧ’ ಎಂದು ಪೊಲೀಸ್‌ ಮಹಾನಿರ್ದೇಶಕ ಒ.ಪಿ. ಸಿಂಗ್‌ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT