ಭಾರತದ ಪ್ರಥಮ ರಾಕೆಟ್ ಉಡಾವಣೆಯ ರೋಚಕ ಕ್ಷಣ

ಡಾ.ಎ.ಪಿ.ಜೆ. ಅಬ್ದುಲ್ ಕಲಾಂ ಅವರು ತಮ್ಮ IGNITED MINDS ಪುಸ್ತಕದಲ್ಲಿ ಒಂದು ಅದ್ಭುತ ವೈಜ್ಞಾನಿಕ ಯೋಜನೆಯ ಘಟನೆಯನ್ನು ಸುಂದರವಾಗಿ ಹೀಗೆ ವಿವರಿಸಿದ್ದಾರೆ.
‘ತಿರುವನಂತಪುರದ ಚರ್ಚ್ ಬಿಷಪ್ ಅವರ ಪ್ರಯತ್ನದ ಫಲವಾಗಿ THUMBA ಹಳ್ಳಿಯ ದನದ ಕೊಟ್ಟಿಗೆಗಳಲ್ಲಿ ಪ್ರಯೋಗಾಲಯ ಮತ್ತು ರಾಕೆಟ್ ತಯಾರಿಕೆಯ ಘಟಕಗಳನ್ನು ಸಂಗ್ರಹಿಸಿಸಲು ಒಪ್ಪಿಗೆ ಸಿಕ್ಕಿತು. ಉತ್ಸಾಹಿ ಯುವ ವಿಜ್ಞಾನಿಗಳ ಪಡೆಗೆ ಯಾವುದೇ ರೀತಿಯ ಗೊಂದಲ ಉಂಟಾಗಲಿಲ್ಲ. ಎಲ್ಲರೂ ಸೇರಿ ಪ್ರಥಮ ರಾಕೆಟ್ ಅನ್ನು ಜೋಡಿಸುವ ಕೆಲಸ ಪ್ರಾರಂಭವಾಯಿತು” ಈ ಯುವ ವಿಜ್ಞಾನಿಗಳು ಮತ್ತು ಎಂಜಿನಿಯರ್‌ಗಳ ತಂಡವನ್ನು ಡಾ. ಸಾರಾಭಾಯ್ ಅವರೇ ತುಂಬಾ ಜಾಗರೂಕತೆಯಿಂದ SELECT ಮಾಡಿದ್ದರು. ರಾಕೆಟ್ ಜೋಡಣೆ ಮತ್ತು ಉಡಾವಣೆಯ ತರಬೇತಿ ಜೋರಾಗಿ ನಡೆದಿತ್ತು.
ಇದನ್ನೂ ಓದಿ: ಚಂದ್ರಯಾನ-2 ಬಗ್ಗೆ 10 ವರ್ಷಗಳ ಹಿಂದೆಯೇ ವಿಜ್ಞಾನಿಗಳಿಗೆ ಸಲಹೆ ನೀಡಿದ್ದರು ಕಲಾಂ
ಹಿಂದೆ ರಾಕೆಟ್ ನ ಬಿಡಿಭಾಗಗಳು ಮತ್ತು ಪೆಲೋಡ್ ಗಳನ್ನು ಎತ್ತಿನಗಾಡಿ ಅಥವಾ ಸೈಕಲ್ ಮೇಲೆಯೇ ಉಡಾವಣಾ ಜಾಗದವರೆಗೆ ಕೊಂಡೊಯ್ಯಲಾಗುತ್ತಿತ್ತು. ಇಂಥಸಮಯದಲ್ಲಿ ಭಾರತ ತನ್ನ ಪ್ರಥಮ ರಾಕೆಟ್ ಉಡಾವಣೆಗೆ ವೇದಿಕೆ ಸಿದ್ಧಪಡಿಸಿತು. ಅಮೆರಿಕಾದ ನಾಸಾ ಸಂಸ್ಥೆಯು ಅಪಾಚೆ ರಾಕೆಟ್ ನೀಡಿತ್ತು. 6 ತಿಂಗಳ ನಿರಂತರ ಪರಿಶ್ರಮದ ನಂತರ, ಕೊನೆಗೆ 1963 ರ ನವೆಂಬರ್ 21 ರಂದು ಭಾರತ ಪ್ರಥಮ ರಾಕೆಟ್ ನ ಉಡಾವಣೆಗೆ ಸಜ್ಜಾಯಿತು. ಭಾರತದ ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದ ಪ್ರಸಿದ್ಧ ವ್ಯಕ್ತಿಗಳೆಲ್ಲ ಅಂದು ಹಾಜರಿದ್ದರು. ದೇಶದ ಪರಮಾಣು ಕಾರ್ಯಕ್ರಮದ ಪಿತಾಮಹ ಡಾ.ಹೋಮಿ ಜಹಾಂಗೀರ್ ಬಾಬಾ ಮತ್ತು ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟ್ರಾಪಿಕಲ್ ಮೀಟಿಯೊರಾಲಜಿಯ ಹೆಸರಾಂತ ವಿಜ್ಞಾನಿಗಳು, ಕೇರಳದ ಗವರ್ನರ್ ಮತ್ತು ಜಿಲ್ಲಾಧಿಕಾರಿ ಅಲ್ಲದೇ, ಬಹು ಮುಖ್ಯವಾಗಿ ಬಿಷಪ್ ಕೂಡ ಆ ಐತಿಹಾಸಿಕ ಸಂದರ್ಭಕ್ಕೆ ಸಾಕ್ಷಿಯಾಗಿದ್ದರು.
ಇದನ್ನೂ ಓದಿ: ಚಂದ್ರಾನ್ವೇಷಣೆಗೆ ಮುಂಬೈ ಕರ್ನಾಟಕದ ಕೊಡುಗೆ
ಇನ್ನೇನು ರಾಕೆಟ್ ಅನ್ನು ಹಾರಿಸಬೇಕು ಎನ್ನುವಷ್ಟರಲ್ಲಿ ವಿಪರೀತ ಗಾಳಿ ಬೀಸಲಾರಭಿಸಿತು. ಲಾಂಚರ್ ಮೇಲೆ ರಾಕೆಟ್ ಅನ್ನು ಏರಿಸಿ ನಿಲ್ಲಿಸುವ ಹೊತ್ತಿನಲ್ಲಿ ಹೈಡ್ರಾಲಿಕ್ ಕ್ರೇನ್‌ನಲ್ಲಿ ಸೋರಿಕೆ ಶುರುವಾಯಿತು. ವಿಜ್ಞಾನಿಗಳೇ ರಾಕೆಟ್ ಅನ್ನು ಸರಿಯಾಗಿ ನಿಲ್ಲಿಸಿದರು. ಇನ್ನೇನು ಉಡಾವಣೆ ಮಾಡಬೇಕು ಎನ್ನುವಷ್ಟರಲ್ಲಿ ರಿಮೋಟ್ ಕೈಕೊಟ್ಟಿತು. ಅಂತೂ ಎಲ್ಲಾ ರೀತಿಯ ಸಮಸ್ಯೆಗಳನ್ನೂ ಸರಿಪಡಿಸಲಾಯಿತು. ಸೈರನ್ ಸದ್ದು ಮಾಡಿತು. ವಿಜ್ಞಾನಿಗಳೆಲ್ಲಾ ಉಸಿರು ಬಿಗಿಹಿಡಿದು ನಿಂತರು. ಸಂಜೆ 6.25 ಜಗತ್ತಿನ ಕುತೂಹಲದ ಕಣ್ಣುಗಳನ್ನು ಮತ್ತಷ್ಟು ಅಗಲಿಸುತ್ತಾ ರಾಕೆಟ್ ನಭೋಮಂಡಲಕ್ಕೆ ಚಿಮ್ಮಿತು. ಬಾನಿನಲ್ಲಿ ಸೋಡಿಯಂ ಆವಿಯ ಮೋಡಗಳು ಕಾಣಿಸಿಕೊಂಡವು. ಭಾರತ, ಬಾಹ್ಯಾಕಾಶಕ್ಕೆ ತನ್ನ ಮೊದಲ ರಾಕೆಟ್ ಅನ್ನು ಹಾರಿಸಿ ಜಗತ್ತಿಗೆ ಉತ್ತಮ ಸಂದೇಶ ಕಳುಹಿಸಿತು.
ಕೆಲವು ವರ್ಷಗಳಲ್ಲಿ ಇಸ್ರೊ ವಿಕ್ರಂ ಸಾರಾಭಾಯ್ ಅವರ ಕನಸನ್ನು ಈಡೇರಿಸುವುದಷ್ಟೇ.ಅಲ್ಲ, ಅತ್ಯಂತ ಕಡಿಮೆ ವೆಚ್ಚದಲ್ಲಿ ಬಾಹ್ಯಾಕಾಶ ಕಾರ್ಯಕ್ರಮಗಳನ್ನು ಯಶಸ್ವಿಯಾಗಿಸುತ್ತಾ ವಿಶ್ವದ ಹೊಟ್ಟೆ ಉರಿಸುತ್ತಿದೆ. ಈಗಲೂ THUMBAA ಇಸ್ರೊ ಕಾರ್ಯಕ್ರಮಗಳ ಕೇಂದ್ರವಾಗಿದೆ. ಈ ಕೇಂದ್ರವು ಅತ್ಯಂತ ಅದ್ಭುತ ರಿಮೋಟ್ ಸೆನ್ಸಿಂಗ್ ಉಪಗ್ರಹಗಳನ್ನೂ ದೇಶಕ್ಕೆ ಕೊಟ್ಟಿದೆ. ಇನ್ನು ಭಾರತವನ್ನು ನಕ್ಷತ್ರಲೋಕದ ಕಡೆಗೆ ಕರೆದೊಯ್ಯಲು ಸಹಾಯ ಮಾಡಿದ ಆ ಪುಟ್ಟ ಮೇರಿ ಮ್ಯಾಗ್ ಡಲೀನ್ ಚರ್ಚ್ ಇಂದು ಬಾಹ್ಯಾಕಾಶ ಸಂಗ್ರಹಾಲಯವಾಗಿ ಬದಲಾಗಿದೆ. ವಿವಿಧ ರೀತಿಯ ಆಕರ್ಷಕ ರಾಕೆಟ್ ಗಳು, ಉಪಗ್ರಹಗಳು ಮತ್ತು ಇತರೆ ಖಗೋಳವಿಜ್ಞಾನ ಸಂಬಂಧಿತ ದೂರದರ್ಶಕಗಳು ಅಲ್ಲಿ ರಾರಾಜಿಸುತ್ತಿವೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.